*ಅಮರ್ ದೀಪ್ ಪಿ ಎಸ್
ಈಗೊಂದು ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಹಳ್ಳಿಗೆ ಸಾರ್ವಜನಿಕ ಅವಶ್ಯಕತೆಗಳ ಕೊರತೆ ಮಧ್ಯೆ ಹಾಗೂ ಹೀಗೂ ಇದ್ದಂಥಹ ಒಂದು ಸರ್ಕಾರಿ ಶಾಲೆಗೆ ಊರಿನ ಬಡ ಮಕ್ಕಳು ಸೇರುವಂತೆ ಆ ಹುಡುಗನು ಶಾಲೆಗೆ ಸೇರಿಕೊಂಡ. ಜೊತೆಗೆ ಇದ್ದದ್ದು ಬಡತನ, ಸಣ್ಣ ಕುಟುಂಬ. ಇದ್ದದ್ದೇ ನಾಲ್ಕನೇ ತರಗತಿಯವರೆಗಿನ ಶಾಲೆ. ಐದನೇ ಇಯತ್ತೆಗೆ ಹೋಗಬೇಕಾದರೆ ಐದಾರು ಕೀ.. ಮೀ. ದೂರದ ಪಕ್ಕದ ತಾಲೂಕ ಮಟ್ಟದ ಊರಿಗೆ ಹೋಗಬೇಕು. ಆ ಹುಡುಗ ನಾಲ್ಕನೇ ತರಗತಿ ಓದಿ ಐದನೇ ತರಗತಿಗೆ ಪಕ್ಕದ ಊರಿಗೆ ಅಕ್ಷರ ದಾಸೋಹಕ್ಕೆ ಕೊರಳಿಗೆ ಚೀಲ ನೇತಾಕಿಕೊಂಡು ಒಮ್ಮೊಮ್ಮೆ ನಡೆದೋ ಇಲ್ಲಾ ಇರುವ ಮತ್ತು ಬರುವ ಬೆಳಗಿನ ಬಸ್ಸು ಏರಿ ಹತ್ತು ಗಂಟೆಗೆ ಶಾಲೆಯೆಂದರೆ ಎಂಟಕ್ಕೋ ಎಂಟುವರೆಗೋ ಶಾಲೆ ಮುಂದಿನ ಕಟ್ಟೆಗೆ ಕೂತು ತನ್ನಷ್ಟಕ್ಕೆ ತಾನು ಓದುವುದೋ ಬರೆಯುವುದೋ ಮಾಡುತ್ತಿದ್ದ.. ಆ ಹುಡುಗನ ಕಲಿಕಾ ಇಚ್ಚೆ ಮತ್ತು ಆಸಕ್ತಿ ನೋಡಿದ ಶಾಲಾ ಗುರುಗಳೊಬ್ಬರು ಆಗತಾನೇ ಶುರುವಾಗಿದ್ದ “ನವೋದಯ” ಶಾಲೆ ಪ್ರವೇಶ ಪರೀಕ್ಷೆಗೆ ಪ್ರೇರೇಪಿಸಿ ಕೂಡಿಸಿದರು. ಎಂಥ ಆಶ್ಚರ್ಯವೆಂದರೆ ಏನೆಂದರೆ ಏನೂ ಪೂರ್ವ ತಯಾರಿ ಇರದ ಅಥವಾ ಈಗಿನ “ಕೋಚಿಂಗ್ ” ಇರದೇ ಆ ಹುಡುಗ ನವೋದಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ. ಐದನೇ ತರಗತಿಗೆ ಹೊಸದಾಗಿ ಬಂದ ನಂತರ ಹೆಚ್ಚಾಗಿ ಪರಿಚಿತನೂ ಆಗಿರದಿದ್ದ ಆ ಹುಡುಗನನ್ನು ಆ ಶಾಲೆ ಮಾತ್ರವಲ್ಲ ಆ ಭಾಗದ ಜನರಾದಿಯಾಗಿ ಶಾಲಾ ಮಕ್ಕಳು, ಶಿಕ್ಷಕರು ಹೆಮ್ಮೆಪಟ್ಟುಕೊಂಡು ಹರಸಿ ಕಳುಹಿಸಿದರು.
