: ಸರ್ಕಾರದ ಸೂಚನೆಯ ಮೇರೆಗೆ ೨೦೧೧ ರ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ ಕುರಿತು ಜಿಲ್ಲೆಯಲ್ಲಿ ಸಂಗ್ರಹಿಸಲಾದ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ, ತಿದ್ದುಪಡಿ, ಸೇರ್ಪಡೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ-೨೦೧೧ ಕುರಿತು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ಮಾಹಿತಿ ಸಂಗ್ರಹಿಸಲಾದ ವಿವರಗಳ ಮುದ್ರಿತ ಗಣತಿ ಯಾದಿಯನ್ನು ತಯಾರಿಸಿ ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ತಹಸಿಲ್ದಾರರ ಕಚೇರಿ, ಗ್ರಾಮ ಪಂಚಾಯತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಕಚೇರಿಗಳಲ್ಲಿ ಡಿ. ೧೨ ರಂದು ಪ್ರಕಟಿಸಲಾಗಿದೆ. ಗಣತಿ ಯಾದಿಯಲ್ಲಿ ಹೆಸರು ಬಿಟ್ಟು ಹೋಗಿದ್ದಲ್ಲಿ, ಸೇರ್ಪಡೆಗೆ ಅವಕಾಶವಿದ್ದು, ಇದಕ್ಕಾಗಿ ನಮೂನೆ-ಸಿ. ಆಕ್ಷೇಪಣೆಗೆ ನಮೂನೆ-ಎ ಹಾಗೂ ತಿದ್ದುಪಡಿಗಾಗಿ ನಮೂನೆ-ಬಿ ನಲ್ಲಿ ಅರ್ಜಿಯನ್ನು ೨೦೧೪ ರ ಜನವರಿ ೦೨ ರವರೆಗೆ ಸಲ್ಲಿಸಬಹುದಾಗಿದೆ. ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ಆಯಾ ಗ್ರಾಮ ಪಂಚಾಯತಿಗಳಲ್ಲಿ, ನಗರ/ಪಟ್ಟಣ ಪ್ರದೇಶಕ್ಕೆ ಸಂಬಂಧಿಸಿದಂತೆ ಆಯಾ ನಗರಸಭೆ, ಪುರಸಭೆ ಅಥವಾ ಪಟ್ಟಣ ಪಂಚಾಯತಿಗಳಲ್ಲಿ ಗಣತಿ ಯಾದಿ ಹಾಗೂ ಅರ್ಜಿ ನಮೂನೆಗಳು ಲಭ್ಯವಿರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಸಭೆಗಳನ್ನು ಹಾಗೂ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾರ್ಡ್ ಸಭೆಗಳನ್ನು ಡಿ. ೨೨ ರ ಒಳಗಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಹಕ್ಕುಬಾಧ್ಯತಾ ಮತ್ತು ಆಕ್ಷೇಪಣಾ ಅರ್ಜಿಗಳನ್ನು ೨೦೧೪ ರ ಜ. ೧೮ ರಂದು ವಿಲೇವಾರಿಗೊಳಿಸಿ, ಅಂತಿಮ ಗಣತಿ ಪಟ್ಟಿಯನ್ನು ೨೦೧೪ ರ ಫೆ. ೦೩ ರಂದು ಪ್ರಕಟಿಸಲಾಗುವುದು. ಸಾರ್ವಜನಿಕರು ಗಣತಿ ಯಾದಿಯನ್ನು ಗಮನಿಸಿ, ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ-೨೦೧೧ ರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment