ಬಳ್ಳಾರಿ, ಸೆ. ೨೮: ಮಕ್ಕಳು ಆದರ್ಶ ಬದುಕನ್ನು ರೂಪಿಸಿಕೊಳ್ಳಲು ಸ್ಫೂರ್ತಿಯಾಗುತ್ತಿದ್ದ ’ಅಜ್ಜಿಕತೆ’ಗಳು ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದ ಮರೆಯಾಗುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಅವರು ವಿಷಾಧಿಸಿದರು.
ನಗರದ ಸಂಸ್ಕೃತಿ ಪ್ರಕಾಶನ, ಬೆಂಗಳೂರಿನ ಸಿದ್ಧಿ ಫೌಂಡೇಷನ್ ಮತ್ತು ತುಂಗ ಭದ್ರಾ ಡ್ಯಾಂ ಕನ್ನಡ ಕಲಾ ಸಂಘದ ಸಹಯೋಗದಲ್ಲಿ ಇಲ್ಲಿನ ದಂಡು ಪ್ರದೇಶದ ಸರಕಾರಿ ಬಾಲಮಂದಿರದಲ್ಲಿ ಭಾನುವಾರ ಸ್ಥಳೀಯ ಆಯೋಜಿಸಿದ್ದ ’ಕಥಾ ಸಮಯ’ (ಕಥಾ ರಸಗ್ರಹಣ ಶಿಬಿರ) ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ಇಂತಹ ಶಿಬಿರಗಳು ಸಹಾಯಕವಾಗುತ್ತವೆ. ಬಾಲ್ಯದಿಂದಲೇ ಮಕ್ಕಳು ಕಥೆ ಕೇಳುವ, ಹೇಳುವ, ಬರೆಯುವ ಹವ್ಯಾಸವನ್ನು ರೂಢಿಸಿಕೊಳ್ಳಲು ಪೋಷಕರು ಪೂರಕ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ತಿಳಿಸಿದರು.
ಸಿದ್ಧಿ ಫೌಂಡೇಷನ್‌ನ ಮುಖ್ಯಸ್ಥ ಮೇಘಶ್ಯಾಮ್ ಕರಣಂ ಅವರು ಮಾತನಾಡಿ, ಮೊಬೈಲ್, ಇಂಟರ್ ನೆಟ್, ವಿಡಿಯೋ ಗೇಮ್ ಗಳಿಂದಾಗಿ ಮಕ್ಕಳು, ವಿದ್ಯಾರ್ಥಿಗಳು ಪುಸ್ತಕ ಓದುವ ಆನಂದ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಥಾ ರಸಗ್ರಹಣ ಶಿಬಿರಗಳ ಮೂಲಕ ಮತ್ತೇ ಕತೆ ಓದುವ, ಬರೆಯುವ, ಕೇಳುವ ಹವ್ಯಾಸಗಳನ್ನು ಬೆಳೆಸಲು ಶ್ರಮಿಸಲಾಗುತ್ತಿದೆ ಎಂದರು.
ಫೌಂಡೇಷನ್‌ನ ವ್ಯವಸ್ಥಾಪಕಿ ಪದ್ಮಾ ಸತ್ಯಮೂರ್ತಿ ಅವರು ಮಾತನಾಡಿ, ಶಿಬಿರಗಳಲ್ಲಿ ಮಕ್ಕಳಲ್ಲಿ ಕತೆ ಓದುವ ಮತ್ತು ಬರೆಯುವ ಪರಿಣಿತಿ ಬೆಳೆಸುವುದಲ್ಲದೇ ಸಂವಹನ ಕಲೆ, ನಾಯಕತ್ವ ಗುಣಗಳನ್ನು ಬೆಳೆಸಿ ಅವರ ಪರಿಪೂರ್ಣ ಬೆಳವಣಿಗೆಗೆ ಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲಮಂದಿರದ ಅಧೀಕ್ಷಕ ಬಿ.ಇ. ಹೇಮರೆಡ್ಡಿ ಮಾತನಾಡಿ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಗತ್ಯ ಎಂದು ತಿಳಿಸಿದರು.
ನವ ಕರ್ನಾಟಕ ಯುವಶಕ್ತಿ ಜಿಲ್ಲಾಧ್ಯಕ್ಷ ಬಿ. ಚಂದ್ರಶೇಖರ ಆಚಾರ್, ಹಗರಿ ಕೃಷಿ ಕೇಂದ್ರದ ಪಶು ವೈದ್ಯ ಡಾ. ರಮೇಶ್, ಕನ್ನಡ ಕಲಾ ಸಂಘದ ಅಧ್ಯಕ್ಷ ಆರ್. ಬದರಿ ನಾರಾಯಣ, ಸಂಚಾಲಕ ಬದರೀಶ್, ಸಿದ್ಧಿ ಫೌಂಡೇಷನ್‌ನ ಅನಿಲ್ ಸಂಡೂರು ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ್ ಸ್ವಾಗತಿಸಿದರು. ಬಾಲಮಂದಿರದ ಉಪ ಅಧೀಕ್ಷಕ ಎಸ್. ರಾಜನಾಯ್ಕ್ ವಂದಿಸಿದರು.
ಶಿಬಿರದಲ್ಲಿ ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
0 comments:
Post a Comment