PLEASE LOGIN TO KANNADANET.COM FOR REGULAR NEWS-UPDATES

 ಲೋಕಸಭಾ ಚುನಾವಣೆಗಾಗಿ ಏ. ೧೭ ರಂದು ಮತದಾನ ನಡೆಯಲಿದ್ದು, ಮತದಾರರ ಜಾಗೃತಿಗಾಗಿ ನಗರದ ಸಾಹಿತ್ಯ ಭವನದ ಬಳಿ ಸೋಮವಾರ ಏರ್ಪಡಿಸಲಾಗಿದ್ದ ಸಹಿ ಸಂಗ್ರಹ ಅಭಿಯಾನದ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಸಹಿ ಮಾಡುವ ಮೂಲಕ ಚಾಲನೆ ನೀಡಿದರು.

  ಲೋಕಸಭೆ ಚುನಾವಣೆ ನಿಮಿತ್ಯ ಏ. ೧೭ ರಂದು ಮತದಾನ ನಡೆಯಲಿದ್ದು, ಈಗಾಗಲೆ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದರೆ,  ಎಲ್ಲ ಮತದಾರರೂ ತಪ್ಪದೆ ತಮ್ಮ ಮತ ಚಲಾಯಿಸುವಂತೆ ಮಾಡುವ ನಿಟ್ಟಿನಲ್ಲಿ, ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಜಿಲ್ಲಾ ಸ್ವೀಪ್ ಸಮಿತಿಯೂ ಸಹ ಹಲವಾರು ವಿನೂತನ ಮಾರ್ಗಗಳನ್ನು ಅನುಸರಿಸುತ್ತಿದೆ.  ಈಗಾಗಲೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟಗಳಲ್ಲೂ ಜಾಗೃತಿ ಜಾಥಾ, ಕ್ಯಾಂಡಲ್ ಲೈಟ್ ಜಾಥಾ, ಕರ ಪತ್ರ ವಿತರಣೆ, ಮತದಾರರಿಗೆ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧನೆ, ಯುವ ಮತದಾರರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು, ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ.  ಇದೀಗ ಮತದಾರರ ಜಾಗೃತಿಗಾಗಿ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಸಾಲಿಗೆ ಮತದಾರರ ಸಹಿ ಸಂಗ್ರಹ ಅಭಿಯಾನ ಹೊಸ ಸೇರ್ಪಡೆಯಾಗಿದೆ.  ಎಲ್ಲ ಮತದಾರರೂ ಕಡ್ಡಾಯವಾಗಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸುತ್ತೇವೆ ಎಂಬ ಪ್ರತಿಜ್ಞೆ ಸ್ವೀಕರಿಸಿ, ಸಹಿ ಮಾಡುವ ಕಾರ್ಯಕ್ರಮವೇ ಈ ಸಹಿ ಸಂಗ್ರಹ ಅಭಿಯಾನದ ಮುಖ್ಯ ಉದ್ದೇಶವಾಗಿದ್ದು, ಇದಕ್ಕಾಗಿ ನಗರದ ಸಾಹಿತ್ಯ ಭವನದ ಬಳಿ ಫಲಕವನ್ನು ಅಳವಡಿಸಿ, ಸಹಿ ಸಂಗ್ರಹಕ್ಕೆ ಎಲ್ಲ ಮತದಾರರು, ಸಾರ್ವಜನಿಕರಿಗೆ ಮುಕ್ತವಾಗಿ ಅವಕಾಶ ಮಾಡಿಕೊಡಲಾಯಿತು.
  ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ಕಡ್ಡಾಯವಾಗಿ ಮತ ಚಲಾಯಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಿ, ಸಹಿ ಮಾಡುವುದರಿಂದ, ಮತದಾರರಲ್ಲಿ ನೈತಿಕ ಮತದಾನದ ಪ್ರಜ್ಞೆ ಜಾಗೃತಗೊಳ್ಳಲು ಸಹಕಾರಿಯಾಗುತ್ತದೆ.  ಮತದಾರರ ಜಾಗೃತಿಯ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಶುಭಾ, ತಹಸಿಲ್ದಾರ್ ಪುಟ್ಟರಾಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ರಾಮಕೃಷ್ಣಯ್ಯ, ಡಿಡಿಪಿಐ ಜಿ.ಹೆಚ್. ವೀರಣ್ಣ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕಡ್ಡಾಯ ಮತದಾನ ಕುರಿತಂತೆ ಸಹಿ ಮಾಡಿದರು.  ಸಾರ್ವಜನಿಕ ಮತದಾರರು ಸಹ ಆಸಕ್ತಿಯಿಂದ ನೈತಿಕ ಮತದಾನದ ಪ್ರತಿಜ್ಞೆ ಸ್ವೀಕರಿಸಿ ಸಹಿ ಮಾಡುವ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಪಾಲ್ಗೊಂಡರು.

Advertisement

0 comments:

Post a Comment

 
Top