PLEASE LOGIN TO KANNADANET.COM FOR REGULAR NEWS-UPDATES

ಆಧಾರ: ಸುರೇಶ್ ಭಟ್, ಬಾಕ್ರಬೈಲ್ 

2002ರ ಗುಜರಾತ್ ನರಮೇಧ ಭಾರತೀಯ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಉಳಿಯಲಿರುವಂತಹ ಒಂದು ಮಹಾನ್ ದುರ್ಘಟನೆ. ಫೆಬ್ರವರಿ 28ರಂದು ಆರಂಭ ವಾದ ಆ ಗಲಭೆಗಳು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ರಾಜ್ಯದ ಸುಮಾರು 14 ಜಿಲ್ಲೆಗಳಲ್ಲಿ ನಡೆದ ಕೋಮುವಾದಿಗಳ ಆರ್ಭಟಕ್ಕೆ ಸುಮಾರು 2000 ಜನ ಬಲಿಯಾದರು; ಸುಮಾರು 1,68,000 ಜನ ನಿರಾಶ್ರಿತರಾದರು. ಅಂದಿನ ಕೆಲವು ಪ್ರಮುಖ ದುರಂತಗಳ ಪೈಕಿ ಅಹ್ಮದಾಬಾದಿನ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡವೂ ಒಂದು. ಅದರಲ್ಲಿ ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿದಂತೆ 69 ಮಂದಿ ಅತ್ಯಂತ ಬರ್ಬರವಾಗಿ ಕೊಲೆಗೀಡಾಗಿದ್ದರು.
ಗುಲ್ಬರ್ಗ್ ಹತ್ಯಾಕಾಂಡ ಕುರಿತು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ ಝಾಕಿಯಾ ಜಾಫ್ರಿ (ಎಹಸಾನ್ ಜಾಫ್ರಿಯವರ ಪತ್ನಿ) ನರೇಂದ್ರ ಮೋದಿಯನ್ನು ಮುಖ್ಯ ಆರೋಪಿಯಾಗಿ ಹೆಸರಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟು ವಿಶೇಷ ತನಿಖಾ ತಂಡವೊಂದನ್ನು (ಎಸ್‌ಐಟಿ) ನೇಮಿಸಿ ಮೋದಿ ವಿರುದ್ಧ ಕಾನೂನುಕ್ರಮ ಜರಗಿಸುವಷ್ಟು ಪುರಾವೆಗಳಿವೆಯೆ ಎಂದು ತಿಳಿಯುವಂತೆ ಆದೇಶಿಸಿತ್ತು. ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ಈ ಸಮಿತಿಯಲ್ಲಿದ್ದವರಲ್ಲಿ ಹಲವು ಮಂದಿ ಮೋದಿ ಕಿಂಕರರೆ ಆಗಿದ್ದರು.
ಯಾವಾಗ ಎಸ್‌ಐಟಿಯ ಅಂತಿಮ ವರದಿ ಮೋದಿ ವಿರುದ್ಧ ಪ್ರಕರಣ ದಾಖಲಿಸುವಷ್ಟು ಬಲವಾದ ಸಾಕ್ಷ್ಯಾಧಾರಗಳಿಲ್ಲವೆಂದು ಹೇಳಿತೊ ಆಗ ಕೋರ್ಟು ರಾಜು ರಾಮಚಂದ್ರನ್‌ರನ್ನು ಅಮೈಸೈ ಕ್ಯೂರಿ ಆಗಿ ನೇಮಿಸಿತು. ಖುದ್ದು ಗುಜರಾತ್‌ಗೆ ಹೋಗಿ ಸ್ವತಂತ್ರ ತನಿಖೆ ನಡೆಸಿ ನಿಷ್ಪಕ್ಷಪಾತ ಸಲಹೆ ನೀಡುವಂತೆ ಸೂಚಿಸಿತು. ಎಸ್‌ಐಟಿ ಸಂಗ್ರಹಿಸಿದ್ದ ಅದೇ ಪುರಾವೆಗಳನ್ನು ಮರುಪರಿಶೀಲಿಸಿದ ಬಳಿಕ ತದ್ವಿರುದ್ಧ ತೀರ್ಮಾನಕ್ಕೆ ಬಂದ ರಾಜು ರಾಮಚಂದ್ರನ್ ತನ್ನ ಅಂತಿಮ ವರದಿಯಲ್ಲಿ ಮೋದಿ ವಿರುದ್ಧ ಸೆಕ್ಷನ್ 153ಎ, 153ಬಿ, 166, 505ರ ಅನು ಸಾರ ಕಾನೂನು ಕ್ರಮ ಕೈಗೊಳ್ಳಬಹುದೆಂದು ತಿಳಿಸಿದ್ದರು.
