ಜನರು ಭಕ್ತಿಯಲ್ಲಿ ಡಾಂಭಿಕತನ ಬಿಟ್ಟು ವ್ಯಚಾರಿಕತೆ ಬೆಳೆಸಿಕೊಳ್ಳಬೇಕು. ಜಾತಿ-ಮತ-ಪಂಥಗಳನ್ನು ತೊರೆದು ಕನಕದಾಸರಂತಹ ದಾಸವರೇಣ್ಯರು ಬೋಧಿಸಿದ ತತ್ವಗಳನ್ನು ರೂಢಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳುವಂತೆ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಕರೆ ನೀಡಿದ್ದಾರೆ.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಹಾಗೂ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಮುತ್ತು ಬಂದಿದೆ ಕೇರಿಗೆ, ಕನಕದಾಸರ ಉಪನ್ಯಾಸ-ವಾಚನ-ಗಾಯನ ರಸಗ್ರಹಣ ಶಿಬಿರದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಮನುಷ್ಯನಿಗೆ ವಿಚಾರ ಮುಖ್ಯ. ವಿಚಾರ ಇಲ್ಲದಿದ್ದರೆ ಮನುಷ್ಯನ ಅಭಿವೃದ್ಧಿ ಅಸಾಧ್ಯ. ದೇವರ ಮೇಲಿನ ಭಕ್ತಿಯೇ ಮುಖ್ಯ ಅನ್ನುವುದಕ್ಕಿಂತ ಕನಕದಾಸರು ಭಕ್ತಿಯ ಮೂಲಕ ಸಮಾಜದ ಪರಿವರ್ತನೆ ಮಾಡಲು ಶ್ರಮಿಸಿದರು. ಕನಕದಾಸರ ರಾಮ ಧಾನ್ಯ ಚರಿತ್ರೆ ಸಮಾಜದಲ್ಲಿನ ವರ್ಗ, ವರ್ಣ ಮತ್ತು ಜಾತಿ ವ್ಯವಸ್ಥೆಯನ್ನು ಬಿಂಬಿಸುತ್ತದೆ. ಮೇಲ್ವರ್ಗದವರು, ಬುದ್ಧಿವಂತರು, ಕೆಳ ವರ್ಗದವರು ದಡ್ಡರು ಎನ್ನುವ ಮೂಢ ಭಾವನೆ ಸಮಾಜದಲ್ಲಿ ಮನೆ ಮಾಡಿದೆ. ಹುಟ್ಟಿನಿಂದ ಯಾರೂ ಮೇಲಲ್ಲ, ಕೀಳಲ್ಲ ಎನ್ನುವ ಭಾವನೆಯನ್ನು ಕನಕದಾಸರು ರಾಮ ಧಾನ್ಯ ಚರಿತ್ರೆ ಮೂಲಕ ಜನರಿಗೆ ಮನದಟ್ಟು ಮಾಡಿ ಕೊಟ್ಟಿದ್ದಾರೆ.
ಕನಕ ಮತ್ತು ಬಸವಣ್ಣನವರಲ್ಲಿ ಕೆಲವು ಸಾಮ್ಯತೆಗಳಿವೆ. ಇಬ್ಬರಲ್ಲಿಯೂ ಭಕ್ತಿಯ ಪಾರಮ್ಯವಿದೆ ಹಾಗೂ ಸಾಮಾಜಿಕ ಕಳಕಳಿಯಿದೆ. ಜಾತಿ-ಮತ-ಪಂಥಗಳನ್ನು ತೊರೆದು ದಾಸವರೇಣ್ಯರು ಬೋಧಿಸಿದ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಲ್ಲಮಪ್ರಭು ಹೇಳಿದರು.
ಶ್ರೀ ಗವಿಸಿದ್ಧೇಶ್ವರ ಸ್ವರ ಸಂಚಾರ ಕಲಾ ತಂಡದ ವೀರೇಶ ಹಿಟ್ನಾಳ ಮತ್ತು ತಂಡದವರು ಕನಕದಾಸರ ಕೀರ್ತನೆಗಳನ್ನು ಹಾಡಿ ಜನರ ಮನ ರಂಜಿಸಿದರು. ಬಾಲಕರ ಸರಕಾರಿ ಪ. ಪೂ. ಕಾಲೇಜು ಪ್ರಾಂಶುಪಾಲ ಎಸ್. ಬಿ. ರಾಜೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ ಪ್ರಾಸ್ತಾವಿಕ ನುಡಿಗಳನ್ನು ಆಡಿ ಸ್ವಾಗತಿಸಿದರು. ಕನಕ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾ ಅದ್ಯಕ್ಷ ಬಸವರಾಜ ಆಕಳವಾಡಿ ಹಾಗೂ ಪತ್ರಕರ್ತ ವೈ. ಬಿ. ಜೂಡಿ ಅತಿಥಿಗಳಾಗಿ ಭಾಗವಹಿಸಿದ್ದರು. ಉಪನ್ಯಾಸಕ ಬಸವರಾಜ ಸೂಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
0 comments:
Post a Comment