ಅದಾಗಿ ಕನಿಷ್ಠ ಹದಿನೈದು ಇಪ್ಪತ್ತು ವರ್ಷಗಳವರೆಗೆ ಆ ಹುಡುಗನನ್ನು ಜ್ಞಾಪಕ ಮಾಡಿ ಕೊಳ್ಳುತ್ತಿದ್ದೆವಷ್ಟೇ. ಆದರೆ ಏನಾದ, ಈಗೆಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಉಹೂ… ಕೆಲವೇ ಪರಿಚಿತರಿಗಷ್ಟೇ ಅವನ ಬಗ್ಗೆ ಒಂದಷ್ಟು ಮಾಹಿತಿ ಇತ್ತಾದರೂ ನಮಗೆ ಹೆಚ್ಚಿನದಾಗೇನು ಗೊತ್ತಿರಲಿಲ್ಲ. ಇಷ್ಟರಲ್ಲಾಗಲೇ ನಾನು, ನನ್ನಂತೆ ಇತರರು ಮುಂದೆ ಹೆಚ್ಚಿನ ಓದು ಓದಿಯೋ ಒದದೆಯೋ ಅಲ್ಲಲ್ಲೇ ತಮ್ಮ ತಮ್ಮ ವ್ಯಾಪಾರ, ಕಸುಬು, ಉಪಕಸುಬು, ಸಣ್ಣ ಪಾನ್ ಬೀಡಾ ಅಂಗಡಿ, ಫೋಟೋಗ್ರಫಿ, ಫೈನಾನ್ಸ್, ವಕೀಲಿಕೆ, ಕೊನೆದಾಗಿ ಸರ್ಕಾರಿ ನೌಕರಿಯನ್ನು ಮಾಡಿಕೊಂಡು ಇದ್ದುಬಿಟ್ಟಿದ್ದೆವು.. ನಾನಾಗ ಬಳ್ಳಾರಿಯಲ್ಲಿ ನೌಕರಿ ಮಾಡುತ್ತಿದ್ದೆ. ನಮ್ಮ ಕಚೇರಿ ಡಿ. ಸಿ. ಕಚೇರಿ ಆವರಣದಲ್ಲಿತ್ತು. ಡಿ. ಸಿ. ಕಚೇರಿ ಆವರಣದಲ್ಲಿ ಪಾರ್ಕಿಗೆಂದು ಕಟ್ಟಿದ ಆದರೆ ಪಾರ್ಕಿನಂತಿರದ ಕಟ್ಟೆಯ ಮೇಲೆದಿನಂಪ್ರತಿ ಭೇಟಿ ನೀಡುವವರ ಸರದಿಯಲ್ಲಿ ಕೆಲವರು ಕುಳಿತಿರುವುದು, ದಿನಬೆಳಗಾದರೆ ಜನಗಳು ತಮ್ಮ ತಮ್ಮ ಅಹವಾಲನ್ನು ಬಗಲಲ್ಲಿಟ್ಟುಕೊಂಡು ಅಲೆಯುತ್ತಿದ್ದುದನ್ನು ನೋಡುತ್ತಲೇ ಇದ್ದೆನು. ತಮಾಷೆಗೆ ನನ್ನಂತೆ ನೌಕರಿಗೆ ಬಂದ ಗೆಳೆಯರಲ್ಲಿ ಮಾತಾಡುತ್ತಾ, ” ನೋಡ್ಲಾ, ಆದ್ರೆ ಡಿ. ಸಿ. ಆಗಬೇಕು ಇಲ್ಲಾ ಜವಾನ ಆಗ್ಬೇಕು… ಯಾಕೆಂದ್ರೆ ಅಧಿಕಾರ ಇದ್ರೆ, ನಾಲ್ಕು ಜನಕ್ಕೆ ಉಪಯೋಗ ಆಗ್ತೀವಿ ಇಲ್ಲಾಂದ್ರ … ಕಡೀಗೆ ಚಪ್ರಾಸಿ ಅಂತ ಅನ್ನಿಸಿಕೊಳ್ಳಲು ಒಬ್ಬರಾದ್ರೂ ಬೇಕಲ್ಲಾಪ್ಪಾ” ಅಂತಿದ್ದೆವು. ಹಾಗಂತ, ಇರೋ ನೌಕರಿಯಲ್ಲಿ ಬೇಸರ ಇದ್ದಿಲ್ಲ.. ಮಾಡೋ ಕೆಲಸದಲ್ಲಿ ಸೊಮಾರಿತನಾನೂ ಇದ್ದಿದ್ದಿಲ್ಲ.
