PLEASE LOGIN TO KANNADANET.COM FOR REGULAR NEWS-UPDATES

ಫೆ. ೮ ಕಲ್ಯಾಣ ಕರ್ನಾಟಕ ಸಮ್ಮೇಳನ ಯಶಸ್ವಿಗೆ ಮನವಿ


ಕೊಪ್ಪಳ, ಫೆ. ೪. ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಡಾ|| ಕುಂ. ವೀರಭದ್ರಪ್ಪನವರ ಸಮ್ಮೇಳನಾಧ್ಯಕ್ಷತೆಯಲ್ಲಿ ಫೆಬ್ರವರಿ ೮ ರಂದು ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸಚಿವ ಶಿವರಾಜ ತಂಗಡಗಿ ಕರೆ ನೀಡಿದರು. ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಅಂಬಣ್ಣ ನಾಯಕ ಅನೇಕರು ಇದ್ದರು.
ಅವರಿಂದು ತಮ್ಮ ನಿವಾಸದಲ್ಲಿ ಸಮ್ಮೇಳನ ಸಂಘಟಕರೊಂದಿಗೆ ಸಮಾಲೋಚನೆ ನಡೆಸಿ, ಆಮಂತ್ರಣ ಪತ್ರಿಕೆಗಳನ್ನು ಬೆಡುಗಡೆಗೊಳಿಸಿದರು. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳನ್ನು ಒಳಗೊಂಡ ಸಮ್ಮೇಳನ ಅರ್ಥಪೂರ್ಣವಾಗಿದೆ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೊಸತನ ಮಾಡಿದ್ದಾರೆ, ಇದು ನಿರಂತರವಾಗಿ ನಡೆಯಲಿ ಎಂದವರು ಹೇಳಿದರು.
ಸಮ್ಮೇಳನದಲ್ಲಿ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು, ಕನಕ ಗುರುಪೀಠದ ಶ್ರೀ ಸಿದ್ದರಮಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಕೊಪ್ಪಳ ಶ್ರೀ ಗವಿಮಠದ ಜಗದ್ಗುರು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹುತಾತ್ಮ ಯೋಧ ದಿ. ಶ್ರೀ ಮಲ್ಲಿಕಾರ್ಜುನ ಬಂಡೆ (ಮರಣೋತ್ತರ) ಯವರಿಗೆ ಗಂಡುಗಲಿ ಕುಮಾರರಾಮ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರದಾನ ಮಾಡುವರು. ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು. ಗಂಗಾವತಿ ಶಾಸಕ, ಮಾಜಿ ಸಚಿವ ಇಕ್ಬಾಲ ಅನ್ಸಾರಿ ಕಲ್ಯಾಣ ಕರ್ನಾಟಕ ಬಸವ ಪ್ರಶಸ್ತಿಗಳನ್ನು ಪ್ರದಾನ ಮಾಡುವರು, ಖ್ಯಾತ ನಟಿ, ವೃತ್ತಿ ರಂಗಭೂಮಿ ಕಲಾವಿದೆ ಮಾಲತಿ ಸುಧೀರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು ಎಂದು ಗೊಂಡಬಾಳ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿ. ಪಂ. ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಮೈಸೂರ ಸಂಗೀತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ|| ಹನುಮಣ್ಣ ನಾಯಕ ದೊರೆ, ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ, ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ|| ಅರ್ಜುನ ಗೊಳಸಂಗಿ, ನಗರಸಭೆ ಅಧ್ಯಕ್ಷೆ ಲತಾ ಸಂಡೂರ, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ, ವಾರ್ತಾಧಿಕಾರಿ ಬಿ. ವಿ. ತುಕಾರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ಕೊಟ್ರಪ್ಪ, ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ, ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷ ಸಿರಿಗೆರೆ ಯರ್ರಿಸ್ವಾಮಿ ಆಗಮಿಸುವರು.
ಈ ಸಮ್ಮೇಳನದಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಪರ ಹೋರಾಟಗಾರರು, ಶಿಕ್ಷಕರು, ಯುವಜನರು, ಮಹಿಳಾ ಸಂಘಟನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಕೋರಿದ್ದಾರೆ.

Advertisement

0 comments:

Post a Comment

 
Top