ಜಿಲ್ಲೆಯಲ್ಲಿ ಡೆಂಗ್ಯೂ, ಚಿಕೂನ್‍ಗುನ್ಯಾ ಹಾಗೂ ಮಲೇರಿಯಾ ಮೊದಲಾದ ರೋಗಗಳು ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕರಿಗೆ ಸಲಹೆಗಳನ್ನು ನೀಡಿದ್ದು, ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉಡಪುಡಿ ಅವರು ಮನವಿ ಮಾಡಿದ್ದಾರೆ.
ಡೆಂಗ್ಯು ರೋಗ ಲಕ್ಷಣಗಳು, ಡೆಂಗ್ಯೂ ಜ್ವರವು ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಬಾಗದಲ್ಲಿ ನೋವು, ಮಾಂಸಖಂಡ, ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು. ಚಿಕೂನ್‍ಗುನ್ಯಾ ರೋಗವು ಇದ್ದಕ್ಕಿದ್ದಂತೆ ತೀವ್ರ ಜ್ವರ ಕಣ್ಣು ಕೆಂಪಾಗುವಿಕೆ ಸ್ನಾಯು ನೋವು, ಕೀಲುಗಳಲ್ಲಿ ಅಸಾದ್ಯ ನೋವಿನಿಂದ ಕೈಕಾಲು ಆಡಿಸಲು ಕಷ್ಟವಾಗುವುದು. ಜಡತ್ವ ಹಾಗೂ ಕೆಲವರಲ್ಲಿ ಬಾವು ಕಾಣಿಸಿಕೊಳ್ಳುವುದು. ಮಲೇರಿಯಾ ರೋಗವು ಚಳಿಜ್ವರ, ಮೈ ಬೆವರುವುದು, ಮೈ ಕೈ ನೋವು, ತಲೆನೋವು, ಹಲವರಿಗೆ ವಾಂತಿ ನಂತರ ನಿಶ್ಯಕ್ತಿ ಈ ಲಕ್ಷಣಗಳು ದಿನಬಿಟ್ಟು ದಿನ ಅಥವಾ ಪ್ರತಿದಿನ ಬರಬಹುದು. ಈ ರೋಗಗಳಿಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿಯಂತ್ರಣ ಕ್ರಮಗಳು : ಮನೆಯ ಸುತ್ತ-ಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಡೆಂಗ್ಯೂ ಚಿಕೂನ್‍ಗುನ್ಯಾ ರೋಗಗಳನ್ನು ಹರಡುವ ಈಡೀಸ್ ಇಜಿಪ್ಟೈ ಸೊಳ್ಳೆಗಳು ನೀರನ್ನು ಸಂಗ್ರಹಿಸುವ ಹಂಡೆ, ಹರವಿ, ಡೋಣಿ, ಸಿಮೆಂಟ್ ಟ್ಯಾಂಕು, ಬ್ಯಾರಲ್ ಮೇಲ್ಚಾವಣಿ ಮೇಲಿರುವ ನೀರಿನ ತೊಟ್ಟಿಗಳಲ್ಲಿಯೇ ಮೊಟ್ಟೆ ಇಟ್ಟು ಮರಿ ಮಾಡುವುದರಿಂದ ಇವುಗಳನ್ನು ವಾರಕ್ಕೊಮ್ಮೆ ಚೆನ್ನಾಗಿ ತಿಕ್ಕಿ ತೊಳೆದು, ಒಣಗಿಸಿ, ನೀರು ತುಂಬಿ ಮುಚ್ಚಿಡುವುದು, ಹೂವಿನ ಕುಂಡಗಳು, ಎಳೆನೀರಿನ ಚಿಪ್ಪುಗಳು, ಒಡೆದ ಬಾಟಲಿ, ಒಡೆದ ಬಕೆಟ್‍ಗಳು, ಕಲ್ಲಿನ ಡೋಣಿಗಳು, ಟೈರ್‍ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಏರ್‍ಕೂಲರಗಳಲ್ಲಿನ ನೀರನ್ನು ಆಗಾಗ್ಗೆ ಬದಲಾಯಿಸುವುದು, ಕಿಟಕಿ ಬಾಗಿಲುಗಳಿಗೆ ಜಾಲರಿಗಳನ್ನು ಅಳವಡಿಸುವುದು, ಬಳಸದೇ ಇರುವ ನಿಂತ ನೀರಿಗೆ ಸೀಮೆ ಎಣ್ಣೆ, ಸುಟ್ಟ ಎಣ್ಣೆ ಹಾಕಿ ಲಾರ್ವಾಗಳು ಉತ್ಪತ್ತಿಯಾಗುವುದನ್ನು ತಡೆಯುವುದು, ಆರೋಗ್ಯ ಇಲಾಖೆಯ ಸಿಬ್ಬಂದಿ ನಿಮ್ಮ ಮನೆಗೆ ಬಂದಾಗ, ಜ್ವರ ಪೀಡಿತರು ರಕ್ತ ಲೇಪನ ನೀಡಿ ಸಹಕರಿಸಬೇಕು. ಯಾವುದೇ ಜ್ವರ ಇರಲಿ ರಕ್ತ ಪರೀಕ್ಷೆ ಮಾಡಿಸಬೇಕು.
ಜಿಲ್ಲೆಯಲ್ಲಿ ಡೆಂಗ್ಯೂ, ಚಿಕೂನ್‍ಗುನ್ಯಾ ಹಾಗೂ ಮಲೇರಿಯಾ ಮೊದಲಾದ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ, ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯತಿಗಳು ಹಮ್ಮಿಕೊಳ್ಳುವ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಎಲ್ಲರು ಸಹಕಾರ ನೀಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉಡಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.

0 comments:
Post a Comment