ಒಗ್ಗರಣೆ ಸಿನಿಮಾ ವಿಮರ್ಶೆ
ಒಗ್ಗರಣೆಯಲ್ಲಿ ಮನಸಿಗೆ ರುಚಿಸುವ ಸೂಪರ್ ಮಸಾಲಾ ಇದೆ. ಖಾರಾ, ಉಪ್ಪು, ಹುಳಿ, ಸಿಹಿ ಎಲ್ಲವೂ ಇಲ್ಲಿದೆ. ಪ್ರಕಾಶ್ ರೈ ಸೇರಿದಂತೆ ಮಾಗಿದ ಕಲಾವಿದರೆಲ್ಲರೂ ಸೇರಿ ಮಾಡಿರುವ ಒಗ್ಗರಣೆಯ ರುಚಿಯನ್ನು ಇಡೀ ಮನೆ ಮಂದಿ ಒಟ್ಟಾಗಿ ಕುಳಿತು ಸವಿಯಬಹುದು. ಒಂದೆರಡು ಕಡೆ ರುಚಿ ಕಟ್ ಆದ ಒಗ್ಗರಣೆ ಎನಿಸಿದರೂ ಫೈನಲೀ ಟೇಸ್ಟ್ ಮಾತ್ರ ಅದ್ಭುತ!
ಪ್ರಾಚ್ಯ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿರುವ ಕಾಳಿದಾಸನಿಗೆ ವಯಸ್ಸು ೪೫ ಆದರೂ ಶಾಕುಂತಲೆಯ ಸುಳಿವಿಲ್ಲ. ಹರೆಯದಲ್ಲಿ ಪ್ರೀತಿಸಿದ್ದ ವೈಷ್ಣವಿಯ ಮುಖವೂ ಕಾಣದಂತೆ ಮರೆತುಹೋಗಿದ್ದ ಕಾಳಿದಾಸನಿಗೆ ಒಂಟಿಯಾಗಿದ್ದು ಅಭ್ಯಾಸ. ೮ ವರ್ಷಗಳಿಂದಲೂ ಆತನ ಜೊತೆಗಿದ್ದು ಹೆಣ್ಣು ಹುಡುಕುವ ಕೆಲಸ ಮಾಡುತ್ತಿರುವ ಮಂಡ್ಯ ಹೈದ. ಹೆಣ್ಣು ನೋಡಲು ಹೋದ ಮನೆಯಲ್ಲಿದ್ದ ಹುಬ್ಬಳ್ಳಿಯ ಬಾಣಸಿಗನ ರುಚಿಗೆ ಮನಸೋತು ಆತನನ್ನೇ ಮನೆಗೆ ಕರೆತರುವ ಕಾಳಿದಾಸ, ನಾಟಿ ಔಷಧದ ಉಪಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಗ್ಯಾಂಗ್‌ನಿಂದ ನಾಟಿತಜ್ಞನ ಪೋಷಣೆ. ಇದಿಷ್ಟು ಕಾಳಿದಾಸ ಮತ್ತವನ ಸಹಚರರ ಕಥೆ.
ಮಾಲಾಶ್ರೀ, ಪ್ರೇಮಾ, ರಮ್ಯಾ, ರಾಽಕಾಗೆ ಧ್ವನಿ ನೀಡುವ ಡಬ್ಬಿಂಗ್ ಕಲಾವಿದೆ ಗೌರಿಯದು ಅದೇ ಕಥೆ. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಗೌರಿಗೆ ಮದುವೆ ವಯಸ್ಸು ಮೀರಿದೆ ಎನ್ನುವ ಕೊರಗು. ಅದಕ್ಕೆ ಆಗಾಗ ಸಿಟ್ಟು ಸೆಡುವು. ಹೊಟೇಲ್‌ವೊಂದಕ್ಕೆ ದೋಸೆ ಆರ್ಡರ್ ಮಾಡಲು ಮಾಡಿರುವ ಕಾಲ್ ಆಕಸ್ಮಿಕವಾಗಿ ಕಾಳಿದಾಸನಿಗೆ ಹೋಗಿ ಆರಂಭದಲ್ಲೇ ಜಗಳ. ನಂತರ ಫೋನ್‌ನಲ್ಲಿ ಮಾತುಕತೆ. ಹರಟೆ, ಅಡುಗೆ, ಯುದ್ಧದ ವಿವರಣೆ.
ಫೋನ್‌ನಲ್ಲಿ ಮಾತಾಡಿ ಸಾಕಾದ ಮೇಲೆ ನೇರವಾಗಿ ಭೇಟಿ ಮಾಡುವ ಘಳಿಗೆ. ಇಬ್ಬರೂ ಅಣಿಯಾಗುತ್ತಿದ್ದಂತೆ ವಯಸ್ಸಿನ ಗಿಲ್ಟ್‌ನಿಂದಾಗಿ ಕಾಳಿದಾಸ ಅಳಿಯನ್ನು ಕಾಳಿದಾಸನೆಂದು ಕಳಿಸಿದರೆ, ಗೌರಿ ತನ್ನ ತಂಗಿಯನ್ನು ಗೌರಿ ಎಂದು ಕಳಿಸುತ್ತಾಳೆ. ಕಾಫಿಶಾಪ್‌ನಲ್ಲಿ ಅವಳ ಹೆಸರಿನಲ್ಲಿ ಇವಳು, ಇವನ ಹೆಸರಿನಲ್ಲಿ ಅವನು ಭೇಟಿಯಾಗಿ ಮನೆಗೆ ಬಂದಾಗ ಆಕೆ ತುಂಬಾ ಚಿಕ್ಕ ಹುಡುಗಿ ನಿನಗೆ ಸರಿಹೊಂದಲ್ಲ ಮಾವ ಎಂದು ಅಳಿಯ ಹೇಳುತ್ತಾನೆ. ಅವನಿನ್ನೂ ಚಿಕ್ಕ ಹುಡುಗ ನಿನಗೆ ಸರಿಹೊಂದಲ್ಲ ಅಕ್ಕ ಎಂದು ತಂಗಿ ಹೇಳುತ್ತಾಳೆ.
