ಗೋವಿನ ಜೋಳ ಕೊಪ್ಪಳ ಜಿಲ್ಲೆಯ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಮುಂಗಾರು ಮಳೆ ತಡವಾಗಿ ಆರಂಭವಾದರೂ ಗೋವಿನ ಜೋಳ ಬೆಳೆಯುವ ಉತ್ಸಾಹ ರೈತರಲ್ಲಿ ಕಡಿಮೆಯಾಗಿಲ್ಲ. ಆದರೆ ತರಾತುರಿಯಲ್ಲಿ ರೈತರು ಸೂಕ್ತವಾದ ಬೀಜೋಪಚಾರ, ಪೋಷಕಾಂಶಗಳ ನಿರ್ವಹಣೆ ಮಾಡದೆ ಬಿತ್ತನೆ ಮಾಡುತ್ತಿರುವುದು ಕಂಡುಬರುತ್ತಿದ್ದು, ಇದರಿಂದ ಬೆಳೆಯಲ್ಲಿ ರೋಗ ಮತ್ತು ಕಿಟಗಳ ಬಾಧೆ ಹೆಚ್ಚಾಗುವ ಸಾದ್ಯತೆ ಇರುತ್ತದೆ. ಗೋವಿನ ಜೋಳ ಬಿತ್ತನೆ ಮಾಡುವ ರೈತರು ಸೂಕ್ತವಾದ ಕ್ರಮಗಳನ್ನು ಕೈಗೊಂಡು ಬಿತ್ತನೆ ಮಾಡಬೇಕು. ಸಾಮಾನ್ಯವಾಗಿ ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶಗಳೆರಡರಲ್ಲೂ ಬಿತ್ತನೆ ಪ್ರಾರಂಭವಾಗಿದೆ. ಬಿತ್ತನೆ ಪೂರ್ವ ಬೀಜಕ್ಕೆ ಟ್ರೈಕೊಡರ್ಮಾ ಶಿಲೀಂದ್ರದಿಂದ ಪ್ರತಿ ಕಿ.ಗ್ರಾಂ. ಬೀಜಕ್ಕೆ 5 ಗ್ರಾಂ. ದಂತೆ ಅಥವಾ ಕ್ಯಾಪ್ಟಾನ 3 ಗ್ರಾಂ. ದಂತೆ ಅಥವಾ ಕಾರ್ಬೆಂಡೆಜಿಮ್ 1 ಗ್ರಾಂ. ದಂತೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಇವುಗಳಲ್ಲಿ ಟ್ರೈಕೊಡರ್ಮಾದಿಂದ ಬೀಜೋಪಚಾರ ಮಾಡುವುದು ಸೂಕ್ತವಾಗಿದೆ. ಇದರೊಂದಿಗೆ ಅಜೋಸ್ಪಿರಿಲ್ಲಂ ಮತ್ತು ಪಿ.ಎಸ್.ಬಿ. ದುಂಡಾಣುಗಳನ್ನು ಸಹ 5ಗ್ರಾಂ. ಪ್ರತಿ ಕಿ.ಗ್ರಾಂ. ಬೀಜಕ್ಕೆ ಬೀಜೋಪಚಾರ ಮಾಡಬಹುದು. ಬಿತ್ತನೆ ಪೂರ್ವ ಪ್ರತಿ ಎಕರೆಗೆ ಒಂದು ಕಿ.ಗ್ರಾಂ. ಟ್ರೈಕೊಡರ್ಮಾವನ್ನು 100ಕಿ.ಗ್ರಾಂ. ಚನ್ನಾಗಿ ಕಳೆತ ತಿಪ್ಪೆ ಗೊಬ್ಬರ ಅಥವಾ ಎರೆಹುಳ ಗೊಬ್ಬರದೊಂದಿಗೆ ಬೆರಸಿ ಏಳು ದಿನಗಳ ವರೆಗೆ ಪ್ಲಾಸ್ಟಿಕ ಹಾಳೆ ಹೊದಿಸಿ ಇಟ್ಟು ನಂತರೆ ಒಂದು ಎಕರೆ ಪ್ರದೇಶದಲ್ಲಿ ಸಮನಾಗಿ ಹರಡಿ ಬಿತ್ತನೆ ಮಾಡುವುದರಿಂದ ಬೆಳೆಯಲ್ಲಿ ನೆಟೆ ರೋಗ, ಕಾಂಡ ಕೊಳೆ ಅಥವಾ ಬುಡಕೊಳೆ ರೋಗ ಬರುವುದಿಲ್ಲ. ಕಳೆದ ವರ್ಷ ಹಲವಾರು ರೈತರು ಗೋವಿನ ಜೋಳದಲ್ಲಿ ಈ ಸಮಸ್ಯಯನ್ನು ಕಂಡಿದ್ದು ಈ ರೋಗದ ನಿರ್ವಹಣೆಗೆ ಬೀಜೋಪಚಾರ ಮಾಡುವುದು ಅವಶ್ಯಕ. ರೋಗದ ಶಿಲೀಂದ್ರವು ಮಣ್ಣಿನಲ್ಲಿರುವದರಿಂದ ಅದರ ನಿರ್ವಹಣೆಗೆ ಮಣ್ಣಿಗೆ ಟ್ರೈಕೊಡರ್ಮಾ ಬೆರಸಬೇಕು. ಇದರೊಂದಿಗೆ ಪೋಷಕಾಂಶಗಳ ನಿರ್ವಹಣೆಯಲ್ಲಿ ಪ್ರತಿ ಎಕರೆಗೆ ಸಾದ್ಯವಾದಷ್ಟು 4 ರಿಂದ 6 ಟನ್ ತಿಪ್ಪೆಗೊಬ್ಬರ ಬಳಸವುದು ಸೂಕ್ತ.
