ಮಕ್ಕಳನ್ನು ಸುಂದರ ಮೂರ್ತಿಗಳಾಗಿಸುವ ಶಿಕ್ಷಕರು ನಿರಂತರ ಶ್ರಮವಹಿಸಿದಾಗ ಮಾತ್ರ ವಿದ್ಯಾರ್ಥಿಗಳು ಭವ್ಯ ಭಾರತಕ್ಕೆ ಕೊಡುಗೆ ನೀಡಬಲ್ಲ ಪ್ರಜೆಯಾಗಿ ಹೊರ ಹೊಮ್ಮಲು ಸಾಧ್ಯವೆಂದು ಗವಿಸಿದ್ದೇಶ್ವರ ಡಿ.ಎಡ್. ಕಾಲೇಜ ಉಪನ್ಯಾಸಕ ಎಲ್.ಎಸ್. ಹೊಸಮನಿ ಹೇಳಿದರು.
ಅವರು ಸೋಮವಾರದಂದು ಕೊಪ್ಪಳ ತಾಲೂಕಿನ ಗಿಣಿಗೇರ ಗ್ರಾಮದ ಬೇಂದ್ರೆ ಪಬ್ಲಿಕ್ ಸ್ಕೂಲ್‌ನಲ್ಲಿ ಜರುಗಿದ ಮಕ್ಕಳ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸಬೇಕು. ಬಾಲ್ಯದಿಂದಲೇ ಉತ್ತಮ ಅಡಿಪಾಯ ಹಾಕಿದಾಗ ವಿದ್ಯಾರ್ಥಿ ಉನ್ನತ ಮಟ್ಟಕ್ಕೆ ಏರಲು ಸಾಧ್ಯ. ಮಗುವಿನ ಆಸಕ್ತಿಯನ್ನು ಆಲಿಸಿ ಅದಕ್ಕೆ ತಕ್ಕಂತೆ ಶಿಕ್ಷಣ ನೀಡಿ ಎಂದರು.
ಅತಿಥಿಗಳಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಬಸವರಾಜ ಶಿರಗುಂಪಿಶೆಟ್ಟರ್, ಮಹಾನ್ ವ್ಯಕ್ತಿಗಳ ದಿನಾಚರಣೆಯ ಉದ್ದೇಶ ಅವರ ಆದರ್ಶ ತತ್ವಗಳನ್ನು ಸ್ಮರಿಸಿ ಅನುಕರಣೆ ಮಾಡುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜವಾಹರಲಾಲ ನೆಹರು ಪಾತ್ರದಾರಿ ಶಾಲಾ ವಿದ್ಯಾರ್ಥಿ ಗಿರೀಶ ಲೋಕರೆಡ್ಡಿ ವಹಿಸಿದ್ದರು. ಅತಿಥಿಗಳಾಗಿ ಗ್ರಾ.ಪಂ. ಸದಸ್ಯ ಲಕ್ಷ್ಮಣ ಡೊಳ್ಳಿನ್, ಶಾಲಾ ಪಾಲಕರಾದ ಶರಭಯ್ಯ ರ‍್ಯಾವಳಮಠ, ಗವಿಸಿದ್ದಪ್ಪ ಹ್ಯಾಟಿ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ವೇಷಭೂಷಣ ಸ್ಪರ್ಧೆ ವಚನ ಕವನ ಹಾಗೂ ಹಾಡುಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರಾರಂಭದಲ್ಲಿ ಮೇಘನಾ ಮತ್ತು ಅಪ್ರೀತಾ ಪ್ರಾರ್ಥಿಸಿದರು. ಸರಸ್ವತಿ ಗೆಜ್ಜಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾರದಾ ಕೊರಗಲ್ಲ ನಿರೂಪಿಸಿದರು. ಕೊನೆಯಲ್ಲಿ ರಾಘವೇಂದ್ರ ಹನಸಿ ವಂದಿಸಿದರು.
0 comments:
Post a Comment