ಅಂತೆಯೆ ಸುಪ್ರೀಂ ಕೋರ್ಟು ಭಾರತದ ನ್ಯಾಯಾಂಗ ಪ್ರಕ್ರಿಯೆಗನುಗುಣವಾಗಿ ಸಿಆರ್‌ಪಿಸಿ 173 (8)ರ ಅನ್ವಯ ಎಸ್‌ಐಟಿ ತನ್ನ ಅಂತಿಮ ವರದಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತು. ಎರಡೂ ಕಡೆಗಳ ವಾದಗಳನ್ನಾಲಿಸಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಗಣಾತ್ರ, ಗುಲ್ಬರ್ಗ್ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಸಂಗ್ರಹಿಸಿರುವ ಪುರಾವೆಗಳ ಆಧಾರದಲ್ಲಿ ಮೋದಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗುವುದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಝಾಕಿಯಾ ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲದೆ ಅದನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟು ಅವರ ಅರ್ಜಿಯನ್ನು ಇದೇ ಎಪ್ರಿಲ್ 11ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. ನಿಜಸ್ಥಿತಿ ಹೀಗಿದ್ದರೂ ಮೋದಿಭಕ್ತರು ಮತ್ತು ಮಾಧ್ಯಮದ ಒಂದು ವರ್ಗ ನ್ಯಾಯಾಲಯ ಮೋದಿಗೆ ‘ಕ್ಲೀನ್ ಚಿಟ್’ ನೀಡಿದೆಯೆಂದು ಗಂಟಲು ಬಿರಿಯುವಷ್ಟು ದೊಡ್ಡದಾಗಿ ಕಿರಿಚುತ್ತಿದ್ದಾರೆ.
ಇವರಲ್ಲಿ ನಾವೆಲ್ಲರೂ ಕೇಳಬೇಕಾಗಿರುವ ಪ್ರಶ್ನೆಗಳೇನೆಂದರೆ ‘ಕ್ಲೀನ್ ಚಿಟ್’ ಅಂದರೇನು? ಕಾನೂನಿನಲ್ಲಿ ಅಂತಹದೊಂದು ಶಬ್ದ ಇದೆಯೇ? ಜನಬಳಕೆಯ ಪರಿಭಾಷೆಯಲ್ಲಿ ‘ಕ್ಲೀನ್ ಚಿಟ್ ಸಿಕ್ಕಿದೆ’ ಅಂದರೆ ಸಾಮಾನ್ಯವಾಗಿ ನಿರ್ದೋಷಿಯೆಂದು ಘೋಷಿಸಲಾಗಿದೆ ಯಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ ಎಂದರ್ಥ. ಆದರೆ ಎಸ್‌ಐಟಿ ವರದಿ ಮೋದಿಯನ್ನು ನಿರ್ದೋಷಿಯೆಂದು ಘೋಷಿಸುವುದಿಲ್ಲ; ಅದು ಹೇಳುವುದಿಷ್ಟೇ: ಅದರ ಅಭಿಪ್ರಾಯದಲ್ಲಿ, ಅದಕ್ಕೆ ದೊರೆತಿರುವ ಪುರಾವೆಗಳನ್ನು ಆಧರಿಸಿ ಮೋದಿ ವಿರುದ್ಧ ಕ್ರಿಮಿನಲ್ ಕೇಸು ಹೂಡಲಾಗುವುದಿಲ್ಲ.
