PLEASE LOGIN TO KANNADANET.COM FOR REGULAR NEWS-UPDATES

 

  ‘ಕ್ರೇಜಿಸ್ಟಾರ್’ - ಇದು ರವಿಚಂದ್ರನ್ ಅಭಿನಯದ ಸಿನಿಮಾ ಅಲ್ಲ : ಇದು ಅವರದೇ ಜೀವನದ ಕಥೆಯೇನೋ ಎನ್ನುವಷ್ಟರಮಟ್ಟಿಗೆ ಫೀಲ್ ತುಂಬಿರೋ ಚಿತ್ರ, ಕಲಾಕೃತಿ, ಬಣ್ಣದ ಲೋಕ ಇತ್ಯಾದಿ ಇತ್ಯಾದಿ...
    ಹುಡುಗಿ ಹಿಂದೆ ಸುತ್ತೋ ರವಿ, ಹೊಕ್ಕಳದಲ್ಲಿ ದ್ರಾಕ್ಷಿ ಸುರಿಯೋ ರವಿ, ಸೇಬು ಹಣ್ಣನ್ನು ನಾಲ್ಕು ತುಟಿಗಳ ಮಧ್ಯೆ ಇಟ್ಟು ತುಂಟತನ ಮೆರೆಯೋ ರವಿ ಇಲ್ಲಿಲ್ಲ. ಆದರೆ ಎಲ್ಲೆಲ್ಲೂ ಕೈಯಾಡಿಸುವ ರವಿ ಇಲ್ಲಿದ್ದಾನೆ. ನಾಯಕನಾಗಿ, ಸಂಗೀತ ನಿರ್ದೇಶಕನಾಗಿ, ಸಂಭಾಷಣಾಕಾರನಾಗಿ, ಚಿತ್ರಸಾಹಿತಿಯಾಗಿ, ಸಂಕಲನಕಾರನಾಗಿ, ನಿರ್ಮಾಪಕನಾಗಿ ಹೀಗೇ ಚಿತ್ರದ ಎಲ್ಲ ವಿಭಾಗಗಳಲ್ಲೂ ಕೈಯಾಡಿಸಿದ್ದಾನೆ. ಚಿತ್ರದಲ್ಲಿ ಕೈಯಾಡಿಸುವ ಕ್ರೇಜಿಸ್ಟಾರ್ ಆಗಿಯೇ ಕಾಣಿಸಿಕೊಂಡರೂ ವೇದಾಂತಿಯಾಗಿದ್ದಾನೆ. ತನ್ನ ೭ ವರ್ಷದ ಕನಸು ‘ಮಂಜಿನಹನಿ’ಯನ್ನು ಇಲ್ಲೂ ಕನವರಿಸಿದ್ದಾನೆ. ಮಂಜಿನಹನಿಯನ್ನೇ ನೋಡುತ್ತಿದ್ದೇವೇನೋ ಎನ್ನುವಷ್ಟು ಆಪ್ತತೆ ಬೆಳೆಸಿದ್ದಾನೆ. 
    ತನ್ನನ್ನು ತಾನೇ ವಿಮರ್ಶೆ ಮಾಡಿಕೊಂಡು ಪದಗಳನ್ನ ಜೋಡಿಸಿದ್ದಾನೆ. ಏಕಾಂಗಿಯ ಸೋಲಿನ ಬಗ್ಗೆ ಮತ್ತೇ ಕೊರಗಿದ್ದಾನೆ. ಆದರೆ ಅದಕ್ಕೆ ಪ್ರೇಕ್ಷಕರನ್ನು ಹೊಣೆಗಾರರನ್ನಾಗಿ ಮಾಡಿಲ್ಲ. ಮಂಜಿನ ಹನಿಯ ಸ್ಕ್ರಿಪ್ಟ್‌ನ್ನು ೧೦೦ ಕೋಟಿ ರು.ಗೆ ಹೋಲಿಸಿರುವ ರವಿಗೆ ದಿನ ಬೆಳಗಾದರೆ ಸಾಕು ಸಿನಿಮಾನೇ ಜೀವನ. ಸಿನಿಮಾನೇ ಸರ್ವಸ್ವ. ಮಡದಿಗೆ ಪ್ರೀತಿಯೇ ನಾಚುವಂಥ ಪ್ರೇಮಲೋಕ ಕಟ್ಟಿರುವ ಗಂಡನಾಗಿ, ಮಗಳ ಮೇಲೆ ಅಗಾದ ಪ್ರೀತಿ ಇದ್ದರೂ ಕೊಡಲಾಗದ ಸ್ಥಿತಿಯ ಅಪ್ಪನಾಗಿ ರವಿಚಂದ್ರನ್, ಇವೆಲ್ಲವನ್ನೂ ಇಷ್ಟು ದಿನ ಎಲ್ಲಿ ಅಡಗಿಸಿಟ್ಟುಕೊಂಡಿದ್ದರೂ ಎನಿಸುವಂತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. 
