PLEASE LOGIN TO KANNADANET.COM FOR REGULAR NEWS-UPDATES

'ಕಲಂ 371 ಎಂದರೆ ಏನೆಂದು ಅರಿವಿಲ್ಲದ ನಮ್ಮ ಮಕ್ಕಳಿಗೆ ಅಂಗೈಯಲ್ಲಿ ಅರಮನೆಯನ್ನು ತೋರಿಸಿ, ಮುಂದಿನ ನಿಮ್ಮ ಭವಿಷ್ಯತ್ತಿಗಾಗಿ
ನಿಮ್ಮ ಪಾಲಿಗೆ ಕಾಮಧೇನು ಸಿಕ್ಕಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು, ಬಡ್ತಿಗೆ ಅವಕಾಶ ಸಿಗು ವುದೆಂಬ ಆಶಾಗೋಪುರವನ್ನು ತೋರಿಸುತ್ತಿದ್ದೆವು, 371 (ಜೆ) ಎನ್ನುವ ಕಾಮಧೇನು ಕಲ್ಪವೃಕ್ಷವೇನೋ ನಮಗೆ ಸಿಕ್ಕಿತು.
ಆದರೆ, ಕಲ್ಪವೃಕ್ಷ ಫಲ ನೀಡುವ ಕಾಮಧೇನು ಹಾಲು ಕೊಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಪ್ರಾಂತೀಯ ಅಸಮಾನತೆ, ಶೈಕ್ಷಣಿಕ, ಉದ್ಯೋಗ ಮತ್ತು ಔದ್ಯೋಗಿಕ ಅಸಮಾಧಾನ ನಿವಾರಣೆಗಾಗಿ ಸಂವಿಧಾನವನ್ನೇ ತಿದ್ದುಪಡಿಗೊಳಿಸಿದ್ದು, ಲೋಕಸಭೆಯಲ್ಲಿ ಪಕ್ಷಾತೀತವಾಗಿ ಸರ್ವಾನುಮತದಿಂದ ಅನುಮೋದಿಸಿದ, ಹೈದ್ರಾಬಾದ್ ಕರ್ನಾ ಟಕ ಭಾಗದ 6 ಜಿಲ್ಲೆಗಳಿಗೆ ವರವಾಗಿರುವ ಸಂವಿಧಾನದ ಕಲಂ 371 (ಜೆ) ಕೇಂದ್ರದ ಮಾರ್ಗದರ್ಶಿ ಸೂತ್ರಗಳನ್ವಯ ಪೂರ್ಣಾನುಷ್ಠಾನ ಜವಾಬ್ದಾರಿಯು ರಾಜ್ಯ ಸರ್ಕಾರದ್ದಾಗಿದ್ದು, ಇದರಿಂದ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಈ ಭಾಗದ ಬೀದರ, ಗುಲ್ಬರ್ಗಾ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸಂಪೂರ್ಣ ಅಭಿವೃದ್ಧಿ ಸೇರಿದಂತೆ, ಸ್ಥಳೀಯ ಮಾನವ ಸಂಪನ್ಮೂಲ ಅಭಿವೃದ್ಧಿ, ಪ್ರಾಂತದ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚನೆ, ಎಲ್ಲಾ ಹಂತ ಗಳಲ್ಲೂ ಸ್ಥಳೀಯರಿಗೆ ಆದ್ಯತೆ ದೊರಕುವುದರಿಂದ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಯ ನಿರೀಕ್ಷಿತ ಮಟ್ಟದಲ್ಲಿ ಕ್ರಾಂತಿಯ ಜಯವಾಗಿದ್ದರೂ ಸಹ, ನಿರಾಶೆಯ ಭ್ರಾಂತಿಯು ನಮ್ಮನ್ನೆಲ್ಲಾ ಆವರಿಸಿದೆ. ಇಲ್ಲಿಯವರೆಗೆ ಆಳಿದ ಸರ್ಕಾರದ ಮಲತಾಯಿ ಧೋರಣೆಯಿಂದ ಹಿಂದುಳಿದ ನಾವು, ಕೊನೆಗೆ ನಮ್ಮ ದಶಕಗಳ ಹೋರಾಟದ ಫಲವಾಗಿ ಸಂವಿಧಾನ ತಿದ್ದುಪಡಿ ಯಾಗಿ ನಿಟ್ಟುಸಿರು ಬಿಟ್ಟೆವು.
