PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರಾರಂಭಿಸಲು ಉದ್ದೇಶಿಸಲಾಗಿರುವ ಒಟ್ಟು 06 ನೂತನ ವೈದ್ಯಕೀಯ ಕಾಲೇಜುಗಳನ್ನು ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.
  ಲೋಕಸಭೆ ಅಧಿವೇಶನ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು, ದೇಶದ ಬಹುತೇಕ ಕಡೆಗಳಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುತ್ತದೆ. ಹೀಗಾಗಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಸವಲತ್ತುಗಳು ಸಿಗುತ್ತಿಲ್ಲವೆಂದು ನಿರಾಶೆಗೊಂಡಿದ್ದಾರೆ.  ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರಕಾರ ಕೊಪ್ಪಳವೂ ಸೇರಿದಂತೆ ಹೊಸದಾಗಿ 6 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದೆ. ಈ ಕಾಲೇಜುಗಳನ್ನು ಪ್ರಾರಂಭಿಸುವ ಹೊತ್ತಿನಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯ (ಎಂ.ಸಿ.ಐ) ಕಠಿಣ ನಿಯಮಗಳು ಇದಕ್ಕೆ ಅಡೆತಡೆಯುಂಟು ಮಾಡಿದ್ದು, ಕಾಲೇಜು ಬೇಡಿಕೆಯ ಈ ಭಾಗದ ಕನಸು ನನಸಾಗಲಿಲ್ಲ. ಈಗ ಮಂಜೂರಾದ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿದ್ದು. ಇದಲ್ಲದೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳಲ್ಲಿಯ ಸೀಟುಗಳನ್ನು ಸಹ ಕಡಿತಗೊಳಿಸಿರುವುದು ನಿರಾಶೆ ಇಮ್ಮಡಿಗೊಳಿಸಿದೆ. ಭಾರತೀಯ ವೈದ್ಯಕೀಯ ಮಂಡಳಿಯು ತನ್ನ ನಿಯಮಗಳಲ್ಲಿ ಸ್ವಲ್ಪ ಸಡಿಲಗೊ
ಳಿಸಿದಲ್ಲಿ ರಾಜ್ಯ ಸರಕಾರದ 6 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗುತ್ತದೆ.  ಅಲ್ಲದೆ ಕೊಪ್ಪಳ ವೈದ್ಯಕೀಯ ಕಾಲೇಜನ್ನು ಒಳಗೊಂಡಂತೆ ಎಲ್ಲರಿಗೂ ಅನುಕೂಲವಾಗುತ್ತದೆ. ಆದ್ದರಿಂದ ಈ ಬಗ್ಗೆ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಮಂತ್ರಿಗಳು ಗಮನಹರಿಸಿ ಎಂ.ಸಿ.ಐ. ನಿಯಮಗಳಲ್ಲಿ ಬದಲಾವಣೆ ಮಾಡಿ ದೇಶದ ಸಣ್ಣ ಗ್ರಾಮಗಳಿಗೂ ವೈದ್ಯಕೀಯ ಸೌಲಭ್ಯ ದೊರಕುವ ಜನರ ಕನಸನ್ನು ನನಸಾಗಿಸಬೇಕೆಂದು ಒತ್ತಾಸೆಯಾಗಿದೆ ಎಂದು ಲೋಕಸಭೆಯ ಸಭಾಧ್ಯಕ್ಷರ ಮೂಲಕ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

0 comments:

Post a Comment

 
Top