ಶ್... ಇದು ಸಸ್ಪೆನ್ಸ್!
ಕನಸಿನ ರಾಣಿ ಮಾಲಾಶ್ರೀ ಆಕ್ಷನ್ ಕ್ವೀನ್ ಹೆಸರು ಪಡೆದ ಮೇಲೆ ಅನೇಕ ಚಿತ್ರಗಳು ಬಂದು ಹೋಗಿವೆ. ಅದೇ ಸೀಕ್ವೇನ್ಸ್‌ನ ಮುಂದುವರೆದ ಭಾಗದಂತೆ ತೋರುವ ಘರ್ಷಣೆ ಗಮನ ಸೆಳೆಯುವುದು ಪತ್ತೆದಾರಿ ಕಥಾಹಂದರದಿಂದ ಮಾತ್ರ. ಬಿಟ್ಟರೆ ಮಾಲಾಶ್ರೀಯವರ ಹಿಂದಿನ ಚಿತ್ರಗಳಿಗೂ, ಇದಕ್ಕೂ ಅಂಥ ವ್ಯತ್ಯಾಸವೇನಿಲ್ಲ ಬಿಡಿ.
ಆರಂಭದಲ್ಲೇ ಒಬ್ಬನ ಬುರುಡೆ ಒಡೆಯುವ ಮೂಲಕ ಎಂಟ್ರಿ ಪಡೆಯುವ ಮಾಲಾಶ್ರೀ ಘರ್ಷಣೆಯಲ್ಲಿ ಅಬ್ಬರಿಸಿಲ್ಲ. ಬಿಸಿ ಬಿಸಿ ಕಾಫಿ ಟೀ ಕುಡಿಯುತ್ತಾ ಕೂಲ್ ಆಗಿ ಅಪಹರಣಕಾರರ ಪತ್ತೆಗೆ ಜಾಲ ಬೀಸುವ ಹೊಸ ಕಾಯಕದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಘರ್ಷಣೆ ಸಿನಿಮಾ ಸಿಬಿಐ ದುರ್ಗದ ಮುಂದುವರೆದ ಭಾಗದಂತೆ ತೋರುತ್ತದೆ. ಅಲ್ಲಿ ಒಂಚೂರು ಕಥೆಗೆ ಒತ್ತು ಕೊಡಲಾಗಿತ್ತು. ಆದ್ರೆ ಇಲ್ಲಿ ಸಸ್ಪೆನ್ಸಗೆ ಆದ್ಯತೆ ನೀಡಲಾಗಿದೆ.
ಇಲಾಖೆಯಲ್ಲೇ ಅಪಹರಣಕಾರರಿಗೆ ಸಹಾಯ ಮಾಡುವ ಅಽಕಾರಿಗಳು ಮುಗ್ಧ ಕುಟುಂಬವೊಂದರ ಯುವತಿಯನ್ನು ಹದ್ದು ಕಾಗೆಯಂತೆ ಹರಿದು ತಿಂದು ಬೀಸಾಕುತ್ತಾರೆ. ಅವಮಾನ ಸಹಿಸದ ಯುವತಿ ಆತ್ಮಹತ್ಯೆ. ಕುಟುಂಬದವರು ನಾಪತ್ತೆ. ಅಷ್ಟರಲ್ಲಿ ಮೂರು ಜನರ ಕೈ ಕತ್ತರಿಸಿ, ಬಾಕ್ಸ್‌ವೊಂದರಲ್ಲಿ ಪ್ಯಾಕ್ ಮಾಡಿ ಎಸಿಪಿ ಅಽಕಾರಿಯ ಲಿಮಿಟ್‌ನಲ್ಲಿಯೇ ಬೀಸಾಡುವುದು. ಅದು ಯಾರ ಕೈ ಎಂಬ ಕುತೂಹಲದ ಮೂಲಕ ತೆರೆದುಕೊಳ್ಳುವ ಕಥೆ ಆ ಕೃತ್ಯವನ್ನು ಮಾಡುತ್ತಿರುವವರು ಯಾರು, ಯಾಕೆ, ಏನು ಎಂಬುದನ್ನು ಕಂಡು ಹಿಡಿಯುವುದೇ ಘರ್ಷಣೆ.
