PLEASE LOGIN TO KANNADANET.COM FOR REGULAR NEWS-UPDATES

 ಮತ್ತದೇ ಹಳೇ ಕಥೆ ಆಯ್ತಲ್ಲ ಪ್ರೀತೂ... 



      ಹೊಟೇಲ್ ಮ್ಯಾನೇಜ್‌ಮೆಂಟ್ ಓದಿರುವ ಪ್ರೀತಂಗೆ ಸ್ಟಾರ್ ಹೋಟೇಲ್‌ವೊಂದರಲ್ಲಿ ಚೆಫ್ ಕೆಲಸ. ಜೊತೆಗೆ ಹೊಟೇಲ್ ಮಾಲಕನ ಮಗಳ ಕೊರಳಿಗೆ ತಾಳಿ ಕಟ್ಟಬೇಕಾದ ಅಳಿಯ ಕೂಡ. ಚಿಕ್ಕಂದಿನಲ್ಲಿ ಅಪ್ಪನಿಗೆ ಸ್ನೇಹಿತರೇ ಸೇರಿ ಮಾಡಿದ ದ್ರೋಹದಿಂದ ಬೀದಿಗೆ ಬಿದ್ದಿದ್ದ ಪ್ರೀತಂಗೆ ದುಡ್ಡಿನ ಮೇಲೆ ಆಸೆ. ಚಿನಕುರಳಿಯಂಥ ಮಾತುಗಳ ಮೇಲೆ ಪ್ರೀತಿ. 
      ಪ್ರೀತಂಗೆ ಸುಳ್ಳೇ ಮನೆದೇವ್ರು. ಸತ್ಯದ ನೆತ್ತಿ ಮೇಲೆ ಹೊಡೆದ ಹಾಗೆ ಹೇಳುವ ಸುಳ್ಳುಗಳೇ ಹುಡುಗಿಯರನ್ನ ಇಂಪ್ರೆಸ್ ಮಾಡುವ ಅಸ್ತ್ರಗಳು. ತೀರ್ಥಯಾತ್ರೆ ಅಂತ ಸುಳ್ಳು ಹೇಳಿ ಗೋವಾ ಚೀಚ್‌ನಲ್ಲಿ ಓಡಾಡುವಾಗ ಗಮನ ಸೆಳೆಯುವ ಹುಡುಗಿಯನ್ನ ಮಾತಿನ ಮೂಲಕವೇ ಮೋಡಿ ಮಾಡಿ ದೋಸ್ತಿ ಮಾಡುತ್ತಾನೆ. ಖುಷಿಯ ಕಥೆ ಕೇಳಿ ಬೆಂಗಾವಲಾಗುತ್ತಾನೆ. ತಂದೆ-ತಾಯಿಯನ್ನು ಕಳೆದುಕೊಂಡು, ಪ್ರೀತಿಸಿದವನಿಂದ ಮೋಸಕ್ಕೊಳಗಾದ "ನಿಮ್ಮ ಹೆಸ್ರು ಖುಷಿ ಅನ್ನೋ ಬದಲು, ನೋವು ಅಂತ ಇದ್ರೆ ಚೆನ್ನಾಗಿತ್ತು ಕಣ್ರಿ" ಎನ್ನುತ್ತಲೇ, "ನಿಮ್ಮ ಕೆನ್ನೆ ಮೇಲೆ ಬೀಳುವ ಗುಳಿಗೆ ನೂರು ಹುಡುಗ್ರು ಬೀಳ್ತಾರೆ ಬಿಡ್ರಿ" ಎಂದು ನಗಿಸುತ್ತಾನೆ.
     ಮೋಸ ಮಾಡಿದವನು ಮತ್ತೇ ಕಣ್ಣಿಗೆ ಬಿದ್ದಾಗ ಅವನ ಕಪಾಳಕ್ಕೆ ಎರಡೆಟು ಬಿಟ್ಟು ಬನ್ನಿ ಎಲ್ಲಾ ಮರೆತು ಹೋಗ್ತಿರಿ ಎಂದು ಉಪದೇಶ ಮಾಡ್ತಾನೆ. ಕಹಿ ನೆನಪುಗಳನ್ನು ಮರೆತ ಖುಷಿ, ಸಂತೋಷಕ್ಕಾಗಿ ಪ್ರೀತಂನೊಂದಿಗೆ ಗುಂಡು ಹಾಕುತ್ತಾಳೆ. ಅಷ್ಟೇ ಏಕೆ ಒಂದೇ ಕೋಣೆಯಲ್ಲಿ ರಾತ್ರಿಯನ್ನೂ ಕಳೆಯುತ್ತಾರೆ. ಆದರೆ ಪ್ರೀತಂ ಸುಳ್ಳುಗಾರ ನಿಜ. ಕೆಟ್ಟ ಹುಡುಗ ಅಲ್ಲ.
      ಗೋವಾ ಸಹವಾಸ ಸಾಕೆಂದು ಮರಳಿ ಗೂಡಿಗೆ ಬಂದಾಗ ಖುಷಿ ಅಲ್ಲೂ ಹಾಜರ್. ಯಾಕೆಂದರೆ ಪ್ರೀತಂ ತಾಳಿ ಕಟ್ಟಿಬೇಕಾದ ಹುಡುಗಿಯ ಗೆಳತಿ ಖುಷಿ. ಎಲ್ಲವೂ ತನ್ನಿಷ್ಟದಂತೆ ಆಗಬೇಕು ಎನ್ನುವ ಭಾವಿಪತ್ನಿಯ ದುರಂಹಕಾರ ಪ್ರೀತಂಗೆ ಇಷ್ಟವಿಲ್ಲದಿದ್ದರೂ ಹಣದ ಆಸೆಗೆ ಮದುವೆ ಒಪ್ಪಿಕೊಂಡಿರುತ್ತಾನೆ. ಖುಷಿ ಮತ್ತು ಆಕೆಯ ಕುಟುಂಬವನ್ನು ನೋಡಿ ಹಣವೇ ಎಲ್ಲ ಅಲ್ಲ ಎಂದು ತೀರ್ಮಾನಿಸಿ ಖುಷಿಯ ಕೈ ಹಿಡಿಯಲು ಬಂದಾಗ...
