ಏ.ಕೆ. ಕುಕ್ಕಿಲ
ಮಲಯಾಳಂ ಸಿನೆಮಾಗಳು ಕನ್ನಡಕ್ಕೆ (ರಿಮೇಕ್) ಬರುತ್ತಿರುವಷ್ಟೇ ವೇಗವಾಗಿ ಮಲಯಾಳಂ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಬರುತ್ತಿ ರುವುದು ಕಡಿಮೆ. ವೈಕಂ ಮುಹಮ್ಮದ್ ಬಶೀರ್, ಎಂ.ಟಿ. ವಾಸುದೇವ ನಾಯರ್, ತಕಳಿ ಶಿವಶಂಕರ್ ಪಿಳ್ಳೆ, ರಾಧಾಕೃಷ್ಣನ್, ಎಂ. ಮುಕುಂದನ್, ಓ.ವಿ.ವಿ ಜಯನ್, ನಾರಾಯಣ ಮೆನನ್.. ಮುಂತಾದ ಕೆಲವೇ ಸಾಹಿತಿಗಳು ಮತ್ತು ಸಾಹಿತ್ಯಗಳನ್ನು ಹೊರತು ಪಡಿಸಿದರೆ ಉಳಿದಂತೆ ದೊಡ್ಡದೊಂದು ಗುಂಪು ನಮ್ಮ ಪರಿಚಿತ ವಲಯದಿಂದ ಈಗಲೂ ಹೊರಗಿವೆ. ಪಾರ್ವತಿ ಜಿ. ಐತಾಳ್, ಕೆ.ಕೆ. ಗಂಗಾಧರನ್, ಫಕೀರ್ ಮುಹಮ್ಮದ್ ಕಟ್ಪಾಡಿಯಂಥ ಕೆಲವೇ ಮಂದಿ ಮಲಯಾಳಂನ ಕಂಪನ್ನು ಕನ್ನಡಿಗರ ಮನೆಮನೆ ತಲುಪಿಸುವಲ್ಲಿ ದುಡಿದಿದ್ದಾರೆ. ಅಷ್ಟಕ್ಕೂ, ಇದು ಮಲಯಾಳಂ ಸಾಹಿತ್ಯದ ಒಂದು ಮಗ್ಗುಲು ಮಾತ್ರ. ಆ ಸಾಹಿತ್ಯ ಪ್ರಪಂಚಕ್ಕೆ ಇನ್ನೊಂದು ಮಗ್ಗುಲೂ ಇದೆ. ಅದುವೇ ಇಸ್ಲಾಮೀ ಸಾಹಿತ್ಯ. ಫಕೀರ್ ಮುಹಮ್ಮದ್ ಕಟ್ಪಾಡಿಯಾಗಲಿ, ಗಂಗಾಧರನ್ ಆಗಲಿ ಮುಟ್ಟದ ಈ ಸಾಹಿತ್ಯ ಕ್ಷೇತ್ರ ಎಷ್ಟು ವಿಸ್ತಾರವಾಗಿ ಬೆಳೆದಿದೆ ಯೆಂದರೆ, ಎಂ.ಟಿ. ವಾಸುದೇವ ನಾಯರ್ ಪ್ರತಿನಿಧಿ ಸುವ ಸಾಹಿತ್ಯ ಜಗತ್ತಿಗೆ ಪೈಪೋಟಿ ನೀಡುವಷ್ಟು. ಮುಸ್ಲಿಮರ ಕುರಿತಂತೆ ಮುಸ್ಲಿಮೇತರರಲ್ಲಿರುವ ತಪ್ಪು ತಿಳುವಳಿಕೆಗಳು, ಕುರ್‌ಆನಿನ ಕೆಲವಾರು ಪದ ಪ್ರಯೋಗಗಳ ಬಗೆಗಿನ ಭೀತಿ, ಮುಸ್ಲಿಮರ ವಿವಿಧ ಆಚರಣೆ-ಅನುಷ್ಠಾನಗಳ ಕುರಿತಂತೆ ಗಲಿಬಿಲಿ.. ಮುಂತಾದ ಎಲ್ಲವುಗಳನ್ನೂ ವಸ್ತುವಾಗಿಸಿಕೊಂಡು ಅತ್ಯಂತ ಅಧಿಕಾರಯುತವಾಗಿ ಬರೆಯಲಾದ ಸಾಹಿತ್ಯ ಕೃತಿಗಳು ಈ ಕ್ಷೇತ್ರದಲ್ಲಿ ಪ್ರಕಟವಾಗುತ್ತಿವೆ. ಮಹಿಳೆಯನ್ನು ಮನೆಯೊಳಗೆ, ಶಾಲೆಯಿಂದ ಹೊರಗೆ.. ಇಡುವುದನ್ನೇ ಧಾರ್ಮಿಕತೆ ಎಂದು ತಪ್ಪಾಗಿ ಅಂದುಕೊಂಡಿದ್ದ ಸಮಾಜವನ್ನು ತಿದ್ದುವ ಸಾಹಿತ್ಯಗಳೂ ಪ್ರಕಟವಾಗುತ್ತಿವೆ. ಆದರೆ ಕನ್ನಡ ನಾಡಿನ ಪಾಲಿಗೆ ತೀರಾ ಅಗತ್ಯವಿದ್ದ ಮತ್ತು ಕನ್ನಡಿಗರು ಓದಲೇಬೇಕಾಗಿದ್ದ ಇಂಥ ಅನೇಕಾರು ಸಾಹಿತ್ಯ ಕೃತಿಗಳು ಅನುವಾದಕರ ಕೊರತೆಯಿಂದಲೋ ಅಥವಾ ಇತರೇ ಕಾರಣಗಳಿಂದಲೋ ಕನ್ನಡಿಗರಿಂದ ದೂರವೇ ಉಳಿದಿತ್ತು. ಇಂಥ ಸಂದರ್ಭದಲ್ಲಿ ಅನುವಾದ ಪ್ರಪಂಚಕ್ಕೆ ಕಾಲಿಟ್ಟವರೇ ಪಿ. ನೂರ್ ಮುಹಮ್ಮದ್. 1970ರ ದಶಕದಲ್ಲಿ ಇವರು ಮಲಯಾಳಂನ ಇಸ್ಲಾಮೀ ಸಾಹಿತ್ಯ ಜಗತ್ತಿನೊಳಗೆ ಪ್ರವೇಶಿಸಿದ ಬಳಿಕ ಮೊನ್ನೆ ಆಗಸ್ಟ್ 19ರಂದು ನಿಧನರಾಗುವವರೆಗೂ ಆ ಪ್ರಪಂಚದಲ್ಲಿ ಧಾರಾಳ ಸುತ್ತಾಡಿದರು.
ಅಲ್ಲಿ ಬೆಳಕು ಕಾಣುತ್ತಿದ್ದ ಪ್ರತೀ ಕೃತಿಗಳನ್ನೂ ಬಹುತೇಕ ಓದಿದರು. ಕನ್ನಡಿಗರಿಗೆ ಕೊಡಲೆಂದು ತೆಗೆದಿಟ್ಟರು. ಅನುವಾದಿಸಿ ದರು. ಅನುವಾದದ ಕುರಿತಂತೆ ಅವರಲ್ಲಿ ಎಷ್ಟರ ಮಟಿಗೆ ಉತ್ಸಾಹ ಇತ್ತೆಂದರೆ, ಇನ್ನೋರ್ವ ಅನುವಾದಕರ ಬಗ್ಗೆ ಓದುಗರು ಆಲೋಚನೆಯನ್ನೇ ಮಾಡದಷ್ಟು.