     ಚಿತ್ರ ಆರಂಭವಾಗುವ ಮುನ್ನ, ‘ನಿಮ್ಮ ಮೊಬೈಲ್‌ನ್ನು ಸ್ವೀಚ್ ಆಫ್ ಮಾಡಿ’ ಎಂದು ಹೇಳುವುದರ ಜೊತೆಗೆ ’ಮನಸನ್ನು ಸ್ವೀಚ್ ಆನ್ ಮಾಡಿ’ ಎಂತಲೂ ಹೇಳುತ್ತಾರೆ. ನಿಜಕ್ಕೂ ಇದು ಮನಸಿನ ವಿಷಯ. ಬದುಕಿನ ವಿಷಯ, ಭಾವನೆಗಳ ವಿಷಯ. ತಂದೆ-ಮಗಳ ಬಾಂಧವ್ಯ ಬೆಸೆಯುವ ವಿಷಯ, ಮಗಳನ್ನು ಕಳೆದುಕೊಳ್ಳುವಂಥ ತಾಯಿಯ ಆತಂಕದ ವಿಷಯ, ಯಾರಿಗೇನೇ ತೊಂದರೆಯಾದರೂ ಕೇವಕ ೧೦ ನಿಮಿಷದಲ್ಲಿ ಪರಿಹಾರ ಕೊಡುವ ಯುವ ಹುಡುಗನ ಸಾಹಸದ ವಿಷಯ, ಗೆಳೆಯನೊಂದಿಗೇನೇ ಹೆಂಡತಿಯೊಬ್ಬಳ ಸಂಬಂಧ ಇರುವ ವಿಷಯ, ವೈಶ್ಯೆಯೊಬ್ಬಳು ಕಥೆಯಾಗುವ ವಿಷಯ, ತನ್ನ ಮಾತುಗಳಿಂದ ಸಮಾಜದ ಸುಧಾರಣೆಗೆ ಅಳಿಲು ಸೇವೆ ಸಲ್ಲಿಸಬೇಕೆಂದು ಚಾನೆಲ್‌ವೊಂದರಲ್ಲಿ ಕೆಲಸ ಪಡೆದ ಯುವಕ, ಕೆಲಸಕ್ಕೆ ಸೇರಬೇಕಾದ ಮೊದಲ ದಿನವೇ ಅಸು ನೀಗುವ ವಿಷಯ. ಸಾಯುವವನ ಹೃದಯ ೧೩ ವರ್ಷದ ಹುಡುಗಿ ಎದೆ ಸೇರಿ ಜೀವಂತವಾಗಿ ಉಳಿದ ವಿಷಯ...
     ...ಇಂಥ ಹತ್ತಾರು ವಿಷಯಗಳ ಸಂಗ್ರಹದ ರೂಪ ‘ಕ್ರೇಜಿಸ್ಟಾರ್.’