ಮೊದಲೇ ಹಿಂದುಳಿದಿರುವ ಈ ಪ್ರದೇಶದಲ್ಲಿ ಉನ್ನತ ಹಾಗೂ ಉತ್ತಮ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳು ಇಲ್ಲದ್ದರಿಂದ ರಾಜ್ಯದ ಇತರೇ ಭಾಗದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುವಷ್ಟು ಹೆಚ್ಚು ಅಂಕಗಳನ್ನು ಪಡೆಯುವ ಮಟ್ಟದಲ್ಲಿ ನಾವಿರಲಿಲ್ಲ. ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದೊಡನೆ ಹೈದ್ರಾಬಾದ್ ಕರ್ನಾಟಕವನ್ನು ಹೋಲಿಸಿದರೆ ನಾವು ತುಂಬಾ ಹಿಂದು ಳಿದಿದ್ದೇವೆ. ಏಕೀಕರಣ ಕರ್ನಾಟಕ ಸಮಗ್ರ ರಾಜ್ಯದ ಅಭಿವೃದ್ಧಿಗಲ್ಲ ಕೇವಲ ಕಲ್ಪನೆಗಷ್ಟೇ ಚೆಂದ ಎನಿಸಿದ್ದರಲ್ಲಿ ತಪ್ಪಿಲ್ಲ.
ಆದರೆ, ಈ 371(ಜೆ) ಜಾರಿ ಮಾಡಲು ರಾಜ್ಯದ ಅನಾಸಕ್ತಿ ನಮ್ಮನ್ನು ಬೆರಗಾಗಿಸಿದೆ. ಮಾನ್ಯ ಮುಖ್ಯಮಂತ್ರಿಗಳೇ, ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಉದ್ಯೋಗದಲ್ಲಿ ಮೀಸಲಾತಿ, ಸೂಕ್ತ ಹಣ ಪೂರೈಕೆ, ಮತ್ತಿತರ ಕಾರ್ಯಕ್ರಮಗಳ ಅನು ಷ್ಠಾನಕ್ಕಾಗಿ 6 ತಿಂಗಳೊಳಗೆ ನಿಯಮಾವಳಿಗಳನ್ನು ರೂಪಿಸಿ, ಈ ಸಾಂವಿಧಾನಿಕ ತಿದ್ದುಪಡಿಯ ಆಶಯಗಳನ್ನು ಸಂಪೂರ್ಣ ವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದು, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ ಬೆಳ ಗಾವಿಯ ವಿಟಿಯು, ಕೆ.ಎಂ.ಎಫ್.,ಆರೋಗ್ಯ ಇಲಾಖೆ (ಏಡ್ಸ್ ನಿಯಂತ್ರಣ ಸಂಸ್ಥೆ), ಸೊಸೈಟಿ ಫಾರ್ ಕರ್ನಾಟಕ- ಜರ್ಮನ ಸ್ಕಿಲ್ ಡೆವೆಲಪಮೆಂಟ್ ಸೆಂಟರ್, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬಿ.ಎಂ.ಟಿ.ಸಿ. ಹಾಗೂ ಪೊಲೀಸ್ ಇಲಾಖೆಗಳಲ್ಲಿ ಈಗಾಗಲೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು ,ವಿದ್ಯಾವಂತ ನಿರುದ್ಯೋಗಿಗಳಿಗೆ ಆಶಾಭಂಗವಾಗಿದೆ. ಸಮಾಧಾನಕರ ಎಂದರೆ, ಈ ವರ್ಷ ಮೆಡಿಕಲ್, ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಲ್ಲಿ ಮಾತ್ರ ಮೀಸಲಿನ ಲಾಭವಾಗಿದ್ದು, ನಮ್ಮ ಮಕ್ಕಳ ಮುಖದಲ್ಲಿ ನಗುವಿನ ಕಳೆ ಕಾಣುವಂತಾಗಿದೆ.
