PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳದಲ್ಲಿ ಜ. ೧೮ ರಿಂದ ಜರುಗಲಿರುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಹಾಗೂ ಸುಗಮವಾಗಿ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ಅವರು ಹೇಳಿದರು.
  ಗವಿಸಿದ್ದೇಶ್ವರ ಜಾತ್ರೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕೊಪ್ಪಳದಲ್ಲಿ ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯನ್ನು ಪಡೆದಿದ್ದು, ಜಾತ್ರೆ ಇಡೀ ರಾಜ್ಯಕ್ಕೆ ಸಂಭ್ರಮ ತರುವಂತಾಗಬೇಕು ಅಲ್ಲದೆ ಧಾರ್ಮಿಕ ಉತ್ಸವವಾಗಬೇಕು.  ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೩ ರಿಂದ ೪ ಲಕ್ಷ ಭಕ್ತಾದಿಗಳು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ.  ಜ. ೧೮ ರಂದು ಮಹಾರಥೋತ್ಸವ ನಡೆಯಲಿದ್ದು, ಜಾತ್ರೆ ಶಾಂತಿಯುತವಾಗಿ ಹಾಗೂ ಸುಗಮವಾಗಿ ಜರುಗುವಂತೆ ಜಿಲ್ಲಾಡಳಿತದಿಂದ ಸಕಲ ರೀತಿಯ ಸಹಕಾರ ನೀಡಲಾಗುವುದು.  ಜಾತ್ರೆಗೆ ಹಿಂದೆಂದಿಗಿಂತಲೂ ಉತ್ತಮ ಸೌಲಭ್ಯ ದೊರೆಯುವಂತೆ ಮಾಡಲು ಈಗಾಗಲೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಒಳಚರಂಡಿ ಕಾಮಗಾರಿಗಾಗಿ ನಗರದ ಪ್ರಮುಖ ರಸ್ತೆಗಳು ಹಾಳಾಗಿದ್ದು, ಈ ಪೈಕಿ ೧೧ ರಸ್ತೆಗಳನ್ನು ೧೫ ಲಕ್ಷ ರೂ. ಗಳ ವೆಚ್ಚದಲ್ಲಿ ನಗರಸಭೆಯಿಂದ ದುರಸ್ತಿಗೊಳಿಸಲಾಗುವುದು.  ಸಿಂಪಿಲಿಂಗಣ್ಣ ರಸ್ತೆ, ಸಾಲಾರ್‌ಜಂಗ್ ರಸ್ತೆ, ಕಾತರಕಿ ರಸ್ತೆ, ಗವಿಮಠದಿಂದ ಗಡಿಯಾರಕಂಭ, ಹೈದರಾಲಿ ವೃತ್ತದಿಂದ ದುರ್ಗಮ್ಮನಗುಡಿ, ಗಾಂಧಿ ವೃತ್ತದಿಂದ ದಿವಟರ್ ವೃತ್ತ, ಗಡಿಯಾರ ಕಂಬದಿಂದ ಬೆನಕನ ಗುಡಿವರೆಗೆ ಹೀಗೆ ವಿವಿಧ ರಸ್ತೆಗಳ ದುರಸ್ಥಿಗೆ ಈಗಾಗಲೆ ನಿರ್ಧರಿಸಲಾಗಿದ್ದು, ಎರಡು ದಿನಗಳ ಒಳಗಾಗಿ ಕಾಮಗಾರಿ ಪ್ರಾರಂಭವಾಗಲಿದೆ. ರಥೋತ್ಸವದ ದಿನದಂದು ಟ್ರಾಫಿಕ್ ಜಾಮ್ ಆಗದಂತೆ ಎಚ್ಚರ ವಹಿಸಲು ಈಗಾಗಲೆ ಪೊಲೀಸ್ ಇಲಾಖೆ ಯೋಜನೆಯನ್ನು ರೂಪಿಸಿದೆ.  ಜಾತ್ರೆಯ ಯಶಸ್ವಿಗೆ ಜಿಲ್ಲಾಡಳಿತದಿಂದ ಸಹಾಯಕ ಆಯುಕ್ತ ಮಂಜುನಾಥ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದರು.
ಸ್ವಚ್ಛತೆಗೆ ಆದ್ಯತೆ : ಗವಿಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ನಗರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.  ಸಾರ್ವಜನಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯಬೇಕು.  ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗದಂತೆ ಎಚ್ಚರಿಕೆ ವಹಿಸಬೇಕು.  