ಆದರೆ ಡಿ. ಸಿ. ಕಾರು ಬರುವಾಗಿನ ನಮ್ಮ ನೋಟ ಒಂದಿಲ್ಲೊಂದು ನಮ್ಮಲ್ಲಿಲ್ಲದ, ಗಳಿಸಿಕೊಳ್ಳದ ಅರ್ಹತೆಗೆ ಕರುಬುವಿಕೆ ಮತ್ತು ಅರ್ಹತೆ ಮೇಲೆ ಬಂದಂಥ ಪ್ರತಿಭೆಗಳ ಮೇಲೆ ಅಭಿಮಾನ ಎರಡೂ ಒಟ್ಟೊಟ್ಟಿಗೆ ಉಂಟಾಗುತ್ತಿತ್ತು. ಒಂದಿನ ಹೀಗೆ ಸಾಲಾಗಿ ಕುಳಿತ ಕಟ್ಟೆಯ ಜನರ ಕಡೆ ನೋಡುತ್ತಾ ” ನಮ್ಮೂರಿನವರು ಯಾರಾದ್ರೂ ಇದ್ದಾರಾಂತಾ ನೋಡ್ತಾ ಇದ್ದೆ… ಅರೇ, ಗೊತ್ತಿದ್ದ ಮುಖಾನೇ, ಹೆಸರೂ ಕೂಡ ನಾಲಗೆ ಮೇಲೆ ಇದೆ.. ನೋಡಿ ಎಷ್ಟು ವರ್ಷ ಆದುವು”? ಲೆಕ್ಕ ಹಾಕುತ್ತಲೇ, ಹೆಸರಿಡಿದು ಕೂಗಿದೆ. ತಕ್ಷಣಕ್ಕೆ ಆತ ಗುರುತು ಹಿಡಿಯಲಿಲ್ಲವಾದರೂ ಎರಡೇ ನಿಮಿಷದಲ್ಲಿ ನಮ್ಮ ಇಪ್ಪತ್ತು ವರ್ಷದ ನಮ್ಮ ಶಾಲಾ ದಿನಗಳ ಜ್ಞಾಪಕ ನಮ್ಮನ್ನು ಹಳಬರಾಗಿಸಿತು. ಅವನ ಹಿಂದೆ ಹೊರಟ ಕೆಂಪು ಗೂಟದ ಕಾರು, ಅದರಲ್ಲಿ ಜಿಲ್ಲಾಧಿಕಾರಿ ಇದ್ದುದ್ದು ನೋಡಿದೆ. ಆಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರಬಹುದಾಗಿದ್ದ ಜಿಲ್ಲೆಯ ಕೆಲ ವೈದ್ಯರ ನೇಮಕಾತಿಗೆ ಅರ್ಜಿ ಹಾಕಲು ಬಂದಿದ್ದನಂತೆ. ಆಗಲೇ ತಿಳಿಯಿತು, ಈ ಗೆಳೆಯ ಪಶು ವೈದ್ಯಕೀಯದಲ್ಲಿ ಪದವಿ ಪಡೆದದ್ದು, ರಾಜ್ಯಪಾಲರಿಂದ ಪದಕ ಪಡೆದದ್ದು. ಆ ಹುಡುಗನ ಹೆಸರು ಡಾ. ಕೊಟ್ರಸ್ವಾಮಿ, ಆತನ ಊರು ಹೊಸ ಆನಂದದೇವನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕು,ಬಳ್ಳಾರಿ ಜಿಲ್ಲೆ.