ಮಂತ್ರಿಗಿರಿಯನ್ನು ತ್ಯಜಿಸಿದ ವೈಜನಾಥ್ ಪಾಟೀಲ್, ರಾಘವೇಂದ್ರ ಕುಷ್ಟಗಿ, ಬಸವಂತ ರಾವ್ ಕುರಿ, ಡಾ: ರಝಾಕ್ ಉಸ್ತಾದ್‌ರವರ ನೇತೃತ್ವದಲ್ಲಾದ ಈ ಭಾಗದ ಜನಪರ ಹೋರಾಟಗಳು, ಮಠಮಾನ್ಯಗಳು, ಸಂಘ ಸಂಸ್ಥೆಗಳು, ವಿದ್ಯಾ ರ್ಥಿಗಳು ಕೈಗೊಂಡ ಜಾಗೃತಾ ಸಮಾವೇಶಗಳು ಲೆಕ್ಕವಿಲ್ಲ. ಇವರ ನ್ಯಾಯಯುತ ಹೋರಾಟಕ್ಕೆ ಜತೆಗೂಡಿ ಶಕ್ತಿ ತುಂಬಿದ ಜಂತರ್ ಮಂತರ್‌ನಲ್ಲಿನ ನಮ್ಮ ಧರಣಿ ಮತ್ತು ಜನಪ್ರತಿನಿಧಿಗಳ ಪ್ರಯತ್ನವು ಫಲವನ್ನೇನೋ ನೀಡಿತು.
ಆದರೆ, ಇಂದಿನ ಪರಿಸ್ಥಿತಿ ಬೆಟ್ಟವನ್ನಗೆದು ಇಲಿ ಹಿಡಿದಂತಾಗಿದ್ದು ವಿಷಾದನೀಯವೇ ಸರಿ. ಕಾನೂನು ರಚಿಸಿದ ಸರಕಾರದ ಅಧಿಕಾರಿಗಳೇ ಅದನ್ನು ಉಲ್ಲಂಘಿಸಿ ನೇಮಕಾತಿ ಮಾಡುತ್ತಿರುವುದು ದಿಗ್ಭ್ರಮೆ ಮೂಡಿಸಿದ್ದು, ಈ ಭಾಗದ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಶಕ್ತಿ ಪ್ರದರ್ಶಿಸಬೇಕಿದೆ.
ನಿಜಾಮನ ಆಡಳಿತದಲ್ಲಿದ್ದ ಮುಲ್ಕಿ (ರೂಲ್) ಕಾನೂನೇ ನಮಗೆ ಚೆನ್ನಾಗಿತ್ತು. ಆಗ ಸ್ಥಳೀಯರಿಗೆ ಮೀಸಲಾತಿ ಇತ್ತು. ಆದರೆ, ಏಕೀಕರಣ ಕರ್ನಾಟಕದಿಂದ ನಮಗಾದ ಲಾಭವಾದರೂ ಏನು ...? ಈಗ ನಾವೆಲ್ಲಾ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದ್ದು, ನಮಗೆ 371 (ಜೆ) ತಿದ್ದುಪಡಿ ಕಲ್ಪವೃಕ್ಷ ಕಾಮಧೇನು ಆಗಲೇ ಇಲ್ಲ. ಪ್ರಾಂತೀಯ ಅಸಮಾನತೆ, ಮೂಲ ಭೂತ ಸೌಲಭ್ಯಗಳ ಹಾಗೂ ಭಾಷಾವಾರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ.