      ಸಿನಿಮಾ ಫನ್ನಿಯಾಗಿ ಆರಂಭಗೊಂಡರೂ ಸಿರಿಯಸ್ ಕ್ಲೈಮ್ಯಾಕ್ಸ್ ಇದೆ. ಅದು ನೋಡುಗನನ್ನೂ ಸೀಟಿನ ತುದಿಗೆ ಕೂಡುವಂಥ ಮ್ಯಾಜಿಕಲ್ ಗುಣ ಹೊಂದಿದೆ. ತನ್ನ ಹಾಗೂ ಇತರ ಮೂರು ಹುಡುಗರ ಕಥೆಯನ್ನು ಸಮಾನಾಂತರವಾಗಿ ಹೇಳುತ್ತಾ ಹೋಗಿರುವ ರವಿಚಂದ್ರನ್, ಕೊನೆಕೊನೆಗೆ ಎಲ್ಲವನ್ನೂ ಸಿಂಕ್ ಮಾಡಿ ಮೂರು ರಾಜ್ಯ ಹೆದ್ದಾರಿಗಳು ಒಂದೆಡೆ ಸೇರಿದಾಗ ಉಂಟಾಗುವ ರಾಷ್ಟ್ರೀಯ ಹೆದ್ದಾರಿಯಾಗಿದ್ದಾರೆ.
      ಕ್ರೇಜಿಸ್ಟಾರ್‌ಗೆ ಸಮಾಜದಲ್ಲಿ ಎಷ್ಟೇ ದೊಡ್ಡ ಹೆಸರಿದ್ದರೂ ಅದು ಮಗಳಿಗೆ ಅಪ್ರಿಯ. ಅವಳಿಗೆ ತಂದೆ ಕೊಡುವ ಪ್ರೀತಿಯ ಮುಂದೆ ಸ್ಟಾರ್‌ಡಂ ತೃಣ. ತಂದೆಯ ಪ್ರೀತಿಗೆ ಹಾತೊರೆಯುವ ಮಗಳಿಗೆ ಸ್ಕೂಲ್ ಫಂಕ್ಷನ್‌ನಲ್ಲಿ ಇತರ ಪಾಲಕರಂತೆ ತನ್ನ ಅಪ್ಪನೂ ಬರಬೇಕು, ನನ್ನಲ್ಲಿರುವ ಪ್ರತಿಭೆಯನ್ನು ಇಷ್ಟಪಡಬೇಕು ಎನ್ನುವ ಒತ್ತಾಸೆ. ಮಂಜಿನ ಹನಿಯಲ್ಲೇ ೭ ವರ್ಷಗಳಿಂದ ಮುಳುಗಿರುವ ಆ ತಂದೆಗೆ ಮಡದಿ, ಮಗಳಿಗಿಂತಲೂ ಮಂಜಿನ ಹನಿಯ ಮೇಲೆ ಜಾಸ್ತಿ ವ್ಯಾಮೋಹ. ಏಕಾಂಗಿಯಾಗಿದ್ದುಕೊಂಡು ಏಕಾಂಗಿಯೊಬ್ಬನ ಸಿನಿಮಾ ಮಾಡಿ ಚಿತ್ರಮಂದಿರಲ್ಲೂ ಒಂಟಿಯಾಗಿದ್ದೆ. ಅದಕ್ಕೆ ಈ ಸಲ ಜನರ ಮಧ್ಯೆಯೇ ಇದ್ದುಕೊಂಡು ಜನರ ಸಿನಿಮಾ ಮಾಡ್ತಿನಿ ಎಂದುಕೊಂಡು ರಸ್ತೆಯಲ್ಲೋ, ಗುಡಿಯಲ್ಲೋ ಸಿನಿಮಾ ಕಥೆ ಬರೆಯುವ ಕ್ರೇಜಿಸ್ಟಾರ್‌ಗೆ ಅಪರೂಪಕ್ಕೆ ಹೆಂಡತಿ-ಮಗಳ ನೆನಪಾದರೂ ಫೋನ್‌ನಲ್ಲಿ ಮಾತ್ರ ಮಾತುಕಥೆ. ಮಡದಿಗೆ ಬಿಡುಗಡೆ ಇಲ್ಲ. ಮಗಳಿಗೆ ಇಂಥ ಅಪ್ಪ ಇಷ್ಟ ಇಲ್ಲ. 