ಅಳಿಯ ಹಾಗೂ ತಂಗಿ ಇವರು ಕಾಳಿದಾಸ ಮತ್ತು ಗೌರಿ ಹೆಸರಿನಲ್ಲಿಯೇ ಪದೇ ಪದೇ ಭೇಟಿಯಾಗಿ ಪ್ರೀತಿಸತೊಡಗುತ್ತಾರೆ. ನಿಜವಾದ ಕಾಳಿದಾಸ ಮತ್ತು ಗೌರಿ ಪರಸ್ಪರ ಭೇಟಿಯಾಗ್ತಾರಾ? ಮುಖಾಮುಖಿ ಮಾತಾಡ್ತಾರಾ? ಒಂದಾಗ್ತಾರಾ? ಎನ್ನುವುದೇ ಕುತೂಹಲದ ವಿಷಯ. ಈ ಕ್ಲೈಮ್ಲ್ಯಾಕ್ಸ್‌ನ್ನು ರೈ ತುಂಬಾ ಸೊಗಸಾಗಿ ಕಟ್ಟಿ ಕೊಟ್ಟಿದ್ದಾರೆ. ಖಂಡಿತವಾಗಿ ಇಬ್ಬರು ಒಂದಾಗ್ತಾರೆ. ಅದು ಹೇಗೆ ಎನ್ನುವುದಕ್ಕೆ ಒಗ್ಗರಣೆಯನ್ನು ಸವಿಯಲೇಬೇಕು.
ಮಾತು-ಕತೆ ಇಲ್ಲದ ನಾಟಿವೈದ್ಯನ ಪಾತ್ರದ ಮೂಲಕ ರೈ ಪರೋಕ್ಷವಾಗಿ ಜಾಗತೀಕರಣದ ಭೂತಕ್ಕೆ ಭಾರತವೂ ಬಲಿ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಆದರೆ ಇದಕ್ಕೊಂದು ತಾರ್ಕಿಕ ಅಂತ್ಯ ಕೊಟ್ಟಿದ್ದರೆ ಇನ್ನು ಸೊಗಸಾಗಿರುತ್ತಿತ್ತು. ಒಗ್ಗರಣೆ, ತಮಿಳಿನ ಸ್ಪೈಸಿ ಆಂಡ್ ಮಿರ್ಚಿಯ ರಿಮೇಕ್ ಆದರೂ ಕನ್ನಡದ ನೆಟಿವಿಟಿಗೆ ಹೊಂದಿಕೊಂಡಿದ್ದು, ಇದು ರಿಮೇಕ್ ಎನಿಸುವುದಿಲ್ಲ.
ಪ್ರಕಾಶ್ ರೈ, ಸ್ನೇಹಾ, ತೇಜಸ್, ಸಂಯಕ್ತಾ, ಸುಧಾ, ಅಚ್ಯುತ್‌ರಾವ್, ಮಂಡ್ಯರಮೇಶ್, ಊರ್ವಶಿ ತೂಕದ ಅಭಿನಯ. ಇಳಯರಾಜಾ ಸಂಗೀತದಲ್ಲಿನ ಹಾಡುಗಳು ಇಂಪು. ನಿರ್ಮಾಣ-ನಿರ್ದೇಶನ ಪ್ರಕಾಶ್ ರೈಗೆ ಹೊಸದೇನಲ್ಲ. ಹಾಗಾಗಿ ಹೆಚ್ಚೇನು ಹೇಳಬೇಕಿಲ್ಲ. ಕದಿರ್ ಹಾಗೂ ಪ್ರೀತಾ ಅವರ ಸಂಭಾಷಣೆ, ಛಾಯಾಗ್ರಹಣದ ಬಗ್ಗೆ ನೋ ಕಾಮೆಂಟ್ಸ್.
ಒಗ್ಗರಣೆ ಬಲು ರುಚಿಯಾಗಿದೆ. ಅಚ್ಚುಕಟ್ಟಾಗಿದೆ. ಸೊಗಸಾಗಿದೆ. ಹೋಗಿ ತಿನ್ಕೊಂಡ್ ಅಲ್ಲಲ್ಲಾ ನೋಡ್ಕೊಂಡು ಬನ್ನಿ.
-ಚಿತ್ರಪ್ರಿಯ ಸಂಭ್ರಮ್.
**** ೧/೨
-----------------
*ನೋಡಬೇಡಿ
**ನೋಡಬಹುದು. ಆದರೂ...
***ಪರವಾಗಿಲ್ಲ ನೋಡಬಹುದು.
****ಚೆನ್ನಾಗಿದೆ ನೋಡಿ.
***** ನೋಡಲೇಬೇಕು.
0 comments:
Post a Comment