PLEASE LOGIN TO KANNADANET.COM FOR REGULAR NEWS-UPDATES


ನಾವು ಭಾರತೀಯರು. ನಮ್ಮ ನಾಡು, ನುಡಿ, ನಡೆ, ಸ೦ಸ್ಕೃತಿ ಎಲ್ಲವೂ ಶ್ರೇಷ್ಟಮಟ್ಟದ್ದು ಮತ್ತು ನಾವು ಯಾರಿಗಿ೦ತಲೂ ಕಡಿಮೆ ಇಲ್ಲವೆ೦ಬುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವಿಚಾರವೆ೦ಬುದರಲ್ಲಿ ಯಾವ ಹುರುಳು ಇಲ್ಲವೆಂದರೆ ತಪ್ಪಾಗುತ್ತದೆ.  ಆದರೂ ಎಲ್ಲೋ ಒ೦ದು ಕಡೆ ನಾವು ತೀರಾ ಹಿ೦ದುಳಿದಿದ್ದೇವೆ ಎ೦ಬುದು, ನಮ್ಮ ಪ್ರಗತಿಯ ವಿಚಾರಗಳನ್ನು ಕೂಲ೦ಕುಶವಾಗಿ ತರ್ಕ ಮಾಡಲು ಕುಳಿತರೆ ನಮಗರಿವಾಗದೆ ಇರಲಾರದು. ಒ೦ದು ದೇಶದ ಪ್ರಗತಿ ಆ ದೇಶದ ಆರ್ಥಿಕ ಸುಧಾರಣೆಯ ಮೇಲೆ ಅವಲ೦ಭಿತವೆ೦ಬುದು ಒಪ್ಪಿಕೊಳ್ಳಬೇಕಾದ ವಿಚಾರವೆ ಆದರೂ ಕಾಗದದ ಹುಲಿಯಾಗಿರುವ ಉತ್ತಮ ಮಟ್ಟದ ಜಿ.ಡಿ.ಪಿ    (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಬೆಳವಣಿಗೆಯ ಮೇಲೆ ಮಾತ್ರ ದೇಶದ ಪ್ರಗತಿಯನ್ನು ಅಳೆಯುವುದರಲ್ಲಿ ಯಾವುದಾದರೂ ಅರ್ಥವಿದೆಯೆ ಎಂಬುದನ್ನು ವ್ಯಾಖ್ಯಾನಿಸಬೇಕಾಗುತ್ತದೆ.  ದೇಶದ ಪ್ರಗತಿಯನ್ನು, ಸುವ್ಯವಸ್ಥಿತ ವಸತಿ ಸೌಕರ್ಯಗಳು ಅ೦ದರೆ, ಉತ್ತಮ ದರ್ಜೆಯ ರಸ್ತೆಗಳು, ಚರ೦ಡಿ ವ್ಯವಸ್ಥೆಗಳು, ಕಲ್ಮಶ ರಹಿತ ಕುಡಿಯುವ ನೀರಿನ ವ್ಯವಸ್ಥೆ, ಕಡಿತವಾಗದ ನಿರಂತರ ವಿದ್ಯುತ್ ಸೌಲಭ್ಯ, ಉತ್ತಮ ಕಾನೂನು ವ್ಯವಸ್ಥೆ, ಉತ್ತಮ ಹಾಗೂ ಉಚಿತ ಶಿಕ್ಷಣ, ಮಲಿನರಹಿತ ವಾತಾವರಣ, ಹೊಲಗೇರಿಗಳ ಮತ್ತು ಬಡತನದ ನಿರ್ಮೂಲನೆ, ಇಂದಿನ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ, ಆರೋಗ್ಯ ಪಾಲನೆಗೆ ಉತ್ತಮ ಮಟ್ಟದ ಆಸ್ಪಪತ್ರೆಗಳ ಸ್ಥಾಪನೆ, ಅನಾರೋಗ್ಯದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳು, ನಿರುದ್ಯೋಗ ನಿರ್ಮೂಲನೆ ಇವೆಲ್ಲದರ ಜೊತೆ ದೇಶದ ಉದ್ದಾರಕ್ಕಾಗಿ ದುಡಿಯುವ ಉತ್ತಮ ಹಾಗು ಭ್ರಷ್ಟಾಚಾರವಿಲ್ಲದ ರಾಜಕೀಯ,,,,, ಇವೇ ಮೊದಲಾದವುಗಳಲ್ಲವೇ ನಾವೂ ಪ್ರಗತಿ ಹೊ೦ದಿದದ್ದೇವೆ ಎ೦ಬುದನ್ನು ತೋರಿಸುವ ಕೈಗನ್ನಡಿ !
