ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ನಮ್ಮ ಸಂವಿಧಾನ ಪ್ರಜೆಗಳಿಗೆ ನೀಡಿದ್ದು, ಮತದಾರರಲ್ಲಿ ಮತದಾನದ ಪ್ರಜ್ಞೆ ಜ್ಯೋತಿಯಂತೆ ಬೆಳಗಬೇಕಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
ಲೋಕಸಭೆ ಚುನಾವಣೆ ನಿಮಿತ್ಯ ಮತದಾರರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳದ ಸಾಹಿತ್ಯ ಭವನದ ಬಳಿ ಸ್ವೀಪ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಕ್ಯಾಂಡಲ್ ಲೈಟಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲೋಕಸಭೆ ಚುನಾವಣೆಗೆ ಬರುವ ಏಪ್ರಿಲ್ ೧೭ ರಂದು ಮತದಾನ ನಡೆಯಲಿದ್ದು, ಎಲ್ಲ ಮತದಾರರು ಮತಗಟ್ಟೆಗೆ ಬಂದು ತಮ್ಮ ಅಮೂಲ್ಯ ಮತವನ್ನು ಚಲಾಯಿಸುವಂತಾಗಬೇಕು. ಎಲ್ಲ ಮತದಾರರು ತಮ್ಮ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಜವಾದ ಅರ್ಥ ಬರುತ್ತದೆ. ಕಳೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಇದ್ದು, ಮತದಾರರು ಮತದಾನದಿಂದ ವಿಮುಖರಾಗಿರುವುದು ಆತಂಕದ ಸಂಗತಿಯಾಗಿದೆ. ಮತದಾರರು ಜಾಗೃತರಾಗಬೇಕು. ಹಣ, ಆಸೆಗೆ ಒಳಗಾಗದೆ ನೈತಿಕವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾರರಲ್ಲಿ ನೈತಿಕ ಮತದಾನದ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಲುವಾಗಿ ಸ್ವೀಪ್ ಕಾರ್ಯಕ್ರಮದಡಿ ಕ್ಯಾಂಡಲ್ ಲೈಟಿಂಗ್ ನಂತಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಮತದಾರರೂ ಸಹ ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿದಾಗ ಮಾತ್ರ ಇಂತಹ ಕಾರ್ಯಕ್ರಮಗಳ ಉದ್ದೇಶ ಸಫಲವಾಗುತ್ತದೆ. ಕ್ಯಾಂಡಲ್ ಲೈಟಿಂಗ್ ನಂತಹ ವಿನೂತನ ಕಾರ್ಯಕ್ರಮ ನಿಜಕ್ಕೂ ಒಳ್ಳೆಯ ಪರಿಣಾಮ ಬೀರುವ ಸಾಧನವಾಗಿದ್ದು, ಬರುವ ದಿನಗಳಲ್ಲಿ ಎಲ್ಲ ತಾಲೂಕು ಕೇಂದ್ರಗಳಲ್ಲೂ ಸಹ ಕ್ಯಾಂಡಲ್ ಲೈಟಿಂಗ್ ನಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಯುವಜನ ಸೇವಾ ಮತ್ತು ಕ್ರೀಡಾಇಲಾಖೆ ಸಹಾಯಕ ನಿರ್ದೇಶಕ ಸುದರ್ಶನರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶುಭಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಡಿಡಿಪಿಐ ಜಿ.ಹೆಚ್. ವೀರಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕ್ಯಾಂಡಲ್ ಲೈಟಿಂಗ್ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೊಪ್ಪಳದ ಕ್ರೀಡಾ ವಸತಿಶಾಲೆ ವಿದ್ಯಾರ್ಥಿಗಳು, ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿನಿಲಯಗಳ ವಿದ್ಯಾರ್ಥಿಗಳು ಕ್ಯಾಂಡಲ್ ಲೈಟಿಂಗ್ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಹಿತ್ಯ ಭವನದಿಂದ ಜವಾಹರ ರಸ್ತೆ, ನಂತರ ನಗರದ ಪ್ರಮುಖ ರಸ್ತೆಯಲ್ಲಿ ಮತದಾನದ ಮಹತ್ವದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
0 comments:
Post a Comment