PLEASE LOGIN TO KANNADANET.COM FOR REGULAR NEWS-UPDATES



ದೇಶದಲ್ಲಿ ಜನಸಂಖ್ಯಾ ಸ್ಫೋಟದಿಂದ ಈಗಾಗಲೆ ಸಾಕಷ್ಟು ದುಷ್ಪರಿಣಾಮಗಳು ಗೋಚರಿಸುತ್ತಿದ್ದು, ಜನಸಂಖ್ಯೆ ಹೆಚ್ಚಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.  ವಿಶ್ವದ ಜನಸಂಖ್ಯೆಯು ದಿ: 11-07-1987 ಕ್ಕೆ 500 ಕೋಟಿ ತಲುಪಿದ ನಂತರ ಇಡೀ ವಿಶ್ವದಲ್ಲಿ ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳನ್ನು ಬಿಂಬಿಸಲು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲು ವಿಶ್ವಸಂಸ್ಥೆಯ ಅಂಗಸಂಸ್ಥೆ ತೀರ್ಮಾನಿಸಿತು.  ಅಂದಿನಿಂದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ.
  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು  ಇವರುಗಳ ಸಂಯುಕ್ತ ಆಶ್ರಯದಲ್ಲಿ ಜು.11 ರಿಂದ 27 ರವರೆಗೆ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಅಂಗವಾಗಿ ಪಾಕ್ಷೀಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗುವ ಪರಿಣಾಮಗಳು, ಸಮಸ್ಯೆಗಳು ಮತ್ತು ಜನಸಂಖ್ಯಾ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ನಡೆಯಲಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಜನನ ನಿಯಂತ್ರಣಕ್ಕಾಗಿ ವಿಶೇಷ ಶಿಬಿರಗಳನ್ನು ಮತ್ತು ವಂಕಿ ಅಳವಡಿಕೆ ಕ್ಯಾಂಪಗಳನ್ನು ಈ ಪಾಕ್ಷಿಕದಲ್ಲಿ ಹಮ್ಮಿಕೊಳ್ಳಲಾಗಿದೆ.  
ವಿಶ್ವ ಜನಸಂಖ್ಯೆ ಸಾಗಿ ಬಂದ ಹಾದಿ : ವಿಶ್ವ ಜನಸಂಖ್ಯೆಯು 500 ಕೋಟಿಯನ್ನು 11-07-1987 ರಂದು ತಲುಪಿತು. ಅಂದಿನಿಂದ ಆ ದಿನವನ್ನು ವಿಶ್ವ ಜನಸಂಖ್ಯಾ ದಿನಾಚರಣೆಯನ್ನಾಗಿ ಆಚರಿಸಲು ಜನಸಂಖ್ಯಾ ಕಾರ್ಯಕ್ರಮಗಳಿಗೆ ಅನುದಾನ ನೀಡುವ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯು ತೀರ್ಮಾನಿಸಿತು. ಅಂದಿನಿಂದ ಜನಸಂಖ್ಯಾ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜುಲೈ-11 ರಂದು ಪ್ರತಿ ವರ್ಷವೂ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 
ವಿಶ್ವ ಜನಸಂಖ್ಯೆಯು ಕ್ರಿ.ಶ. 1 ರಲ್ಲಿ ಅಂದರೆ, 2012 ವರ್ಷಗಳ ಹಿಂದೆ 20 ಕೋಟಿ ಇತ್ತು. ಕ್ರಿ.ಶ. 1804 ರಲ್ಲಿ 100 ಕೋಟಿ ತಲುಪಿ, 1999 ರಲ್ಲಿ 600 ಕೋಟಿ ಆಗಿತ್ತು. 2014 ಜೂನ್ ವೇಳೆಗೆ ವಿಶ್ವದ ಜನಸಂಖ್ಯೆಯೂ 718 ಕೋಟಿ ತಲುಪಿರುತ್ತದೆ. ಭಾರತದ ಜನಸಂಖ್ಯೆಯು 1951 ರಲ್ಲಿ 36 ಕೋಟಿ ಇತ್ತು. 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆಯು 121 ಕೋಟಿ ಆಗಿರುತ್ತದೆ. 2014 ರ ಜೂನ್ ಅಂತ್ಯದವರೆಗೆ 127 ಕೋಟಿ ಆಗಿದೆ. ಪ್ರತಿ ವರ್ಷ 1 ಕೋಟಿ 81 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಸೇರಲ್ಪಡುತ್ತಿದೆ.
ಕರ್ನಾಟಕದ ಜನಸಂಖ್ಯೆಯು 1951 ರಲ್ಲಿ ಕೇವಲ 1 ಕೋಟಿ 94 ಲಕ್ಷ ಇತ್ತು. 2011 ರ ಜನಗಣತಿಯ ಪ್ರಕಾರ 6 ಕೋಟಿ 11 ಲಕ್ಷ ಆಗಿರುತ್ತದೆ. 2014 ರ ಜೂನ್ ಅಂತ್ಯದವರೆಗೆ 6.40 ಕೋಟಿ ಆಗಿದೆ. ಬಡತನ, ಅಜ್ಞಾನ, ಮಾಹಿತಿಯ ಕೊರತೆ, ಮೂಡನಂಭಿಕೆಗಳು, ಬಾಲ್ಯ ವಿವಾಹ, ಕಡಿಮೆ ಸಾಕ್ಷರತಾ ಪ್ರಮಾಣ ಕಾರಣಗಳಿಂದಾಗಿ ಜನಸಂಖ್ಯೆಯು ಹೆಚ್ಚುತ್ತಲಿದೆ. ಭಾರತ ದೇಶ ಮತ್ತು ಕರ್ನಾಟಕ ರಾಜ್ಯದ ಜನನ ಮತ್ತು ಮರಣ ದರದ್ ಪ್ರಮಾಣಗಳ ಅಂಕಿ ಅಂಶಗಳನ್ನು ಹೋಲಿಸಿದಲ್ಲಿ ನಮ್ಮ ರಾಜ್ಯದಲ್ಲಿ ಜನನ ಹಾಗೂ ಮರಣ ಪ್ರಮಾಣವು ಕಡಿಮೆ ಆಗಿದೆ. 
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಬರುವ ಸುಧಾರಿತ ಆರೋಗ್ಯ ಸೌಲಭ್ಯಗಳು, ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಆರೈಕೆ, ಮಡಿಲು, ತಾಯಿ ಭಾಗ್ಯ, ಜನನಿ ಶಿಶು ಸುರಕ್ಷಾ ಯೋಜನೆ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದಡಿಯಲ್ಲಿನ ಗುಣಾತ್ಮಕ ಸೇವೆಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಂದಾಗಿ ಹತೋಟಿಯಲ್ಲಿರುವ ಕಾರ್ಯಕ್ರಮದಡಿಯಲ್ಲಿನ ಗುಣಾತ್ಮಕ ಸೇವೆಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಂದಾಗಿ ಹತೋಟಿಯಲ್ಲಿರುವ ಸಾಂಕ್ರಾಮಿಕ ರೋಗಗಳು ಹಾಗೂ ಸಂಚಾರಿ ತುರ್ತು ಸೇವೆಗಳಿಂದಾಗಿ ಮರಣ ಪ್ರಮಾಣವು ಇಳಿಮುಖವಾಗುತ್ತಿದೆ.   ಕರ್ನಾಟಕದಲ್ಲಿ ಇಲ್ಲಿಯವರೆಗೂ 2.50 ಕೋಟಿಗಿಂತಲೂ ಹೆಚ್ಚು ಜನನಗಳನ್ನು ನಿಯಂತ್ರಿಸಿರುವ ಅಂದಾಜಿದೆ.

