ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ೬೮ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ೨೦೧೪ರ ಆಗಸ್ಟ್ ೧೫ ರಂದು ಬೆಳಿಗ್ಗೆ ೯ ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರ ಸಂದೇಶ
ಕೊಪ್ಪಳ ಜಿಲ್ಲೆಯ ಸಮಸ್ತ ನಾಗರಿಕ ಬಂಧುಗಳೆ, ಸ್ವಾತಂತ್ರ್ಯ ಹೋರಾಟಗಾರರೆ, ಚುನಾಯಿತ ಪ್ರತಿನಿಧಿಗಳೆ, ಶಾಲಾ ಕಾಲೇಜುಗಳ ಮುದ್ದು ಮಕ್ಕಳೆ, ಹಿರಿಯರೆ, ಮಾಧ್ಯಮದ ಸ್ನೇಹಿತರೆ, ಅಧಿಕಾರಿಗಳೆ ತಮ್ಮೆಲ್ಲರಿಗೂ ೬೮ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಇಂದು ೬೮ನೇ ಸ್ವಾತಂತ್ರ್ಯ ದಿನೋತ್ಸವ. ಭಾರತ, ಬ್ರಿಟೀಷರ ಆಳ್ವಿಕೆಯ ಸಂಕೋಲೆಯಿಂದ ಬಿಡುಗಡೆಯಾಗಿ ೬೭ ವರ್ಷ ಕಳೆದಿದೆ. ಭಾರತದಲ್ಲಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ವಿಶ್ವ ಮಟ್ಟದಲ್ಲಿ ಅನನ್ಯವಾದ ಮನ್ನಣೆಯಿದೆ. ಬ್ರಿಟೀಷರನ್ನು ಅಹಿಂಸೆ, ಸತ್ಯಾಗ್ರಹಗಳ ಮೂಲಕ ಮಣಿಸಿದ ರೀತಿ, ಇಡೀ ವಿಶ್ವವೇ ಭಾರತದತ್ತ ಗಮನ ಹರಿಸುವಂತೆ ಮಾಡಿದೆ.
ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ನೋವು, ಹಿಂಸೆ, ಅವಮಾನಗಳನ್ನು ಅನುಭವಿಸಿದ ಹಾಗೂ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅನೇಕ ಮಹನೀಯರು ನಮ್ಮನ್ನು ಅಗಲಿದ್ದಾರೆ. ಅವರೆಲ್ಲರನ್ನು ನಾವು ಸ್ಮರಿಸೋಣ.
ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ವಯಕ್ತಿಕ ಪ್ರತಿಫಲದ ಅಪೇಕ್ಷೆ ಇಲ್ಲದೆ, ನಿಸ್ವಾರ್ಥ ಮನೋಭಾವದಿಂದ, ದೇಶಪ್ರೇಮದಿಂದ ಪ್ರೇರಿತರಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಅವರು, ಜಾತಿ-ಮತ-ಧರ್ಮಗಳ ಬೇಧವನ್ನು ಮರೆತು ಒಂದುಗೂಡಿ ಹೋರಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿರವರು, ಮಹಾತ್ಮಾಗಾಂಧಿರವರು, ಬಾಲಗಂಗಾಧರ ತಿಲಕ್‌ರವರು, ಗೋಪಾಲಕೃಷ್ಣ ಗೋಖಲೆರವರು, ಜವಹರಲಾಲ್ ನೆಹರುರವರು, ಮೌಲಾನಾ ಅಬ್ದುಲ್ ಕಲಾಂ ಆಜಾದ್‌ರವರು, ಸುಭಾಶ್‌ಚಂದ್ರ ಭೋಸ್‌ರವರು, ಸರ್ದಾರ್ ವಲ್ಲಭಭಾಯಿ ಪಟೇಲ್‌ರವರು, ಲಾಲಬಹದ್ದೂರ್ ಶಾಸ್ತ್ರಿರವರು ಹೀಗೆ ನಮ್ಮ ಅನೇಕ ರಾಷ್ಟ್ರೀಯ ಮಹಾಪುರುಷರು, ದೇಶ ಪ್ರೇಮಿಗಳು ತಮ್ಮ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ.
ನಮ್ಮ ಕೊಪ್ಪಳ ಜಿಲ್ಲೆಯೂ ಸಹ ಸ್ವಾತಂತ್ರ್ಯ ಹೋರಾಟಕ್ಕೆ ಅತ್ಯಮೂಲ್ಯ ಕಾಣಿಕೆ ಕೊಟ್ಟಿದೆ. ಮುಂಡರಗಿ ಭೀಮರಾಯನವರು, ಹಮ್ಮಿಗೆ ಕೆಂಚನಗೌಡನವರು, ಇಟಗಿಯ ವೀರಭದ್ರಯ್ಯನವರು, ಶಿರೂರು ವೀರಭದ್ರಯ್ಯನವರು, ಶಿವಮೂರ್ತಿಸ್ವಾಮಿ ಅಳವಂಡಿರವರು, ಜನಾರ್ಧನರಾಯ ದೇಸಾಯಿಯವರು, ಎಲ್.ಕೆ. ಷರಾಫ್‌ರವರು, ಬಿಂದು ಮಾಧವರಾವ್‌ರವರು, ಬಿ.ಕೆ. ಪ್ರಾಣೇಶಾಚಾರ್ಯರವರು ಹೀಗೆ, ಅನೇಕ ಧೀಮಂತ ನಾಯಕರ ಶ್ರಮದ ಫಲವಾಗಿ ಸಿಕ್ಕಿರುವ ಸ್ವಾತಂತ್ರ್ಯವನ್ನು ಇಂದು ನಾವು ಅನುಭವಿಸುತ್ತಿದ್ದೇವೆ.
ಸ್ವಾತಂತ್ರ್ಯಾ ನಂತರ ನಮ್ಮ ದೇಶ ಎಲ್ಲ ರಂಗಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಯು, ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಲು ಹೆಮ್ಮೆ ಪಡುತ್ತೇನೆ.
ಈ ವರ್ಷ ರಾಜ್ಯವ್ಯಾಪಿ ಹಮ್ಮಿಕೊಳ್ಳಲಿರುವ ’ಪ್ರಾಚ್ಯ ಪ್ರಜ್ಞೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇವುಗಳ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುವ ಈ ವಿನೂತನ ಕಾರ್ಯಕ್ರಮದಡಿ, ಪಾರಂಪರಿಕ ಸಂಪತ್ತಿನ ಅರಿವು ಮೂಡಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿ ಬಂದಿದ್ದರೂ, ಉತ್ತಮ ಮಳೆಯಾಗಿ, ಎಲ್ಲ ಜಲಾಶಯಗಳು ತುಂಬಿದ್ದು, ಬರದ ಆತಂಕ ಸರಿದಿದೆ. ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ರೈತ ಸಮುದಾಯಕ್ಕೆ ಸಂತಸವನ್ನು ತಂದಿದೆ.
ಮುಂಗಾರು ಹಂಗಾಮಿಗಾಗಿ ಈಗಾಗಲೆ ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗಿದೆ.
ಆಧುನಿಕ ಹಾಗೂ ದುಬಾರಿ ವೆಚ್ಚದ ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವ ಸಾಮರ್ಥ್ಯ ಇಲ್ಲದ ರೈತರಿಗೆ ಕಡಿಮೆ ಬಾಡಿಗೆ ದರದಲ್ಲಿ ಯಂತ್ರೋಪಕರಣಗಳು ಲಭ್ಯವಾಗುವಂತೆ ಮಾಡಲು ಸರ್ಕಾರ ೭೫ ಕೋಟಿ ಅನುದಾನವನ್ನು ಒದಗಿಸಿದೆ.