ತುರ್ತು ಆರೋಗ್ಯ ಸೇವೆ, ಮುಂಜಾಗ್ರತೆಯ ಕ್ರಮವಾಗಿ ಗವಿಮಠದ ಬಳಿ ಅಗ್ನಿಶಾಮಕ ವಾಹನವನ್ನು ಸಿದ್ಧವಾಗಿರಿಸಿಕೊಳ್ಳಬೇಕು.  ಜಾತ್ರೆಯ ಅಂಗವಾಗಿ ಈ ಬಾರಿ ಸುಮಾರು ೧೦೦ ಕ್ಕೂ ಹೆಚ್ಚು ತಾತ್ಕಾಲಿಕ ಶೌಚಾಲಯವನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್ ಬಂದೋಬಸ್ತ್ : ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಮಾತನಾಡಿ, ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು.  ಇದಕ್ಕಾಗಿ ಹೊರ ಜಿಲ್ಲೆಯಿಂದ ೦೨-ಡಿವೈಎಸ್‌ಪಿ, ೧೪- ಸಿಪಿಐ, ೩೩- ಪಿಎಸ್‌ಐ, ೫೭- ಎಎಸ್‌ಐ, ೬೦೦- ಪಿ.ಸಿ., ೧೫೦- ಹೋಂಗಾರ್ಡ್ಸ್ ಗಳನ್ನು ನಿಯೋಜಿಸಲಾಗುವುದು.  ಜಿಲ್ಲೆಯಿಂದ ಸುಮಾರು ೧೫೦ ಪೊಲೀಸ್ ಕಾನ್ಸ್‌ಟೇಬಲ್, ೨೦೦- ಹೋಂಗಾರ್ಡ್ಸ ಸೇರಿದಂತೆ ವಿವಿಧ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.  ಜಾತ್ರೆಯ ಹತ್ತು ದಿನಗಳಿಗೂ ಮುನ್ನ ಗವಿಮಠದ ಬಳಿ ತಾತ್ಕಾಲಿಕವಾಗಿ ಪೊಲೀಸ್ ಹೊರ ಠಾಣೆ ಸ್ಥಾಪಿಸಲಾಗುವುದು.  ನಗರದ ಬಸವೇಶ್ವರ ವೃತ್ತ (ಗಂಜ್ ಸರ್ಕಲ್) ನಲ್ಲಿ ಹತ್ತು ದಿನಗಳ ಒಳಗಾಗಿ ಸಿಗ್ನಲ್ ಲೈಟ್ ಅಳವಡಿಸಲಾಗುವುದು ಎಂದರು.
ಸಿಸಿ ಕ್ಯಾಮೆರಾ : ಕೊಪ್ಪಳ ನಗರಠಾಣೆ ಪಿಐ ವಿಜಯ್ ಬಿರಾದಾರ್ ಅವರು ಮಾತನಾಡಿ, ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಲಾರಿ, ಜೀಪ್, ಕಾರು ಮುಂತಾದ ವಾಹನಗಳ ಪಾರ್ಕಿಂಗ್ ಮಾಡಲು ಈಗಾಗಲೆ ಸ್ಥಳಗಳನ್ನು ಗುರುತಿಸಲಾಗಿದೆ.  ಜಾತ್ರೆ ಸಂದರ್ಭದಲ್ಲಿ ಜೇಬುಗಳ್ಳತನ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.  ಕಳೆದ ವರ್ಷ ಇಂತಹ ಸುಮಾರು ೨೩ ಜೇಬುಗಳ್ಳರನ್ನು ಬಂಧಿಸಲಾಗಿತ್ತು.  ಜಾತ್ರೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಇದೇ ಪ್ರಥಮ ಬಾರಿಗೆ ಈ ಬಾರಿ ಸುಮಾರು ೦೬ ಕಡೆಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ.  ಟ್ರಾಫಿಕ್ ಜಾಮ್ ತಡೆಗಟ್ಟಲು ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಮಾರ್ಗಗಳ ಬದಲಾವಣೆ ಮಾಡಲಾಗುವುದು.   
  ಸಭೆಯಲ್ಲಿ ಡಿವೈಎಸ್‌ಪಿ ರಾಜೀವ್ ಎಂ., ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಮಂಜುನಾಥ್, ನಗರಸಭೆ ಪೌರಾಯುಕ್ತ ರುದ್ರಮುನಿ, ಸಹಾಯಕ ಅಭಿಯಂತರ ಮಂಜುನಾಥ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಡಾ. ದಾನರೆಡ್ಡಿ, ಡಾ. ಕಟ್ಟಿಮನಿ ಸೇರಿದಂತೆ ಗಣ್ಯರಾದ ನವಲಿ ಹಿರೇಮಠ, ಮಲ್ಲಿಕಾರ್ಜುನ ಸೋಮಲಾಪುರ, ಗವಿಮಠದ ಶರಣು, ಕೊಪ್ಪಳ ತಹಸಿಲ್ದಾರ್ ಚಂದ್ರಕಾಂತ್ ಮುಂತಾದವರು ಭಾಗವಹಿಸಿದ್ದರು.

Advertisement

0 comments:

Post a Comment

 
Top