ಜಿಲ್ಲೆಯ ಗಡಿಭಾಗದಿಂದ ನೆರೆಹೊರೆಯ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಸಂಸದ ಶಿವರಾಮಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಿಎಂಜಿಎಸ್‌ವೈ ಯೋಜನೆಯಡಿ ರಸ್ತೆ ಸಂಪರ್ಕ ರಹಿತ ಗ್ರಾಮಗಳನ್ನು ಗುರುತಿಸಿ ರಸ್ತೆ ಅಭಿವೃದ್ಧಿಪಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿರುವುದು ಸರಿಯಷ್ಟೆ. ಆದರೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಭಾಗದ ರಸ್ತೆಗಳು, ಉಭಯ ಜಿಲ್ಲೆಗಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದನ್ನು ಗಮನಿಸಲಾಗಿದೆ. ಇಂತಹ ರಸ್ತೆಗಳ ಅಭಿವೃದ್ಧಿಗೆ ಉಭಯ ಜಿಲ್ಲೆಗಳ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ, ಅಂತಹ ರಸ್ತೆಗಳೂ ವರ್ಷಾನುಗಟ್ಟಲೆ ಕೆಟ್ಟ ಸ್ಥಿತಿಯಲ್ಲಿಯೇ ಉಳಿಯುವುದರಿಂದ, ಆ ಭಾಗದಲ್ಲಿ ವಾಹನಗಳ ಸಂಚಾರ ದುಸ್ತರವಾಗಿದೆ. ಅಧಿಕಾರಿಗಳು ಇಂತಹ ಗಡಿಭಾಗದ ಹಾಗೂ ಆಯಾ ಜಿಲ್ಲೆಯ ವ್ಯಾಪ್ತಿಯೊಳಗಿನ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಗುರುತಿಸಿ, ಅಂತಹ ರಸ್ತೆಗಳ ಅಭಿವೃದ್ಧಿಗೆ ಸೂಕ್ತ ಕ್ರಿಯಾ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಶಿವರಾಮಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಎಜಿಗೆ ವರದಿ ಸಲ್ಲಿಕೆ : ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರು ಸಮಸ್ಯೆಯನ್ನು ಪರಿಹರಿಸಿ, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬಹುದಾದ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆ ಬಹಳ ಅತ್ಯುತ್ತಮ ಯೋಜನೆಯಾಗಿದೆ. ಇಂತಹ ಒಟ್ಟು ೧೫ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಪೈಕಿ ಗಂಗಾವತಿ ತಾಲೂಕಿನಲ್ಲಿ ೧೧, ಕೊಪ್ಪಳ-೨ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ, ಒಂದು ಅತ್ಯುತ್ತಮ ಯೋಜನೆ ವಿಫಲವಾಗಿದ್ದು, ಹಲವು ಯೋಜನೆಗಳ ಡಿಸೈನ್ ತಯಾರಿಕೆಯಲ್ಲಿಯೇ ಲೋಪವಿದ್ದು, ಕೆಲವು ಯೋಜನೆಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಗ್ರಾಮಗಳಿಗೆ ನೀರು ತಲುಪದೇ ಇದ್ದರೆ, ಇನ್ನು ಕೆಲವು ಯೋಜನೆಯಲ್ಲಿ ನೀರಿನ ಸಂಗ್ರಹಗಾರ ನಿರ್ಮಾಣ ಮಾಡದೆ, ಉಳಿದ ಕಾಮಗಾರಿಗಳನ್ನು ಪೂರೈಸಿ, ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದೆ. ಸಮರ್ಪಕ ಕಾಮಗಾರಿ ಕೈಗೊಳ್ಳದ ಗುತ್ತಿಗೆದಾರರ ವಿರುದ್ಧವಾಗಲಿ ಅಥವಾ ಅಧಿಕಾರಿಗಳ ವಿರುದ್ಧವಾಗಲಿ ಯಾವುದೇ ಕ್ರಮ ಆಗಿಲ್ಲ. ಈ ರೀತಿ ಒಂದು ಅತ್ಯುತ್ತಮ ಯೋಜನೆ ವೈಫಲ್ಯ ಕಂಡಿದ್ದು, ಈ ಎಲ್ಲ ಯೋಜನೆಗಳ ಬಗ್ಗೆ ಸಮಗ್ರ ವರದಿಯನ್ನು ಈಗಾಗಲೆ ಸಿಎಜಿ ಅವರಿಗೆ ಸಲ್ಲಿಸಲಾಗಿದೆ. ಇನ್ನಾದರೂ ಈ ಯೋಜನೆಗಳು ಸಫಲವಾಗಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರಿಗೆ ಸೂಚನೆ ನೀಡಿದರು.
ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆ : ಬೇಸಿಗೆ ಕಾಲ ಸಮೀಪದಲ್ಲಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಅಂತಹ ಗ್ರಾಮಗಳಿಗೆ ಸಮರ್ಪಕ ನೀರು ಪೂರೈಕೆಗೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಈಗಲೆ ಕ್ರಿಯಾ ಯೋಜನೆ ರೂಪಿಸಿ, ಅಂತಹ ಗ್ರಾಮಗಳಿಗೆ ಸಮರ್ಪಕ ನೀರು ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು. ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಕಂಡುಬಂದಲ್ಲಿ, ಹೊಸ ಕೊಳವೆಬಾವಿ ಕೊರೆಯಿಸುವ ಬದಲಿಗೆ ಅಂತಹ ಕೊಳವೆಬಾವಿಗೆ ಹೈಡ್ರಾಫ್ಯಾಕ್ಚರ್ ನಂತಹ ಕ್ರಮ ಕೈಗೊಳ್ಳುವುದು ಸೂಕ್ತ. ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಸೂಚನೆ ನೀಡಿದರು.
ಗಂಗಾವತಿ ನಗರಸಾರಿಗೆ ವಿಳಂಬಕ್ಕೆ ಅಸಮಾಧಾನ : ಕೊಪ್ಪಳದಲ್ಲಿ ಈಗಾಗಲೆ ನಗರ ಸಾರಿಗೆ ಪ್ರಾರಂಭಗೊಂಡು ಯಶಸ್ವಿಯಾಗಿದೆ. ಆದರೆ ಗಂಗಾವತಿ ನಗರದಲ್ಲಿ ನಗರಸಾರಿಗೆ ಪ್ರಾರಂಭವಾಗಲು ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಗಂಗಾವತಿಯಲ್ಲಿ ಶೀಘ್ರ ನಗರ ಸಾರಿಗೆ ಪ್ರಾರಂಭಿಸುವಂತೆ ಈ.ಕ.ರ.ಸಾ.ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಸಂಚಾರ ನಿಯಂತ್ರಕ ಪಿ.ಎಸ್. ವಸ್ತ್ರದ್ ಅವರು, ಇನ್ನೂ ೨೦ ಹೊಸ ಬಸ್‌ಗಳು ಆಗಮಿಸಬೇಕಾಗಿದ್ದು, ವಾಹನ ಕವಚ ತಯಾರಿಕೆ ವಿಳಂಬದ್ದರಿಂದ, ಗಂಗಾವತಿ ನಗರದಲ್ಲಿ ನಗರಸಾರಿಗೆ ಪ್ರಾರಂಭಿಸಲು ತೊಂದರೆ ಆಗಿದೆ. ಈ ೨೦ ಬಸ್‌ಗಳ ಪೈಕಿ ಗಂಗಾವತಿ ನಗರಕ್ಕೆ ೧೦ ಹಾಗೂ ಉಳಿದ ೧೦ ಬಸ್‌ಗಳನ್ನು ಕೊಪ್ಪಳ ನಗರ ಸಾರಿಗೆಗೆ ಬಳಸಲಾಗುವುದು. ಇನ್ನೊಂದು ತಿಂಗಳಲ್ಲಿ ಗಂಗಾವತಿ ನಗರ ಸಾರಿಗೆ ಪ್ರಾರಂಭಿಸಲಾಗುವುದು ಎಂದರು.
ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ತೋಟಗಾರಿಕೆ ಯೋಜನೆಗಳ ಅನುಷ್ಠಾನದ ಬಗ್ಗೆ ಸಮರ್ಪಕ ವಿವರಣೆ ನೀಡಲು ವಿಫಲರಾಗಿದ್ದಕ್ಕೆ ತೋಟಗಾರಿಕೆ ಉಪನಿರ್ದೇಶಕರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಬಿಡುಗಡೆ ಬಗ್ಗೆ ಸಭೆಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸಂಸದ ಶಿವರಾಮಗೌಡ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಭೆಯಲ್ಲಿ ಜರುಗಿತು.
ಕೊಪ್ಪಳ ಲೋಕಸಭಾ ಸದಸ್ಯರಾಗಿ ೨೦೦೯ ರಲ್ಲಿ ಆಯ್ಕೆಗೊಂಡು, ನಂತರ ಈವರೆಗೆ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಕೈಗೊಂಡ ಶಿವರಾಮಗೌಡ ಅವರ ಬಗ್ಗೆ ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್ ಅವರು ಸಭೆಗೆ ಸಂಕ್ಷಿಪ್ತ ವಿವರಣೆ ನೀಡಿದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಸಂಸದ ಶಿವರಾಮಗೌಡ ಹಾಗೂ ಜಿಲ್ಲಾ ಮತ್ತು ಜಾಗೃತ ಸಮಿತಿಯ ಸದಸ್ಯರುಗಳಾದ ಶಂಕ್ರಮ್ಮ, ದೇವಾನಂದ್ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲೆಯಲ್ಲಿ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸಹಕರಿಸಿದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಂಸದರು ಈ ಸಂದರ್ಭಧಲ್ಲಿ ಧನ್ಯವಾದ ಸಲ್ಲಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ. ಅಧ್ಯಕ್ಷರು ಭಾಗವಹಿಸಿದ್ದರು.

0 comments:
Post a Comment