ಕೊಪ್ಪಳ ಜಿಲ್ಲೆಯ ೦೪ ಹೋಬಳಿಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರತಿ ಕೇಂದ್ರಕ್ಕೆ ಸುಮಾರು ೭೫ ಲಕ್ಷ ರೂ. ಮೌಲ್ಯದ ಕೃಷಿ ಯಂತ್ರೋಪಕರಣಗಳನ್ನು ಇರಿಸಿ, ಕಡಿಮೆ ದರದಲ್ಲಿ ರೈತರ ಕೃಷಿ ಚಟುವಟಿಕೆಗೆ ಬಾಡಿಗೆ ಆಧಾರದಲ್ಲಿ ಒದಗಿಸಲಾಗುವುದು.
ಜಾತಿ, ಆದಾಯ ಪ್ರಮಾಣ ಪತ್ರಗಳಿಗಾಗಿ ವಿದ್ಯಾರ್ಥಿಗಳು ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಈ ಬಾರಿ ಜಿಲ್ಲೆಯ ೩.೮೫ ಲಕ್ಷ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳಲ್ಲಿಯೇ ಜಾತಿ, ಆದಾಯ ಪತ್ರಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಪ್ರಸಕ್ತ ಮುಂಗಾರು ಪೂರ್ವದಲ್ಲಿ ಬಿತ್ತನೆಯಾದ ಹೆಸರು ಹಾಗೂ ಎಳ್ಳು ಬೆಳೆಗಳ ಪೈಕಿ ಶೇ. ೫೦ ಕ್ಕಿಂತ ಹೆಚ್ಚು ಹಾನಿ ಅನುಭವಿಸಿದ ರೈತರ ಹೊಲಗಳ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ವರದಿಯನ್ನಾಧರಿಸಿ, ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲು ಕ್ರಮ ಕೈಗೊಳ್ಳಲಾಗುವುದು.
ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಗೆ ಒಂದು ಹೊಸ ಇಂಜಿನೀಯರಿಂಗ್ ಕಾಲೇಜು ಸ್ಥಾಪಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ಜಿಲ್ಲೆಯ ಜನರು ಗುಳೇ ಹೋಗುವುದನ್ನು ತಪ್ಪಿಸಲು ಕೂಲಿಕಾರ್ಮಿಕರಿಗೆ ಹೆಚ್ಚುವರಿ ಉದ್ಯೋಗ ನೀಡಲು ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಗೆ ೫೧.೪೭ ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಈಗಾಗಲೆ ಸಿದ್ಧಪಡಿಸಲಾಗಿದೆ.
ಜಿಲ್ಲೆಯಲ್ಲಿ ೨,೧೯,೦೭೪ ಕುಟುಂಬಗಳನ್ನು ನೋಂದಾಯಿಸಿ, ಉದ್ಯೋಗ ಚೀಟಿ ನವೀಕರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಈಗಾಗಲೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲಾಗುತ್ತಿದ್ದು ೪,೦೫,೨೩೭ ಮಾನವ ದಿನಗಳನ್ನು ಸೃಜಿಸಿ, ೨೧.೫೬ ಕೋಟಿ ರೂ. ಅನುದಾನ ಬಳಕೆ ಮಾಡಲಾಗಿದೆ.
ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸಮುದಾಯದ ಜನರು ಬೋರ್‌ವೆಲ್ ಕೊರೆದು ವಿದ್ಯುಚ್ಛಕ್ತಿಗಾಗಿ ಕಾಯುವುದನ್ನು ತಪ್ಪಿಸುವ ದೃಷ್ಠಿಯಿಂದ ಈ ವರ್ಷದಿಂದ ಸೋಲಾರ್ ಪಂಪು ಅಳವಡಿಸಿ ಅವರಿಗೆ ಬಿಸಿಲಿನ ಲಭ್ಯತೆಗೆ ಅನಗುಣವಾಗಿ ನಿರಂತರ ನೀರನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಈ ದಿಸೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ೮೫ ಪರಿಶಿಷ್ಠ ಜಾತಿ ಮತ್ತು ೧೦೫ ಪರಿಶಿಷ್ಠ ಪಂಗಡದ ಜನರಿಗೆ ಒಟ್ಟು ರೂ. ೧೫ ಕೋಟಿ ಅನುದಾನ ಒದಗಿಸಲಾಗಿದೆ.
