ಭಾನಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಾಪುರ ಗ್ರಾಮದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡ ಸುಮಾರು ೨೦ ಕಾಮಗಾರಿಗಳಲ್ಲಿ ನಿಯಮ ಉಲ್ಲಂಘನೆ ಹಾಗೂ ಸರ್ಕಾರಿ ಹಣ ದುರುಪಯೋಗ ಆರೋಪಕ್ಕಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಂಬಣ್ಣ ಅವರನ್ನು ಅಮಾನತುಗೊಳಿಸಿದ್ದು, ಹೊರಗುತ್ತಿಗೆ ತಾಂತ್ರಿಕ ಸಹಾಯಕರಾದ ಪ್ರಕಾಶ್ ಹಿರೇಮನಿ ಮತ್ತು ಮೆಹಬೂಬ್ ಪಾಷಾ ಅವರನ್ನು ಸೇವೆಯಿಂದ ವಜಾಗೊಳಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಆದೇಶ ಹೊರಡಿಸಿದ್ದಾರೆ.
ವೀರಾಪುರ ಗ್ರಾಮದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ರಸ್ತೆ ದುರಸ್ಥಿ, ಚೆಕ್ ಡ್ಯಾಂ, ಆಟದ ಮೈದಾನ ಅಭಿವೃದ್ಧಿ, ಕುರಿ/ದನ ದೊಡ್ಡಿ ನಿರ್ಮಾಣ, ಕೆರೆ ಪುನಶ್ಚೇತನ ಮುಂತಾದ ಒಟ್ಟು ೧೯. ೯೯ ಲಕ್ಷ ಮೌಲ್ಯದ ೨೦ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಈ ಕಾಮಗಾರಿಗಳ ಬಗ್ಗೆ ಸಹಾಯಕ ಯೋಜನಾಧಿಕಾರಿಗಳ ನೇತೃತ್ವದಲ್ಲಿ ಪಿಆರ್‌ಇಡಿ ಸಹಾಯಕ ಇಂಜಿನಿಯರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಲೆಕ್ಕ ಪರಿಶೋಧಕರನ್ನೊಳಗೊಂಡ ಸಮಿತಿ ಪರಿಶೀಲನೆ ನಡೆಸಿತ್ತು. ವೀರಾಪುರ ಗ್ರಾಮದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ಯೋಜನೆಯ ಮಾರ್ಗಸೂಚಿ ಮತ್ತು ನಿಯಮಗಳನ್ನು ಉಲ್ಲಂಘಿಸಿರುವುದು ಅಲ್ಲದೆ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಮಿತಿ ವರದಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಭಾನಾಪುರ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಂಬಣ್ಣ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಜೂ. ೦೫ ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಲ್ಲದೆ ಈ ಕಾಮಗಾರಿಗಳಲ್ಲಿ ಹೊರಗುತ್ತಿಗೆ ತಾಂತ್ರಿಕ ಸಹಾಯಕರುಗಳಾದ ಪ್ರಕಾಶ್ ಹಿರೇಮನಿ ಮತ್ತು ಮೆಹಬೂಬ್ ಪಾಷಾ ಅವರನ್ನು ಕರ್ತವ್ಯಲೋಪ ಮತ್ತು ಸಮರ್ಪಕ ದಾಖಲೆ ನಿರ್ವಹಿಸದೆ ಸರ್ಕಾರದ ಹಣ ದುರುಪಯೋಗಕ್ಕೆ ಕಾರಣರಾದ ಆರೋಪಕ್ಕಾಗಿ ಸೇವೆಯಿಂದ ವಜಾಗೊಳಿಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಆದೇಶ ಹೊರಡಿಸಿದ್ದಾರೆ.
0 comments:
Post a Comment