1978 ಎಪ್ರಿಲ್ 23ರಂದು ಪ್ರಾರಂಭವಾದ ಸನ್ಮಾರ್ಗ ವಾರಪತ್ರಿಕೆಯ ಸ್ಥಾಪಕ ಸಂಪಾದಕೀಯ ಮಂಡಳಿಯಲ್ಲಿ ಸೇರಿಕೊಳ್ಳುವುದಕ್ಕಿಂತ ಮೊದಲೇ ನೂರ್ ಮುಹಮ್ಮದ್‌ರು ಒಂದೆರಡು ಸಾಹಿತ್ಯ ಕೃತಿಗಳನ್ನು ರಚಿಸಿದ್ದರು. ಅವರು ಪತ್ರಿಕೋದ್ಯಮ ವಿದ್ಯಾ ರ್ಥಿಯಲ್ಲ. ಬಿ.ಎಸ್ಸಿ. ಪದವೀಧರ. ಅಂದಿನ ಕಾಲದಲ್ಲಿ ಕೆಲಸಗಳು ಹುಡುಕಿಕೊಂಡು ಬರಬಹುದಾಗಿದ್ದ ಭಾರೀ ತೂಕದ ಪದವಿಯೊಂದನ್ನು ಪಡೆದುಕೊಂಡಿದ್ದ ಅವರು, ಸನ್ಮಾರ್ಗ ವಾರಪತ್ರಿಕೆ ಮತ್ತು ಅನುವಾದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದುದಕ್ಕೆ ಕಾರಣ, ಅಂದಿನ ಸಾಮಾಜಿಕ ವಾತಾವರಣ ಎನ್ನಬಹುದು. ಅಂದು, ಇಸ್ಲಾಮ್‌ನ ಬಗ್ಗೆ ಮುಸ್ಲಿಮೇತರರಲ್ಲಿ ಮಾತ್ರ ತಿಳುವಳಿಕೆಯ ಕೊರತೆ ಇದ್ದುದಲ್ಲ, ಸ್ವತಃ ಮುಸ್ಲಿಮ ರಲ್ಲೇ ಬೆಟ್ಟದಷ್ಟು ಸುಳ್ಳು ನಂಬುಗೆಗಳಿದ್ದುವು. ಅಜ್ಞಾನ ಜನ್ಯ ಆಚರಣೆಗಳಿದ್ದುವು. ಕಾಫಿರ್ ಎಂಬ ಪದ ಮುಸ್ಲಿಮರಿಗೆ ಗೊತ್ತಿತ್ತೇ ಹೊರತು ಅದನ್ನು ಯಾರ ಮೇಲೆ, ಹೇಗೆ, ಯಾವಾಗ, ಯಾಕೆ ಪ್ರಯೋಗಿಸಬೇ ಕೆಂಬ ಬಗ್ಗೆ ಏನೇನೂ ತಿಳುವಳಿಕೆ ಇರಲಿಲ್ಲ. ಆದ್ದರಿಂದ ಅದನ್ನು ತಪ್ಪಾಗಿ ಪ್ರಯೋಗಿಸಿ ಮುಸ್ಲಿಮೇತರರಿಂದ ಬೇರ್ಪಟ್ಟುಕೊಂಡಿದ್ದರು. ಮುಸ್ಲಿಮರ ನಮಾಝ್, ಅವರ ಉಪವಾಸ, ಅವರ ಮಸೀದಿ, ಸಲಾಮ್, ಆರಾಧನೆ.. ಎಲ್ಲವೂ ಮುಸ್ಲಿಮೇತರರ ಪಾಲಿಗೆ ತೀರಾ ಅಪರಿಚಿತ ಮಾತ್ರವಲ್ಲ, ಮುಸ್ಲಿಮೇತರ ಸಮಾಜದಲ್ಲಿ ಈ ಬಗ್ಗೆ ಧಾರಾಳ ಅನುಮಾನಗಳಿದ್ದುವು. ಮುಸ್ಲಿಮ್ ಮಹಿಳಾ ಜಗತ್ತಂತೂ ಇನ್ನಷ್ಟು ಕತ್ತಲೆ ಯಲ್ಲಿತ್ತು. ತಲಾಕ್‌ನ ಬಗ್ಗೆ, ಪರ್ದಾದ ಬಗ್ಗೆ, ಮಹಿಳಾ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳ ಬಗ್ಗೆ.. ಮುಖ್ಯವಾಹಿನಿಯ ಮಾಧ್ಯಮಗಳಲ್ಲೇ ತೀರಾ ಕಡಿಮೆ ವಿಷಯಗಳು ಬರುತ್ತಿದ್ದ ಸಂದರ್ಭಗಳಾಗಿದ್ದುವು. ಇಂಥ ಹೊತ್ತಲ್ಲಿ ಬಿ.ಎಸ್ಸಿ. ಪದವೀಧರನಾದ ನೂರ್ ಮುಹಮ್ಮದ್‌ರವರು ಸರಕಾರಿಯೋ ಖಾಸಗಿಯೋ ನೌಕರ ಆಗುವುದಕ್ಕಿಂತ ಜ್ಞಾನ ಕ್ಷೇತ್ರದಲ್ಲಿರುವ ಈ ಕತ್ತಲೆಗೆ ಬೆಳಕು ಚೆಲ್ಲುವ ಲೇಖಕ ಆಗಲು ನಿರ್ಧರಿಸಿದರು. ಅದಕ್ಕಾಗಿ ಸನ್ಮಾರ್ಗ ಪತ್ರಿಕೆ ಯನ್ನು ದೀವಟಿಕೆಯಾಗಿ ಬಳಸಿಕೊಂಡರು. ಸನ್ಮಾರ್ಗ ಪತ್ರಿಕೆಯ ಆರಂಭದ ಐದು ವರ್ಷಗಳಲ್ಲಿ ಅವರು ಸಂಬಳವನ್ನೇ ಪಡೆದಿರಲಿಲ್ಲ. ಪವಿತ್ರ ಕುರ್‌ಆನಿನ ಮೇಲೆ ಅವರಿಗೆಷ್ಟು ಪ್ರೀತಿಯಿತ್ತು ಮತ್ತು ಸಮಾಜಕ್ಕೆ ಅದನ್ನು ತಲುಪಿಸಬೇಕೆಂಬ ಕಾಳಜಿಯಿತ್ತು ಅಂದರೆ, ಮೊನ್ನೆ ನಿಧನರಾಗುವ ವೇಳೆ ಕುರ್‌ಆನ್ ವ್ಯಾಖ್ಯಾನದ (ತಫ್ಹೀಮುಲ್ ಕುರ್‌ಆನ್) 5ನೇ ಭಾಗದ ಅನುವಾ ದದಲ್ಲಿದ್ದರು. ಅವರು ಅನುವಾದಿಸಿದ 42 ಕೃತಿಗಳಲ್ಲಿ, 1. ವೇದ ಗ್ರಂಥಗಳಲ್ಲಿ ಪ್ರವಾದಿ ಮುಹ ಮ್ಮದ್, 2. ಇಸ್ಲಾಮ್ ಸಂಶಯಗಳ ಸುಳಿಯಲ್ಲಿ, 3. ಭಾರತೀಯ ಸಂಸ್ಕೃತಿಯ ಅಂತರ್ಧಾರೆಗಳು, 4. ಮಹಿಳೆ ಇಸ್ಲಾಮಿನಲ್ಲಿ, 5. ತಲಾಕ್, 6. ಸತ್ಯವಿಶ್ವಾಸ ಮುಂತಾದುವುಗಳೂ ಸೇರಿವೆ. ಅವರ ಬರಹವಿಲ್ಲದೇ ಸನ್ಮಾರ್ಗ ಪತ್ರಿಕೆಯ ಒಂದೇ ಒಂದು ಸಂಚಿಕೆ ಕಳೆದ 37 ವರ್ಷಗಳಲ್ಲಿ ಈ ವರೆಗೂ ಪ್ರಕಟವಾಗಿಲ್ಲ ಎಂಬುದೇ ಅವರ ಅಕ್ಷರ ಪ್ರೇಮಕ್ಕೆ ಮತ್ತು ಸಾಮಾಜಿಕ ಬದ್ಧತೆಗೆ ನೀಡಬಹುದಾದ ಬಹುದೊಡ್ಡ ಪುರಾವೆ.