ಈ ನಡುವೆ ಸಿಸಿಬಿ ಅಽಕಾರಿ ನೇತ್ರಾವತಿ ತಂಗಿಯ ಕಿಡ್ನ್ಯಾಪ್ ಬೇರೆ. ಎರಡು ಮೂರು ವಿಷಯಗಳ ಸಂಘರ್ಷದೊಂದಿಗೆ ಕಿಲ್ಲರ‍್ಸ್ ಮತ್ತು ರೇಪಿಸ್ಟ್‌ಗಳೊಂದಿಗೆ ಘರ್ಷಣೆಗಿಳಿಯುವ ನೇತ್ರಾವತಿ ಎಲ್ಲವನ್ನು ಪತ್ತೆ ಮಾಡುವುದರೊಂದಿಗೆ ಚಿತ್ರ ಸಮಾಪ್ತಿ. ಚಿತ್ರದಲ್ಲಿ ಆಶೀಸ್ ವಿದ್ಯಾರ್ಥಿ ಮಾಲಾಶ್ರೀಯವರ ಕರ್ತವ್ಯ ಕಂಡು ನರಸಿಂಹರಾಯರ ಪತ್ತೆದಾರಿ ಕಾದಂಬರಿ ಇನ್ನೂ ಪ್ರಿಂಟ್ ಆಗ್ತಿವೆಯಾ? ಎನ್ನುವಂತೆ ಚಿತ್ರದುದ್ದಕ್ಕೂ ಎಲ್ಲವೂ ಸಸ್ಪೆನ್ಸ. ಕೊನೆಗೆ ಸಕಲವೂ ಬಹಿರಂಗ.
ದಯಾಳ ಪದ್ಮನಾಭ್ ನಿರ್ದೇಶನದ ಚಿತ್ರವೆಂದ ಮೇಲೆ ಒಂಚೂರು ಫಿಲಾಸಫಿ, ಕಾಮಿಡಿ, ಕಲರ್ ಸೀನ್ಸ ಸಾಮಾನ್ಯ. ಆದರೆ ಘರ್ಷಣೆ ಇದು ದಯಾಳ ಸಿನಿಮಾನಾ ಎಂಬ ಅನುಮಾನ ಮೂಡುತ್ತದೆ. ಖಳರಾಗಿ ನಟಿಸಿರುವ ಅಯ್ಯಪ್ಪ ಶರ್ಮಾ ಮೊದಲ ಪ್ರಯತ್ನದಲ್ಲೇ ಕ್ಲಿಕ್ಕಾಗಿದ್ದಾರೆ. ಆಶೀಸ್ ವಿದ್ಯಾರ್ಥಿ, ಸುಚೇಂದ್ರ ಪ್ರಸಾದ್, ರೂಪಿಕಾ, ಪವಿತ್ರಾ ಲೋಕೇಶ್, ಕೀರ್ತಿರಾಜ್, ರವೀಂದ್ರನಾಥ್, ಗುರುರಾಜ ಹೊಸಕೋಟೆ ಓಕೆ. ಮಣಿಕಾಂತ ಕದ್ರಿ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಆದರೆ ಓಳಗೆ ಸೇರಿದರೆ ಗುಂಡು ಎಂಬ ಮೆಲೋಡಿ ಸಾಂಗ್ ಸಾರಾಯಿಯಂತೆ ಗಬ್ಬೆದ್ದು ಹೋಗಿರುವುದನ್ನು ಬೇಸರದಿಂದಲೇ ಹೇಳಬೇಕು. ಪಳಿನಿರಾಜ್, ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಆಕ್ಷನ್ ಚಿತ್ರಗಳಿಗಿಂತ ಭಿನ್ನವಾಗಿಲ್ಲ. ಶ್ಯಾಂ ಪ್ರಸಾದ್ ಸಂಭಾಷಣೆ ಒಂದೆರಡು ಕಡೆ ಮಾತ್ರ ಮೊನಚಾಗಿದೆ. ಒಂದೆರಡು ವಾರಗಳ ನಂತರ ಚಿತ್ರ ಎತ್ತಂಗಡಿಯಾದರೆ ನಿರ್ಮಾಪಕರಾದ ಶಂಕರ್ ಗೌಡ ಮತ್ತು ಶಂಕರ್‌ರಡ್ಡಿ ಬೇಸರಿಸಿಕೊಳ್ಳಬಾರದಷ್ಟೇ.
ಘರ್ಷಣೆ- ವರ್ಷದ ಮೊದಲ ಬೆಳೆಯೇ ಕೈಗೆ ಬರಲಿಲ್ಲ ಎನ್ನುವಂತಿರುವ ಚಿತ್ರ.
-ಚಿತ್ರಪ್ರಿಯ ಸಂಭ್ರಮ್.
0 comments:
Post a Comment