ಭಾರತ ಸ್ಕೌಟಿಂಗ್ ಮತ್ತು ಗೈಡಿಂಗ್ ಸಮಗ್ರ ಭಾರತ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದು ಸ್ಕೌಟ್ಸ್ ಗೈಡ್ಸ್ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಗುನ್ನಾಳ ರಸ್ತೆಯಲ್ಲಿ ಬರುವ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ನೂತನ ಅಡುಗೆ ಕೋಣೆಯ ಅಡಿಗಲ್ಲು ಸಮಾರಂಭದಲ್ಲಿ ಮಕ್ಕಳೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಸಂಖ್ಯಾಬಲ ಶಕ್ತಿಯಲ್ಲ, ಉತ್ತಮ ಹಾಗೂ ಬುದ್ದಿವಂತರ ತಂಡ ಶಕ್ತಿಯುತವಾದದ್ದು. ಶಿಕ್ಷಕರು ರಾಷ್ಟ್ರದ ರಚನಾಕಾರರು ಆದ್ದರಿಂದ ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಕರೆ ನೀಡಿದರು.
ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸಲು ಸ್ಕೌಟಿಂಗ್ ಮತ್ತು ಗೈಡಿಂಗ್ ಬಲನೀಡುತ್ತದೆ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಕಾರ್ಯಗಳನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾಯದರ್ಶಿ ವಿ. ಕೆ. ಜಾಗಟಗೇರಿ ಬರುವ ಶೈಕ್ಷಣಿಕ ವರ್ಷದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲೆಯಲ್ಲಿ ಸ್ಕೌಟ್ಸ ಮತ್ತು ಗೈಡ್ಸ್ ಘಟಕಗಳ ಸ್ಥಾಪನೆ ಮಾಡಬೇಕು, ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು ಶ್ರಮಿಸಬೇಕು. ವರ್ಷ ಪೂರ್ತಿಯಾಗಿ ಬೆಳೆಯಬೇಕು ಎಂದು ಹೇಳಿದ ಅವರು ಜಿಲ್ಲಾ ಸ್ಕೌಟಿಂಗ್ ಮತ್ತು ಗೈಡಿಂಗ್ ತರಬೇತಿ ಕೇಂದ್ರಕ್ಕೆ ಸರಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಘಟನಾ ಆಯುಕ್ತ ಜಯರಾಜ ಬೂಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಶಿವಕುಮಾರ, ತಾಲೂಕ ಕಾರ್ಯದರ್ಶಿ ಎಂ. ಕೆ. ಹಿರೇಮಠ ಇತರರು ಇದ್ದರು. ಸಾಮೂಹಿಕ ಪ್ರಾರ್ಥನೆ ನಂತರ ಜಿಲ್ಲಾ ಸ್ಕೌಟ್ಸ್ ಪ್ರತಿನಿಧಿ ಪ್ರಹ್ಲಾದ ಬಡಿಗೇರ ಸ್ವಾಗತಿಸಿದರು, ಶಿಕ್ಷಕ ಬಸನಗೌಡ ವಂದಿಸಿದರು. ನ್ಯೂ ಆಕ್ಸಫರ್ಡ ಶಾಲೆ, ಸ್ವಾಮಿ ವಿವೇಕಾನಂದ ಶಾಲೆ, ಎಸ್‌ಎಫ್‌ಎಸ್ ಶಾಲೆ, ಟ್ರಿನಿಟಿ ಶಾಲೆ ಮತ್ತು ನಿವೇದಿತಾ ಶಾಲೆಯ ಮುನ್ನೂರಕ್ಕು ಹೆಚ್ಚು ವಿದ್ಯಾರ್ಥಿ ಶಿಕ್ಷಕರಿದ್ದರು.
0 comments:
Post a Comment