     ಮುಂದೇನಾಗುತ್ತೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು. ಹಾಗೆ ನೋಡಿದರೆ ದಿಲ್ ರಂಗೀಲಾ ಸಿನಿಮಾ ಇದೇ ಪ್ರೀತಂ ಗುಬ್ಬಿ ನಿರ್ದೇಶನದ ಮಳೆಯಲಿ, ಜೊತೆಯಲಿ ಸಿನಿಮಾವನ್ನು ಮತ್ತಷ್ಟೂ ತಿದ್ದಿ ತಿಡಿ, ಉಲ್ಟಾ-ಸೀದಾ ಮಾಡಿ ದಿಲ್ ರಂಗೀಲಾ ಮಾಡಿದಂತೆ ಭಾಸವಾಗುತ್ತದೆ. ಕಥೆಯಲ್ಲಿ ಹೇಳಿಕೊಳ್ಳುವಂಥ ಹೊಸತನ ಏನಿಲ್ಲ. ಉಡಾಫೆ ಮಾತುಗಳು, ಉಡಾಫೆ ಗೀತೆ!ಗಳೇ ಚಿತ್ರದ ಜೀವಾಳ. ಅವುಗಳಿಗೆ ಸಿನಿಮಾ ಗೆಲ್ಲಿಸುವ ತಾಕತ್ ಇದೆ ಎಂದು ಗುಬ್ಬಿ ಭಾವಿಸಿದಂತಿದೆ. ಅಫ್ ಕೋರ್ಸ ಅದೂ ನಿಜ. ಆದರೆ ಎಲ್ಲ ಟೈಂನಲ್ಲೂ ಅಲ್ಲ ಎಂಬುದು ಸತ್ಯ.
        ಆಭಿನಯದ ವಿಷಯಕ್ಕೆ ಬಂದ್ರೆ ಗೋಲ್ಡನ್ ಸ್ಟಾರ್ ಮತ್ತದೇ ಲವ್ಲಿ ಗೆಟಪ್ಪಿನಲ್ಲಿ ಇಷ್ಟವಾಗುತ್ತಾರೆ. ರಚಿತಾ ರಾಮ್ ಟಚ್ ಮಾಡುತ್ತಾರೆ. ಪ್ರಿಯಾಂಕಾ ರಾವ್ ಚುಚ್ಚುತ್ತಾರೆ. ಅಚ್ಯುತ್, ದತ್ತಾತ್ರೇಯ, ರಂಗಾಯಣ ರಘು, ಜಯಶ್ರೀ, ಭಾರ್ಗವಿ ನಾರಾಯಣ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
       ನಿರ್ದೇಶಕ ಪ್ರೀತಂ ಗುಬ್ಬಿ, ಮತ್ತೊಂದಿಷ್ಟು ಹೊಸತನದ ಕಥೆ ಹೊಸೆದಿದ್ದರೆ ಗಣೇಶ್ ಮೈಲೇಜ್ ಮತ್ತಷ್ಟೂ ಹೆಚ್ಚುತ್ತಿತ್ತೇನೋ? ಅರ್ಜುನ್ ಜನ್ಯ ಮ್ಯೂಸಿಕ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಮತ್ತಿತರರ ಲಿರಿಕ್ಕು, ನೋಡಿಗರಿಗೆ ಕಿಕ್ ಕೊಡುತ್ತೆ. ಗೋವಾ ಸೀನ್‌ಗಳು ಎಚ್.ಸಿ.ವೇಣು ಛಾಯಾಗ್ರಹಣದಲ್ಲಿ ಪ್ರೆಶ್ ಎನಿಸುತ್ತವೆ. ನಗೆಬುಗ್ಗೆಯ ಸಂಭಾಷಣೆ ಬರೆದ ಪ್ರಶಾಂತ್ ಭರವಸೆ ಮೂಡಿಸಿದ್ದಾರೆ.
      ಆದರೂ ದಿಲ್ ರಂಗೀಲಾ ಕಥೆ ಇನ್ನಷ್ಟೂ ಕಲರ್‌ಫುಲ್ ಆಗಿದ್ದರೆ ಚೆನ್ನಾಗಿತ್ತು ಎಂಬುದು ಪ್ರೇಕ್ಷಕ ಮಹಾಪ್ರಭುವಿನ ಅಭಿಪ್ರಾಯ.

-ಚಿತ್ರಪ್ರಿಯ ಸಂಭ್ರಮ್ 

ಫಲಿತಾಂಶ : ೧೦೦/೪೦

Advertisement

0 comments:

Post a Comment

 
Top