PLEASE LOGIN TO KANNADANET.COM FOR REGULAR NEWS-UPDATES

 ಪ್ರತಿ ವರ್ಷದಂತೆ  ಕಲಾವಿದರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ  ರಂಗ ಕಲಾವಿದರನ್ನು ಸತ್ಕರಿಸಿ ಗೌರವಿಸುವ ಮೂಲಕ ವಿಶ್ವರಂಗಭೂಮಿ ದಿನಾಚರಣೆ ಯನ್ನು ನಗರದ ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ  ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ವಿಶಿಷ್ಟವಾಗಿ ಆಚರಿಸಿತು. 



ಗುರುವಾರ ಸಂಜೆ ನಗರದ ರಾಘವ ಕಲಾ ಮಂದಿರದ ಆವರಣದಲ್ಲಿರುವ ರಾಘವ ಪುತ್ಥಳಿ ಮುಂದೆ ಜರುಗಿದ  ಹೃದಯಸ್ಪರ್ಶಿ, ಸರಳ ಸಮಾರಂಭದಲ್ಲಿ ಹವ್ಯಾಸಿ ರಂಗ ಕಲಾವಿದ ಆರ್. ಎನ್. ಚಂದ್ರಮೌಳಿ,  ಮಕ್ಕಳ ನಾಟಕ ನಿರ್ದೇಶಕ, ಅಧ್ಯಾಪಕ ಶಿವೇಶ್ವರ ಗೌಡ ಕಲ್ಲುಕಂಬ, ವೃತ್ತಿ ರಂಗ ಕಲಾವಿದೆ ಕೂಡ್ಲಿಗಿಯ ಜ್ಯೋತಿ ಹಾಗೂ ಯುವ ರಂಗಕರ್ಮಿ, ನ್ಯಾಯವಾದಿ ನೇತಿ ರಘುರಾಮ್ ಅವರನ್ನು ವೇದಿಕೆ ಪರವಾಗಿ ಕರ್ನಾಟಕ ಬಯಲಾಟ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಅವರು ಸನ್ಮಾನಿಸಿ ಗೌರವಿಸಿದರು.
ನಾಡೋಜ ಬೆಳಗಲ್ಲು ವೀರಣ್ಣ ಅವರು ಮಾತನಾಡಿ, ಕನ್ನಡ ರಂಗಭೂಮಿಗೆ  ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ. ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷವಾಗಿ ರಂಗ ಕಲೆಗೆ ಬಳ್ಳಾರಿ ಜಿಲ್ಲೆಯ ಜನತೆ, ಸಂಘ ಸಂಸ್ಥೆಗಳು ಯಾವತ್ತೂ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಿಂದ ಭರಣಿ ಸಾಂಸ್ಕೃತಿಕ ವೇದಿಕೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಮನ್ನಣೆ ಗಳಿಸಿದೆ ಎಂದು ಹೇಳಿದರು.
ತಮ್ಮ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಹಿತಿ, ಶಿಕ್ಷಕರು, ಚಿತ್ರ, ರಂಗ ಕಲಾವಿದರು, ವೈದ್ಯರು, ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು, ಬಾಲ-ಯುವ ಪ್ರತಿಭೆಗಳನ್ನು ಗುರುತಿಸಿ ೧೦ ವರ್ಷಗಳಲ್ಲಿ ಸುಮಾರು ೫೦೦ಕ್ಕೂ ಹೆಚ್ಚು  ಸಾಧಕರನ್ನು  ಪ್ರೋತ್ಸಾಹಿಸಿರುವ ವೇದಿಕೆಯ ಅಧ್ಯಕ್ಷ, ಪತ್ರಕರ್ತ  ಸಿ. ಮಂಜುನಾಥ್ ಅವರ ಸಮಾಜ ಮುಖಿ ಸೇವೆ  ಯುವ ಜನರಿಗೆ ಸ್ಪೂರ್ತಿ ಹಾಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ವರ್ಷ ಬಳ್ಳಾರಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು  ನಗರದ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಒಗ್ಗೂಡಿ ಇಡೀ ದಿನ ಆಚರಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆ ಅಧ್ಯಕ್ಷ ಸಿ. ಮಂಜುನಾಥ್ ಮಾತನಾಡಿ, ತಮ್ಮ ಸರಕಾರಿ ಕಾಯಕದ ನಡುವೆಯೂ ರಂಗ ಭೂಮಿಯ ನಂಟನ್ನು ಬಿಡದೇ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ರಂಗ ಪ್ರಿಯರ ಮನಗೆದ್ದಿರುವ ಕೆ ಎಸ್ ಆರ್ ಟಿ ಸಿ ನಿವೃತ್ತ ಹಿರಿಯ ಅಧಿಕಾರಿ ಆರ್ ಎನ್ ಚಂದ್ರಮೌಳಿ, ಮಕ್ಕಳ ಮಾನಸಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಅಧ್ಯಾಪಕ, ಶಿವೇಶ್ವರ ಗೌಡ ಕಲ್ಲುಕಂಬ, ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಸರಿದಂತೆ ನೂರಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿರುವ ವೃತ್ತಿ ರಂಗ ಕಲಾವಿದೆ ಕೂಡ್ಲಿಗಿಯ ಜ್ಯೋತಿ ಮತ್ತು ಯುವ ರಂಗ ಕರ್ಮಿ ನೇತಿ ರಘುರಾಮ್ ಅವರನ್ನು ಈ ಬಾರಿ ಸತ್ಕರಿಸುತ್ತಿರುವುದು ಸಂತಸ ತಂದಿದೆ. ಇಂತಹ ಸಮಾಜ ಮುಖಿ ಕಾರ್ಯಗಳು ಮುಂದುವರೆಯಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಘವ ಕಲಾ ಮಂದಿರದ ಅಧ್ಯಕ್ಷ ಬಿ. ಸಿದ್ಧನಗೌಡ, ಗೌರವ ಅಧ್ಯಕ್ಷ ಕೆ. ಚೆನ್ನಪ್ಪ, ಉಪಾಧ್ಯಕ್ಷ ರಾಮಾಂಜನೇಯುಲು, ಖಜಾಂಚಿ ಪಂಪನಗೌಡ, ಪದಾಧಿಕಾರಿಗಳಾದ ರಮೇಶ ಗೌಡ ಪಾಟೀಲ್, ಪಶು ಸಂಗೋಪನೆಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ. ಪಿ ಎಲ್  ಗಾದಿಲಿಂಗನ ಗೌಡ, ಮಯೂರ ಕಲಾ ಸಂಘದ ಗಂಗಣ್ಣ, ಹಂದ್ಯಾಳ್ ಶ್ರೀ ಮಹಾದೇವತಾತಾ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್, ಯುವ ರಂಗ ಕರ್ಮಿ ಅಣ್ಣಾಜಿ ಕೃಷ್ಣಾರೆಡ್ಡಿ, ರಂಗ ಕಲಾವಿದ ಅಮರೇಶ್ ಎಚ್ ಎಂ ಮತ್ತಿತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top