PLEASE LOGIN TO KANNADANET.COM FOR REGULAR NEWS-UPDATES

  ಭಾರತದ ಮಾಜಿ ರಾಷ್ಟ್ರಪತಿಗಳು ಹಾಗೂ ರಾಷ್ಟ್ರದ ಖ್ಯಾತ ಅಣು ವಿಜ್ಞಾನಿಗಳೆಂದೇ ಈ ದೇಶದ ಜನ ಅಭಿಮಾನದಿಂದ ಕರೆಯಲ್ಪಡುವ ಡಾ. ಅಬ್ದುಲ್ ಕಲಾಂ ಅವರು ಹೇಳ್ತಾರೆ ’ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿ’ ಅಂತ. 
  ದೇಶದ ಮಾಜಿ ರಾಷ್ಟ್ರಪತಿಗಳು ಹಾಗೂ ಅಣು ವಿಜ್ಞಾನಿ ಡಾ. ಅಬ್ದುಲ್ ಕಲಾಂ, ಒಲಂಪಿಕ್‌ನಲ್ಲಿ ದೇಶಕ್ಕೆ ಪದಕ ತಂದುಕೊಟ್ಟ ಸೈನಾ ನೆಹ್ವಾಲ್, ಮೇರಿ ಕೋಂ ಹೀಗೆ ಅನೇಕ ಖ್ಯಾತನಾಮರು ಇದೇ ಲೋಕಸಭೆ ಚುನಾವಣೆಗೆ ಏ. ೧೭ ರಂದು ಎಲ್ಲರೂ ತಪ್ಪದೆ ಮತದಾನ ಮಾಡಿ, ಉಳಿದವರನ್ನೂ ಮತದಾನಕ್ಕೆ ಕರೆತನ್ನಿ ಎಂದು ಕೊಪ್ಪಳ ಜಿಲ್ಲೆಯಲ್ಲಿ ಮತದಾರರಿಗೆ ಮನವಿ ಮಾಡುತ್ತಿದ್ದಾರೆ.  ಹೀಗೆಂದ ಮಾತ್ರಕ್ಕೆ ಈ ಎಲ್ಲ ಖ್ಯಾತನಾಮರು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದಾರೆ ಎಂದಲ್ಲ.  ಇದು ಚುನಾವಣಾ ಆಯೋಗವು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಹೊರತರಲಾಗಿರುವ ಪ್ರಚಾರ ಫಲಕಗಳ ಮೇಲೆ ರಾರಾಜಿಸಿ, ಸಾರ್ವಜನಿಕರಿಗೆ ಮತದಾನಕ್ಕೆ ಪ್ರೇರೇಪಣೆ ನೀಡುತ್ತಿರುವುದಾಗಿದೆ.   ಮತದಾನಕ್ಕೆ ಸಾರ್ವಜನಿಕರಲ್ಲಿ ಉತ್ಸಾಹ ಮೂಡಿಸಲು ಚುನಾವಣಾ ಆಯೋಗ  ಕ್ರೀಡಾ ಪಟುಗಳು ಹಾಗೂ ಡಾ. ಅಬ್ದುಲ್ ಕಲಾಂ ರಂತಹ ಅಪ್ರತಿಮ ದೇಶಭಕ್ತ, ಹಿರಿಯ ವಿಜ್ಞಾನಿಯನ್ನು ಮತದಾರರ ಜಾಗೃತಿಗಾಗಿ ರಾಯಭಾರಿಗಳನ್ನಾಗಿ ಆಯ್ಕೆಗೊಳಿಸಿದೆ.  ರಾಜ್ಯದಲ್ಲಿ ಕಳದ ವರ್ಷ ಜರುಗಿದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಈ ರೀತಿಯ ಮತ ಜಾಗೃತಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವ ಮೂಲಕ, ಉತ್ತಮ ಮತದಾನ ಪ್ರಮಾಣ ರಾಜ್ಯದಲ್ಲಿ ದಾಖಲಾಗುವಂತೆ ಮಾಡುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಿತ್ತು.






  ಹಿರಿಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ’ನಿಮ್ಮ ಆಯ್ಕೆ ಸೂಕ್ತವಾಗಿರಲಿ, ಯೋಚಿಸಿ ಮತ ಚಲಾಯಿಸಿ’, ಆಮಿಷಕ್ಕೆ ಒಳಗಾಗದಿರಿ ಎನ್ನುತ್ತಿರುವ ಫಲಕ ಕೊಪ್ಪಳದಲ್ಲಿ ರಾರಾಜಿಸುತ್ತ ಎಲ್ಲರ ಗಮನ ಸೆಳೆಯುತ್ತಿದೆ.   ’ಮತದಾನ ಮಾಡಿದವನೆ ಮಹಾಶೂರ’ ಎನ್ನುತ್ತ ದಂಪತಿಗಳು ಕಿರು ನಗೆ ಬೀರುತ್ತಿರುವ ಫಲಕಗಳು, ’ಜನಸಾಮಾನ್ಯರ ಶಕ್ತಿ- ಮತ ಚಲಾವಣೆ’ ಎನ್ನುತ್ತ ಸಾಮಾನ್ಯ ರೈತನೊಬ್ಬ ತನ್ನ ಹಕ್ಕು ಚಲಾಯಿಸುವ ಕುರಿತು ಜಾಗೃತಿ ಮೂಡಿಸುವ ಕಾರ್ಟೂನ್ ಚಿತ್ರದ ಫಲಕ ಇದೀಗ ಕೊಪ್ಪಳ ಜಿಲ್ಲೆಯ ವಿವಿಧೆಡೆ  ಜನರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.  ಒಲಂಪಿಕ್ ಪದಕದೊಂದಿಗೆ ಗೆಲುವಿನ ನಗೆ ಬೀರುತ್ತ ಖ್ಯಾತ ಬ್ಯಾಂಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ’ನನ್ನದು ನಿರ್ಭೀತಿಯ ಆಟ, ನೀವೂ ನಿರ್ಭಯರಾಗಿ ಮತ ಚಲಾಯಿಸಿ ಎನ್ನುತ್ತ ಯುವಜನರಿಗೆ ಸ್ಫೂರ್ತಿಯ ಸೆಲೆಯಂತೆ ಜಿಲ್ಲೆಯ ವಿವಿಧೆಡೆ ಫಲಕಗಳಲ್ಲಿ ಯುವಜನರನ್ನು ಮತದಾನಕ್ಕೆ ಪ್ರೇರೇಪಿಸುತ್ತಿದ್ದಾರೆ.  ಇನ್ನೋರ್ವ ಒಲಂಪಿಕ್ ಪದಕ ವಿಜೇತೆ ಬಾಕ್ಸಿಂಗ್ ಮಹಿಳಾ ಆಟಗಾರ್ತಿ ಮೇರಿ ಕೋಂ ಅವರೂ ಸಹ ಮತದಾರರ ಜಾಗೃತಿಗಾಗಿ ಫಲಕಗಳಲ್ಲಿ ರಾರಾಜಿಸುತ್ತಿದ್ದಾರೆ.   ’ನಮ್ಮ ನಡೆ-ಮತಗಟ್ಟೆಯ ಕಡೆಗೆ ಎನ್ನುತ್ತ ಸಾಮೂಹಿಕವಾಗಿ ಮತಗಟ್ಟೆಗಳತ್ತ ಸಾಗುತ್ತಿರುವ ಕಾರ್ಟೂನ್ ಚಿತ್ರ ಆಕರ್ಷಕವಾಗಿದೆ.   ಈ ರೀತಿಯ ಪ್ರಚಾರ ಫಲಕಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಳವಡಿಸಿದ್ದು, ಮತದಾರರ ಸಮೂಹವನ್ನು ಮತದಾನಕ್ಕೆ ಆಹ್ವಾನ ನೀಡುವಂತಿದೆ.  ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮತದಾರರ ಜಾಗೃತಿಗೆ ಯುವಜನರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧನೆ, ಮ್ಯಾರಥಾನ್ ಓಟ, ಕ್ಯಾಂಡಲ್ ಲೈಟಿಂಗ್, ಬೀದಿನಾಟಕ, ಜಾನಪದ ಸಂಗೀತ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಸ್ವೀಪ್ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೆ ಯುವಜನತೆ, ವಿದ್ಯಾರ್ಥಿ ಸಮೂಹ, ಮತದಾರರ ಸ್ಪಂದನೆ ಅತ್ಯುತ್ತಮವಾಗಿದೆ.  ಈ ಎಲ್ಲ ಪ್ರಯತ್ನಗಳ ಫಲಿತಾಂಶ ಮಾತ್ರ ಸಿಗುವುದು ಏಪ್ರಿಲ್ ೧೭ ರಂದು ಸಂಜೆಯ ವೇಳೆಗೆ.  ಜಿಲ್ಲೆಯಲ್ಲಿ ಎಲ್ಲ ಮತದಾರರು ತಪ್ಪದೆ ತಮ್ಮ ಮತದಾನ ಚಲಾಯಿಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಳಗೊಂಡಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾ ಆಡಳಿತದ ಶ್ರಮ ಸಾರ್ಥಕವಾಗಲಿದೆ.

Advertisement

0 comments:

Post a Comment

 
Top