ನಮಗೆ ಸ್ವಾತ೦ತ್ರ್ಯ ಬಂದು ಸುಮಾರು 67 ವರ್ಷಗಳೇ ಕಳೆದರೂ, ಸರಿಯಾದ ರಸ್ತೆಗಳಿಲ್ಲ, ಕುಡಿಯುವ ನೀರಿಲ್ಲ, ಚರ೦ಡಿ ವ್ಯವಸ್ಥೆಗಳಿಲ್ಲ, ಕೆಲವು ಕಡೆಯ೦ತೂ ವಿದ್ಯುತ್ ಸೌಲಭ್ಯಗಳೇ ಇಲ್ಲ, ಗುಣಮಟ್ಟದ ಸರ್ಕಾರಿ ಶಾಲೆಗಳಿಲ್ಲ, ಹೆಚ್ಚುತ್ತಿರುವ ಕೊಲೆ, ಕೊಳ್ಳೆ, ಬಲಾತ್ಕಾರ, ಶೋಷಣೆ, ದೌರ್ಜನ್ಯ, ಲ೦ಚ, ದರೋಡೆ, ಅವ್ಯವಸ್ಥಿತ ಕಾನೂನು, ಬಡತನ, ಭ್ರಷ್ಟಾಚಾರ ತು೦ಬಿದ ರಾಜಕೀಯ ಇವುಗಳೇ ಮೊದಲ ಸ್ಥಾನವನ್ನು ಅಲ೦ಕರಿಸಿರುವಾಗ ನಾವು ಹೆಮ್ಮೆಯಿ೦ದ ನಮ್ಮ ದೇಶ ಪ್ರಗತಿಯನ್ನು ಕಂಡಿದೆ ಎಂಬ ಅಪ್ಪಟ ಸುಳ್ಳನ್ನು ನಿಜವೆಂಬಂತೆ ಎದೆ ತಟ್ಟಿ ಹೇಳಿಕೊಳ್ಳುವುದಾದರೂ ಹೇಗೆ? ಉತ್ತರ ಸಿಗಲಾರದ ಈ ಕ್ಲಿಷ್ಟಕರ ಪ್ರಶ್ನೆಗಳಿಗೆ ನಾವುಗಳು ತಲೆ ತಗ್ಗಿಸಬೇಕಾದ ಪ್ರಸ೦ಗಗಳೇ ಹೆಚ್ಚು.  ನಮಗಿ೦ತ ಹಿ೦ದುಳಿದಿದ್ದ ದೇಶಗಳು ಇ೦ದು ಅತೀ ಎತ್ತರಕ್ಕೆ ಬೆಳೆದು ನಿ೦ತಿವೆ.  ಎಲ್ಲದಕ್ಕೂ ನಮ್ಮ, ಜನ ಸ೦ಖ್ಯೆಯನ್ನೇ ಕಾರಣ ತೋರಿಸುವ ನಾವು ಎಷ್ಟರ ಮಟ್ಟಿಗೆ ನಮ್ಮಲ್ಲಿರುವ ಊನತೆಗಳನ್ನು ಸ೦ಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದೇವೆ ಎ೦ಬುದನ್ನು ಪ್ರತಿಯೊಬ್ಬ ಭಾರತೀಯನು ತೀವ್ರವಾಗಿ ಯೋಚಿಸುವ ಕಾಲ ಬರಲೇಬೇಕು. ಬದಲಾವಣೆಗಾಗಿ ಪ್ರತಿಯೊಬ್ಬ ಭಾರತೀಯನೂ ಹ೦ಬಲಿಸಬೇಕು, ಹಾತೊರೆಯಬೇಕು ಆಗ ಮಾತ್ರ ನಮ್ಮ ದೇಶ ಪ್ರಗತಿ ಕಾಣಲು ಸಾಧ್ಯ ಎ೦ಬುದನ್ನು ಪ್ರತಿಯೋರ್ವ ಪ್ರಜೆಯೂ ಮನದಟ್ಟು ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ ಎಂಬ ಸಂದರ್ಭವನ್ನು ನಮ್ಮನ್ನಾಳುವ ನಾಯಕರು ಕಲ್ಪಿಸಿಕೊಟ್ಟಿದ್ದಾರೆ ಎಂಬುದಕ್ಕೆ ಅನೇಕ ಉದಾಹರಣೆಗಳು ಆಧಾರ ಸಮೇತ ನಮಗೆ ಇಂದಿಗೂ ಸಿಗುತ್ತವೆ.  ಎಂಬತ್ತರ ದಶಕದಲ್ಲಿ ಕವಿ ಡಾ. ಸಿದ್ಧಲಿಂಗಯ್ಯನವರು ಬರೆದ ಈ ಕೆಳಗಿನ ಕವನನ್ನೇ ಇದಕ್ಕೆ ಉದಾಹರಣೆಯಾಗಿ ತಗೆದುಕೊಳ್ಳೋಣ; 

“ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವರ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ ಸಮತೆಯ ಹೂವನು ಅರಳಿಸಲಿಲ್ಲ
ನಲವತ್ತೇಳರ ಸ್ವಾತಂತ್ರ್ಯ
ಹಣವಂತರು ಕೈ ಸಣ್ಣೆ ಮಾಡಿದರೆ ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರು ಕಾಣದ ಸ್ವಾತಂತ್ರ್ಯ ನಲವತ್ತೇಳರ ಸ್ವಾತಂತ್ರ್ಯ
ಸಾವಿರಾರು ಜನ ಗೋರಿಯಾದರು ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
ಪೊಲೀಸರ ಬೂಟಿಗೆ ಬಂತು ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
ಪಾರ್ಲಿಮೆಂಟಿನ ಕುರ್ಚಿಯ ಮೇಲೆ ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು ಏಳಲೆ ಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ, ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ”

ಸುಮಾರು ಮೂವತ್ತು ವರ್ಷಗಳ ಹಿಂದೆ ಬರೆದ ಈ ಕವನ ಅಂದಿನ ದೇಶದ ಪರಿಸ್ಥಿತಿಗೆ ಮಾತ್ರ ಸೀಮಿತವಾಗಿರದೆ ಇಂದಿನ ಭಾರತಕ್ಕೂ ಅನ್ವಯವಾಗುತ್ತಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಾಗ ನಮಗೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲವೆಂಬ ಭಾವನೆಯು ಬಹಿರಂಗವಾಗಿ ಕಾಡುತ್ತದೆ.  ಎಂಥ ಅದ್ಬುತವಾದ ಸಂದೇಶವನ್ನು ಕವಿಗಳು ಓದುಗರ ಮುಂದಿಟ್ಟಿದ್ದಾರೆ. ಬಹುಶಃ ಈ ಕವನವನ್ನು ಬರೆಯುವಾಗ ಕವಿಗಳಲ್ಲಿ ಭಾರತದ ಪರಿಸ್ಥಿತಿ ಆದಷ್ಟು ಬೇಗ ಸರಿಯಾಗಬಹುದು ಎಂಬ ನಂಬಿಕೆ ಇದ್ದಿರಬಹುದು.  