ಎಸ್‌ಐಟಿಯ ಈ ಅಭಿಪ್ರಾಯವನ್ನು ಸುಪ್ರೀಂ ಕೋರ್ಟು ಒಪ್ಪಿಲ್ಲ. ಸ್ಥಳೀಯ ನ್ಯಾಯಾಲಯ ಈ ಅಭಿಪ್ರಾಯವನ್ನು ಒಪ್ಪಿದೆ ಅಷ್ಟೆ. ಖಂಡಿತಾ ಇದರರ್ಥ ಮೋದಿ ಭಕ್ತರು ಹೇಳುವಂತೆ ಮೋದಿ ತನ್ನ ಮೇಲಿನ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂದಲ್ಲ. ಮೋದಿ ವಿರುದ್ಧ ಹೊಸ ತನಿಖೆ ಕೂಡ ನಡೆಸಬಹುದಾಗಿದೆ. ಇಲ್ಲಿ ನಾವು ಅಮೈಸೈ ಕ್ಯೂರಿ ರಾಜು ರಾಮಚಂದ್ರನ್‌ರ ವರದಿ ಏನು ಹೇಳುತ್ತದೆಂಬುದನ್ನು ಮರೆಯಬಾರದು.
ಈ ಸಂದರ್ಭದಲ್ಲಿ ಮೆಹಿಬೂಬ್ ಸಾಹಿಬ್ ವರ್ಸಸ್ ಕರ್ನಾಟಕ ಉಪಲೋಕಾ ಯುಕ್ತ ಪ್ರಕರಣದಲ್ಲಿ (ಐಔ್ಕ 2002 ಓಅ್ಕ ಜಛಿ 2535 ಠಿಛಿ 18ಠಿ ಅಟ್ಟಜ್ಝಿ 2002) ಕರ್ನಾಟಕ ಹೈಕೋರ್ಟು ನೀಡಿರುವ ತೀರ್ಪು ತುಂಬಾ ಪ್ರಸ್ತುತವಿದೆ. 20) ......ಆರೋಪಿಯನ್ನು ವಿಚಾರಣೆ ಗೊಳಪಡಿಸಲು ಸಾಧ್ಯವಿದೆಯೆಂದು ತನಿಖಾಧಿಕಾರಿ ಅಭಿಪ್ರಾಯಪಟ್ಟಲ್ಲಿ ಆರೋಪಪಟ್ಟಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತದೆ. ತನಿಖಾಧಿಕಾರಿಯು ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದರೆ ‘ಬಿ’ ವರದಿ ಸಲ್ಲಿಸಲಾಗುತ್ತದೆ. ಕ್ರಿಮಿನಲ್ ಕೋರ್ಟು ‘ಬಿ’ ವರದಿಯನ್ನು ಅಂಗೀಕರಿಸಿ ದಾಗ ವಿಷಯ ಅಲ್ಲಿಗೆ ಕೊನೆಗೊಳ್ಳುತ್ತದೆ/ಕಾನೂನುಕ್ರಮ ಜರಗುತ್ತದೆ.
ಆದುದರಿಂದ ‘ಬಿ’ ವರದಿ ಸಲ್ಲಿಸುವ ತನಿಖಾಧಿಕಾರಿಯು ಆರೋಪಿ ವಿರುದ್ಧ ಕ್ರಿಮಿನಲ್ ದಾವೆ ಹೂಡುವಷ್ಟು ಪುರಾವೆಗಳಿಲ್ಲ ಎಂಬ ತನ್ನ ಅಭಿಪ್ರಾಯವನ್ನಷ್ಟೆ ಕೋರ್ಟಿಗೆ ತಿಳಿಸುತ್ತಾನೆ. ಕೋರ್ಟು ‘ಬಿ’ ವರದಿಯನ್ನು ಅಂಗೀಕರಿಸಿ ಕಾನೂನುಕ್ರಮ ಜರಗಿಸಲು ಆದೇಶಿಸುವ ಸಂದರ್ಭದಲ್ಲಿ ಯಾವುದೇ ಆರೋಪಗಳ ಕುರಿತು ತನಿಖೆ ನಡೆಸುವ ಕ್ರಮವಾಗಲಿ, ಆರೋಪಿ ನಿರ್ದೋಷಿಯೆಂದು ದಾಖಲಿಸುವ ಕ್ರಮವಾಗಲಿ ಇಲ್ಲ. ವಾಸ್ತವವಾಗಿ ಆರೋಪವೆ ಇಲ್ಲದಾಗ ಆರೋಪಮುಕ್ತಗೊಳಿಸುವ ಪ್ರಶ್ನೆಯೆ ಉದ್ಭವಿಸುವುದಿಲ್ಲ.....ಗುಲ್ಬರ್ಗ್ ಪ್ರಕರಣವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬೇಕು.
