PLEASE LOGIN TO KANNADANET.COM FOR REGULAR NEWS-UPDATES

 ಬಿತ್ತನೆ ಬೀಜ, ಗೊಬ್ಬರ: 
ಗಂಗಾವತಿ ದಂತವೈದ್ಯ ಅಮಾನತಿಗೆ ಸೂಚನೆ : ಹೊರಗಡೆ ಔಷಧಿ ಖರೀದಿಗೆ ಚೀಟಿ : ಉದ್ಯೋಗಖಾತ್ರಿ ಕೂಲಿ ಹಣ ಪಾವತಿಸಿ 



 ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ಖರೀದಿಸಬಯಸುವ ರೈತರಿಗೆ ಮಧ್ಯವರ್ತಿಗಳ ಹಾವಳಿಯಿಂದ ಶೋಷಣೆಯಾಗುವ ಸಾಧ್ಯತೆ ಇದ್ದು, ಇದಕ್ಕೆ ಅವಕಾಶ ನೀಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಕೃಷಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕೆ.ಡಿ.ಪಿ. ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕಳೆದ ವಾರ ಜಿಲ್ಲೆಯಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ.  ರೈತರಿಗೆ ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು.  ಕೆಲವು ಖಾಸಗಿ ಏಜೆನ್ಸಿಯವರು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಯಾವುದೇ ಕಾರಣಕ್ಕೂ ರೈತರ ಶೋಷಣೆಯಾಗದಂತೆ ಕ್ರಮ ವಹಿಸಬೇಕು.  ಪರಿಸ್ಥಿತಿಯ ಲಾಭ ಪಡೆಯಲು ಮಧ್ಯವರ್ತಿಗಳ ಹಾವಳಿ ಸಾಧ್ಯತೆ ಇದ್ದು, ಇದಕ್ಕೆ ಅಗತ್ಯ ಕಡಿವಾಣ ಹಾಕಬೇಕು.  ಪ್ರಮಾಣೀಕೃತ ಬೀಜವನ್ನು ಮಾತ್ರ ರೈತರು ಪಡೆಯುವಂತೆ ಮಾಡಲು ಕೃಷಿ ಇಲಾಖೆ ಸೂಕ್ತ ನಿಗಾ ವಹಿಸಬೇಕು.  ಬಿತ್ತನೆ ಬೀಜದ ಗುಣಮಟ್ಟದ ಬಗ್ಗೆ ಯಾವುದೇ ದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ವಹಿಸಬೇಕು.  ಅಗತ್ಯ ಬಿದ್ದಲ್ಲಿ ಅಂತಹ ಖಾಸಗಿ ಏಜೆನ್ಸಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಿತ್ತನೆ ಬೀಜ ಮತ್ತು ಗೊಬ್ಬರ ವಶಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೃಷಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್ ಅವರು, ಸದ್ಯ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ  252512 ಹೆ. ಬಿತ್ತನೆಯ ಗುರಿ ಇದ್ದು, ಇದುವರೆಗೂ 52112 ಹೆ. ಅಂದರೆ ಶೇ. 20 ರಷ್ಟು ಬಿತ್ತನೆ ಆಗಿದೆ.  ಈಗಾಗಲೆ 13150 ಕ್ವಿಂ. ವಿವಿಧ ಬಿತ್ತನೆ ಬೀಜದ ದಾಸ್ತಾನು ಇದ್ದು, ಇದುವರೆಗೂ 5247 ಕ್ವಿಂ. ಬಿತ್ತನೆ ಬೀಜ ವಿತರಣೆ ಆಗಿದೆ.  ಅಲ್ಲದೆ ಜಿಲ್ಲೆಯಲ್ಲಿ ಸದ್ಯ 30862 ಟನ್ ರಸಗೊಬ್ಬರದ ದಾಸ್ತಾನು ಇದ್ದು, ಈ ಪೈಕಿ ಯೂರಿಯಾ- 10496 ಟನ್, ಡಿಎಪಿ- 4120 ಟನ್, ಕಾಂಪ್ಲೆಕ್ಸ್ 12000 ಟನ್ ಸೇರಿದಂತೆ ವಿವಿಧ ಗೊಬ್ಬರದ ದಾಸ್ತಾನು ಇದೆ.  ಸದ್ಯ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಯಾವುದೇ ಕೊರತೆ ಇಲ್ಲ.  ಅಗತ್ಯಕ್ಕೆ ತಕ್ಕಂತೆ ಬೀಜ ಮತ್ತು ಗೊಬ್ಬರ ಪಡೆಯಲು ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.

ಗಂಗಾವತಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿರುವ ದಂತ ವೈದ್ಯರೊಬ್ಬರು, ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ನೀಡುವಿಕೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿರುವ ಬಗ್ಗೆ ದೂರುಗಳು ಬಂದಿದ್ದು, 25 ವರ್ಷ ಮೇಲ್ಪಟ್ಟ ವ್ಯಕ್ತಿಗೂ ಕೇವಲ 18 ರಿಂದ 20 ವರ್ಷ ವಯಸ್ಸು ಎಂಬುದಾಗಿ ಸುಳ್ಳು ಪ್ರಮಾಣ ಪತ್ರ ನೀಡಿರುವುದು ಗಮನಕ್ಕೆ ಬಂದಿದೆ.  ಇದರಿಂದಾಗಿ ಆತನ ಮದುವೆಗೆ ಅಡ್ಡಿ ಉಂಟಾಗುವ ಸಾಧ್ಯತೆಗಳಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದನ್ನು ಗಂಭೀರವಾಗಿ ಪರಿಗಣಿಸಿ, ಅಂತಹ ವೈದ್ಯರನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತಬಾಸೂರ್ ಅವರಿಗೆ ಸೂಚನೆ ನೀಡಿದರು.
ಉದ್ಯೋಗಖಾತ್ರಿ ಕೂಲಿ ಹಣ ಪಾವತಿಸಿ : ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡ ಕೆಲಸಕ್ಕೆ ಕೂಲಿ ಹಣ ಪಾವತಿ ಆಗಿಲ್ಲ.  ಕೂಲಿ ಹಣಕ್ಕಾಗಿ ಹಲವೆಡೆ ಪ್ರತಿಭಟನೆಗಳು ಜರುಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿವೆ.  ಈ ಕುರಿತು ಅಧಿಕಾರಿಗಳು ಕೂಡಲೆ ಕೂಲಿ ಹಣ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಜಿ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಉತ್ತರಿಸಿದ ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಅವರು, ಜಿಲ್ಲೆಯಲ್ಲಿ 2013-14 ನೇ ಸಾಲಿನಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡ ಕೆಲಸಕ್ಕೆ ಸಂಬಂಧಿಸಿದಂತೆ 3. 95 ಕೋಟಿ ರೂ. ಅನುದಾನ ಮತ್ತು ಪ್ರಸಕ್ತ 2014-15 ನೇ ಸಾಲಿಗೆ ಸಂಬಂಧಿಸಿದ 2. 47 ಕೋಟಿ ರೂ. ಅನುದಾನ ಕೇಂದ್ರ ಸರ್ಕಾರದಿಂದ ಇನ್ನೂ ಬಿಡುಗಡೆ ಆಗಿರುವುದಿಲ್ಲ.  ಇದರಿಂದಾಗಿ ಕೂಲಿಕಾರರಿಗೆ ಹಣ ಪಾವತಿ ವಿಳಂಬವಾಗುತ್ತಿದೆ.  ಅನುದಾನ ಬಂದ ಕೂಡಲೆ ಹಣ ಪಾವತಿ ಬ್ಯಾಂಕ್ ಖಾತೆ ಮೂಲಕ ಆಗಲಿದೆ ಎಂದರು.  ಅನುದಾನ ಬಿಡುಗಡೆ ವಿಳಂಬದ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಅನುದಾನ ಬಿಡುಗಡೆಗೆ ಕ್ರಮ ವಹಿಸುವಂತೆ ಸಚಿವರು ಸೂಚನೆ ನೀಡಿದರು.
ಹೊರಗಡೆ ಔಷಧಿ ಖರೀದಿಗೆ ಚೀಟಿ : ಜಿಲ್ಲೆಯ ಬಹಳಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳು ಲಭ್ಯವಿದ್ದರೂ, ಹೊರಗಡೆಯಿಂದ ಔಷಧಿ ಖರೀದಿಸಿ ತರುವಂತೆ ರೋಗಿಗಳಿಗೆ ಚೀಟಿ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ.  ಅದರಲ್ಲೂ ಗಂಗಾವತಿ ಮತ್ತು ಕನಕಗಿರಿಯಲ್ಲಿ ಈ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧದ ಸಾಕಷ್ಟು ದಾಸ್ತಾನು ಇದ್ದರೂ ಹೊರಗಡೆ ತರುವಂತೆ ಚೀಟಿ ಬರೆದುಕೊಡಲಾಗುತ್ತಿದೆ.  ಅಲ್ಲದೆ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸುವ ಪ್ರಕರಣಗಳಲ್ಲಿ ರೋಗಿಗಳಿಂದ ಸಾವಿರಾರು ಹಣ ನೀಡುವಂತೆ ವೈದ್ಯರು ಹಾಗೂ ಸಿಬ್ಬಂದಿಗಳು ಒತ್ತಾಯಿಸುತ್ತಿದ್ದಾರೆ ಎನ್ನುವ ದೂರು ಸಹ ವ್ಯಾಪಕವಾಗಿದೆ.  ಸರ್ಕಾರಿ ಆಸ್ಪತ್ರೆಗಳಿಗೆ ಸಾಮಾನ್ಯವಾಗಿ ಬಡ ರೋಗಿಗಳೇ ಹೆಚ್ಚು ದಾಖಲಾಗುತ್ತಾರೆ.  ಇಂತಹದರಲ್ಲಿ, ಅವರಿಂದಲೂ ಹಣ ಕೀಳುವ ಪ್ರವೃತ್ತಿಯನ್ನು ಇನ್ನಾದರೂ ವೈದ್ಯರು ಹಾಗೂ ಸಿಬ್ಬಂದಿಗಳು ನಿಲ್ಲಿಸಬೇಕು.  ಇಂತಹ ಯಾವುದೇ ಪ್ರಕರಣದ ಬಗ್ಗೆ ನಿರ್ದಿಷ್ಟ ದೂರು ಬಂದಲ್ಲಿ, ಕೂಡಲೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಸೆಪಟ್, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಕೊಪ್ಪಳ ತಾ.ಪಂ. ಅಧ್ಯಕ್ಷ ಮುದೇಗೌಡ ಪಾಟೀಲ, ಜಿ.ಪಂ. ಸದಸ್ಯ ಅಶೋಕ್ ತೋಟದ ಮುಂತಾದವರು ಉಪಸ್ಥಿತರಿದ್ದರು.  ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top