ಕೊಪ್ಪಳ : ಕಾವ್ಯವೆಂದರೆ ಬದುಕು. ರಚನಾತ್ಮಕ ಬದುಕು ಕಟ್ಟಿಕೊಳ್ಳಲು ಎಲ್ಲ ಕಾವ್ಯದ ಓದಿನ ಅಗತ್ಯತೆ ಇದೆ. ಕಾವ್ಯದ ರಸಗ್ರಹಣದ ಎಂದರೆ ನಮ್ಮನ್ನೇ ನಾವು ಓದುವುದು. ಬದುಕಬಲ್ಲೇ ಎಂಬ ಆತ್ಮಸ್ಥೈರ್ಯವನ್ನು ತುಂಬಿಕೊಳ್ಳುವುದು. ಕಾವ್ಯ ಯಾವತ್ತೂ ಜಡಗೊಂಡಿರುವುದಿಲ್ಲ ಚಲನಶೀಲವಾಗಿರುತ್ತದೆ ಎಂದು ವಿಜಯನಗರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಶಿವಾನಂದ ಹೇಳಿದರು. ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾವ್ಯ ರಸಗ್ರಹಣ ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಳಗನ್ನಡ ಕಬ್ಬಿಣ ಕಡಲೆಯಲ್ಲ. ಪರಿಶ್ರಮ ಮತ್ತು ಆಸಕ್ತಿ ಬೆಳೆಸಿಕೊಂಡು ಓದಿದರೆ, ಪೂರ್ವಾಗ್ರಹಗನ್ನು ಬಿಟ್ಟರೆ ಅದರೊಳಗಿನ ಸತ್ವ ಅರ್ಥವಾಗುತ್ತದೆ. ಪಂಪ ಹಳಗನ್ನಡ ಪ್ರಕಾರದಲ್ಲಿ ಬರೆದಿದ್ದರೂ ಸಮಕಾಲೀನ ಸಮಾಜಮುಖಿ ಆಲೋಚನೆಗಳನ್ನು ಕಟ್ಟಿಕೊಟ್ಟಿದ್ದಾನೆ ಎಂದರು. ಕಾವ್ಯ ರಸದ ಬಗ್ಗೆ, ಹಳೆಗನ್ನಡ ಕಾವ್ಯಪ್ರಕಾರ ಹಾಗೂ ಜೈನ ಕಾವ್ಯ ಪರಂಪರೆಯ ಕುರಿತು ಮಾತನಾಡಿದ ಅವರು ಹಳಗನ್ನಡದ ಓದು ಅರಿವನ್ನು ವಿಸ್ತರಿಸುತ್ತದೆ ಎಂದು ಹೇಳಿದರು.
ಇದಕ್ಕೂ ಮೊದಲು ಸಸಿಗೆ ನೀರೆರೆಯುವುದರ ಮೂಲಕ ಕಾರ‍್ಯಕ್ರಮವನ್ನು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಉದ್ಘಾಟಿಸಿ " ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹಳಗನ್ನಡ,ನಡುಗನ್ನಡ ಮತ್ತು ಹೊಸಗನ್ನಡದ ಸಾಹಿತ್ಯಪ್ರಕಾರಗಳಿದ್ದ ಅವುಗಳಲ್ಲಿ ಸಮಕಾಲೀನವಾಗಿರುವಂತ ಬದುಕಿನ ಮೌಲ್ಯಗಳು ಇವೆ. ಹೊಸಗನ್ನಡದ ಹಿರಿಯ ತಲೆಮಾರಿನ ಲೇಖಕರು ಹಳೆ ಮತ್ತು ತಮ್ಮ ಕಾಲದ ಕನ್ನಡವನ್ನು ಸಶಕ್ತವಾಗಿ ದುಡಿಸಿಕೊಂಡಿದ್ದಾರೆ. ಭಾಷೆ ಮನುಷ್ಯ ಸಂಬಂಧಗಳನ್ನು ಆರೋಗ್ಯಪೂರ್ಣವಾಗಿಡುತ್ತದೆ. ಆ ಕಾರಣಕ್ಕಾಗಿ ಮತ್ತೆ ಮತ್ತೆ ನಾವು ನಮ್ಮ ಪರಂಪರೆಯ ಕಾವ್ಯ ಮತ್ತು ಸಾಹಿತ್ಯ ಓದುವ ಅಗತ್ಯತೆ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಂಗಮೇಶ ಕೋಟಿ -ಹಳಗನ್ನಡದ ಓದಿನ ಮಹತ್ವನ್ನು ಅರಿತುಕೊಳ್ಳುವಂತೆ ಮಾಡಲು ಮತ್ತು ಯುವಪೀಳಿಗೆಯಲ್ಲಿ ಕನ್ನಡದ ಪ್ರೀತಿಯನ್ನು ಬೆಳೆಸಲು ರಾಜ್ಯಾದ್ಯಂತ ಅಕಾಡೆಮಿ ಈ ಕಾರ‍್ಯಕ್ರಮ ಹಮ್ಮಿಕೊಂಡಿದೆ ಎಂದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶಿವಪ್ಪ ಶಾಂತಪ್ಪನವರ ವಹಿಸಿಕೊಂಡಿದ್ದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ‍್ಯಕ್ರಮದಲ್ಲಿ ನಾಟಕ ಅಕಾಡೆಮಿಯ ಎಸ್.ಕೆ.ಕೊನಸಾಗರ ಸೇರಿದಂತೆ ಸಾಹಿತ್ಯಾಸಕ್ತರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೆ ಸ್ವಾಗತವನ್ನು ಗಾಯತ್ರಿ ಭಾವಿಕಟ್ಟಿ ನಿರೂಪಣೆಯನ್ನು ತುಕಾರಾಮ ನಾಯ್ಕ ಮಾಡಿದರೆ ಪ್ರಮೋದ ತುರ್ವಿಹಾಳ ವಂದನಾರ್ಪಣೆ ಮಾಡಿದರು.
0 comments:
Post a Comment