ಜಿಲ್ಲಾ ಪಂಚಾಯತ್ ವತಿಯಿಂದ ಪ್ರಸಕ್ತ ಸಾಲಿಗೆ ರಾಜೀವಗಾಂಧಿ ಚೈತನ್ಯ ಯೋಜನೆಯಡಿ ವಿವಿಧ ವೃತ್ತಿ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜೀವ್‌ಗಾಂಧಿ ಚೈತನ್ಯ ಯೋಜನೆಯಡಿ ಅನುಷ್ಠಾನದ ಮೂಲಕ ಗ್ರಾಮೀಣ ಪ್ರದೇಶದ ೧ ಲಕ್ಷ ಯುವ ಜನರಿಗೆ ಸ್ವಯಂ ಉದ್ಯೋಗ, ೧ ಲಕ್ಷ ಗ್ರಾಮೀಣ ಯುವ ಜನರಿಗೆ ವೃತ್ತಿ ತರಬೇತಿ ಮತ್ತು ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. ಇದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ, ಎನ್‌ಆರ್‌ಎಲ್‌ಎಂ) ಯೋಜನೆಯ ಭಾಗವಾಗಿದ್ದು, ಈ ಯೋಜನೆಯಡಿ ಅರ್ಹ ಗ್ರಾಮೀಣ ಯುವಕ/ಯುವತಿಯರಿಗೆ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸರ್ಕಾರಿ ಯೋಜನೆಗಳ ಪ್ರತಿಫಲ ಪಡೆಯದ ಗ್ರಾಮೀಣ ಯುವ ಜನರಿಗೆ ಲಾಭದಾಯಕ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದರ ಮುಖಾಂತರ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಜನರನ್ನು ಯಶಸ್ವಿ ಉದ್ಯಮಶೀಲರನ್ನಾಗಿಸಿ ಸ್ವಯಂ ಉದ್ಯೋಗಿಗಳಾಗುವಂತೆ ಪ್ರೇರಣೆ ನೀಡುವುದು, ನಿರುದ್ಯೋಗಿ ಯುವಕ/ಯುವತಿಯರಿಗೆ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ ವಿವಿಧ ಸಂಘ ಸಂಸ್ಥೆಗಳನ್ನು ಸರ್ಕಾರದಲ್ಲಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗ/ಕೆಲಸ ಪಡೆಯುವಲ್ಲಿ ಸಹಾಯ ಮಾಡುವುದು, ಗ್ರಾಮೀಣ ಯುವಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವುದು, ನಿರುದ್ಯೋಗಿ ಯುವಜನರನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳೊಂದಿಗೆ ಜೋಡಿಸುವುದು, ರಾಜೀವಗಾಂಧಿ ಚೈತನ್ಯ ಯೋಜನೆ ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವ ಜನರಿಗಾಗಿ ಸ್ವ-ಉದ್ಯೋಗ ಹಾಗೂ ಕೌಶಲ್ಯ ತರಬೇತಿಗಳನ್ನು ನೀಡುವ ಮುಖಾಂತರ ಉದ್ಯೋಗ ಕಲ್ಪಿಸುವುದು ಈ ವಿಶೇಷ ಯೋಜನೆಯ ಉದ್ದೇಶವಾಗಿದೆ.
ಪ್ರತಿ ಗ್ರಾಮ ಪಂಚಾಯತಿಯಿಂದ ೪೦ ಯುವಜನರಿಗೆ ಸ್ವ-ಉದ್ಯೋಗ, ವೃತ್ತಿ ತರಬೇತಿ ಮತ್ತು ಉದ್ಯೋಗ ಕಲ್ಪಿಸುವ ಗುರಿಯನ್ನು ಹೊಂದಲಾಗಿದ್ದು, ಈ ಯೋಜನೆಯಡಿ ಸೌಲಭ್ಯ ಪಡೆಯಲು ವಿವಿಧ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ೧೮ ರಿಂದ ೩೫ ವಯೋಮಿತಿಯೊಳಗಿನ ಯುವ ಜನರಾಗಿರಬೇಕು, ಇದುವರೆಗೆ ಸರಕಾರದ ಯಾವುದೇ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದಿರಬಾರದು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿರುದ್ಯೋಗಿಯಾಗಿರಬೇಕು, ಯೋಜನೆಯ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಗೆ ಡಿ.೨೪ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.
0 comments:
Post a Comment