PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯ ಬೇಳೂರು ಗ್ರಾಮದ ಪ್ರಗತಿಪರ ರೈತರಾದ ಭರಮಪ್ಪ ಸಿಂಗಟಾಲೂರು ಅವರ ತಾಳೆ ಕ್ಷೇತ್ರದಲ್ಲಿ ತಾಳೆ ಬೆಳೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು.
ಈ ತರಬೇತಿ ಕಾರ್ಯಕ್ರಮದಲ್ಲಿ ಅಗ್ರೋಟೆಕ್ ಕಂಪನಿ ಗಂಗಾವತಿಯ ಅಧಿಕಾರಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಖಾದ್ಯ ತೈಲದ ಕೊರತೆ ನೀಗಿಸುವಲ್ಲಿ ತಾಳೆ ಎಣ್ಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು ಅಲ್ಲದೆ ಕೆಲವು ತಾಂತ್ರಿಕ ವಿಷಯಗಳನ್ನು ರೈತರಿಗೆ ತಿಳಿಸಿಕೊಟ್ಟರು. 
ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಕೊಪ್ಪಳ, ರಾಯಚೂರು, ಗದಗ ಜಿಲ್ಲೆಗಳಿಗೆ ನೊಡಲ್ ಅಧಿಕಾರಿಯಾದ ಶಿವಪುತ್ರಪ್ಪ ಮಾತನಾಡಿ, ಕೃಷಿಯಲ್ಲಿ ತೋಟಗಾರಿಕೆ ಮಹತ್ವ ತಿಳಿಸಿ ತಾಳೆ ಎಣ್ಣೆ ಒಂದು ಖಾದ್ಯ ತೈಲವಾಗಿದ್ದು ಒಂದು ಎಕರೆ ತಾಳೆಬೆಳೆ ಪ್ರದೇಶದಿಂದ ೨ ಟನ್ ತಾಳೆ ಎಣ್ಣೆ ಉತ್ಪಾದನೆಯಾದರೆ, ಇಷ್ಟೆ ಪ್ರಮಾಣದ ಖಾದ್ಯ ತೈಲ ಉತ್ಪಾದಿಸಲು ಇತರೆ ಎಣ್ಣೆ ಬೆಳೆಗಳಾದ ಶೇಂಗಾ, ಕುಸುಬೆ, ಸೂರ್ಯಕಾಂತಿಯನ್ನು ಸುಮಾರು ೨೦ ಎಕರೆ ಪ್ರದೇಶದಲ್ಲಿ ಬೆಳೆಯಬೇಕಾಗುತ್ತದೆ ಎಂಬ ಸತ್ಯವನ್ನು ತಿಳಿಸಿಕೊಟ್ಟರು. ಸದ್ಯ ತಾಳೆ ಎಣ್ಣೆಗೆ ಪ್ರತಿ ಟನ್‌ಗೆ ಕನಿಷ್ಠ ಬೆಂಬಲ ಬೆಲೆಯಾಗಿ ರೂ.೮೫೦೦/- ನಿಗದಿ ಮಾಡಲಾಗಿದ್ದು ಎಕರೆಗೆ ೧೦-೧೫ ಟನ್ ಒಂದು ವರ್ಷಕ್ಕೆ ಹಣ್ಣಿನ ಇಳುವರಿಯಿಂದ ರೂ. ೮೫೦೦೦/- ರಿಂದ ರೂ. ೧,೦೦,೦೦೦/- ನಿಖರ ಆದಾಯ ಪಡೆಯಬಹುದೆಂಬ ಅಂಶಗಳನ್ನು ವಿವರಿಸಿದರು. ಇದಲ್ಲದೆ ಜೈವಿಕ ಇಂಧನವನ್ನು ತಾಳೆ ಬೆಳೆಯಿಂದ ಪಡೆಯಬಹುದಾದ್ದರಿಂದ ಭವಿಷ್ಯದಲ್ಲಿ ತಾಳೆ ಬೆಳೆ ಭಾರತದ ವೀದೇಶಿ ವಿನಿಮಯದೊಂದಿಗೆ ಖಾದ್ಯ ತೈಲ ಮತ್ತು ಇಂಧನದ ಕೊರತೆ ನಿಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು. 
ನಂತರ ನಡೆದ ರೈತರ ಸಂವಾದ ಕಾರ್ಯಕ್ರಮದಲ್ಲಿ ತಾಳೆ ಬೆಳೆ ಯೋಜನೆಯಡಿ ರೈತರಿಗೆ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿ, ರೈತರಿಗೆ ಇರುವ ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲಾಯಿತು. ಚಂದ್ರನಾಯಕ್, ವೆಂಕಣ್ಣ ಚೆಲ್ಲೂರು, ಭರಮಪ್ಪ ತಾಳೆ ಬೆಳೆ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಕಾತರಕಿ, ಗುಡ್ಲಾನೂರು, ಬೇಳೂರು, ಗ್ರಾಮಗಳಿಂದ ಹಲವಾರು ರೈತರು ಭಾಗವಹಿಸಿದ್ದರು. ಕೊನೆಯಲ್ಲಿ ಪಾಟೀಲರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.    

Advertisement

0 comments:

Post a Comment

 
Top