ಅದಾಗಿ ಒಂದೆರಡು ವಾರವೋ, ತಿಂಗಳೊಂದರಲ್ಲಿ ಕಚೇರಿಯಲ್ಲಿ ಪತ್ರಿಕೆ ನೋಡಿದೆ.. ರಾಜ್ಯದ ಕೆಲವೇ ಪ್ರತಿಭೆಗಳಲ್ಲಿ ಐ. ಎ. ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಫೋಟೋಗಳಲ್ಲಿ ಈ ನನ್ನ ಗೆಳೆಯನೂ ಒಬ್ಬನಾಗಿದ್ದ. ಅದೆಷ್ಟು ಖುಷಿಪಟ್ಟೆನೆಂದರೆ, ಒಬ್ಬ ಅಪ್ಪಟ್ಟ ಗ್ರಾಮೀಣ ಪ್ರತಿಭೆ ಸರ್ಕಾರಿ ಶಾಲೆಯಲ್ಲಿ ಓದಿ ಈ ಮಟ್ಟದ ಸಾಧನೆ ಮಾಡಿದ ವ್ಯಕ್ತಿ ನನ್ನ ಸ್ನೇಹಿತ ಎಂದು ಹೇಳಿಕೊಂಡಿದ್ದೆ. ಕೂಡಲೇ ಕರೆ ಮಾಡಿ ಶುಭಾಷಯ ತಿಳಿಸಿದ್ದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವೃತ್ತಿಗಾಗಿ ಅರ್ಜಿ ಸಲ್ಲಿಸಲು ಬಂದಂಥ ವ್ಯಕ್ತಿ, ಅದೇ ಜಿಲ್ಲಾಧಿಕಾರಿ ಹುದ್ದೆಗೆ ಅವಶ್ಯವಿದ್ದ ಪರೀಕ್ಷೆಯನ್ನು ತೆಗೆದುಕೊಂಡಿದ್ದ, ಮತ್ತು ಅದನ್ನು ಸಾಧಿಸುವ ವಿಶ್ವಾಸ ಇಟ್ಟುಕೊಂಡೇ ಇತರೇ ವೃತ್ತಿಗಳಿಗೆ ಪ್ರಯತ್ನಿಸುತ್ತಿದ್ದ ಡಾ. ಕೊಟ್ರಸ್ವಾಮಿ ಒಬ್ಬ ವಾಸ್ತವವಾದಿ ಆಗಿದ್ದ ಎಂದು ಭಾವಿಸುತ್ತೇನೆ. ನಂತರ ಆಗಾಗ ಒಂದೊಂದು ಮೆಸೇಜ್ ಕಳಿಸುವುದೋ ಇಲ್ಲವೇ ಒಮ್ಮೊಮ್ಮೆ ಮಾತಾಡುವುದೋ ಆಗಿತ್ತು. ಬೆಳಗಾವಿಯಲ್ಲಿನ ತನ್ನ ಮದುವೆಗೆ ನೆನಪಿಟ್ಟುಕೊಂಡು, ಎಲ್ಲಾ ಪ್ರೈಮರಿ ಶಾಲಾ ಗುರುಗಳನ್ನು, ಸ್ನೇಹಿತರನ್ನೂ ಆಹ್ವಾನಿಸಿದ. ಜೊತೆಗೆ ಮದುವೆ ಸಂಧರ್ಭದಲ್ಲೇ ಸಾಹಿತ್ಯಾಸಕ್ತನಾದ ತಾನು ತನ್ನದೊಂದು ಕವನ ಸಂಕಲನ “ಜೇನು” ಬಿಡುಗಡೆ ಮಾಡಿದ. ನಾನು ಹೋಗಿ ಬಂದದ್ದಾಯಿತು. ಸದ್ಯಕ್ಕೆ ಗೋವೆಯ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವ, ದೊಡ್ಡ ಹುದ್ದೆಯ ಪಾಲಾದರೂ ಅದೇ ಸೌಜನ್ಯ, ಜ್ಞಾಪಕ, ಸ್ನೇಹಿತರು, ಗುರುಗಳು, ಪರಿಚಯಸ್ಥರನ್ನೂ ಮೊದಲಿನ ಸಂಪರ್ಕದಂತೆ ಕಾಣುವ ಆತನ ಗುಣ ನನಗಿಷ್ಟವಾಯಿತು. ಮೊನ್ನೆ ಮಗಳ “ನಾಮಕರಣ” ದ ನೆಪದಲ್ಲಿ ಪುನಃ ಎಲ್ಲರನ್ನೂ ಆಹ್ವಾನಿಸಿದ.
ನನ್ನ ಕೆಲ ಸ್ನೇಹಿತರಾದ ಸಕ್ರಿಹಳ್ಳಿ ಕೊಟ್ರೇಶ್, ಅಕ್ಕಿ ಮಲ್ಲಿಕಾರ್ಜುನ, ಬಸವರಾಜ್, ಇತ್ಯಾದಿ ಎಲ್ಲರೂ ಸಿಕ್ಕ ಸಂತೋಷದಲ್ಲಿ ಡಾ.ಕೊಟ್ರಸ್ವಾಮಿ, ನಮ್ಮ ಪ್ರೈಮರಿ ಶಾಲಾ ಗುರುಗಳಾದ ಶ್ರೀ ಚಂದ್ರಶೇಖರಯ್ಯ ಅವರೊಂದಿಗೆ ಒಂದು ಫೋಟೋ ತೆಗೆಸಿಕೊಂಡೆವು. ಕಲಿಸಿದ ಇಪ್ಪತ್ತೈದು ವರ್ಷಗಳ ನಂತರವೂ ಶಿಷ್ಯರನ್ನು ಕಂಡು ಖುಷಿಯಾದ ಗುರುಗಳು, ಅಷ್ಟೇ ಗೌರವದಿಂದ ಆದರಿಸಿದ, ವೃತ್ತಿ, ವ್ಯಾಪಾರ, ಪ್ರವೃತ್ತಿಯಲ್ಲಿ ತೊಡಗಿಸಿಕೊಂಡ ಶಿಷ್ಯರನ್ನು ಮೆಚ್ಚಿದರು.ಬಹಳ ಹೊತ್ತಿನ ನಂತರ ನಮ್ಮ ಇನ್ನೊಬ್ಬ ಪ್ರೈಮರಿ ಶಾಲಾ ಗುರುಗಳಾದ ಶ್ರೀ ವೀರಭದ್ರ ಗೌಡ ಇವರು ಸೇರಿದರು. ಆಗ ಮಾತ್ರ ಕೆಂಪು ದೀಪದ ಕಾರಿನ ಧ್ವನಿ ನಮ್ಮ ಸುತ್ತ ಇದೆಯೇನೋ ಅನ್ನುವಂತಿತ್ತು. ಅಂದಹಾಗೆ ನಮ್ಮೆಲ್ಲರ ಫೋಟೋ ತೆಗೆದವನೂ ಸಹ ನಮ್ಮ ಸಹಪಾಠಿ ಮಹೇಶ….
0 comments:
Post a Comment