ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಟ್ಟಾರೆ ೨೧ ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದ ಹನುಮಪ್ಪ ತಂದೆ ಬಸವಂತಪ್ಪ ಜೀನರ ಎಂಬಾತನೆ ಶಿಕ್ಷೆಗೆ ಒಳಗಾದ ಆರೋಪಿ. ಆರೋಪಿ ಹನುಮಪ್ಪ ಜೀನರ ಅದೇ ಗ್ರಾಮದ ೧೪ ವರ್ಷದ ಬಾಲಕಿಗೆ ವಿನಾಃಕಾರಣ ಸಲುಗೆಯಿಂದ ಮಾತನಾಡಿಸುವುದು, ಹಿಂಬಾಲಿಸುವುದು, ಚುಡಾಯಿಸುವುದನ್ನು ಮಾಡುತ್ತಿದ್ದ. ಕಳೆದ ೨೦೧೩ ರ ಸೆ.೦೧ ರಂದು ಬಾಲಕಿಯು ಮನೆಯಲ್ಲಿ ಒಬ್ಬಳೆ ಇರುವ ಸಂದರ್ಭದಲ್ಲಿ ಮನೆಗೆ ಪ್ರವೇಶಿಸಿ ಅತ್ಯಾಚಾರವೆಸಗಿದ್ದನು. ಬಾಲಕಿಯನ್ನು ತಾನು ಮದುವೆಯಾಗುವುದಾಗಿ ಬಾಲಕಿಯ ತಾಯಿಗೆ ಹೇಳಿ ಪರಾರಿಯಾಗಿದ್ದನು. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ಜೀವ ಸಹಿತ ಉಳಿಸುವುದಿಲ್ಲ ಎಂಬ ಬೆದರಿಕೆ ಹಾಕಿದ್ದನು. ಈ ಕುರಿತಂತೆ ಬಾಲಕಿಯ ತಾಯಿ ಕುಷ್ಟಗಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಕುಷ್ಟಗಿ ಪೊಲೀಸ್ ಠಾಣೆಯ ಸಿಪಿಐಗಳಾದ ನೀಲಪ್ಪ ಎಂ.ಒಲೇಕಾರ ಹಾಗೂ ರುದ್ರೇಶ ಎಸ್.ಉಜ್ಜನಿಕೊಪ್ಪ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ ದಾ.ಬಬಲಾದಿ ಅವರು, ಆರೋಪಿಯ ಮೇಲಿನ ಅಪರಾಧ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ಭಾ.ದ.ಸ. ಕಲಂ: ೩೭೬ ರ ಅಡಿ ಅಪರಾಧಕ್ಕಾಗಿ ೧೦ ವರ್ಷ ಕಠಿಣ ಶಿಕ್ಷೆ, ಕಲಂ:೪ ಪಿಓಸಿಎಸ್‌ಓ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಆಕ್ಟ್ ಅಪರಾಧಕ್ಕಾಗಿ ೧೦ ವರ್ಷ ಕಠಿಣ ಶಿಕ್ಷೆ ಹಾಗೂ ಭಾ.ದ.ಸ. ಕಲಂ: ೫೦೬ ರ ಅಡಿ ಅಪರಾಧಕ್ಕಾಗಿ ೦೧ ವರ್ಷ ಶಿಕ್ಷೆ ವಿಧಿಸಿದ್ದು, ಈ ಎಲ್ಲಾ ಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸತಕ್ಕದ್ದಾಗಿದೆ ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ಅವರು ವಾದ ಮಂಡಿಸಿದ್ದರು.
0 comments:
Post a Comment