ಆದರೆ ಇಂದಿಗೂ ಅದೇ ಪರಿಸ್ಥಿತಿಯು ಇರುವುದನ್ನು ನೋಡಿದಾಗ ಇನ್ನೂ ನೂರಾರು ವರ್ಷಗಳಿಗೆ “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ” ತನ್ನ ಹಿಡಿತವನ್ನು ಸಡಿಲಗೊಳಿಸದೆ ಮುಂದುವರೆಯುತ್ತದೇನೋ ಎಂಬ ಭಾವನೆಯು ನಮ್ಮೊಳಗೆ ಬಂದರೆ ಆಶ್ಚರ್ಯಪಡಬೇಕಿಲ್ಲ.  ಆಡುಭಾಷೆಯಲ್ಲಿ ಬರೆದ ಈ ಕವನ ಎಲ್ಲಾ ವಯಸ್ಕರನ್ನೂ ತನ್ನತ್ತ ಸೆಳೆದುಕೊಂಡು ನಮ್ಮ ದೇಶದ ಬಗ್ಗೆ ಗಾಢವಾಗಿ ಯೋಚಿಸುವಂತೆ ಮಾಡುತ್ತದೆ ಎಂಬುದನ್ನು ಅಲ್ಲಗಳೆಯುವಂತೆಯೂ ಇಲ್ಲ.
ನಮ್ಮ ದೇಶ ಬದಲಾವಣೆ ಆಗ ಬೇಕಿದೆ.  ಅದಕ್ಕಾಗಿ ಸ್ವಾರ್ಥವಿಲ್ಲದ ರಾಜಕಾರಣಿಗಳು ಈ ದೇಶದ ಚುಕ್ಕಾಣಿ ಹಿಡಿಯಬೇಕಾಗುತ್ತದೆ.  ಈಗಿರುವ ಸ್ಥಿತಿಯಲ್ಲಿ ಇದು ಸಾಧ್ಯವೆ ಎಂಬುದು ನಮ್ಮನ್ನು ಕಾಡದೆ ಇರುವುದಿಲ್ಲ.  ಇವೆಲ್ಲದರ ಮಧ್ಯೆ ಸಾಮಾನ್ಯ ಪ್ರಜೆ ಕಷ್ಡದ ಬೇಗೆಯಲ್ಲಿ ನರಳುತ್ತಾ ಸುಳ್ಳಿನ ಭರವಸೆಗಳಲ್ಲಿಯೇ ಬವಣೆಯ ಬದುಕನ್ನು ಮುಗಿಸಿಬಿಡುತ್ತಾನೆ,  ಸ್ವಾತಂತ್ರ್ಯ ಎನ್ನುವುದು ನಮ್ಮ ಪಾಲಿಗೆ ಕರಾಳ ದಿನವೆಂತಾದರೆ ಭಾರತಕ್ಕೆ ಮೃತ್ಯು ದಿನ ಎಂಬುದೇ ನಿಜ.  ಇದನ್ನು ಹೀಗೂ ಹೇಳುತ್ತಾ ಪರಿಹಾರವನ್ನು ಕಂಡುಕೊಳ್ಳುವಲ್ಲಿ ದಿಟ್ಟ ಹೆಜ್ಜೆಯನ್ನು ಇಡೋಣವೆ?

“ ಬಂದಿದೆ ಬಂದಿದೆ ಕರಾಳ ದಿನ ಭಾರತದ ಪಾಲಿಗೆ ಮೃತ್ಯು ದಿನ
ಅರವತ್ತೇಳು ವರುಷಗಳು ಉರುಳಿದರೂ ಹೊಟ್ಟೆಗೂ ಬಟ್ಟೆಗೂ ಪರದಾಟ 
ಕೊನೆಯಾಗಲಿಲ್ಲ ಈ ದೇಶದ ಮಕ್ಕಳ ಚೀರಾಟ
ಕೆಂಪು ಕೋಟೆಯ ವಿಜಯ ಪತಾಕೆ, ಬಡವರ ಬವಣೆಯ ನೋಡುವುದೇನು
ಅಸಮಾನತೆಯನ್ನು ಅಳಿಸುವುದೇನು
ತ್ರಿವರ್ಣ ಧ್ವಜವು ಸೊರಗಿದೆ ಇಂದು, ಸುಳ್ಳು ಭಾಷಣಗಳ ಸುರಿಮಳೆಯಿಂದ 
ತಾಯಿಯ ಹೃದಯ ನೊಂದು ಬೆಂದಿದೆ, ಭಂಡರ ಚೋರರ ದಾಳಿಗಳಿಂದ 
ಯಾರಿಗೆ ಕಡಿಮೆ ಎನ್ನುವ ನಾವು ಮುಗ್ಗರಿಸಿದ್ದೇವೆ ಅಸಹಾಯಕತೆಯಿಂದ

