PLEASE LOGIN TO KANNADANET.COM FOR REGULAR NEWS-UPDATES

  ನ್ಯಾಯವಾದಿಗಳು ಕಕ್ಷಿದಾರರಿಗೆ ನ್ಯಾಯದಾನ ಕೊಡಿಸುವುದರ ಜೊತೆಗೆ ಸಾಮಾಜಿಕ ಕಳಕಳಿ ಹೊಂದುವುದು ಅಗತ್ಯವಾಗಿದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಬಿ.ಎಸ್. ಇಂದ್ರಕಲಾ ಅವರು ಅಭಿಪ್ರಾಯಪಟ್ಟರು.
  ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ಕಾನೂನು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

  ಸರ್ವರಿಗೂ ಸಮಾನವಾದ ಸದಾವಕಾಶಗಳು ಹಾಗೂ ಸಮಾನವಾದ ನ್ಯಾಯದಾನವು ಉಚಿತವಾಗಿ ದೊರೆಯಬೇಕು ಎನ್ನುವ ಸದುದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ೧೯೯೫ ರ ನವೆಂಬರ್ ೦೯ ರಂದು ಅನುಷ್ಠಾನಕ್ಕೆ ಬಂದ ದಿನವನ್ನು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.  ೧೯೫೨ ರಿಂದಲೂ ಕಾನೂನು ಸೇವಾ ಪ್ರಾಧಿಕಾರ ರಚನೆ ಸಂಬಂಧ ಪ್ರಯತ್ನಗಳು ನಡೆದಿತ್ತು.  ಕಾನೂನು ಸೇವೆಗಳ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಸಾರ್ವಜನಿಕರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಕಾನೂನಿನ ಅರಿವಿನ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ.  ಮಹಿಳೆಯರಿಗೆ ಸಂವಿಧಾನಾತ್ಮಕವಾಗಿ ತಮಗಿರುವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರಮಿಸುತ್ತಿದ್ದು, ಶೋಷಿತರಿಗೆ ನ್ಯಾಯ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ.  ಗ್ರಾಮೀಣ ಪ್ರದೇಶಗಳ್ಲಲಿಯೂ ಕಾನೂನಿನ ಅರಿವು ಮೂಡಿಸುವಲ್ಲಿ ನ್ಯಾಯಾಧೀಶರುಗಳು ತಮ್ಮನ್ನು ತಾವು ತೊಡಗಿಸಿಕೊಂಡು, ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ.  ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಕಾನೂನಿನ ಪರಿಮಿತಿಯಲ್ಲಿ ಇರುತ್ತಾನೆ.  ಎಲ್ಲದಕ್ಕೂ ಕಾನೂನು ಪರಿಮಿತಿಗೆ ಒಳಪಡುವ ಸಮಾಜದ ಪ್ರಕ್ರಿಯೆಗಳಲ್ಲಿ ಕಾನೂನಿಗೆ ಅತ್ಯಂತ ಮಹತ್ವವಿದೆ.  ಕಾನೂನಿನ ಅರಿವಿಲ್ಲವೆಂದುಕೊಂಡು, ಯಾವುದೇ ತಪ್ಪೆಸಗಿದರೂ, ಕಾನೂನಿನಲ್ಲಿ ಕ್ಷಮೆ ದೊರೆಯುವುದಿಲ್ಲ.  ಕಾನೂನಿನ ಅರಿವು ಹೊಂದಿದಲ್ಲಿ ಮಾತ್ರ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಲು ಸಾಧ್ಯ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಬಿ.ಎಸ್. ಇಂದ್ರಕಲಾ ಅವರು ನುಡಿದರು.
  ಕಾರ್ಯಕ್ರಮದ ಅಂಗವಾಗಿ ಸಂವಿಧಾನದತ್ತ ಮಹಿಳೆಯರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಡೀನ್ ಹಾಗೂ ನಿರ್ದೇಶಕ ಸಿ.ಎಸ್. ಪಾಟೀಲ್ ಅವರು ಮಾತನಾಡಿ, ಸಂವಿಧಾನದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನವಾದ ಹಕ್ಕುಗಳಿದ್ದು, ಲಿಂಗ ಸಮಾನತೆಯಲ್ಲಿ ಯಾವುದೇ ತಾರತಮ್ಯ ಎಸಗಿದರೂ ಅದು ಸಂವಿಧಾನ ಬಾಹಿರವಾಗುತ್ತದೆ.  ಉದಾಹರಣೆಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಎಂಬುದು ಸಂವಿಧಾನಾತ್ಮಕ ಹಕ್ಕು.  ಆದರೆ ಇದರ ಅರಿವಿಲ್ಲದೆ ಕೂಲಿ ಹಣ ಪಾವತಿಯಲ್ಲಿಯೂ ತಾರತಮ್ಯ ಎಸಗಿದಲ್ಲಿ, ಮಹಿಳೆಯರು ಅದನ್ನು ವಿರೋಧಿಸಬೇಕು.  ಮಹಿಳೆಯರು ಯಾರನ್ನೂ ಅವಲಂಬಿಸದೆ, ತಮಗೆ ತಾವೇ ಅಭಿವೃದ್ಧಿಯತ್ತ ಸಾಗಲು ಯತ್ನಿಸಬೇಕು.  ಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ ಮಹಿಳೆಯರು ಮತ್ತು ಮಕ್ಕಳು ತಮ್ಮ ಹೊಲಗಳಲ್ಲಿ ದುಡಿಯದಿದ್ದರೆ, ಅಂತಹ ಮನೆಯಲ್ಲಿ ಬೆಳೆ ಬಾರದ ಪರಿಸ್ಥಿತಿ ಇದೆ.  ಪುರುಷರಲ್ಲಿ ಕೌಟುಂಬಿಕ ಹೊಣೆಗಾರಿಕೆ ಪ್ರಜ್ಞೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.  ಮಹಿಳೆಯರೇ ಇಂತಹ ಪರಿಸ್ಥಿತಿಯನ್ನು ಸರಿಪಡಿಸುವ ಉಪಾಯವನ್ನು ಕಂಡುಕೊಳ್ಳಬೇಕು ಎಂದು ಅವರು ಮಹಿಳೆಯರಿಗೆ ಕಿವಿಮಾತು ಹೇಳಿದರು.
  ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ ಬಬಲಾದಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಲಾ ಅಕಾಡೆಮಿ ಅಧ್ಯಕ್ಷರು ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯೆ ಸಂಧ್ಯಾ ಮಾದಿನೂರ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಪ್ರಾರಂಭದಲ್ಲಿ ಸ್ವಾಗತಿಸಿದರು.  ಕಿರಿಯ ಶ್ರೇಣಿ ನ್ಯಾಯಾಧೀಶರಾದ ಕಾವೇರಿ ಅವರು ಕಾರ್ಯಕ್ರಮ ನಿರೂಪಿಸಿದರು.  ವಕೀಲ ಎಂ. ಹನುಮಂತರಾವ್ ಅವರು ’ಕಾನೂನು ಸೇವಾ ಪ್ರಾಧಿಕಾರ ನಡೆದುಬಂದ ಹಾದಿ’ ಕುರಿತು ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.  ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಸವರಾಜ ಚೆಗರೆಡ್ಡಿ ಸೇರಿದಂತೆ ಅನೇಕ ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top