: ವಿದ್ಯಾರ್ಹತೆಯಲ್ಲಿ ಸಡಿಲಿಕೆ
ಕೊಪ್ಪಳ, ನವೆಂಬರ್ ೨೬ : ವಾರ್ತಾ ಇಲಾಖೆಯ ಗಿರಿಜನ ಉಪಯೋಜನೆಯಡಿ ೨೦೧೩-೧೪ನೇ ಸಾಲಿನಲ್ಲಿ ಪತ್ರಿಕೋದ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಲ್ಯಾಪ್‌ಟಾಪ್ ಹಾಗೂ ಡಿಜಿಟಲ್ ಕ್ಯಾಮೆರಾ ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
ವಿದ್ಯಾರ್ಹತೆ ನಿಯಮಗಳಲ್ಲಿ ಸಡಿಲಿಕೆ ತರಲಾಗಿದ್ದು, ರಾಜ್ಯದಲ್ಲಿ ಪ್ರಸ್ತುತ ಪೂರ್ಣಾವಧಿ ಪದವಿ (ಬಿ.ಎ. ಪತ್ರಿಕೋದ್ಯಮ/ಸಮೂಹ ಸಂವಹನ/ ವಿದ್ಯುನ್ಮಾನ ಮಾಧ್ಯಮ ಅಧ್ಯಯನ ವಿಷಯದಲ್ಲಿ ಪ್ರಥಮ, ದ್ವಿತೀಯ ಹಾಗೂ ಅಂತಿಮ ವರ್ಷ) ಹಾಗೂ ಸ್ನಾತಕೋತ್ತರ ಪದವಿ (ಎಂ.ಎ. ಪ್ರಥಮ ಹಾಗೂ ಅಂತಿಮ ವರ್ಷ)ಗಳಲ್ಲಿ ಪತ್ರಿಕೋದ್ಯಮ/ ಸಮೂಹ ಸಂವಹನ/ ವಿದ್ಯುನ್ಮಾನ ಮಾಧ್ಯಮ ಅಧ್ಯಯನ ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಪ್ರಸ್ತುತ ಪತ್ರಿಕೋದ್ಯಮ ಐಚ್ಛಿಕ ವಿಷಯವನ್ನಾಗಿ ನೀಡುವ ರಾಜ್ಯದ ಎಲ್ಲ ಸರ್ಕಾರಿ ಪದವಿ ಕಾಲೇಜುಗಳ ಪ್ರಾಚಾರ್ಯರು ಹಾಗೂ ಎಲ್ಲ ವಿಶ್ವವಿದ್ಯಾನಿಲಯಗಳ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಮೇಲೆ ತಿಳಿಸಿರುವಂತೆ ತಮ್ಮ ಕಾಲೇಜಿನ / ವಿಭಾಗದ ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪಟ್ಟಿಯನ್ನು ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ಸಂ.೧೭, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು- ೫೬೦೦೦೧, ಕಚೇರಿಗೆ ಹಾಗೂ ಇ-ಮೇಲ್ ವಿಳಾಸ scptspinformation@gmail.com ಕ್ಕೆ ನ. ೩೦ ರ ಒಳಗಾಗಿ ಸಲ್ಲಿಸಲು ಕೋರಿದೆ.
ಪಟ್ಟಿಯಲ್ಲಿ, ವಿದ್ಯಾರ್ಥಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವ್ಯಾಸಂಗ ಮಾಡುತ್ತಿರುವ ಪದವಿ ಹಾಗೂ ತರಗತಿ, ಜಾತಿ ಹಾಗೂ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ ಶೇಕಡವಾರು ಅಂಕಗಳ ವಿವರಗಳನ್ನು ನೀಡಬೇಕು. ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
0 comments:
Post a Comment