ಮ್ಯಾಜಿಸ್ಟ್ರೇಟ್ ಗಣಾತ್ರ ಎಸ್‌ಐಟಿ (ಇಲ್ಲಿ ತನಿಖಾಧಿಕಾರಿ) ವರದಿಯನ್ನು ಅಂಗೀಕರಿಸಿದರೆಂದ ಮಾತ್ರಕ್ಕೆ (1) ನರೇಂದ್ರ ಮೋದಿ ನಿರಪರಾಧಿ ಎಂದಾಗುವುದಿಲ್ಲ (2) ಆತನ ಮೇಲಿರುವ ಆರೋಪಗಳೆಲ್ಲವೂ ಬಿದ್ದುಹೋಗಿವೆ ಎಂದಾಗುವುದಿಲ್ಲ. ಮುಂದೆ ನ್ಯಾಯಾಲಯದಲ್ಲಿ ವಿಧ್ಯುಕ್ತ ವಿಚಾರಣೆ ನಡೆದು, ಎಲ್ಲಾ ಪುರಾವೆಗಳನ್ನು ಪರಿಗಣಿಸಿದ ಬಳಿಕವೆ ಆರೋಪಿ ನಿರಪರಾಧಿ ಅಥವಾ ಅಪರಾಧಿ ಎಂದು ಘೋಷಿಸಲಾಗುತ್ತದೆ. ಯಾವ ಹೇಳಿಕೆಗಳ ಆಧಾರದಲ್ಲಿ ತನಿಖಾಧಿಕಾರಿ ತನ್ನ ಅಭಿಪ್ರಾಯಕ್ಕೆ ಬರುತ್ತಾನೋ ಅಂಥಾ ಹೇಳಿಕೆಗಳು ಕಾನೂನಿನ ದೃಷ್ಟಿಯಲ್ಲಿ ಪುರಾವೆ ಆಗುವುದಿಲ್ಲ.
ಆದುದರಿಂದಲೆ ಸ್ಥಳೀಯ ನ್ಯಾಯಾಲಯ ಎಸ್‌ಐಟಿ ವರದಿಯನ್ನು ಒಪ್ಪಿರುವುದರ ಅರ್ಥ ಮೋದಿ ನಿರಪರಾಧಿ ಎಂದು ಅಲ್ಲವೆ ಅಲ್ಲ. ಇಲ್ಲಿ ಗಮನಿಸಬೇಕಿರುವ ಅಂಶವೆಂದರೆ ಕಾನೂನು ಪ್ರಕ್ರಿಯೆಯನ್ವಯ ಸ್ಥಳೀಯ ನ್ಯಾಯಾಲಯದ ಆದೇಶವನ್ನೀಗ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಮೋದಿ ವಿರುದ್ಧ ಇನ್ನೊಂದು ಪ್ರಕರಣವೂ ಇದೆ. ಅದೇ ನರೋದಾ ಪಾಟಿಯಾ ಪ್ರಕರಣ. ಈ ಪ್ರಕರಣದಲ್ಲಿ ಈಗಾಗಲೇ ಮಾಯಾ ಕೊಡ್ನಾನಿ, ಬಾಬು ಬಜರಂಗಿ ಮತ್ತಿತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ ಎಂಬುದನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು.
ನರೋದಾ ಪಾಟಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಮತ್ತಿತರ ನಾಲ್ವರ ವಿರುದ್ಧ 5 ವರ್ಷಗಳ ಹಿಂದೆಯೆ ಎಸ್‌ಐಟಿಗೆ ಅರ್ಜಿ ಸಲ್ಲಿಸಲಾಗಿದ್ದು ಎಸ್‌ಐಟಿಯ ವರದಿ ಇನ್ನು ಬರಬೇಕಷ್ಟೆ. ಆದುದರಿಂದಲೆ ಈ ‘ಕ್ಲೀನ್ ಚಿಟ್’ ಘೋಷಣೆ ಎನ್ನುವುದು ದೊಡ್ಡದೊಂದು ದಗಲ್ಬಾಜಿಯಾಗಿದ್ದು ಅದರ ಹಿಂದೆ ಅಮಾಯಕ ಜನರ ದಿಕ್ಕು ತಪ್ಪಿಸುವ ಉದ್ದೇಶ ಅಡಗಿದೆ ಎಂಬುದನ್ನು ಈಗಲಾದರೂ ಗುರುತಿಸಬೇಕಾಗಿದೆ. ***

courtesy : varthabharati  
www.truthofgujarat.com )
Photo courtesy : Internet

Advertisement

0 comments:

Post a Comment

 
Top