ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ದಾಳಿಂಬೆ ಬೆಳೆಗಾರರಿಗೆ ವಿದರ್ಭ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸಂಸದ ಶಿವರಾಮಗೌಡ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ನಿಯಮ ೩೭೭ ರ ಅಡಿಯಲ್ಲಿ ಕೇಂದ್ರ ಸಚಿವರಿಗೆ ಲಿಖಿತವಾಗಿ ಬೇಡಿಕೆ ಸಲ್ಲಿಸಿರುವ ಸಂಸದ ಶಿವರಾಮಗೌಡ ಅವರು, ಉತ್ತರ ಕರ್ನಾಟಕದ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಾಳಿಂಬೆ ಪ್ರಮುಖ ಬೆಳೆಯಾಗಿದೆ. ಈ ಹಿಂದೆ ರಫ್ತು ಮಾಡುವಂತಹ ಗುಣಮಟ್ಟದ ದಾಳಿಂಬೆ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ದುರ್ದೈವವಶಾತ್ ನೀರಿನ ಕೊರತೆ ಮತ್ತು ದುಂಡಾಣು ಅಂಗಮಾರಿ ರೋಗದಿಂದಾಗಿ, ದಾಳಿಂಬೆ ಬೆಳೆ ಸಂಪೂರ್ಣ ಹಾಳಾಗಿದ್ದು, ದಾಳಿಂಬೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗೆ ಸಮಸ್ಯೆಗಳ ಸರಮಾಲೆಯಿಂದಾಗಿ ದಾಳಿಂಬೆ ಬೆಳೆ ಇಳುವರಿ ಅತ್ಯಂತ ಕಡಿಮೆ ಆಗಿದೆ. ಇದರಿಂದಾಗಿ ಇಲ್ಲಿನ ದಾಳಿಂಬೆ ಬೆಳೆಗಾರರು ಸುಮಾರು ೧೦೦ ಕೋಟಿ ರೂ.ಗಳಷ್ಟು ಮೊತ್ತದ ಬೆಳೆ ನಷ್ಟ ಅನುಭವಿಸಿದ್ದಾರೆ. ಅಲ್ಲದೆ ದಾಳಿಂಬೆ ಬೆಳೆ ನಾಶದಿಂದಾಗಿ ರೈತರು ಸಾಲದ ಬಾಧೆಗೆ ಸಿಲುಕಿದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು ೯ ಸಾವಿರ ರೈತರು ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ಅಂದಾಜು ೨೦೬ ಕೋಟಿ ರೂ.ಗಳಷ್ಟು ಸಾಲ ಮಾಡಿರುವುದಾಗಿ ತಿಳಿದುಬಂದಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿತ್ತು. ಆದರೆ ಅಂಗಮಾರಿ ರೋಗದಿಂದಾಗಿ, ಇದೀಗ ಕೆಲವೇ ಕೆಲವು ರೈತರು ಮಾತ್ರ ದಾಳಿಂಬೆ ಬೆಳೆಯುತ್ತಿದ್ದು, ಬೆಳೆ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ. ಇದೀಗ ಇಲ್ಲಿನ ದಾಳಿಂಬೆ ಬೆಳೆಗಾರರಲ್ಲಿ ಮತ್ತೆ ಬೆಳೆ ಬೆಳೆಯುವ ಬಗ್ಗೆ ಆಶಾಭಾವನೆಯನ್ನೇ ಕಳೆದುಕೊಂಡಿದ್ದಾರೆ. ಬೇರೆ ಬೆಳೆ ಬೆಳೆಯಬೇಕೆಂದರೆ, ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಲು ರೈತರು ತೀವ್ರ ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಲ್ಲಿನ ದಾಳಿಂಬೆ ಬೆಳೆಗಾರರಿಗೆ ಕೇಂದ್ರ ಸರ್ಕಾರ ವಿದರ್ಭ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆಧಾರವಾಗಬೇಕು ಎಂದು ಕೊಪ್ಪಳ ಸಂಸದ ಶಿವರಾಮಗೌಡ ಅವರು ಮನವಿ ಮಾಡಿದ್ದಾರೆ .
0 comments:
Post a Comment