PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಮಾ. ೨೨ (ಕ.ವಾ): 

’ಎಚ್ಚರಗೊಳ್ಳಿ ಪ್ರಜೆಗಳೆ, ಎಚ್ಚರಗೊಳ್ಳಿ ಪ್ರಭುಗಳೆ, 
ಮತ ಚಲಾವಣೆಯು ಪ್ರಜಾಪ್ರಭುತ್ವದ ಉಳಿವಿನ ಮಂತ್ರ, ಚುನಾವಣೆ ಎಂಬುದು ಜನತಂತ್ರದ ಉಳಿವಿನ ಮಂತ್ರ. . . . . . .’

’೧೮ ತುಂಬಿದ ಹದಿ ಹರೆಯದವರೆ, ನಾಡ ನಾಳಿನ ವಾರಸುದಾರರೆ,
ಕಣ್ಣಲ್ಲಿ ಕನಸು, ಮೈಯಲ್ಲಿ ಹುರುಪು, ಕೇಳಿರಿ ಸಂವಿಧಾನದ ಕರೆಯ, ಅರಿಯಿರಿ ದೇಶ ಕಟ್ಟುವ ಪರಿಯ. . . . . .’

’ಬನ್ನಿರಿ, ಬನ್ನಿರಿ ಮತದಾರರೆ, ನಮ್ಮೀ ನಾಡಿನ ಭಾಗೀದಾರರೆ,
ನಾವು, ನೀವು ಕೂಡಿ ನಡೆಯೋಣ, ಮತದಾನದ ಮಹತ್ವ ಅರಿಯೋಣ.. . . . . .


 
  ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು, ಕಡ್ಡಾಯ ಮತದಾನಕ್ಕೆ ಪ್ರೇರೇಪಿಸಲು, ವಾರ್ತಾ ಇಲಾಖೆಯು ಬಿಡುಗಡೆ ಮಾಡಿರುವ ’ಮತದಾರರ ಜಾಗೃತಿ ಆಶಯ ಗೀತೆಗಳು’ ಗೀತ ಗುಚ್ಛದ ಸ್ಯಾಂಪಲ್‌ಗಳಿವು.

