PLEASE LOGIN TO KANNADANET.COM FOR REGULAR NEWS-UPDATES

 ಸರ್ಕಾರಿ ನೌಕರರಿಗೆ ನೂತನವಾಗಿ ಜಾರಿಗೊಳಿಸಲಾಗಿರುವ ಎನ್.ಪಿ.ಎಸ್. ಪಿಂಚಣಿ ಯೋಜನೆಯ ಬಗ್ಗೆ ಸಮಗ್ರ ಪರಿಶೀಲನೆಯ ನಂತರವೇ ಸರ್ಕಾರ ಜಾರಿಗೊಳಿಸಿದ್ದು, ಈ ಕುರಿತಂತೆ ಸರ್ಕಾರಿ ನೌಕರರು ಯಾವುದೇ ನೌಕರರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಹೇಳಿದರು.
  ಕರ್ನಾಟಕ ರಾಜ್ಯ ಸಕಾರಿ ನೌಕರರ ಸಂಘ ಕೊಪ್ಪಳ ಹಾಗೂ ರಾಜ್ಯ ಖಜಾನೆ ನೌ
ಕರರ ಸಂಘ, ಬೆಂಗಳೂರು ಇವರ ಸಹಯೋಗದೊಂದಿಗೆ ನೂತನ ಪಿಂಚಣಿ ಯೋಜನೆ (ಎನ್.ಪಿ.ಎಸ್) ಕುರಿತು ಕೊಪ್ಪಳ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ನೂತನ ಪಿಂಚಣಿ ಯೋಜನೆಯು ರಾಜ್ಯದಲ್ಲಿ ೨೦೦೬ ರ ಏಪ್ರಿಲ್ ೦೧ ರಿಂದ ನೇಮಕಗೊಂಡ ಎಲ್ಲ ರಾಜ್ಯ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿ ಜಾರಿಯಾಗಿದೆ.  ಈ ನೌಕರರಿಗೆ ಹೊಸದಾಗಿ ವ್ಯಾಖ್ಯಾನಿಸಿರುವ ಅಂಶದಾಯಿ ಕೊಡುಗೆ ನಿವೃತ್ತಿ ವೇತನ ಯೋಜನೆ ಕುರಿತಂತೆ ಬಹಳಷ್ಟು ನೌಕರರಲ್ಲಿ ಮಾಹಿತಿಯ ಕೊರತೆಯಿಂದಾಗಿ ಗೊಂದಲ ಇದೆ.  ಸರ್ಕಾರಿ ನೌಕರರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು, ಹಾಗೂ ಸಾಧಕ, ಬಾಧಕಗಳ ಬಗ್ಗೆ ಸಮಗ್ರ ಪರಿಶೀಲನೆಯ ನಂತರವೇ ಈ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಿರುವುದರಿಂದ, ನೌಕರರು ಈ ಯೋಜನೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ.    ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಪ್ಪಳದಲ್ಲಿ ನೂತನ ಪಿಂಚಣಿ ಯೋಜನೆಯ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಿದ್ದು, ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಹೇಳಿದರು.
  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಕೃಷ್ಣ ಡಿ ಉದಪುಡಿ ಅವರು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸರ್ಕಾರ ಜಾರಿಗೊಳಿಸುವ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮಹತ್ವದ ಹೊಣೆ ಸರ್ಕಾರಿ ನೌಕರರಿಗೆ ಇದೆ.  ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಕಾರ್ಯವನ್ನು ನೌಕರರು ಪ್ರಾಮಾಣಿಕವಾಗಿ ಮಾಡಬೇಕಿದೆ.  ನೌಕರರ ಸಾರ್ವಜನಿಕ ಸೇವೆಯ ಗುಣಮಟ್ಟ ಉತ್ತಮವಾಗಿದ್ದಲ್ಲಿ, ನೌಕರರ ಸಮಸ್ಯೆಗಳಿಗೆ ಸರ್ಕಾರವೂ ಸಹ ಉತ್ತಮವಾಗಿ ಸ್ಪಂದಿಸುತ್ತದೆ.  ನೂತನ ಪಿಂಚಣಿ ಯೋಜನೆಯ ಬಗ್ಗೆ ನೌಕರರ ಹಲವಾರು ಅನುಮಾನಗಳಿಗೆ ಕಾರ್ಯಾಗಾರದಿಂದ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದರು.
