PLEASE LOGIN TO KANNADANET.COM FOR REGULAR NEWS-UPDATES

 ಸಹಕಾರ ಇಲಾಖೆಯಿಂದ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯನ್ನು ಪ್ರಸಕ್ತ ಸಾಲಿಗೆ ಮುಂದುವರೆಸಲಾಗಿದ್ದು, ಹೊಸದಾಗಿ ನೋಂದಾಯಿಸುವ, ನವೀಕರಿಸುವ ಪ್ರಕ್ರಿಯೆಯು ಸಹಕಾರ ಸಂಸ್ಥೆಗಳಲ್ಲಿ ಪ್ರಾರಂಭವಾಗಿದೆ.  ಇದಕ್ಕಾಗಿ ಆಸಕ್ತ ಗ್ರಾಮೀಣ ಹಾಗೂ ನಗರ ಫಲಾನುಭವಿಗಳಿಂದ   ಅರ್ಜಿ ಆಹ್ವಾನಿಸಲಾಗಿದೆ. 
ಯೋಜನೆಗಾಗಿ ನವೀಕರಿಸುವ, ನೋಂದಾಯಿಸುವ ಕೊನೆಯ ದಿನಾಂಕವನ್ನು ಜುಲೈ-೧೫ ರವರೆಗೆ ವಿಸ್ತರಿಸಲಾಗಿದೆ. ಯಶಸ್ವಿನಿ ವಾರ್ಷಿಕ ವಂತಿಗೆ ರೂ.೨೫೦/- ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಾರ್ಷಿಕ ವಂತಿಗೆ ಮೊತ್ತ ರೂ.೫೦/- ನಿಗದಿಪಡಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ದಿನಾಂಕ: ೨೮-೨-೨೦೧೪ ಕ್ಕೆ ಮೊದಲು ಗ್ರಾಮೀಣ ಸಹಕಾರ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿರುವ ವ್ಯಕ್ತಿಗಳು, ಗ್ರಾಮೀಣ ಪ್ರದೇಶದಲ್ಲಿರುವ ಸ್ವಸಹಾಯ ಗುಂಪು ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಅರ್ಹ ಸದಸ್ಯರು ಪ್ರತ್ಯೇಕವಾಗಿ ವಂತಿಗೆ ಹಣ ಪಾವತಿ ಮಾಡುವ ಮೂಲಕ ಯೋಜನೆಯ ವ್ಯಾಪ್ತಿಗೆ ಒಳಪಡಬಹುದಾಗಿರುತ್ತದೆ. 
ಪ್ರಸಕ್ತ ಸಾಲಿಗೆ ಯಶಸ್ವಿನಿ ಯೋಜನೆಯನ್ನು ನಗರ ಸಹಕಾರಿಗಳಿಗೂ ಮತ್ತು ಅವರ ಕುಟುಂಬವರ್ಗದವರಿಗೂ ಜಾರಿಗೊಳಿಸಿದ್ದು, ವಾರ್ಷಿಕ ವಂತಿಗೆ ಮೊತ್ತ ರೂ.೭೧೦/- ನಿಗದಿಪಡಿಸಿದೆ. ಹಾಗೂ   ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಾರ್ಷಿಕ ವಂತಿಗೆ ಮೊತ್ತ ರೂ.೫೧೦/- ನಿಗದಿಪಡಿಸಲಾಗಿದೆ. ನಗರ ಪ್ರದೇಶದ ಯಾವುದೇ ತರಹದ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ದಿನಾಂಕ: ೦೧-೦೬-೨೦೧೪ ಕ್ಕೆ ೩ ತಿಂಗಳು ಕಳೆದಿದ್ದರೆ ಅಂತಹ ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬವರ್ಗದವರು ಪ್ರತ್ಯೇಕವಾಗಿ ಸರ್ಕಾರವು ನಿಗದಿಪಡಿಸಿದ ವಂತಿಗೆಯನ್ನು ಪಾವತಿಸಿ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ನವಜಾತು ಶಿಶುವಿನಿಂದ ಹಿಡಿದು ಜೀವಿತಾವಧಿಯವರೆಗೆ ಯೋಜನೆ ಸೌಲಭ್ಯವನ್ನು ಪಡೆಯಲು ಯಶಸ್ವಿನಿ ಸದಸ್ಯರು ಅರ್ಹರಿರುತ್ತಾರೆ. 
ಗ್ರಾಮೀಣ ಸಹಕಾರಿಗಳು ಹಾಗೂ ನಗರ ಸಹಕಾರಿಗಳು ಯೋಜನೆಯ ಸೌಲಭ್ಯವನ್ನು ಪಡೆಯಲು, ಆಯಾ ಸಹಕಾರ ಸಂಸ್ಥೆಯಲ್ಲಿ ನಿಗದಿತ ವಂತಿಗೆಯನ್ನು ಪಾವತಿ ಮಾಡುವ ಮೂಲಕ ಯಶಸ್ವಿನಿ ಯೋಜನೆಯ ವ್ಯಾಪ್ತಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆ ಅಥವಾ ಸಮೀಪದ ಸಹಕಾರ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರಾದ ಕೆ.ಮುನಿಯಪ್ಪ  ತಿಳಿಸಿದ್ದಾರೆ. 

Advertisement

0 comments:

Post a Comment

 
Top