ಅಂತರ್ಜಲ ಅಭಿವೃದ್ಧಿಗೊಳಿಸಲು ಹಾಗೂ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ, ಕೊಪ್ಪಳ, ಯಲಬುರ್ಗಾ ಮತ್ತು ಕುಷ್ಠಗಿ ತಾಲ್ಲೂಕುಗಳಲ್ಲಿ ಪಿಕಪ್ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ ’ತ್ವರಿತ ನೀರಾವರಿ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮ (ಂ.I.ಃ.P.) ಯೋಜನೆಯಡಿಯಲ್ಲಿ ರೂ. ೧೮೦ ಕೋಟಿಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ.
ರಾಜೀವ್‌ಗಾಂಧಿ ಚೈತನ್ಯ ಯೋಜನೆಯಡಿ ಜಿಲ್ಲೆಯ ೫,೧೧೮ ನಿರುದ್ಯೋಗಿ ಅರ್ಭರ್ಥಿಗಳಿಗೆ ಸ್ವಯಂ ಉದ್ಯೋಗ, ವೃತ್ತಿಪರ ಕೌಶಲ್ಯದೊಂದಿಗೆ ಉದ್ಯೋಗ ದೊರಕಿಸುವಂತಹ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದೆ.
ನಿರ್ಮಲ ಭಾರತ ಅಭಿಯಾನ ಯೋಜನೆಯಡಿ, ಕೊಪ್ಪಳ ಜಿಲ್ಲೆ ೫೪,೦೫೧ ವಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ, ಇಡೀ ರಾಜ್ಯದಲ್ಲಿಯೇ ಮೊದಲನೆ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದಕ್ಕಾಗಿ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪ್ರೇರಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಜಿಲ್ಲಾ ಪಂಚಾಯತಿ ವತಿಯಿಂದ, ಕೆರೆಗಳ ಪುನಶ್ಚೇತನಕ್ಕಾಗಿ ಈ ವರ್ಷ ೧೨೫.೩೦ ಲಕ್ಷ ರೂ. ಗಳ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಸುವರ್ಣ ಗ್ರಾಮೋದಯ ಯೋಜನೆಯಡಿ ಜಿಲ್ಲೆಯಲ್ಲಿ ೧ ರಿಂದ ೫ ಹಂತ ಸೇರಿದಂತೆ ಒಟ್ಟು ೨೦೦ ಗ್ರಾಮಗಳು ಆಯ್ಕೆಯಾಗಿವೆ. ೧೧೩.೪೦ ಕೋಟಿ ರೂ. ಗಳ ಅನುದಾನದಲ್ಲಿ ೧, ೨ ಮತ್ತು ೩ ನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ೪ ಮತ್ತು ೫ನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ.
ಸಂಕಷ್ಟದಲ್ಲಿರುವ ನಿವೃತ್ತ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು ರೂ. ೩,೦೦೦ ಗಳಿಂದ ೬,೦೦೦ ರೂ.ಗಳಿಗೆ ಹೆಚ್ಚಿಸಲಾಗಿದೆ.
ಮುಖ್ಯಮಂತ್ರಿಗಳ ಗ್ರಾಮ ಸಡಕ್ ಯೋಜನೆಯಡಿ ಜಿಲ್ಲೆಗೆ ಪ್ರಸಕ್ತ ಸಾಲಿಗಾಗಿ ೧೭೭. ೪೪ ಲಕ್ಷ ರೂ. ಅನುದಾನ ನಿಗದಿಪಡಿಸಿ, ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.