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಮಾತನಾಡಿ, ನೂತನ ಪಿಂಚಣಿ ಯೋಜನೆಯಡಿ ನೌಕರರ ವೇತನ ಹಾಗೂ ತುಟ್ಟಿಭತ್ಯೆಯ ಶೇ. ೧೦ ರಷ್ಟು ಮೊತ್ತವನ್ನು ಕಡಿತಗೊಳಿಸಲಾಗುತ್ತಿದ್ದು, ಇಷ್ಟೇ ಪ್ರಮಾಣದ ಮೊತ್ತವನ್ನು ಸರ್ಕಾರವೂ ಸಹ ಪಾವತಿಸುತ್ತದೆ.  ನೌಕರರ ನಿವೃತ್ತಿಯ ನಂತರ  ಒಟ್ಟು ಮೊತ್ತವನ್ನು ನೀಡುವ ಕುರಿತು ಹಾಗೂ ಕುಟುಂಬ ಪಿಂಚಣಿ ಕುರಿತಂತೆ ಬಹಳಷ್ಟು ಗೊಂದಲ ಇರುವುದು ವಾಸ್ತವ ಸಂಗತಿಯಾಗಿದೆ.  ನೂತನ ಪಿಂಚಣಿ ಯೋಜನೆಯಡಿ ನೌಕರರಿಂದ ಕಡಿತಗೊಳಿಸಿದ ಹಣವನ್ನು ಸರ್ಕಾರ ಎಲ್.ಐ.ಸಿ., ಯುಟಿಐ, ಎಸ್.ಬಿ.ಐ. ನಲ್ಲಿ ಅಥವಾ ಇತರೆ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿರುವ ಬಗ್ಗೆ, ಅಲ್ಲದೆ ಇದರ ಸಾಧಕ-ಬಾಧಕ, ನೌಕರರ ಪಿಂಚಣಿ ಯೋಜನೆಯ ಮೇಲೆ ಇದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ನೌಕರರಿಗೆ ಮಾಹಿತಿ ದೊರೆಯುವಂತಾಗಬೇಕು.  ಹೆಚ್.ಆರ್.ಎಂ.ಎಸ್. ತಂತ್ರಾಂಶದ ಬಗ್ಗೆ ನೌಕರರಿಗೆ ಇನ್ನಷ್ಟು ತರಬೇತಿಯ ಅಗತ್ಯವಿದೆ ಎಂದರು.
  ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೌಕರರಿಗೆ ಹೊಸದಾಗಿ ವ್ಯಾಖ್ಯಾನಿಸಿರುವ ಅಂಶದಾಯಿ ಕೊಡುಗೆ ನಿವೃತ್ತಿ ವೇತನ ಯೋಜನೆ ಜಾರಿಯಾಗಿ ೭ ವರ್ಷಗಳೇ ಕಳೆದಿದ್ದರೂ, ಬಹಳಷ್ಟು ನೌಕರರಿಗೆ ಈ ಬಗ್ಗೆ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ.  ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮಾಹಿತಿ ನೀಡುವಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
  ರಾಜ್ಯ ಮಟ್ಟದ ’ನೌಕರರ ಬಂಧು’ ಮಾಸ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಆರ್. ಸುಂದರರಾಜ್, ಸಂಪಾದಕ ಎಂ.ಬಿ. ಪೂಜಾರ್ ಅಲ್ಲದೆ ಬೆಂಗಳೂರಿನಲ್ಲಿ ಎನ್.ಪಿ.ಎಸ್. ಸೆಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಖಜಾನೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ನಾರಾಯಣ ಅವರು ಪಾಲ್ಗೊಂಡು, ಸರ್ಕಾರದ ನೂತನ ಅಂಶದಾಯಿ ಕೊಡುಗೆ ನಿವೃತ್ತಿ ವೇತನ ಯೋಜನೆ ಕುರಿತಂತೆ ಸಮಗ್ರ ವಿವರವನ್ನು ನೀಡಿದರು.  ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭು ಕಿಡದಾಳ, ನೌಕರರ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಪ್ರೇಮನಾಥ ಗರಗ ಕಾರ್ಯಕ್ರಮ ಕುರಿತು ಮಾತನಾಡಿದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಖಜಾನಾಧಿಕಾರಿ ಎಂ.ಹೆಚ್. ಕಳ್ಳೇರ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ರಾಜ್ಯ ಪರಿಷತ್ ಸದಸ್ಯ ಧನಂಜಯ ಮಾಲಗಿತ್ತಿ,  ಖಜಾಂಚಿ ಸುಶಿಲೇಂದ್ರರಾವ್ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.  ನೂತನ ಪಿಂಚಣಿ ಯೋಜನೆ ಕುರಿತ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು ೫೦೦ ಕ್ಕೂ ಹೆಚ್ಚು ನೌಕರರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top