ರಸಾಯನಿಕ ಗೊಬ್ಬರಗಳನ್ನು ಬಳಸುವಾಗ ನೀರಾವರಿ ಪದ್ದತಿಯಲ್ಲಿ ಪ್ರತಿ ಎಕರೆಗೆ 50 ಕಿ.ಗ್ರಾಂ ಯೂರಿಯಾ, 50 ಕಿ.ಗ್ರಾಂ ಡಿ.ಎ.ಪಿ., 50 ಕಿ.ಗ್ರಾಂ ಪೋಟ್ಯಾಷ್ ಮತ್ತು 10 ಕಿಗ್ರಾಂ. ಜಿಂಕ್ ಸಲ್ಫೆಟ ಹಾಕಬೇಕು. ಬಿತ್ತನೆಯಾದ 35 ರಿಂದ 40 ದಿನಗಳಲ್ಲಿ ಒಂದು ಬಾರಿ ಮತ್ತು ಗಂಡು ಹೂವು (ತುರಾಯಿ) ಹೊರಬರುವ ಹಂತದಲ್ಲಿ ಒಂದು ಬಾರಿ ತಲಾ 50ಕಿ.ಗ್ರಾಂ. ಯೂರಿಯಾ ನೀಡಬೇಕು. ಮಳೆಯಾಶ್ರಿತ ಪ್ರದೇಶಗಳಲ್ಲಿ ಪ್ರತಿ ಎಕರೆಗೆ 50 ಕಿ.ಗ್ರಾಂ. ಡಿ.ಎ.ಪಿ., 50 ಕಿ.ಗ್ರಾಂ. ಪೋಟ್ಯಾಷ್ ಮತ್ತು 5 ಕಿ.ಗ್ರಾಂ. ಜಿಂಕ್ ಸಲ್ಫೆಟ ಬಿತ್ತುವಾಗ ಹಾಕಬೇಕು. ಮುಂದಿನ ದಿನಗಳಲ್ಲಿ ತೇವಾಂಶ ಆಧರಿಸಿ ಒಟ್ಟು 60ಕಿ.ಗ್ರಾಂ. ಯೂರಿಯಾವನ್ನು ಎರಡು ಹಂತಗಳಲ್ಲಿ ನೀಡಬೇಕು. ಕಳೆದ ಹಂಗಾಮಿನಲ್ಲಿ ಕಾಂಡಕೊರಕದ ಬಾಧೆ ಹೆಚ್ಚಾಗಿರುವ ಭೂಮಿಗಳಲ್ಲಿ ಪ್ರತಿ ಎಕರೆಗೆ 10 ಕಿ.ಗ್ರಾಂ. ಫೊರೇಟ 3 ಜಿ. ಹರಳುಗಳನ್ನು ಬಿತ್ತುವಾಗ ರಸಗೊಬ್ಬರಗಳೊಂದಿಗೆ ಸಾಲುಗಳಲ್ಲಿ ಹಾಕುವುದರಿಂದ ಕಾಂಡ ಕೊರಕ ಮತ್ತು ಸುಳಿ ನೋಣದ ಬಾಧೆ ತಡೆಗಟ್ಟಬಹುದು. ಪೊಟ್ಯಾಷ್ ಗೊಬ್ಬರವನ್ನು ಬಿತ್ತುವಾಗ ಹಾಕುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಬುಡಕೊಳೆ ಅಥವಾ ಕಾಂಡಕೊಳೆ ರೋಗ ಉಲ್ಭಣಿಸಿ ಬೆಳೆಯಲ್ಲಿ ಹಾನಿಯಾಗುವುದು. ಸಾದ್ಯವಾದಷ್ಟು ರೈತರು ರಸಾಯನಿಕ ಗೊಬ್ಬರಗಳನ್ನು ಕಡಿಮೆಗೊಳಿಸಿ ಸಾವಯವ ಗೊಬ್ಬರ ಮತ್ತು ಸಸ್ಯಜನ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕ (ಸಸ್ಯ ರೋಗ ಶಾಸ್ತ್ರ) ಡಾ. ಮಲ್ಲಿಕಾರ್ಜುನ ಕೆಂಗನಾಳ-9845364708 ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment