- - ಬಿ.ಜಿ.ಗೋಪಾಲಕೃಷ್ಣ ಹಾಸನ
ತದನಂತರದ ಕಾಲಘಟ್ಟದ ಬೆಳವಣಿಗೆಯೇ ಪಾಳೇಗಾರಿಕೆ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಇಡೀ ಸಮಾಜವೇ ದುಡಿಯುವವರ ವರ್ಗ ಮತ್ತು ದುಡಿಸಿಕೊಳ್ಳುವವರ ವರ್ಗ ಎಂದು ಎರಡು ಭಾಗಗಳಾಗಿ ವಿಂಗಡಣೆಯಾದ ಕಾಲವದು. ದುಡಿ ಯುವ ವರ್ಗ ಸಂಖ್ಯೆಯಲ್ಲಿ ಬಹುಸಂಖ್ಯೆ ಯಲ್ಲಿದ್ದು, ಭೌತಿಕವಾಗಿ ಸಶಕ್ತರಾಗಿದ್ದರೂ ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದು ಳಿದವರಾದರು. ಆದರೆ ದುಡಿಸಿಕೊಳ್ಳುವ ವರ್ಗ ಇದಕ್ಕೆ ತದ್ವಿರುದ್ಧ. ಸಂಖ್ಯೆಯಲ್ಲಿ ಕಡಿಮೆ ಇದ್ದು ಭೌತಿಕವಾಗಿ ಅಶಕ್ತರಾಗಿರದಿದ್ದರೂ ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದವರಾದರು.
ಇದೇ ಪರಿಸ್ಥಿತಿಯನ್ನು ಮುಂದುವರಿಸುವುದು ದುಡಿಸಿಕೊಳ್ಳುವ ವರ್ಗಕ್ಕೆ ಅನಿವಾರ್ಯವಾಗಿತ್ತು. ಪ್ರಕೃತಿಯನ್ನೇ ದೇವರೆಂದು ಪೂಜಿಸುತ್ತಿದ್ದ ಆ ಸಂದರ್ಭದ ಜನಮಾನಸದಲ್ಲಿ ಭೇದಭಾವಗಳ ವಿಷಬೀಜ ಬಿತ್ತಲು ಜಾತಿ, ಧರ್ಮ ಮತ್ತು ದೇವರುಗಳನ್ನು ಸೃಷ್ಟಿಸಿ ಅಸ್ತ್ರಗಳನ್ನಾಗಿ ಬಳಸಿ ತಮ್ಮ ತಮ್ಮಲ್ಲೇ ಭೇದಭಾವಗಳ ಜೊತೆ ಜೊತೆಯಲ್ಲಿ ದ್ವೇಷ, ತಾರತಮ್ಯ ಅಸ್ಪಶ್ಯತೆ ಬೆಳೆಸಿ ದುದರಿಂದ, ಮೇಲ್ವರ್ಗದವರೆಂದು ಬಿಂಬಿತರಾದ ದುಡಿಸಿಕೊಳ್ಳುವ ವರ್ಗದ ಹಾದಿ ಸುಗಮವಾಯಿತು.
ಆದರೆ ಕಾಲಾನಂತರ ದುಡಿಯುವ ವರ್ಗದಲ್ಲೂ ಹಂತಹಂತವಾಗಿ ಪ್ರಜ್ಞೆಮೂಡಲು, ಆ ಪ್ರಜ್ಞೆಯನ್ನು ನಿರ್ಲಿಪ್ತಗೊಳಿಸಲು ಪೂರ್ವಜನ್ಮ, ಪುನರ್‌ಜನ್ಮ, ಕರ್ಮಸಿದ್ಧಾಂತಗಳಂತಹ ಹೊಸ ಹೊಸ ಸಿದ್ಧಾಂತಗಳನ್ನು ಪ್ರಕಟಿಸಲೇಬೇಕಾಯಿತು. ಆ ಸಿದ್ಧಾಂತಗಳನ್ನು ಸಾಕ್ಷಾತ್ ಸೃಷ್ಟಿಕರ್ತನ ಸಂದೇಶ ಗಳೆಂದು, ಅವನ ಬಾಯಿಂದಲೇ ಹೇಳು ತ್ತಿರುವಂತೆ ಪ್ರಚುರ ಪಡಿಸಿದರು. ಈ ಕರ್ಮ ಸಿದ್ಧಾಂತಗಳಿಗೆ ಪೂರಕವಾಗಿ ಮೂಡಿಬಂದವು ಗಳೇ ಮೂಢನಂಬಿಕೆಗಳು. ನಂಬಿದವರ ಕತ್ತು ಕುಯ್ಯಲು ಸಹಜವಾಗೇ ಮೂಢನಂಬಿಕೆ ಗಳಂತಹ ನಯವಂಚಕ ಅಸ್ತ್ರಗಳಿಗಿಂತ ಮತ್ತಾವುದು ಪ್ರಬಲ ಅಸ್ತ್ರವಾಗಲಾರದು.
ಹಿಂದುಳಿದವರಲ್ಲೂ ಪ್ರಜ್ಞೆಮೂಡಿ ಆರ್ಥಿಕ ವಾಗಿ ಸಬಲನಾದರೆ ನಮ್ಮ ಮನೆಯ ಕಕ್ಕಸ್ಸನ್ನು ನೂರು ರೂಪಾಯಿ ಕೂಲಿಗೆ ಸ್ವಚ್ಛಗೊಳಿಸಿ ಯಾನೇ? ಆಥವಾ ಶಿಕ್ಷಣ ಕಲಿತು ಆರ್ಥಿಕವಾಗಿ ಸಬಲನಾದ ಪ್ರಜ್ಞಾವಂತರು ಹತ್ತರಷ್ಟು ಕೂಲಿ ಕೊಟ್ಟರೂ ಕಕ್ಕಸ್ಸು ಸ್ವಚ್ಛಗೊಳಿಸುವ ಕೆಲಸ ಮಾಡಿ ಯಾರೆ? ಆ ಸಂದರ್ಭಗಳಲ್ಲಿ ತಾವೇ ಕಾರ್ಯಪ್ರವೃತ್ತರಾಗ ಬೇಕಾಗುತ್ತದೆ ಎಂಬ ಸರಳ ಸಮೀಕರಣ ತಿಳಿಯದೇ ಅವರಿಗೆ. ಸಮಾಜದಲ್ಲಿ ಮೌಢ್ಯತೆ, ಆಂಧಾನುಕರಣೆ, ಅಂಧಶ್ರದ್ಧೆ, ಮೂಢನಂಬಿಕೆ ಗಳಿರುವವರೆಗೆ ತಮ್ಮ ಶ್ರಮರಹಿತ ಬದುಕಿಗೇನು ಅಡ್ಡಿಯಿಲ್ಲ ಎಂಬ ಸರಳ ವಸ್ತು ಸ್ಥಿತಿಯನ್ನು ತಿಳಿಯದಷ್ಟು ಮುಟ್ಠಾಳರೇ ಈ ಮೌಢ್ಯದ ಫಲಾನುಭವಿಗಳು.
ಪ್ರಸ್ತುತ ಅಂಧಶ್ರದ್ಧೆಗಳು ಮನುಷ್ಯನ ಹುಟ್ಟಿನಿಂದ ಪ್ರಾರಂಭಗೊಂಡು, ಜೀವಿತ ಅವಧಿಯಲ್ಲಿ ಜೊತೆ ಜೊತೆಯಲ್ಲೇ ಪರಾವಲಂಬಿಗಳಂತೆ ರಕ್ತವನ್ನು ಹೀರಿ ಬದುಕುತ್ತಾ, ನಮ್ಮ ಸಾವಿಗೆ ಮೊದಲೇ ಇತರರಿಗೂ ರಕ್ತ ಬೀಜಾಸುರನಂತೆ ದ್ವಿಗುಣಗೊಳ್ಳುತ್ತಾ ಇತರ ಮನುಜ ದೇಹಗಳನ್ನು ಮಾತ್ರ (ಇತರೆ ಪ್ರಾಣಿಗಳ ದೇಹಗಳನ್ನು ಪ್ರವೇಶಿಸದೆ) ಪ್ರವೇಶಿಸಿ ವಾಸಮಾಡಲು ಪ್ರಾರಂಭಿಸುತ್ತವೆ, ಮೇಲ್ವರ್ಗದವರು ನೀರು ಗೊಬ್ಬರ ಹಾಕಿ ಪೋಷಿಸಲು ಮುಂದಾಗುತ್ತಾರೆ.