ಭಾಷೆಯ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದವರು ನೂರ್ ಮುಹಮ್ಮದ್. ಕನ್ನಡ ಭಾಷೆಯಲ್ಲಿ ಅವರಿಗೆಷ್ಟು ಪ್ರಭುತ್ವ ಇತ್ತೋ ಅಷ್ಟೇ ಮಲಯಾಳಂ ಭಾಷೆಯಲ್ಲಿ ಪಾಂಡಿತ್ಯವೂ ಇತ್ತು. ಕನ್ನಡ ಭಾಷೆಯನ್ನು ಅತ್ಯಂತ ಖಚಿತವಾಗಿ ಮತ್ತು ನಿಖರವಾಗಿ ಹೇಗೆ ಬಳಸಬಹುದು ಎಂಬುದಕ್ಕೆ ನೂರ್ ಮುಹಮ್ಮದ್ ಒಂದು ಅತ್ಯುತ್ತಮ ಉದಾಹರಣೆ. ಅವರು ಕನ್ನಡಕ್ಕೆ ಹಲವಾರು ಪದಗಳನ್ನು ಪರಿಚಯಿಸಿದರು. ಮಲಯಾಳಂನ ಪದವೊಂದಕ್ಕೆ ಅಷ್ಟೇ ಚೆಲುವಾದ ಪದವೊಂದು ಅವರ ಜ್ಞಾನಕೋಶದಲ್ಲಿ ಅರಳದೇ ಹೋದರೆ, ಸಂಪಾದಕೀಯ ಮಂಡಳಿಯ ಇತರ ಸಹೋದ್ಯೋಗಿಗಳಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಸನ್ಮಾರ್ಗ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತಪ್ಪು ಪದಗಳನ್ನು ಹೆಕ್ಕಿ, ಎತ್ತಿ ಹೇಳಿ ನಿಖರತೆಗೆ ಮತ್ತು ಸ್ಪಷ್ಟತೆಗೆ ಒತ್ತು ಕೊಡುವಂತೆ ಎಚ್ಚರಿಸುತ್ತಿದ್ದರು. ಅನುವಾದವೆಂಬುದು ಬರೇ ಪದಗಳ ಕನ್ನಡೀಕರಣವಲ್ಲ, ಅಲ್ಲಿ ಭಾವ, ಆವೇಶ, ಸ್ಪಷ್ಟತೆ ಮತ್ತು ಖಚಿತತೆ ಇರಬೇಕು ಅನ್ನುತ್ತಿದ್ದರು. ಯಾವುದೇ ಬರಹವನ್ನು ಅನುವಾದಿಸುವ ಮೊದಲು ಇಡೀ ಬರಹವನ್ನು ಪೂರ್ಣವಾಗಿ ಓದಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಅನುವಾದದ ಸಂದರ್ಭದಲ್ಲಿ ಮೂಲ ಕೃತಿಗೆ ಚ್ಯುತಿ ಬರದಂತೆ, ಅದರ ಸೌಂದರ್ಯಕ್ಕೆ ಹಾನಿ ತಟ್ಟದಂತೆ ಜಾಗರೂಕರಾಗಿರಬೇಕು ಎಂದು ತಿದ್ದುತ್ತಿದ್ದರು. ಅವರ ಅನುವಾದದಲ್ಲಿ ಯಾವಾಗಲೂ ಈ ಅಂಶಗಳು ಸದಾ ಇರುತ್ತಿದ್ದುವು. ಅನುವಾದ ಕ್ಷೇತ್ರದಲ್ಲಿ ತರಬೇತಿ ಪಡೆದು, ಪದವಿಯ ಮೇಲೆ ಪದವಿ ಪಡೆದು ಬಂದವರನ್ನು ಅಚ್ಚರಿಗೊಳಿಸುವಷ್ಟು ಅವರಲ್ಲಿ ಪದ ಸಂಪತ್ತು ಮತ್ತು ಪದಸೌಂದರ್ಯವಿತ್ತು. ಅವರು ಅನುವಾದದಲ್ಲಿ ‘ನೂರ್’ತನ(ತಮ್ಮತನ)ವನ್ನು ಸೃಷ್ಟಿಸಿದ್ದರು. ಇದು ನೂರ್ ಮುಹಮ್ಮದ್‌ರ ಅನುವಾದ ಎಂದು ಹೇಳಬಹುದಾದಷ್ಟು ಶಿಷ್ಟತೆ ಅವರ ಅನುವಾದಕ್ಕಿತ್ತು. ‘‘ಭಾರತೀಯ ಸಂಸ್ಕೃತಿಯ ಅಂತರ್ಧಾರೆಗಳು’’ ಎಂಬ ಕೃತಿಯನ್ನು ಬಿಡುಗಡೆಗೊಳಿ ಸುತ್ತಾ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ ಸಿದ್ದಲಿಂಗಯ್ಯ ಕಳೆದ ವರ್ಷ ‘ನೂರ್’ ತನವನ್ನು ಹೀಗೆ ವರ್ಣಿಸಿದ್ದರು, ‘‘ಇದು ಮಲಯಾಳಂನಿಂದ ಕನ್ನಡಕ್ಕೆ ಅನುವಾ ದಿಸಲಾದ ಕೃತಿ ಎಂದು ಅನಿಸುತ್ತಲೇ ಇಲ್ಲ. ಕನ್ನಡದಲ್ಲೇ ಸ್ವತಂತ್ರವಾಗಿ ರಚಿತಗೊಂಡ ಕೃತಿಯಂತೆ ಭಾಸವಾ ಗುತ್ತಿದೆ. ಮಲಯಾಳಂ ಭಾಷೆಯ ಛಾಪು ಇಲ್ಲದ, ಅಚ್ಚ ಕನ್ನಡ ಶೈಲಿಯಲ್ಲಿ ಪ್ರಕಟಗೊಂಡಿರುವ ಕೃತಿ ಇದು‘‘ ಎಂದಿದ್ದರು.
ಒಂದು ರೀತಿಯಲ್ಲಿ, ಅನುವಾದಿತ ಕೃತಿಗಳ ಮೇಲೆ ಮತ್ತು ಅವು ಬೀರಬಹುದಾದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ಮೇಲೆ ಜಾಗತಿಕ ಸಾಹಿತ್ಯ ಕ್ಷೇತ್ರವು ನಡೆಸಿದ ಚರ್ಚೆಯನ್ನು ಎದುರಿಟ್ಟುಕೊಂಡು ನೋಡಿದರೆ, ನೂರ್ ಮುಹಮ್ಮದ್‌ರು ಆ ಚರ್ಚೆಯ ವ್ಯಾಪ್ತಿಯೊಳಗೆ ಸೇರಿಕೊಳ್ಳಲೇಬೇಕಾದ ಮತ್ತು ಅವರಿಲ್ಲದ ಚರ್ಚೆಯು ಅಪೂರ್ಣ ಅನ್ನಬಹುದಾದ ವ್ಯಕ್ತಿತ್ವವಾಗಿ ಕಾಣಿಸುತ್ತಾರೆ. ಅವರು ಅನುವಾದವನ್ನು ಒಂದು ಧ್ಯಾನವಾಗಿ ಸ್ವೀಕರಿಸಿದವರು. ಅದರಲ್ಲೇ ಆಧ್ಯಾತ್ಮ ಮತ್ತು ತಾಧ್ಯಾತ್ಮವನ್ನು