ಕೊಪ್ಪಳ ಮೇ. ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಬರ ಪರಿಹಾರ ಕಾರ್ಯಗಳಿಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಿ, ಬೇಸಿಗೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದೆರಡು ತಿಂಗಳಿನಿಂದ ಅಧಿಕಾರಿಗಳು ಲೋಕಸಭಾ ಚುನಾವಣೆಯತ್ತ ಗಮನ ಕೇಂದ್ರೀಕರಿಸಿದ್ದರು. ಈಗಾಗಲೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗ್ರಾಮೀಣ ಪ್ರದೇಶಗಳ ಸಮಸ್ಯೆಗಳತ್ತ ಜಿಲ್ಲಾಡಳಿತ ಗಮನ ನೀಡಬೇಕಿದೆ. ಈಗಾಗಲೆ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ದಿನನಿತ್ಯ ಮಾಧ್ಯಮಗಳಲ್ಲಿ ವರದಿಗಳು ಅಧಿಕವಾಗಿ ಪ್ರಕಟಗೊಳ್ಳುತ್ತಿವೆ. ಅಲ್ಲದೆ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯೂ ಸಹ ತಲೆದೋರಿದ್ದು, ಗ್ರಾಮೀಣ ಪ್ರದೇಶದ ಜನರು ಗುಳೇ ಹೋಗದಂತೆ, ಅವರಿಗೆ ಸ್ಥಳೀಯವಾಗಿಯೇ ಉದ್ಯೋಗ ನೀಡುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಸಮರ್ಪಕ ಕುಡಿಯುವ ನೀರು ಮತ್ತು ದುಡಿಯುವ ಕೈಗೊಳಿಗೆ ಕೆಲಸ ನೀಡುವುದು ಅಧಿಕಾರಿಗಳಿಗೆ ಮೊದಲ ಆದ್ಯತೆಯಾಗಬೇಕು. ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ವರದಿಗಳಿಗೆ ಅಧಿಕಾರಿಗಳು ಕೂಡಲೆ ಸ್ಪಂದಿಸಿ, ಆಯಾ ದಿನದಂದೇ ಸಮಸ್ಯೆ ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಬೇಕು. ಯಾವುದೇ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ತಮ್ಮ ಇಲಾಖಾ ಕಾರ್ಯದ ಜೊತೆಗೆ, ಆಯಾ ಗ್ರಾಮಗಳಲ್ಲಿನ ಸ್ಥಿತಿ-ಗತಿಗಳು, ಕುಡಿಯುವ ನೀರಿನ ಸಮಸ್ಯೆ, ಅಂಗನವಾಡಿ, ಹಾಸ್ಟೆಲ್‌ಗಳು, ನ್ಯಾಯಬೆಲೆ ಅಂಗಡಿಗಳು, ಮೂಲಭೂತ ಸೌಕರ್ಯಗಳು ಮುಂತಾದ ವಿಷಯಗಳ ಬಗ್ಗೆ ಆಯಾ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಬೇಕು. ಅಲ್ಲಿನ ಸಮಸ್ಯೆಗಳು ಹಾಗೂ ತುರ್ತಾಗಿ ಆಗಬೇಕಿರುವ ಕಾರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತಾಗಬೇಕು. ಕೇವಲ ತಮ್ಮ ಇಲಾಖಾ ಕಾರ್ಯ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎನ್ನುವ ಧೋರಣೆಯನ್ನು ಕೈಬಿಟ್ಟು, ಗ್ರಾಮೀಣ ಪ್ರದೇಶಗಳಲ್ಲಿನ ವಿವಿಧ ಸ್ಥಿತಿಗತಿಗಳ ಬಗ್ಗೆ ಪರಾಮರ್ಶೆ ನಡೆಸಿ, ವರದಿ ಸಲ್ಲಿಸುವ ಕಾರ್ಯ ಮಾಡಿದಾಗ ಮಾತ್ರ, ಸಮಸ್ಯೆಗಳ ತ್ವರಿತ ನಿವಾರಣೆ ಸಾಧ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಮಶಾನಕ್ಕೆ ಭೂಮಿ : ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಇದುವರೆಗೂ ಸ್ಮಶಾನ ಭೂಮಿ ಲಭ್ಯವಿಲ್ಲದೇ ಇರುವುದನ್ನು ಗಮನಿಸಲಾಗಿದ್ದು, ಸ್ಮಶಾನಕ್ಕಾಗಿ ಸರ್ಕಾರಿ ಭೂಮಿ ಲಭ್ಯವಿದ್ದಲ್ಲಿ, ಅಂತಹ ಭೂಮಿಯನ್ನು ಗುರುತಿಸಿ, ನೀಡುವಂತಾಗಬೇಕು. ಒಂದು ವೇಳೆ ಸ್ಮಶಾನಕ್ಕಾಗಿ ಸರ್ಕಾರಿ ಭೂಮಿ ಲಭ್ಯ ಇಲ್ಲದೇ ಇದ್ದಲ್ಲಿ, ಸರ್ಕಾರದ ವತಿಯಿಂದಲೇ ಭೂಮಿಯನ್ನು ಖರೀದಿಸಿ, ಒದಗಿಸುವ ನಿಟ್ಟಿನಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೆ ಜಿಲ್ಲೆಯ ೪೩೪ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇದೆ. ಇನ್ನೂ ೧೯೬ ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಭೂಮಿಯನ್ನು ನಿಗದಿಪಡಿಸಿಲ್ಲ. ಪ್ರತಿಯೊಂದು ಗ್ರಾಮಗಳೂ ಸ್ಮಶಾನವನ್ನು ಹೊಂದುವುದು ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ, ಅರಣ್ಯ, ಜಲಾನಯನ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಸ್ಮಶಾನಕ್ಕಾಗಿ ಭೂಮಿ ಒದಗಿಸಲು ಅಗತ್ಯ ಪ್ರಸ್ತಾವನೆಯನ್ನು ಕೂಡಲೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲೆಯಲ್ಲಿಯೇ ಜಾತಿ, ಆದಾಯ ಪ್ರಮಾಣಪತ್ರ :
ಸರ್ಕಾರದ ಆದೇಶದಂತೆ ಈ ವರ್ಷ ವಿದ್ಯಾರ್ಥಿಗಳಿಗೆ ಆಯಾ ಶಾಲೆಯಲ್ಲಿಯೇ ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದಲ್ಲಿ ತೊಂದರೆ ಆಗದ ರೀತಿಯಲ್ಲಿ ತ್ವರಿತವಾಗಿ ಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು, ಈಗಾಗಲೆ ಜಿಲ್ಲೆಯಲ್ಲಿ ೨. ೦೪ ಲಕ್ಷ ಅರ್ಜಿಗಳನ್ನು ಶಾಲೆಗಳಿಂದ ಸ್ವೀಕರಿಸಲಾಗಿದ್ದು, ೧. ೭೧ ಲಕ್ಷ ವಿದ್ಯಾರ್ಥಿಗಳ ವಿವರಗಳನ್ನು ಕಂಪ್ಯೂಟರಿನಲ್ಲಿ ಡಾಟಾ ಎಂಟ್ರಿ ಮಾಡಲಾಗಿದೆ. ೭೭ ಸಾವಿರ ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದ್ದು, ಮೇ ತಿಂಗಳ ಅಂತ್ಯದ ವೇಳೆಗೆ ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು ಸಿದ್ಧಗೊಳ್ಳಲಿದ್ದು, ಶೀಘ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಲೆ ಬಿಟ್ಟ ಮಕ್ಕಳ ಬಗ್ಗೆ ಆತಂಕ : ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಅವರನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಕ್ರಮ ತೃಪ್ತಿಕರವಾಗಿಲ್ಲ. ಅಧಿಕಾರಿಗಳು, ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿಗಳು, ಈ ಬಗ್ಗೆ ಗಂಭೀರವಾಗಿ ಆಲೋಚಿಸಿ, ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕಾರ್ಯದರ್ಶಿಗಳು ಸೂಚನೆ ನೀಡಿದರು. ಇದಕ್ಕೆ ಡಿಡಿಪಿಐ ಜಿ.ಹೆಚ್. ವೀರಣ್ಣ ಅವರು ಉತ್ತರಿಸಿ, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೆ ಜಿಲ್ಲೆಯ ವಿವಿಧೆಡೆ ೧೦೮ ಚಿಣ್ಣರ ಅಂಗಳ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಜುಲೈ ವರೆಗೂ ನಡೆಸಲಾಗುವುದು. ಈವರೆಗೆ ಇಂತಹ ೩೯೭೯ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರಲಾಗಿದ್ದು, ಇನ್ನೂ ೧೩೧೪ ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರುವ ಕಾರ್ಯ ಆಗಬೇಕಿದೆ ಎಂದರು.