ಈ ಭೂಮಿಯ ಮೇಲೆ ವಾಸಿಸುವ ಪ್ರತಿ ಯೊಂದು ಜೀವಿಯೂ ಸಮಾನ ಎನ್ನುವುದಾದರೆ, ಬುದ್ಧಿವಂತ ಜೀವಿಯಾಗಿರುವ ಮನುಷ್ಯನೇಕೆ ಮೌಢ್ಯತೆಯ ಅಂಧಕಾರದಲ್ಲಿ ತನ್ನನ್ನೇ ತಾನು ಬಂಧಿಸಿಕೊಂಡು ತೋಳಲಾಡುತ್ತಾನೆ ಅಥವಾ ಬೇರೆಯವರ ತೋಳಲಾಟದಲ್ಲಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ.
ಮೂಢನಂಬಿಕೆಗಳ ಪ್ರಕಾರ ಮತ್ತು ಆಯಾಮ ಗಳನ್ನು ತಿಳಿಯುವುದೇ ಕಷ್ಟಸಾಧ್ಯವಾಗಿದೆ. ಮನುಜನ ಜೀವಿತ ಅವಧಿಯ ಪ್ರತಿ ಹಂತದಲ್ಲೂ ಹಾಸುಹೊಕ್ಕಾಗಿವೆ. ಅಂಧಶ್ರದ್ಧೆಗೆ ಹೆಚ್ಚು ಬಲಿಯಾಗುವವರು ಈ ಸಮಾಜದ ಅರ್ಧ ಭಾಗವೇ ಆಗಿರುವ ಮಹಿಳೆಯರು. ಅವರು ಶಿಕ್ಷಣ ಪಡೆಯುವುದೇ ಒಂದು ಅಪವಾದ. ಅವಳು ಮನೆಯಿಂದ ಹೊರ ಹೋಗಕೂಡದು. ಮುಟ್ಟಾದಾಗ ಮತ್ತು ಬಾಣಂತನವಾದಾಗ ಅವಳನ್ನು ಊರ ಹೊರಗೆ ಪಶುವಿನಂತೆ ಇರಿಸುವುದು, ಬಾಲ್ಯ ವಿವಾಹದಂತಹ ಶಿಕ್ಷೆ ಇವಳೆಗೇ ಹೆಚ್ಚು.
ಊರಿಗೆ ಕಷ್ಟ ಬಂದರೆ ಇವಳದೇ ಬಲಿ ಬೇಕು. ಸತಿ ಪದ್ಧತಿ, ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ. ವರದಕ್ಷಿಣೆ ನೆಪದಲ್ಲಿ ಜೀವಂತ ಸುಡುವುದು, ಹೆಣ್ಣು ಮಗುವಿನ ಹುಟ್ಟಿಗೆ ತಾಯಿಯೇ ಕಾರಣ ಎಂಬ ಅಪವಾದ, ತಾನು ಅನುಭವಿಸಿದ ಕಷ್ಟಗಳನ್ನು ನನ್ನ ಹೆಣ್ಣು ಮಗು ಅನುಭವಿಸಬಾರದೆಂದು ತನ್ನ ಕರುಳಕುಡಿಯು ಭ್ರೂಣ ಹಂತದಲ್ಲಿರುವಾಗಲೇ ಹತ್ಯೆಗೆ ಸಹಕರಿಸ ಬೇಕಾದ ಅನಿವಾರ್ಯತೆ. ದೇವಸ್ಥಾನಗಳಿಗೆ ಪ್ರವೇಶದ ನಿರಾಕರಣೆ. ಒಂದೇ ಎರಡೇ ಇದು ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಸಮಾಜದ ಕೊಡುಗೆ.
ಅಂಧಶ್ರದ್ಧೆಗಳಿಂದ ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುವ ದಲಿತರ ಸ್ಥಿತಿ ಹೇಳತೀರದು. ಅಸ್ಪಶತೆ, ಅವರಿಗೇ ಒಂದು ಕೇರಿ, ದೇವಸ್ಥಾನಗಳಿಗೆ ಪ್ರವೇಶವಿಲ್ಲ, ಜಮೀನಿನ ಒಡೆತನವಿಲ್ಲ, ಮೇಲ್ವರ್ಗದವರು ಹೇಳಿದಾಗ ಪ್ರತಿಫಲ ಅಪೇಕ್ಷಿಸದೆ ಅವರ ಮನೆಯಲ್ಲಿ ಬಂದು ದುಡಿಯಬೇಕು ಕೊಟ್ಟಷ್ಟು ಕೂಲಿ ಪಡೆದು ತೊಲಗಬೇಕು. ಒಟ್ಟಿನಲ್ಲಿ ಸ್ವತಂತ್ರದ ಬದುಕೆ ಇಲ್ಲದ ಬದುಕು ಅವರದು.