ಕಂಡುಕೊಂಡವರು. ಅದಕ್ಕೊಂದು ನಿಖರತೆ ಮತ್ತು ಖಚಿತತೆಯನ್ನು ದೊರಕಿಸಿಕೊಟ್ಟವರು. ಅನುವಾದವೆಂಬುದು ಭಾಷಾ ಬದಲಾವಣೆಯಲ್ಲ ಎಂಬುದಾಗಿ ಅಧಿಕಾರಯುತವಾಗಿ ಘೋಷಿಸಿದವರು. ಅವರು ಅನುವಾದಕ್ಕಾಗಿ ಅನು ವಾದ ಮಾಡುತ್ತಿದ್ದುದಲ್ಲ. ಅದವರ ತತ್ವವಾಗಿತ್ತು. ಸಿದ್ಧಾಂತವಾಗಿತ್ತು. ಜೀವನದ ಗುರಿಯಾಗಿತ್ತು. ಅವರು ಅನುವಾದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಕೃತಿಯು ಆಯಾಕಾಲದ ಸಾಮಾಜಿಕ ಅಗತ್ಯಗಳಾಗಿರುತ್ತಿತ್ತು. ದುಡ್ಡಿಗಾಗಿಯೋ ಪ್ರಶಂಸೆಗಾಗಿಯೋ ಅವರು ಲೇಖನಿ ಎತ್ತಿಕೊಂಡದ್ದೇ ಇಲ್ಲ. ವೇದಿಕೆ ಹತ್ತಿದ್ದಿಲ್ಲ. ಪ್ರಶಸ್ತಿ-ಪುರಸ್ಕಾರಗಳಿಗೆ ತಲೆಯೊಡ್ಡಿದ್ದಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿದಿದ್ದರೂ ಸಾಹಿತ್ಯ ವೇದಿಕೆಯ ಫೋಟೋ ಆಲ್ಬಂಗಳಲ್ಲಿ ಅವರಿಲ್ಲ. ಅವರೇ ಅನುವಾದಿಸಿದ ಕೃತಿಗಳೆಲ್ಲ ವಿವಿಧ ವೇದಿಕೆಗಳಲ್ಲಿ ವಿವಿಧ ಸಾಹಿತಿಗಳ ಕೈಯಲ್ಲಿ ಬಿಡುಗಡೆಗೊಳ್ಳುತ್ತಿರುವಾಗಲೆಲ್ಲಾ ವೇದಿಕೆಯ ಕೆಳಗೆ ಕೂತು ತಣ್ಣಗೆ ಮತ್ತು ಮೌನವಾಗಿ ಅವನ್ನೆಲ್ಲ ಕಣ್ತುಂಬಿಕೊಂಡು ಅಪರಿಚಿತರಂತೆ ಹೊರಟು ಹೋಗುತ್ತಿದ್ದರು. ‘ತಾನು ಮೃತಪಟ್ಟರೆ ಸಂತಾಪ ಸೂಚಕ ಸಭೆ ನಡೆಸಬಾರದು‘ ಎಂದು ಉಯಿಲು ಹೇಳುವಷ್ಟು ಸಾಮಾನ್ಯ ವ್ಯಕ್ತಿತ್ವ ಅವರದು. ಅವರು ಏನೆಲ್ಲ ಬರೆದರೋ ಅವನ್ನೇ ಉಂಡರು, ಬದುಕಿದರು. ಬಿಳಿ ಶರ್ಟು, ಬಿಳಿ ಪಂಚೆ, ಬಿಳಿ ಗಡ್ಡ, ಕನ್ನಡಕ, ಭರವಸೆಯ ಕಣ್ಣು, ಖಚಿತ ಮಾತು.. ಇವೇ ನೂರ್ ಮುಹಮ್ಮದ್. ಅವರೋರ್ವ ಪ್ರಖರ ಸಿದ್ಧಾಂತವಾದಿ. ಬರೆದಂತೆ ಬದುಕಿದರು.