ರೈತರ ಹಿತರಕ್ಷಣೆಗಾಗಿ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಕೃಷಿ ಬೆಲೆ ಆಯೋಗವನ್ನು ಅಸ್ತಿತ್ವಕ್ಕೆ ತರಲಾಗಿದೆ.
ಜಿಲ್ಲೆಯ ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕಿನ ಕನಕಗಿರಿ ಭಾಗದ ಬರಪೀಡಿತ ಪ್ರದೇಶಗಳ ರೈತರ ಜಮೀನಿಗೆ ಕೃಷ್ಣಾ ನದಿಯ ನೀರು ಹರಿಸಲು, ಕೊಪ್ಪಳ ಏತ ನೀರಾವರಿ ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು, ಯೋಜನೆಗೆ ಅನುದಾನದ ಕೊರತೆ ಆಗದಂತೆ ಸರ್ಕಾರ ಕ್ರಮ ಕೈಗೊಂಡಿದೆ.
ಕುರಿ ಅಥವಾ ಮೇಕೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ, ಪರಿಹಾರಧನ ನೀಡುವಂತಹ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ೧೧೫ ಜನರಿಗೆ ಪರಿಹಾರಧನ ವಿತರಿಸಲಾಗಿದೆ.
ಈ ವರ್ಷದ ಮಳೆಗಾಲ ಮುಗಿಯುವುದರೊಳಗೆ ೨೫ ಲಕ್ಷ ಗಿಡಗಳನ್ನು ನೆಟ್ಟು, ಜಿಲ್ಲೆಯಲ್ಲಿ ಅರಣ್ಯೀಕರಣಗೊಳಿಸಿ ಹಸಿರಾಗಿಸಲು ಕೊಪ್ಪಳ ಜಿಲ್ಲಾ ಪಂಚಾಯತಿ ಸಂಕಲ್ಪ ಮಾಡಿದ್ದು, ಅದರಂತೆ ಕಾರ್ಯೋನ್ಮುಖವಾಗಿದೆ.
ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳಲು, ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಹಾಗೂ ಗ್ರಾಮ ಮಟ್ಟದಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಈಗಾಗಲೆ ಪ್ರಾರಂಭಿಸಲಾಗಿದೆ.
ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ ೧೩ ನೇ ಸ್ಥಾನ ಪಡೆದುಕೊಂಡಿದ್ದು, ಈ ವರ್ಷ ಸ್ಥಾನಮಾನವನ್ನು ಇನ್ನಷ್ಟು ಉತ್ತಮಪಡಿಸಲು ಎಲ್ಲ ಶಿಕ್ಷಕ ಬಂಧುಗಳು, ವಿದ್ಯಾರ್ಥಿಗಳು ಶ್ರಮಿಸುವರೆಂಬ ಆಶಾಭಾವನೆ ಇದೆ.
ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ, ಉತ್ತೀರ್ಣರಾದ ಒಟ್ಟು ೩೧ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಕಂಪ್ಯೂಟರ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಕೊಪ್ಪಳ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಯುನಿಸೆಫ್- ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯಡಿ, ಜಿಲ್ಲೆಯಲ್ಲಿ ಸುಮಾರು ೫೧೮ ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, ೯ ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲಾಗಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ವಿವಿಧ ಯೋಜನೆಗಳಡಿ ೭೨೩ ಫಲಾನುಭವಿಗಳಿಗೆ ೩.೨೨ ಕೋಟಿ ರೂ. ಗಳ ಅನುದಾನದಲ್ಲಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಅಲ್ಲದೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಈ ವರ್ಷ ಜಿಲ್ಲೆಯ ೧,೧೪೩ ಫಲಾನುಭವಿಗಳಿಗೆ ೩.೦೪ ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ.