ಹೆತ್ತ ಮಕ್ಕಳನ್ನೇ ಮಾರಾಟಮಾಡುವಷ್ಟು ಕಡು ಬಡತನ, ತುತ್ತು ಅನ್ನಕ್ಕೂ ಪರದಾಡಬೇಕಾದ ದುಸ್ಥಿತಿ ಇರುವುದು ನಮ್ಮ ಹೈದ್ರಾ ಬಾದ್-ಕರ್ನಾಟಕ ಪ್ರದೇಶದಲ್ಲಿ ಮಾತ್ರ. ರಸ್ತೆಯಲ್ಲಿಯೇ ಹೆರಿಗೆಯಾಗುವಷ್ಟು ರಸ್ತೆಗಳು ಹದಗೆಟ್ಟಿವೆಯೆಂದರೆ ಅಭಿ ವೃದ್ಧಿಯ ಬಗ್ಗೆ ನೀವೇ ಊಹಿಸಿ. ಬೆಲೆ ಏರಿಕೆಯ ಮುಂದೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ದುಡಿಮೆಯಿಂದ ಸಂಸಾರ ನಡೆಸುವುದು ದುಸ್ಥರವೆಂದು ಮಹಾರಾಷ್ಟ್ರ, ಗೋವಾಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವುದು ನಮ್ಮ ಭಾಗದವರೇ ಹೊರತಾಗಿ ರಾಜ್ಯದ ಬೇರೆ ಪ್ರದೇಶದವರಲ್ಲ.
ಇನ್ನು ಮೈಸೂರು, ಬೆಂಗಳೂರು ಪ್ರಾಂತಗಳೊಂದಿಗೆ ಇಡೀ ಉತ್ತರ ಕರ್ನಾಟಕವನ್ನು ಹೋಲಿಸಿದರೆ, ಉತ್ತರ ಕರ್ನಾಟಕ ಹಿಂದುಳಿದಿದೆ ಎಂದು ಎಲ್ಲರಿಗೂ ಗೊತ್ತಿರುವ ಅಂಶವೇ, ಈ ಹಿನ್ನೆಲೆ ಇಟ್ಟುಕೊಂಡು ಮಾಜಿ ಸಚಿವ ಉಮೇಶ ಕತ್ತಿಯವರು ಆ ಹೇಳಿಕೆ ನೀಡಿರಬಹುದು.
ಇಡೀ ಅಖಂಡ ಕರ್ನಾಟಕವನ್ನು ಹೋಳಾಗಿಸುವುದು ಬೇಡ ಎಂದು ನಾವೆಲ್ಲರೂ ಹೇಳಿದ ಮೇಲೆ ವಿಷಯ ತಣ್ಣಗಾಯಿತು. ಪ್ರತ್ಯೇಕ ರಾಜ್ಯದ ಕೂಗು ಕೇಳಿದ ಕೂಡಲೇ ಬೊಬ್ಬೆ ಹೊಡೆಯುವ ಸಾಹಿತಿಗಳು, ಸ್ವಘೋಷಿತ ಪ್ರಗತಿಪರ ಚಿಂತಕರೆನಿಸಿಕೊಂಡವರು, ವಿವಿಧ ಸಂಘಟನೆಗಳವರು, ಹೈ.ಕ. ಭಾಗಕ್ಕೆ ಅನ್ಯಾಯವಾಗಿದೆ, ಅಲ್ಲಿ ಮೂಲಭೂತ ಸೌಲಭ್ಯಗಳಿಗೆ ಅನುದಾನ ನೀಡಿ ಎಂದು ಒಬ್ಬನಾದರೂ ಬಾಯಿ ಬಿಟ್ಟಾನೆಯೇ ...? ಈ ಬಗ್ಗೆ ಧ್ವನಿ ಎತ್ತಿದ ತಾಕತ್ತಿದ್ದವರು ಮುಂದೆ ಬರಲಿ ನೋಡೋಣ.
ಉಮೇಶ ಕತ್ತಿಯವರ ಆಕ್ರೋಶದ ಹೇಳಿಕೆ ಹಿಂದೆ ಇದೇ ಕಾರಣ ವಿಧಾನ ಸೌಧದ ಮುಂಬಾಗಿಲ ಮೂಲಕ ನಮಗೆ ಅವಕಾಶ ಕಲ್ಪಿಸುವ ಹೇಳಿಕೆ ನೀಡಿ 371 (ಜೆ) ಆದೇಶ ಹೊರಡಿಸುವ ನಮ್ಮ ನಾಯಕರು ಕೆಎಟಿ ಮೆಟ್ಟಿಲೇರುವ ಮೂಲಕ ಹಿಂಬಾಗಿಲಿನಿಂದ ವಿಧಾನಸೌಧ ಮತ್ತು ವಿಕಾಸಸೌಧಗಳಲ್ಲಿರುವ ಸಚಿವಾ ಲಯಗಳಲ್ಲಿ ನಮ್ಮ ಭಾಗಕ್ಕೆ ಶೇ.8 ಮೀಸಲು ನೀಡಲು ಹಿಂದೇಟು ಹಾಕಿ ನಮ್ಮನ್ನು ಮೆಟ್ಟುತ್ತಿದ್ದಾರೆ. ಶಕ್ತಿಸೌಧದಲ್ಲಿಯೇ ನಮಗೆ ಅನ್ಯಾಯವಾಗು ತ್ತಿರುವಾಗ ಇನ್ನು ಬೇರೆಡೆ ಹೇಗಿದೆ ಎಂದು ನೀವೇ ಊಹಿಸಿ.
ಹೆಚ್.ಕೆ. ಪಾಟೀಲರ ನೇತೃತ್ವದ ಸಂಪುಟ ಉಪಸಮಿತಿಯ ವರದಿಯಿಂದಾದ ಪ್ರಯೋ ಜನವೇನು ಎಂದು ಇಂದಿಗೂ ಸಹ ಮಾಹಿತಿ ಇಲ್ಲ. ಸಂವಿಧಾನದಲ್ಲಿ ಅಂತಹ ಯಾವುದಾದರೂ ಲೋಪಗಳಿದ್ದಲ್ಲಿ, ಲೋಪವೇ ಕಾರಣಗ ಳಾಗಿದ್ದರೆ, ಆ ಕಾರಣಕ್ಕೆ ಸೂಕ್ತ ತಿದ್ದುಪಡಿಯ ಇಚ್ಛಾಶಕ್ತಿ ಯನ್ನೇಕೆ ತೋರಬಾರದು?
ಅಲ್ಪ ಅನುದಾನ ಪಡೆಯುವ, ರಾಜ ಕೀಯ ಪುನರ್ವಸತಿ ಕೇಂದ್ರವೆಂದೇ ಬಿಂಬಿಸಲ್ಪಟ್ಟ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿದ್ದರೂ ಸಹ ಲೋಕಸಭಾ ಸದಸ್ಯರ ಪ್ರಸ್ತಾವನೆಗಳಿಗೆ ಈ ಮಂಡಳಿಯಿಂದ ನಯಾಪೈಸೆ ಅನುದಾನ ಪಡೆಯಲು ಸಾಧ್ಯವಿಲ್ಲ. ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ರಾಂತಿಗೆ ರಾಜ್ಯ ಸರ್ಕಾರ ಮುನ್ನುಡಿ ಬರೆಯಲಿ ಎಂದು ನಾನು ವೇದಿಕೆಯೊಂದರಲ್ಲಿ ಪ್ರಸ್ತಾಪಿಸಿದಾಗ ಅಂದಿನ ಸಹಕಾರ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಲಕ್ಷ್ಮಣ ಸವದಿಯವರು ತಾವು ಹಿಂದುಳಿದಿದ್ದೇವೆ ಎನ್ನುವ ಕೀಳರಿಮೆ ಬೇಡ, ಮುಂದುವರಿಯುವ ಪ್ರದೇಶ ಎಂದು ಹೆಮ್ಮೆಪಟ್ಟುಕೊಳ್ಳಿ ಎನ್ನುವ ಅವರ ಮಾತಿನಿಂದ ಅಭಿವೃದ್ಧಿ ಸಾಧ್ಯವಾದೀತೆ ...? ಅವೆಲ್ಲಾ ಕೇವಲ ವೇದಿಕೆ ಮಾತುಗಳು ಬಿಡಿ.
ಕಲಂ 371 ಎಂದರೆ ಏನೆಂದು ಅರಿವಿಲ್ಲದ ನಮ್ಮ ಮಕ್ಕಳಿಗೆ ಅಂಗೈಯಲ್ಲಿ ಅರಮನೆಯನ್ನು ತೋರಿಸಿ, ಮುಂದಿನ ನಿಮ್ಮ ಭವಿಷ್ಯತ್ತಿಗಾಗಿ ನಿಮ್ಮ ಪಾಲಿಗೆ ಕಾಮಧೇನು ಸಿಕ್ಕಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು, ಬಡ್ತಿಗೆ ಅವಕಾಶ ಸಿಗು ವುದೆಂಬ ಆಶಾಗೋಪುರವನ್ನು ತೋರಿಸುತ್ತಿದ್ದೆವು, 371 (ಜೆ) ಎನ್ನುವ ಕಾಮಧೇನು ಕಲ್ಪವೃಕ್ಷವೇನೋ ನಮಗೆ ಸಿಕ್ಕಿತು. ಆದರೆ, ಕಲ್ಪವೃಕ್ಷ ಫಲನೀಡುವ ಕಾಮಧೇನು ಹಾಲು ಕೊಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ರೈತರು ತಮ್ಮ ಕರಿಭೂಮಿಯನ್ನು ಉತ್ತಿ ಬಿತ್ತಿ, ಕಾರ್ಮೋಡದೆಡೆ ಕೈಚಾಚಿ, ಮಳೆ ಸುರಿಸಿ ಹಸಿರನ್ನು ಕಂಗೊಳಿಸುವಂತೆ ಮಾಡು ದೇವರೇ ಎಂದು ಬೇಡಿಕೊಂಡಂತೆ, ಇಂದಿಗೋ ನಾಳೆಗೋ ಉದ್ಯೋಗ ಸಿಗುವದೆಂಬ ಆಶಾ ಗೋಪುರ ಕಟ್ಟಿಕೊಂ ಡಿರುವ ನಮ್ಮ ಯುವಜನತೆ ಪದವಿ ಪಡೆದರೂ ತಕ್ಕ ಉದ್ಯೋಗವಿಲ್ಲದೇ ಪರದಾಡುತ್ತಿದ್ದು, ವಯೋಮಿತಿ ಮೀರುವ ಆತಂಕದಲ್ಲಿದ್ದು, ಚಿಂತಾಕ್ರಾಂತರಾಗಿದ್ದಾರೆ. ನಿರುದ್ಯೋಗಿಗಳಾಗಿರುವ ಇವರಿಗೆ 371 (ಜೆ) ಯಿಂದ ಉದ್ಯೋಗ ಸಿಗು ವುದೆಂಬ ಆಶಾಕಿರಣದಲ್ಲಿದ್ದು, ಒಂದಿಷ್ಟು ಜನ ಅತಿಥಿ ಶಿಕ್ಷಕ/ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ವೃದ್ಧ ಪಾಲಕರನ್ನು ಸಲಹುತ್ತಿದ್ದಾರೆ.
ಯಾವುದೇ ಇಲಾಖೆಯು ನೇಮಕಾತಿ ಕೈಗೊಳ್ಳುವ ಪೂರ್ವದಲ್ಲಿ ಹೈ.ಕ.ಭಾಗದಲ್ಲಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳನ್ನು ಖಾಲಿ ಎಂದು ಪರಿಗಣಿಸಿ, ಈ ಭಾಗದ ಒಟ್ಟು ಖಾಲಿ ಹುದ್ದೆಗಳಿಗೆ 371 (ಜೆ) ಮೀಸಲನ್ನು ಕಲ್ಪಿಸಿ ನೇಮಕಾತಿಯನ್ನು ಕೈಗೊಳ್ಳಬೇಕು. ನಂತರ ರಾಜ್ಯದ ಇನ್ನುಳಿದ ಭಾಗದ ಒಟ್ಟು ಹುದ್ದೆಗಳಲ್ಲಿ ನಮ್ಮ ಭಾಗದವರಿಗೆ ಮೀಸಲು ಕಲ್ಪಿಸಿ ನೇಮಕಾತಿ ಕೈಗೊಳ್ಳಬೇಕಾಗಿದ್ದು, ಆದರೆ, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅವೈಜ್ಞಾನಿಕತೆಯಿಂದ ನೇಮಕಾತಿಯನ್ನು ಆರಂಭಿಸಿದ್ದು ,ಇದಕ್ಕೆ ಕೆಪಿಸಿಎಲ್ ಕೈಗೊಂಡಿರುವ ಪ್ರಕ್ರಿಯೆ ಒಂದು ಜ್ವಲಂತ ಸಾಕ್ಷಿಯಾಗಿದ್ದು, ಇನ್ನಾದರೂ ನಾವು ಸ್ವಾಮಿ ವಿವೇಕಾನಂದರ ಏಳಿ ಎದ್ದೇಳಿ ಹೇಳಿಕೆಯನ್ನು ಯುವಜನತೆ ಪಠಿಸಬೇ ಕಾಗಿದ್ದು, ನಮ್ಮ ಹಕ್ಕನ್ನು ನಾವು ಪಡೆ ಯೋಣ. ಇದು ಇನ್ನೂ ಪ್ರಾರಂಭದ ಹಂತವಾಗಿದ್ದು, ಮುಕ್ತಾಯವಲ್ಲ.
ಹಿಂದೆ ದೇಶವನ್ನು ಹೊಡೆದವರಿಗೆ ರಾಜ್ಯವನ್ನು ಹೊಡೆಯೋದು ಏನು ಮಹಾ ಅಂತ ತಿಳಿದುಕೊಂಡವರಿಗೆ ವೋಟ್ ಬ್ಯಾಂಕ್‌ಗೋಸ್ಕರ ಅಖಂಡ ಆಂಧ್ರಪ್ರದೇಶವನ್ನು ತುಂಡರಿಸುವುದು ಕಷ್ಟವಾಗಲಿಲ್ಲ. ಅದರಂತೆ, 371 ತಿದ್ದುಪಡಿಯನ್ನೇನೋ ಮಾಡಿದ್ರು, ಆದರೆ ಸಣ್ಣಪುಟ್ಟದಕ್ಕೆಲ್ಲಾ ಮೂಗು ಹಿಡಿಯುವ ಕಾರ್ಯವಾಗ್ತಿರೋದು ಮಾತ್ರ ದುರಂತವಾಗಿದ್ದು, ನಮಗೆ ಕೊಟ್ಟಂತೆ ಮಾಡಿದ್ದು, ದಕ್ಕದಂತಾಗಿದೆ.
ನಾವು ಪಡೆದಿದ್ದಾರೂ ಏನನ್ನು, ಅವಸರದಲ್ಲಿ ಕೊಟ್ಟಿದ್ದನ್ನು ಪಡೆದುಕೋ ಎಂದರು. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುವ ಮತದಾರರು ಮಾತ್ರ ದಡ್ಡರಲ್ಲ, ಯಾವುದೇ ಗಿಮಿಕ್ ನಡೆಯದೇ ಅವರ ಒಡೆದಾಳುವ ನೀತಿ ಮೊನ್ನೆ ದಕ್ಕದಾಯಿತು.