     ಅಪ್ಪನ ದೂರ ಇರುವಿಕೆಯ ಕೊರಗಿನಲ್ಲಿ ಆಸ್ಪತ್ರೆ ಸೇರುವ ಮಗಳಿಗೆ ಡಯಾಲಿಟಿಕ್ ಕಾರ್ಡಿಯೋ ಮಯೋಪತಿ ಎನ್ನುವ ಹೃದಯ ಸಂಬಂಧಿ ಕಾಯಿಲೆ. ಅದಕ್ಕೆ ಹೃದಯ ಬದಲಾವಣೆಯೇ ಪರಿಹಾರ. ೨ ಗಂಟೆಯೊಳಗೆ ಈ ಕೆಲಸ ಆಗಬೇಕು. ಖಂಡಿತ ಹೃದಯ ಬದಲಾವಣೆ ಆಗುತ್ತದೆ. ಮಗಳಿಗೆ ತಂದೆಯ ಪ್ರೀತಿ ದಕ್ಕುತ್ತದೆ. ತಾಯಿಗೆ ಮಗಳನ್ನು ಉಳಿಸಿಕೊಂಡ ಸಂತೋಷವೂ ಸಿಗುತ್ತದೆ. ಆದರೆ ಮಗಳನ್ನು ಬದುಕಿಸಿಕೊಳ್ಳಲು ತಂದೆಯೊಬ್ಬ ಸವೆಸುವ ೨ ಗಂಟೆಯ ಅವಧಿ. ಆ ಅವಧಿಯಲ್ಲಿ ಬರುವ ಅಡ್ಡಿ ಆತಂಕಗಳು ಅವುಗಳನ್ನು ನೋಡಿಯೇ ಫೀಲ್ ಮಾಡಬೇಕು.
      ರವಿಚಂದ್ರನ್ ಚೆಂದನೆಯ ಮತ್ತು ಅವರಷ್ಟೇ ‘ತೂಕ’ದ ಮಾತುಗಳನ್ನು ಕ್ರೇಜಿಸ್ಟಾರ್‌ನಲ್ಲಿ ಪೋಣಿಸಿ ಅಚ್ಚರಿ ಮೂಡಿಸಿದ್ದಾರೆ. ಕಾಮಿಡಿ ಸಲುವಾಗಿ ‘ಬುದ್ಧಿವಂತಿಕೆ ಚಡ್ಡಿ ಇದ್ದಹಾಗೆ. ಹಾಕ್ಕೋಬೇಕು, ಆದ್ರೆ ತೋರಿಸಬಾರದು’, ಸಿನಿಮಾ ಪ್ರಕಾರ ಕುರಿತಾಗಿ ‘ದುಡ್ಡಿಗೆ ಸಿನಿಮಾ ಮಾಡಿದ್ರೆ ಅವಾರ್ಡ ಬರಲ್ಲ, ಅವಾರ್ಡಗೆ ಸಿನಿಮಾ ಮಾಡಿದ್ರೆ ದುಡ್ಡು ಬರಲ್ಲ.’ ಗಂಡ-ಹೆಂಡತಿ ಮತ್ತು ಗಂಡು-ಹೆಣ್ಣು ಸಂಬಂಧದ ಬಗ್ಗೆ ಹೇಳುವಾಗ ‘ಮನಸು, ದೇಹ ಇರೋ ಕಡೆ ಸಂದೇಹ ಇರುತ್ತೆ, ದೇಹ, ದೇಹ ಇರೋ ಕಡೆ ಬರೀ ದಾಹ ಇರುತ್ತೆ’, ಮಗಳ ಕುರಿತು ಮಡದಿ, ಗಂಡನಿಗೆ ಹೇಳುವಾಗ,  ‘ಹಸಿದಾಗ ಹಾಲು ಕುಡಿಸಿದೀನಿ, ತೂಕಡಿಸಿದಾಗ ನಿದ್ದೆ ಮಾಡ್ಸಿದೀನಿ, ಅಪ್ಪನ ಪ್ರೀತಿ ಬೇಕು ಅಂದ್ರೆ ಹ್ಯಾಗ್ ಕೊಡ್ಲಿ?’ ಎನ್ನುವಂಥ ಸಾಲುಗಳನ್ನ ಬರೆದು ರವಿ ನಿಜಕ್ಕೂ ಕವಿಯಾಗಿದ್ದಾರೆ ಎನಿಸಿಬಿಡುತ್ತಾರೆ.
