PLEASE LOGIN TO KANNADANET.COM FOR REGULAR NEWS-UPDATES


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳನ್ನು ನಿಯಮಾನುಸಾರ ಮತ್ತು ಪಾರದರ್ಶಕವಾಗಿ ಆಯ್ಕೆ ಮಾಡಬೇಕು.  ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಎಚ್ಚರಿಕೆ ನೀಡಿದ್ದಾರೆ.
  ಸೂರು ರಹಿತ ಬಡವರ ಅಭ್ಯುದಯಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ವಸತಿ ಯೋಜನೆಗಳನ್ನು ಜಾರಿಗೊಳಿಸಿದೆ.  ಇಂದಿರಾ ಆವಾಸ್, ಬಸವ ವಸತಿ, ಅಂಬೇಡ್ಕರ್ ಸೇರಿದಂತೆ ವಿವಿಧ ಯೋಜನೆಗಳಡಿ ಬಡವರಿಗೆ ವಸತಿ ಒದಗಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಈಗಾಗಲೆ ಮನೆ ಹೊಂದಿದವರಿಗೆ, ಶ್ರೀಮಂತರಿಗೆ ಗ್ರಾಮ ಪಂಚಾಯತಿಯ ಕೆಲವು ಸದಸ್ಯರು ಹಾಗೂ ವರ್ಗ/ಜಾತಿ ಬದಲಾವಣೆ ಮಾಡಿ ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ.  ಗ್ರಾಮ ಪಂಚಾಯತಿಗಳಿಗೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ, ನಿಯಮಾನುಸಾರ ಮತ್ತು ಪಾರದರ್ಶಕವಾಗಿ, ಫಲಾನುಭವಿಗಳನ್ನು ವಾರ್ಡ್ ಸಭೆ ಮತ್ತು ಗ್ರಾಮ ಸಭೆಯ ಮೂಲಕ ಮೀಸಲಾತಿ ಪ್ರಕಾರ ಆಯ್ಕೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.  ಅಲ್ಲದೆ ಫಲಾನುಭವಿಗಳ ಆಯ್ಕೆ ಮಾಡುವ ಸಂಬಂಧ ಕೆಲವು ನಿಯಮ ಪಾಲಿಸಲು ಸೂಚನೆ ನೀಡಲಾಗಿದ್ದು, ಫಲಾನುಭವಿಗಳನ್ನು ಗ್ರಾಮ ಸಭೆ ಮೂಲಕ ಆಯ್ಕೆ ಮಾಡುವ ಸನ್ನಿವೇಶಗಳನ್ನು ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು.  ಗ್ರಾಮ ಸಭೆಯ ದಿನಾಂಕವನ್ನು 07 ದಿನಗಳ ಮುಂಚಿತವಾಗಿ ಆಯಾ ಗ್ರಾಮಗಳಲ್ಲಿ ಡಂಗೂರ, ಟಾಂಟಾಂ ಹಾಗೂ ಪ್ರಕಟಣೆ ಮೂಲಕ ವ್ಯಾಪಕ ಪ್ರಚಾರ ಮಾಡಿ ಸಾರ್ವಜನಿಕರಿಗೆ ತಿಳಿಸಬೇಕು.  ಪ್ರತಿ ಗ್ರಾಮ ಪಂಚಾಯತಿಗೆ ನೇಮಕ ಮಾಡುವ ತಾಲೂಕು ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮ ಸಭೆಗೆ ಹಾಜರಾಗಿ, ನಿಯಮಾನುಸಾರ ಫಲಾನುಭವಿಗಳ ಆಯ್ಕೆ ಮಾಡುವ ಪ್ರಕ್ರಿಯೆಯ ವರದಿ ಸಲ್ಲಿಸಬೇಕು.  ಫಲಾನುಭವಿಗಳ ಆಯ್ಕೆ ಮಾಡಿದ್ದನ್ನು ಸಾಮಾನ್ಯ ಸಭೆಯಲ್ಲಿ ಅನುಮೋದಿಸಿ, ಗ್ರಾ.ಪಂ. ಸೂಚನಾ ಫಲಕ ಮತ್ತು ಆಯಾ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.  ಆಯ್ಕೆ ಸಂಬಂಧ ಯಾವುದೇ ದೂರು ಅಥವಾ ತಕರಾರು ಇದ್ದಲ್ಲಿ, ಗ್ರಾಮಪಂಚಾಯತಿ, ತಾಲೂಕಾ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗೆ ಏಳು ದಿನಗಳ ಒಳಗಾಗಿ ಸಲ್ಲಿಸಬೇಕು.  ಇಂತಹ ದೂರುಗಳನ್ನು ಖುದ್ದಾಗಿ ಪರಿಶೀಲಿಸಿ, ಅನರ್ಹ ಫಲಾನುಭವಿಗಳ ಆಯ್ಕೆ ಆಗಿದ್ದಲ್ಲಿ, ಅಂತಹ ಫಲಾನುಭವಿಯ ಹೆಸರನ್ನು ಕೈಬಿಟ್ಟು, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಮಾತ್ರ ಅನುಮೋದನೆಗಾಗಿ ಸಲ್ಲಿಸಬೇಕು.  ಯಾವುದೇ ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದಲ್ಲಿ, ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಸುತ್ತೋಲೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

Advertisement

0 comments:

Post a Comment

 
Top