PLEASE LOGIN TO KANNADANET.COM FOR REGULAR NEWS-UPDATES

  ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ನಿರ್ಧರಿಸಲಾಗಿದ್ದು, ಡಿ. ೦೨ ರಿಂದ ಗಂಗಾವತಿ ಮತ್ತು ಕಾರಟಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವಂತೆ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದ್ದಾರೆ.
  ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿ ಮಾರುಕಟ್ಟೆಯಲ್ಲಿ ಭತ್ತ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಭತ್ತದ ಧಾರಣೆ ಪ್ರತಿ ಕ್ವಿಂಟಾಲ್‌ಗೆ ರೂ. ೧೬೮೦ ರಿಂದ ೧೭೦೦ ರವರೆಗೆ ಇದೆ.  ಮುಂಬರುವ ದಿನಗಳಲ್ಲಿ ಭತ್ತದ ಬೆಲೆ ಕುಸಿಯುವ ಸಾಧ್ಯತೆ ಇದ್ದು ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವುದು ಸೂಕ್ತವಾಗಿದೆ.  ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ ರೂ. ೧೩೧೦ ಹಾಗೂ ಎ-ಗ್ರೇಡ್ ಭತ್ತಕ್ಕೆ ರೂ. ೧೩೪೫ ರಂತೆ ಬೆಂಬಲ ಬೆಲೆ ನಿಗದಿಪಡಿಸಿದೆ.  ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ ೨೯೦ ರೂ.ಗಳ ಪ್ರೋತ್ಸಾಹಧನ ಘೋಷಿಸಿದ್ದು, ಇದರಿಂದ ಒಟ್ಟಾರೆ ಪ್ರತಿ ಕ್ವಿಂಟಾಲ್ ಎಫ್.ಎ.ಕ್ಯೂ. ಗುಣಮಟ್ಟದ ಭತ್ತಕ್ಕೆ ಬೆಂಬಲ ಬೆಲೆ ರೂ. ೧೬೦೦ ಆಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಈಗಾಗಲೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಇವರನ್ನು ಖರೀದಿ ಏಜೆನ್ಸಿಯಾಗಿ ಸರ್ಕಾರ ನೇಮಿಸಿದೆ.  ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತವನ್ನು ದಾಸ್ತಾನು ಮಾಡಲು ಗೋದಾಮುಗಳನ್ನು ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು.  ಪ್ರತಿ ಖರೀದಿ ಕೇಂದ್ರದಲ್ಲಿ ಇಬ್ಬರು ಗ್ರೇಡರ್‌ಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಜಂಟಿ ಕೃಷಿ ನಿರ್ದೇಶಕರು ಮಾತನಾಡಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಖುಷ್ಕಿ ಮತ್ತು ನೀರಾವರಿ ಸೇರಿದಂತೆ ಭತ್ತವು ೩೮೦೬೩ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ೨. ೬೧ ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದರು.  ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ಮಾತನಾಡಿ, ಗಂಗಾವತಿ ಮತ್ತು ಕಾರಟಗಿ ಮಾರುಕಟ್ಟೆಯಲ್ಲಿ ಭತ್ತವು, ಹೆಚ್ಚಿನ ಪ್ರಮಾಣದಲ್ಲಿ ಅಂದರೆ,  ಪ್ರಸ್ತುತ ವಾರದಲ್ಲಿ ೪೬೦೦೦ ಕ್ವಿಂಟಾಲ್ ಭತ್ತ ಆವಕವಾಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುವ ಸಾಧ್ಯತೆ ಇದೆ.  ರೈತರು ತಮ್ಮ ಜಮೀನಿನಲ್ಲಿ ಭತ್ತ ಬೆಳೆದ ಬಗ್ಗೆ ಆಯಾ ಕಂದಾಯ ಅಧಿಕಾರಿಗಳಿಂದ ಪಹಣೆಯನ್ನು ಕಡ್ಡಾಯವಾಗಿ ಪಡೆದು, ಹಾಜರುಪಡಿಸಬೇಕಾಗುತ್ತದೆ ಎಂಬುದಾಗಿ ಸಭೆಗೆ ವಿವರಿಸಿದರು.
  ಸಭೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಸಹಕಾರ ಸಂಘಗಳ ಉಪನಿಬಂಧಕರು, ಕೃಷಿ ಮಾರಾಟ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top