ಬಡವರು ಸ್ವಾಭಿಮಾನದಿಂದ ಬದುಕಲು, ನಮ್ಮ ಸರ್ಕಾರ ಪ್ರತಿ ಕೆ.ಜಿ. ಕೇವಲ ೦೧ ರೂ. ಗಳಂತೆ ಪಡಿತರ ಅಕ್ಕಿಯನ್ನು ನೀಡುವಂತಹ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಕೊಪ್ಪಳ ಜಿಲ್ಲೆಯಲ್ಲಿ ೨.೫೬ ಲಕ್ಷ ಕುಟುಂಬಗಳು ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಸಾಲ ಪಡೆದು, ಮರುಪಾವತಿಸಲಾಗದೆ ತೊಂದರೆಯಲ್ಲಿದ್ದ, ಜಿಲ್ಲೆಯ ಪರಿಶಿಷ್ಟ ಜಾತಿಯ ೬,೧೫೮ ಜನರ ೧೩.೪೦ ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ ೫೬೦ ಜನರ ೧.೧೪ ಕೋಟಿ ರೂ.ಗಳ ಸಾಲವನ್ನು ನಮ್ಮ ಸರ್ಕಾರ ಮನ್ನಾ ಮಾಡಿ ಅವರನ್ನು ಋಣಮುಕ್ತರನ್ನಾಗಿಸಿದೆ.
ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲೆಯ ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುವಂತಹ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದೇ ದಿಸೆಯಲ್ಲಿ ಪ್ರತಿ ತಿಂಗಳು ತಾಯಂದಿರ ಸಭೆ, ಬಾಲ ಸಂಜೀವಿನ ಯೋಜನೆಯಡಿಯಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಇಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವತಿಯಿಂದ ಹಿರಿಯ ನಾಗರೀಕರ ಸಮಸ್ಯೆಗಳ ಸ್ಪಂದನೆಗಾಗಿ ಪೊಲೀಸ್ ಇಲಾಖೆಯಲ್ಲಿ ಉಚಿತ ಸಹಾಯವಾಣಿ ೧೦೯೦ ಅನ್ನು ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪ್ರಾರಂಭಿಸಲಾಗಿದೆ.
ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ೧೩ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಘಟಕಗಳಿಗೆ ೨.೩೮ ಕೋಟಿ ರೂ. ಗಳ ಸಹಾಯಧನ ಮಂಜೂರು ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯ ಸಾರಿಗೆ ಇಲಾಖೆಯು ಈ ಸಾಲಿನಲ್ಲಿ ೨೪.೮೭ ಕೋಟಿ ರೂ.ಗಳ ರಾಜಸ್ವ ಧನವನ್ನು ಸಂಗ್ರಹಿಸುವ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಸಂಪನ್ಮೂಲ ಕ್ರೋಢೀಕರಿಸಲು ನೆರವಾಗಿದೆ.
ಜಿಲ್ಲೆಯ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಶೂನ್ಯ ಬಡ್ಡಿದರದಲ್ಲಿ ಕಳೆದ ವರ್ಷ ೨೯,೧೫೪ ರೈತರಿಗೆ ೮೬.೦೨ ಕೋಟಿ ರೂ. ಹಾಗೂ ಈ ವರ್ಷ ೬,೬೪೦ ರೈತರಿಗೆ ೨೬.೦೫ ಕೋಟಿ ರೂ.ಗಳ ಸಾಲ ವಿತರಣೆ ಮಾಡಲಾಗಿದೆ.
ಸಾಮಾಜಿಕ ಭದ್ರತೆ ಕಾರ್ಯಕ್ರಮದಡಿ ಈ ವರ್ಷ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ೧೦,೬೬೮ ಫಲಾನುಭವಿಗಳಿಗೆ, ವೃದ್ಯಾಪ್ಯ ವೇತನ ಯೋಜನೆ ಅಡಿಯಲ್ಲಿ ೪೭೧ ಫಲಾನುಭವಿಗಳಿಗೆ, ವಿಧವಾ ವೇತನ ಯೋಜನೆ ಅಡಿಯಲ್ಲಿ ೫,೫೩೫ ಫಲಾನುಭವಿಗಳಿಗೆ, ಮನಸ್ವಿನಿ ಯೋಜನೆಯಡಿ ೩೦೭ ಜನರಿಗೆ ಮಾಸಾಶನ ಮಂಜೂರು ಮಾಡಲಾಗಿದೆ.
ಅಂಗವಿಕಲ ವೇತನ (ರೂ. ೫೦೦) ಮಾಶಾಸನ ಯೋಜನೆ ಅಡಿಯಲ್ಲಿ ೧,೪೯೫ ಫಲಾನುಭವಿಗಳಿಗೆ ಹಾಗೂ ಅಂಗವಿಕಲ ವೇತನ (ರೂ. ೧೨೦೦) ಮಾಶಾಸನ ಯೋಜನೆ ಅಡಿಯಲ್ಲಿ ೧,೨೬೦ ಫಲಾನುಭವಿಗಳಿಗೆ ಆಯ್ಕೆ ಮಾಡಿ ಪಿಂಚಣಿಯನ್ನು ಮಂಜೂರು ಮಾಡಲಾಗಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರಿಯಾಯತಿ ದರದಲ್ಲಿ ೧,೮೪೦ ಕ್ವಿಂಟಲ್ ವಿವಿಧ ಬಿತ್ತನೆ ಬೀಜವನ್ನು ಜಿಲ್ಲೆಯ ೧೮,೬೭೦ ರೈತರಿಗೆ ವಿತರಣೆ ಮಾಡಲಾಗಿದೆ.
ರಾಷ್ಟ್ರೀಯ ಐಕ್ಯತೆ, ಸಮಗ್ರತೆ ಮತ್ತು ಮತೀಯ ಸೌಹಾರ್ದತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ದುಷ್ಟ ಶಕ್ತಿಗಳ ದಮನಕ್ಕಾಗಿ ಪ್ರತಿಯೊಬ್ಬ ಭಾರತೀಯ ಅದರಲ್ಲೂ ಯುವ ಸಮುದಾಯ ವೀರಸೇನಾನಿಗಳಾಗಿ ಒಗ್ಗಟ್ಟಿನಿಂದ ಹೋರಾಡಲು ಟೊಂಕಕಟ್ಟಿ ನಿಲ್ಲಬೇಕಿದೆ.
ಯುವಜನಾಂಗ ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಪರಂಪರೆ, ಪರಿಸರ ಹಾಗೂ ಪರಿಶ್ರಮದ ಪ್ರಜ್ಞೆ ಬೆಳೆಸಿಕೊಳ್ಳಲು ಪ್ರಾಮಾಣಿಕ ಶ್ರದ್ಧೆ, ವಿಶಾಲ ಮನೊಭಾವ, ದೃಢಸಂಕಲ್ಪ, ಶಿಸ್ತು ಮತ್ತು ಸಂಯಮಗಳನ್ನು ಮೈಗೂಡಿಸಿಕೊಳ್ಳಬೇಕಿದೆ.
ದೇಶದ ೬೮ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಹಾಗೂ ಐಕ್ಯತೆ ಸಮಗ್ರತೆ, ಸಹೋದರತೆ, ಕೋಮು ಸಾಮರಸ್ಯ ಮತ್ತು ಅಭಿವೃದ್ಧಿ ಕಾರ್ಯಗಳೇ ಪ್ರತಿಯೊಬ್ಬರ ಗುರಿಯಾಗಬೇಕು.
ಈ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿ ಪ್ರತಿಜ್ಞೆ ಸ್ವೀಕರಿಸೋಣ. ಭವ್ಯ ನಾಡನ್ನು ಕಟ್ಟಲು ಮುಂದಾಗೋಣ.
ಜೈ ಹಿಂದ್ - ಜೈ ಕರ್ನಾಟಕ
0 comments:
Post a Comment