  ಮತದಾರರು ಮತಗಟ್ಟೆಗೆ ಬಂದು, ತಮ್ಮ ಮತ ಚಲಾಯಿಸುವಂತೆ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮದಡಿ ಅನೇಕ ಕಸರತ್ತು ನಡೆಸುತ್ತಿದೆ.  ಮತದಾನ ಮಾಡಲೂ ಸಹ ಸೋಮಾರಿತನ ತೋರುವವರನ್ನು ಎಚ್ಚರಿಸಿ, ಅವರಲ್ಲಿ ಮತದಾನಕ್ಕೆ ಸ್ಫೂರ್ತಿ ತುಂಬುವ ಯತ್ನ ಇದೀಗ ನಿರಂತರವಾಗಿ ನಡೆಯುತ್ತಿದೆ.  ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಡಿಮೆ ಮತದಾನ ಪ್ರಮಾಣವಾಗಿರುವ ಪ್ರದೇಶಗಳನ್ನು ಗುರುತಿಸಿ, ಅಂತಹ ಪ್ರದೇಶಗಳ ಮತದಾರರಿಗೆ ಮತ ಚಲಾವಣೆಗೆ ಇರುವ ತೊಂದರೆಯಾದರೂ ಏನು, ಎಂಬುದನ್ನು ಅರಿತು, ಅವರಲ್ಲಿ ಮತದಾನಕ್ಕೆ ಆತ್ಮ ವಿಶ್ವಾಸದ ಕೊರತೆ ಇದ್ದಲ್ಲಿ, ಅದನ್ನು ನಿವಾರಿಸುವ ಕಾರ್ಯವೂ ಸಾಗಿದೆ.  ಮತದಾರರಲ್ಲಿ ಜಾಗೃತಿ ಮೂಡಿಸಲು ವಾರ್ತಾ ಇಲಾಖೆಯು ’ಮತದಾರರ ಜಾಗೃತಿ ಆಶಯ ಗೀತೆಗಳು’ ಎಂಬ ಗೀತ ಗುಚ್ಛವನ್ನು ಸಿದ್ಧಪಡಿಸಿ, ಬಿಡುಗಡೆಗೊಳಿಸಿದೆ.  ಕನ್ನಡ ಚಿತ್ರರಂಬದ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಈ ಗೀತೆಗಳಿಗೆ ಉತ್ತಮ ಸಂಗೀತವನ್ನು ನೀಡಿದ್ದಾರೆ.  ಕೆ.ವೈ. ನಾರಾಯಣಸ್ವಾಮಿ ಹಾಗೂ ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಅವರು ತಮ್ಮ ಹದಭರಿತ ಸಾಹಿತ್ಯದಿಂದ, ಮತದಾರರನ್ನು ಎಚ್ಚರಗೊಳಿಸುವಂತಹ ಗೀತೆಗಳು ಮೂಡಿ ಬರುವಂತೆ ಮಾಡಿದ್ದಾರೆ.  ೦೪ ಹಾಡುಗಳನ್ನು ಒಳಗೊಂಡ ಈ ಗೀತ ಗುಚ್ಛದಲ್ಲಿ ಸರಿ ಸುಮಾರು ಎಲ್ಲವೂ ೪ ರಿಂದ ೫ ನಿಮಿಷಗಳ ಅವಧಿಯದ್ದಾಗಿವೆ.  ಈ ಪೈಕಿ ಮೊದಲನೆ ಹಾಡು ’ಎಚ್ಚರಗೊಳ್ಳಿ ಪ್ರಜೆಗಳೆ..’ ಹಾಡಂತೂ, ಮತದಾನಕ್ಕೂ ಆಲಸ್ಯತನ ತೋರುವವರನ್ನು ಎಚ್ಚರಿಸುವಂತಿದೆ.  ಯುವ ಪೀಳಿಗೆಯನ್ನು ಮತಗಟ್ಟೆಗೆ ಸೆಳೆಯಲು ’೧೮ ತುಂಬಿದ ಹದಿ ಹರೆಯದವರೆ. . .’ ಹಾಡು ದೇಶ ಕಟ್ಟುವಲ್ಲಿನ ಅವರ ಪಾತ್ರ ಬಿಂಬಿಸುತ್ತದೆ.  ’ಬನ್ನಿರಿ, ಬನ್ನಿರಿ ಮತದಾರರೆ.॒.’ ಹಾಡು ಮತದಾನದ ಮಹತ್ವ ಅರಿಯುವಂತೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿ ಎನಿಸಿದೆ.  ಮತದಾರರ ಜಾಗೃತಿಗಾಗಿ ರಚಿಸಲಾಗಿರುವ ಈ ಎಲ್ಲ ಹಾಡುಗಳು ಅತ್ಯಂತ ಪರಿಣಾಮಕಾರಿಯಾಗಿವೆ.
  ಮತದಾರರ ಜಾಗೃತಿ ಆಶಯ ಗೀತೆಗಳನ್ನು ನಗರಸಭೆ, ಪುರಸಭೆಗಳ ವಾಹನಗಳಿಗೆ ಅಳವಡಿಸುವುದು, ಸೇರಿದಂತೆ ಅನೇಕ ಮಾಧ್ಯಮಗಳ ಮೂಲಕ ಮತದಾರರಲ್ಲಿ ಅರಿವು ಮೂಡಿಸಲು ಯೋಜಿಸಲಾಗಿದ್ದು, ಮತದಾರರು, ನಿಭೀತರಾಗಿ, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಮತದಾನ ಮಾಡಿ, ತಮ್ಮ ಹೊಣೆ ನಿಭಾಯಿಸಿದಲ್ಲಿ, ವಾರ್ತಾ ಇಲಾಖೆ ಹಾಗೂ ಜಿಲ್ಲಾಡಳಿತದ ಪ್ರಯತ್ನ ಸಾರ್ಥಕವಾಗಲಿದೆ.

Advertisement

0 comments:

Post a Comment

 
Top