     ಅಭಿನಯದಲ್ಲಿ ರವಿಚಂದ್ರನ್, ಪ್ರಕಾಶ್ ರೈ, ಅವಿನಾಶ್, ಪ್ರಿಯಾಂಕ, ರಘುರಾಂ, ಯತಿರಾಜ್, ಅಕುಲ್ ಬಾಲಾಜಿ, ನವೀನ್‌ಕೃಷ್ಣ, ಸಂದೀಪ್ ಇಷ್ಟವಾಗ್ತಾರೆ. ಚಿಕ್ಕಪಾತ್ರದಲ್ಲಿದ್ದರೂ ನೀತು, ಭಾವನಾ, ಶೋಭರಾಜ್, ರವಿಶಂಕರ್‌ಗೌಡ ನೆನಪಲ್ಲುಳಿಯುತ್ತಾರೆ. ನಾಯಕನ ರೇಂಜ್‌ಗೆ ಬಂದಿರುವ ರವಿಚಂದ್ರನ್ ಪುತ್ರ ಮನೋರಂಜನ್ ಫೈಟ್ ಮೂಲಕ ಎಂಟ್ರಿ ಕೊಟ್ಟು ತಾವೊಬ್ಬ ಸ್ಟಂಟ್ ಓರಿಯೆಂಟೇಡ್ ಹೀರೋ ಆಗಿ ಬರ‍್ತಿನಿ ಎನ್ನುವ ಸೂಚನೆ ನೀಡಿದ್ದಾರೆ. ಅಫ್‌ಕೋರ್ಸ್ ರಗಡ್ ಲುಕ್ ಮನೋರಂಜನ್‌ಗಿದೆ. ಸಂಗೀತದ ವಿಷಯದಲ್ಲಿ ಎರಡು ಹಾಡುಗಳು ನೆನಪಲ್ಲಿ ಮಾತ್ರವಲ್ಲ, ಮನಸಲ್ಲುಳಿಯುತ್ತವೆ.  ಛಾಯಾಗ್ರಾಹಣದ ಬಗ್ಗೆ ಏನೂ ಹೇಳುವಂತಿಲ್ಲ. ಒನ್ಸ್ ಅಗೇನ್ ಸೀತಾರಾಂ ಮತ್ತೊಂದು ಲೋಕ ಸೃಷ್ಟಿಸಿದಂತೆ ತೋರುತ್ತಾರೆ. ಸಂಕಲನದಲ್ಲಿ ಮಾತ್ರ ರವಿ ಅಲ್ಲಿ ಇಲ್ಲಿ ಒಂಚೂರು ಎಡವಿದಂತೆ ಭಾಸವಾಗುತ್ತದೆಯಾದರೂ ಚಿತ್ರದ ಓಟಕ್ಕೆ ಎಲ್ಲೂ ಧಕ್ಕೆ ತಂದಿಲ್ಲ. 
     ತಮ್ಮ ಮೆಚ್ಚಿನ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕಣ್ತುಂಬಿಕೊಳ್ಳದೇ ಎರಡು ವರ್ಷಗಳ ಹೊಸ್ತಿಲಲ್ಲಿದ್ದ ಅಭಿಮಾನಿಗಳಿಗೆ ರಂಜನೆಯ ಜೊತೆಯ ವೇದಾಂತಿಯಾಗಿ, ಬುದ್ಧಿ ಹೇಳುವ ಹಿರಿಯನಾಗಿಯೂ ರವಿಚಂದ್ರನ್ ಬಂದಿದ್ದಾರೆ. ಬರೀ ಕಣ್ಣಲ್ಲ, ಮನಸು ತುಂಬಿಕೊಳ್ಳಿ. ದಯವಿಟ್ಟು ಸಿನಿಮಾ ನೋಡುವಾಗ ಮನಸನ್ನು ಸ್ವಿಚ್ ಆನ್ ಮಾಡಿಕೊಳ್ಳಿ. ಇಲ್ಲದಿದ್ದರೆ ಸಿನಿಮಾ ನಿಮಗೆ ಹಿಡಿಸುತ್ತದೆ ಎಂಬ ಭರವಸೆ ಇಲ್ಲ!

-ಚಿತ್ರಪ್ರಿಯ ಸಂಭ್ರಮ್ 

ಫಲಿತಾಂಶ : ೧೦೦/೬೫

Advertisement

0 comments:

Post a Comment

 
Top