ಮಡೆಸ್ನಾನದ ಮುಂದುವರಿದ ಭಾಗವಾಗಿ ಎಡೆಸ್ನಾನ, ಗುಪ್ತವಾಗಿ ಬೆತ್ತಲೆ ಸೇವೆಯ ಮುಂದುವರಿದ ಭಾಗವಾಗಿ ಮೈಗೆ ಸೊಪ್ಪು ಕಟ್ಟಿಕೊಳ್ಳುವುದು. ದೇವದಾಸಿ ಪದ್ಧತಿ, ಪಾದಪೂಜೆಗಳು, ಪಾಪ ಪರಿಹಾರಕ್ಕೆ ಅಥವಾ ಶಾಂತಿಗಾಗಿ ಪೂಜೆಗಳು, ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳಲು ನರಬಲಿ, ಪ್ರಾಣಿಬಲಿ, ಮನೆಗಳಲ್ಲಿ ಶೌಚಾಲಯಗಳನ್ನು ಹೊಂದದೇ ಇರುವುದು. ತೆರೆಮರೆಯಲ್ಲಿ ಹುಣ್ಣಿಮೆಯ ದಿನ ಸವದತ್ತಿಯಲ್ಲಿ ಮುತ್ತು ಕಟ್ಟುವುದು. ಶಾಂತಿ ಹೋಮ ಹವನಗಳನ್ನು ಮಾಡಿಸುವುದು. ಪಂಕ್ತಿ ಭೇದ, ಅಜಲು ಪದ್ಧತಿ. ಉಳ್ಳವರು ತಮ್ಮ ಅನಾಚಾರಗಳ ವಿರುದ್ಧ ಧ್ವನಿ ಎತ್ತಿದವರನ್ನು ಭಾನಾಮತಿ ಮಾಡುತ್ತಿದ್ದಾರೆಂದು ಆಪಾದಿಸಿ ಜೀವಂತ ಸುಡುವುದು. ನಿಧಿ ತೆಗೆಯಲು ಮಕ್ಕಳನ್ನು ಬಲಿ ಕೂಡುವುದು. ಶ್ರೀಮಂತ ಪುರುಷರು ಚಿಕ್ಕವರೊಂದಿಗೆ ಸಂಭೋಗ ಮಾಡಿದರೆ ಹರೆಯ ಹೆಚ್ಚುತ್ತದೆಯೆಂದು ಮತ್ತು ಗುಪ್ತರೋಗಗಳು ವಾಸಿಯಾಗುತ್ತವೆಯೆಂದು... ಹೀಗೆ ಹೇಳುತ್ತಾ ಹೋದರೆ ಮಹಾನ್ ಗ್ರಂಥಗಳನ್ನೇ ರಚಿಸಬಹುದು.
ಮೂಲಭೂತವಾದಿಗಳು, ಪುರೋಹಿತಶಾಹಿಗಳು, ಅವಕಾಶವಾದಿ ಪಾಳೇಗಾರಿಕೆ ವ್ಯವಸ್ಥೆಯ ನಾಯಕರುಗಳು, ಬಂಡವಾಳಶಾಹಿಗಳು, ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ರಾಜಕೀಯ ನಡೆಸುವವರು, ಜನರ ನಂಬಿಕೆಯ ಹೆಸರಿನಲ್ಲಿ ಪ್ರಜ್ಞಾಪೂರ್ವಕವಾಗಿಯೇ ಮೌಢ್ಯತೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಇದು ಅವರು ಅಸ್ತಿತ್ವದ ಪ್ರಶ್ನೆ. ಸೈದ್ಧಾಂತಿಕ ಸಿದ್ಧಾಂತ, ನೈತಿಕತೆ, ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಇಲ್ಲದವರು ಅಂಧಶ್ರದ್ದೆಗಳೆ ಮೂಲಾಧಾರ. ಇವರು ಅಭಿವೃದ್ಧಿ ಅಂಧಶ್ರದ್ಧೆಯ ಅಭಿವೃದ್ದಿಯ ಮೇಲೆ ಅವಲಂಬಿತವಾಗಿರುತ್ತವೆ. ಅವರಿಗೆ ಮೂಢನಂಬಿಕೆ ಪ್ರತಿಬಂಧಕ ಮಸೂದೆ ಆಘಾತಕಾರಿ ಮತ್ತು ಆತಂಕದ ಮಸೂದೆಯಾಗಿದೆ.
0 comments:
Post a Comment