ವಾರ್ಡನ್‌ಗಳಿಗೆ ತರಬೇತಿ ನೀಡಿ : ಬಡ ವಿದ್ಯಾರ್ಥಿಗಳ ಭವಿಷ್ಯ ವಸತಿ ನಿಲಯಗಳಲ್ಲೇ ರೂಪುಗೊಳ್ಳುವುದರಿಂದ, ಇಂತಹ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸಲು, ಅವರಲ್ಲಿ ಸದ್ಗುಣಗಳನ್ನು ಬೆಳೆಸುವಂತೆ ಮಾಡಲು ವಸತಿ ನಿಲಯಗಳ ಮೇಲ್ವಿಚಾರಕರಿಗೆ ಅಂದರೆ ವಾರ್ಡನ್‌ಗಳಿಗೆ ಸೂಕ್ತ ತರಬೇತಿ ನೀಡುವುದು ಅಗತ್ಯವಾಗಿದೆ. ವಾರ್ಡನ್‌ಗಳೇ ದುಶ್ಚಟಗಳನ್ನು ಹೊಂದಿದ್ದಲ್ಲಿ, ಅದು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಸ್ಟೆಲ್‌ಗಳ ಸುತ್ತಮುತ್ತ ಉತ್ತಮ ಪರಿಸರ ಕಾಯ್ದುಕೊಳ್ಳುವುದು, ಸ್ಥಳಾವಕಾಶವಿದ್ದಲ್ಲಿ, ಸುಂದರ ಕೈತೋಟ ನಿರ್ಮಾಣ ಮಾಡಿ, ತರಕಾರಿ, ಹೂಗಳನ್ನು ಬೆಳೆಯುವುದು, ಮಕ್ಕಳಿಗೆ ಯೋಗಾಭ್ಯಾಸ ಮುಂತಾದ ಉತ್ತಮ ಕಾರ್ಯಗಳ ಬಗ್ಗೆ ಆಸಕ್ತಿ ವಹಿಸಬೇಕಾಗಿದೆ. ಇಂತಹ ವ್ಯಕ್ತಿತ್ವ ಸುಧಾರಣೆ ಕ್ರಮಗಳ ಬಗ್ಗೆ ವಾರ್ಡನ್‌ಗಳಿಗೆ ಸೂಕ್ತ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೆ ಸ್ವಂತ ಕಟ್ಟಡ ಇಲ್ಲದೇ ಇರುವ ಹಾಸ್ಟೆಲ್‌ಗಳಿಗೆ ಮೊದಲ ಆದ್ಯತೆ ಮೇಲೆ ನಿವೇಶನ ನೀಡಲಾಗುತ್ತಿದ್ದು, ಇಡೀ ರಾಜ್ಯದಲ್ಲಿಯೇ ಹಾಸ್ಟೆಲ್‌ಗಳ ನಿರ್ಮಾಣದಲ್ಲಿ ಕೊಪ್ಪಳ ಜಿಲ್ಲೆ ಮಾದರಿಯಾಗುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
0 comments:
Post a Comment