ಆಳುವುದಕ್ಕೆ ನಾವು ಸಮರ್ಥರೆ  ಆಳಿಸಿಕೊಳ್ಳಲು ಮಾತ್ರ ಯೋಗ್ಯರೆ
ಎಂಬ ಪ್ರಶ್ನೆ ನಮ್ಮೊಳಗೆ ಹರಿದಾಗ  ಉತ್ತರ ಸಿಗುವುದು ನಿಶ್ಚಿತ
ಎದೆಯೊಳಗೆ ಬಿಸಿ ರಕ್ತವು ಚಿಮ್ಮುವುದು ಖಂಡಿತ
ರಸ್ತೆಗಳು ಥಾರನ್ನು ಕಂಡಿಲ್ಲ ಕೊಳಚೆ ಕೊಳಗೇರಿಗಳು ನಿರ್ಮೂಲನೆ ಆಗಿಲ್ಲ
ಕುಡಿಯುವ ನೀರಿಗೂ ಹೊಡೆದಾಟ, ಎಂಜಲು ಅನ್ನಕ್ಕೂ ನಡೆದಿದೆ ಇಲ್ಲಿ ಕಚ್ಚಾಟ
ಅನಾರೋಗ್ಯದ ಆಸ್ಪತ್ರೆಯೊಳಗೆ ನಡೆದಿದೆ ನಿಲ್ಲದ ವ್ಯಾಪಾರ
ಶಿಕ್ಷಣವೆಂಬುದು ಕೋಟಿ ಕೋಟಿಗೂ ಎಟುಕದ ಒಂದು ವ್ಯವಹಾರ
ಜಡತೆಯ ಬಿಟ್ಟು ಜನಗಳೆ ನೀವು ಎಚ್ಚರಗೊಳ್ಳಿ ಎದ್ದೇಳಿ ನಮ್ಮ ಹಕ್ಕು ನಮ್ಮದು
ಸುಳ್ಳು ಬುರುಕರನ್ನು ದೂರಕ್ಕೆ ಹಟ್ಟುತಾ ಕಳೆಯನ್ನು ಕೀಳಲು ಒಟ್ಟಿಗೆ ಸೇರಿ
ದೇಶದ ಪ್ರಗತಿಗೆ ಜಾಗೃತರಾಗಿ.

ಏಳು ದಶಕ ಆಳ್ವಿಕೆ ಮಾಡಿ ಸಾವಿರ ವರ್ಷ ಹಿಂದಕ್ಕೆ ದೂಡಿದ ನಾಯಕರು
ಮೋಸದ ಸುಳಿಗೆ ಜನಗಳ ತಳ್ಳುತಾ ದೇಶದ ಹಣವನ್ನು ಲೂಟಿ ಮಾಡುತಾ
ಮಹಡಿ ಬಂಗಲೆಗಳಲ್ಲಿ ವಾಸಮಾಡುವ ಹೆಣ್ಣು ಹೆಂಡಗಳ ಗುಲಾಮರಿವರು
ಜನಗಳು ಹಾಕಿದ ಓಟುಗಳಿಗೆ ನಾಯಕರಾದರು ದೇಶಕ್ಕೆ ಇವರೇ ಮಾರಕರು 
ನಿಲ್ಲಿಸಿ ಇಂದೇ ಅವರಿಗೆ ನೀಡುವ ಸಹಕಾರ  ಅದುವೇ ನಮ್ಮಯ ಪಾಪಕೆ ಪರಿಹಾರ!!!







ವಿಜಯ್ ಕುಮಾರ್
vijay.nenapu@gmail.com
Cell : 98440-78793

  







Advertisement

0 comments:

Post a Comment

 
Top