ಇಂದಿನ ಸಾಹಿತ್ಯಿಕ ಪ್ರಪಂಚದಲ್ಲಿ ಅನುವಾದಕರ ಪಟ್ಟಿ ಬಹಳ ಉದ್ದವಿದೆ. ಆದರೆ, ಇವರಲ್ಲಿ ‘ನೂರ್ ಮುಹಮ್ಮದ್’ರನ್ನು ಹುಡುಕ ಹೊರಟರೆ ವಿಷಾದವೇ ಎದುರಾಗುತ್ತದೆ. ನಿಜವಾಗಿ, ನೂರ್ ಮುಹಮ್ಮದ್‌ರ ವಿಶೇಷತೆಯೇ ಇದು. ಎಲ್ಲರೂ ಅನುವಾದಕರೇ. ಆದರೆ ಎಲ್ಲರೂ ನೂರ್ ಮುಹಮ್ಮದ್ ಅಲ್ಲ. ಆದ್ದರಿಂದಲೇ, ನೂರ್ ಮುಹಮ್ಮದ್‌ರ ಹೆಸರಲ್ಲಿ ಸರಕಾ ರವು ಅನುವಾದ ಪ್ರಶಸ್ತಿಯೊಂದನ್ನು ಸ್ಥಾಪಿಸುವ ಅಗತ್ಯದೆ. ಇಂಥ ಓರ್ವ ಅನುವಾದಕ ಈ ಜಗತ್ತಿನಲ್ಲಿ ಇದ್ದು ಹೊರಟು ಹೋಗಿದ್ದಾರೆ ಎಂಬುದನ್ನು ಹೊಸ ತಲೆಮಾರಿನ ಅನುವಾದಕರಿಗೆ ಗೊತ್ತು ಮಾಡಬೇ ಕಾಗಿದೆ. ಪಂಚೆ, ಷರ್ಟು, ಮನಸ್ಸು, ಲೇಖನಿ, ಭಾಷೆ, ಮಾತು.. ಎಲ್ಲವೂ ಯಾವ ಸಂದರ್ಭದಲ್ಲೂ ಬಿಕರಿಗೊಳ್ಳಲು ಸಿದ್ಧವಾಗಿರುವ ಮತ್ತು ಬಿಕರಿ ಯಾಗುತ್ತಿರುವ ಇಂದಿನ ದಿನಗಳಲ್ಲಿ ‘ಬಿಕರಿಯಾಗದೇ’ ಹೊರಟುಹೋದ ಅವರನ್ನು ಸಾಹಿತ್ಯಿಕ ಜಗತ್ತಿನಲ್ಲಿ ನಾವು ಸದಾ ಉಳಿಸಿಕೊಳ್ಳಬೇಕಾಗಿದೆ. ನೂರ್ ಮುಹ ಮ್ಮದ್ ರನ್ನು ಉಳಿಸಿಕೊಳ್ಳುವುದೆಂದರೆ ನಾವು ಮಾರಾ ಟವಾಗದೇ ಇರುವುದು; ನಮ್ಮ ಲೇಖನಿ ಮತ್ತು ಮನಸ್ಸು ‘ಬಿಕರಿ’ ಪ್ರಪಂಚವನ್ನು ಧಿಕ್ಕರಿಸಿ ಬದುಕುವುದು. ಇದು ಅಸಾಧ್ಯವಲ್ಲ. ಯಾಕೆಂದರೆ, ನೂರ್ ಮುಹಮ್ಮದ್ ಇದ ನ್ನು ಸಾಧಿಸಿ ತೋರಿಸಿದ್ದಾರೆ. ಅವರಿಗೆ ನನ್ನ ಸಲಾಮ್.
0 comments:
Post a Comment