ಜನಸಂಖ್ಯಾ ಸ್ಪೋಟದಿಂದ ಆಗುವ ಸಮಸ್ಯೆಗಳು : ಆಹಾರ ನೀರು, ಬಟ್ಟೆ, ನೆಲ, ವಸತಿ ಹಾಗೂ ಖನಿಜಗಳ ಕೊರತೆ. ಅರಣ್ಯ ನಾಶ, ಸಸ್ಯ ಸಂಪತ್ತಿನ ನಾಶ. ಬಡತನ ಹೆಚ್ಚಳವಾಗುವುದು. ನಿರುದ್ಯೋಗ ಹೆಚ್ಚಳವಾಗುವುದು. ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಇತರೇ ಸಂಪನ್ಮೂಲಗಳ ಕೊರತೆ. ಹೆಚ್ಚಿನ ವಾಯು, ಜಲ ಮತ್ತು ಶಬ್ಧ ಮಾಲಿನ್ಯ. ಸಾಮಾಜಿಕ ಅಸಮಾನತೆ. ನಗರ ವ್ಯಾಪ್ತಿಯ ಕೊಳಚೆ ಪ್ರದೇಶಗಳ ಉಲ್ಬಣ, ವಸತಿ ಮತ್ತು ಸಾರಿಗೆ ವ್ಯವಸ್ಥೆಯ ಮೇಲೆ ಒತ್ತಡ. ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವ ಸಾಧ್ಯತೆಗಳು ಅಧಿಕ.
ಜನಸಂಖ್ಯಾ ನಿಯಂತ್ರಣಕ್ಕೆ ಸೂತ್ರಗಳು : ಮದುವೆಯಾಗಲು ಗಂಡಿಗೆ 21 ವರ್ಷಗಳು ಮತ್ತು ಹೆಣ್ಣಿಗೆ 18 ವರ್ಷಗಳು ತುಂಬಿರಬೇಕು. ಮದುವೆಯಾದ ನಂತರ ಕನಿಷ್ಠ ಮೂರು ವರ್ಷಗಳವರೆಗೂ ಮೊದಲನೆಯ ಮಗುವನ್ನು ಪಡೆಯಬಾರದು. ಜನನಗಳ ನಡುವೆ ಕಡೇ ಪಕ್ಷ 4 ವರ್ಷಗಳಾದರೂ ಅಂತರವಿರಬೇಕು. ಎಲ್ಲಾ ಅರ್ಹ ದಂಪತಿಗಳು ಕುಟುಂಬ ಕಲ್ಯಾಣದ ವಿಧಾನಗಳನ್ನು ಅನುಸರಿಸಿ ಚಿಕ್ಕ ಕುಟುಂಬವನ್ನು ರೂಪಿಸಿಕೊಳ್ಳುವುದು. ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರ ಸಕ್ರಿಯ ಭಾಗವಹಿಸುವಿಕೆ ಒಳಗೊಂಡಂತೆ ಸಮುದಾಯದ ಸಹಭಾಗಿತ್ವ ಬಹಳ ಪ್ರಾಮುಖ್ಯವಾದುದು. ಯುವ ಜನತೆಯ ಸಬಲೀಕರಣ ಮತ್ತು ಶಿಕ್ಷಣ. ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವು ನಿರಂತರವಾಗಿರಬೇಕು.
  ಜನಸಂಖ್ಯಾ ಸ್ಫೋಟದ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಮುದಾಯದ ಸಹಕಾರವಿದ್ದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಗೊಳ್ಳಲು ಸಾಧ್ಯ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು.

Advertisement

0 comments:

Post a Comment

 
Top