ಹೆಚ್.ಕೆ. ಪಾಟೀಲರ ನೇತೃತ್ವದ ಸಮಿತಿಯು ಸರಿಯಾಗಿ ಉಸ್ತುವಾರಿ ಮಾಡುತ್ತಿದೆಯೇ ...? ಸಂವಿಧಾನ ತಿದ್ದುಪಡಿ ಯಾದರೂ ಬಾಳು ಹಸಿರಾಗಲಿಲ್ಲ ಎನ್ನುವ ನಮ್ಮ ಗೋಳು ಕೇಳುವವರಾರು ...? ಸಂವಿಧಾನ ಜಾರಿಯಲ್ಲಿ ಏನಾದರೂ ಲೋಪವಿದೆಯೇ, ಇದ್ದರೆ ಸರಿಪಡಿಸಲಿ. ಅಧಿಕಾರದಲ್ಲಿರುವವರ ಹಾಗೂ ಅಧಿಕಾರಿಗಳ ಕುಮ್ಮಕ್ಕಿಮ್ಮಿನಿಂದ ನಾವು ವಂಚನೆ ಗೊಳಗಾಗುತ್ತಿದ್ದು, ಅಂತೂ ಇಂತೂ ಕುಂತಿ ಪುತ್ರರಿಗೆ ರಾಜ್ಯಭಾರದ ಹಕ್ಕಿಲ್ಲ ಎನ್ನುವ ಪರಿಸ್ಥಿತಿ ನಮಗೆ ಬಂದೊದಗಿದೆ. 371 (ಜೆ) ಎನ್ನುವ ಅಕ್ಷಯಪಾತ್ರೆ ದೊರೆತಿದ್ದರೂ ಸಹ ಅದರ ಪರಿಣಾಮಕಾರಿ ಅನುಷ್ಠಾನಗೊಳಿಸಲು ಇನ್ನೂ ಭಿಕ್ಷಾ ಪಾತ್ರೆ ಹಿಡಿ ದಿರುವುದು ದುರಂತವಾಗಿದೆ. ನಮ್ಮವರೇ ನಮ್ಮನ್ನು ಬೆಳೆಯಲು ಬಿಡಲಿಲ್ಲ.
ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಒಬ್ಬರು ಚಾಪೆ ಕೆಳಗೆ ತೂರಿದರೆ, ಮತ್ತೊಬ್ಬರು ರಂಗೋಲಿ ಕೆಳಗೆ ತೂರುವುದು ಕಂಡುಬರುತ್ತಿದೆ. 371 (ಜೆ) ಅನುಷ್ಠಾನ ನಿರ್ಲ ಕ್ಷದಿಂದ ಈ ಭಾಗದ ಜನರು ತಮ್ಮ ನಿರೀಕ್ಷೆ ಹುಸಿಯಾಗುವ ಭಯದಲ್ಲಿದ್ದು, ಪ್ರಾಂತೀಯ ಅಸಮಾನತೆ ತೊಲಗುವುದು ಪ್ರಾಂತಗಳು ರಾಜ್ಯಗಳಾದಾಗ ಮಾತ್ರವೇ! ಅವರ ಕ್ರಾಂತಿಗಾಗಿಯ ಹೋರಾಟ ಭ್ರಾಂತಿಗೆ ತಿರುಗಿದ್ದು, ತೆಲಂಗಾಣ ರಾಜ್ಯ ಮಾದರಿಯಾಗುವ ಭಯ ನಮಗೆಲ್ಲಾ ಕಾಡುತ್ತಿದೆ.
'.......
ಮಾಜಿ ಸಂಸದರು,ಕೊಪ್ಪಳ

Advertisement

0 comments:

Post a Comment

 
Top