PLEASE LOGIN TO KANNADANET.COM FOR REGULAR NEWS-UPDATES

 ಹೈದರಾಬಾದ್-ಕರ್ನಾಟಕ ವಲಯಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆಯ ಜವಾಬ್ದಾರಿಯನ್ನು ರಾಜ್ಯಪಾಲರಿಗೆ ವಹಿಸುವ ಸಂಬಂಧ ರಾಷ್ಟ್ರಪತಿಯವರ ಆದೇಶದ ಅಧಿಸೂಚನೆಗೆ ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ. ಸಂವಿಧಾನದ 371ನೆ ಜೆ ಪರಿಚ್ಛೇದದ ತಿದ್ದುಪಡಿ ಅಡಿಯಲ್ಲಿ ಹೈದರಾಬಾದ್  ಕರ್ನಾಟಕ ಪ್ರದೇಶಾಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಸ್ಥಾಪನೆಯ ಜವಾಬ್ದಾರಿಯನ್ನು ರಾಜ್ಯಪಾಲರಿಗೆ ವಹಿಸುವ ಅಧಿಕಾರವನ್ನು ರಾಷ್ಟ್ರಪತಿ ಅವರಿಗೆ ನೀಡಲಾಗಿದೆ. ಈ ಪ್ರದೇಶದ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು ರಾಜ್ಯ ಆಯವ್ಯಯದಿಂದ ಹಂಚಿಕೆಯಾಗುವ ಸಂಪನ್ಮೂಲಗಳ ಸಮಾನ ವಿತರಣೆಯನ್ನು ಉದ್ದೇಶಿತ ಮಂಡಳಿ ಕಾಯ್ದುಕೊಳ್ಳಲಿದೆ. ರಾಜ್ಯ ಸರಕಾರಿ ಸೇವೆಯಲ್ಲಿ ಈ ಭಾಗದವರಿಗೆ ಉದ್ಯೋಗಾವಕಾಶ ಹೆಚ್ಚಿಸುವುದು ಮಂಡಳಿಯ ಹೊಣೆಯಾಗಲಿದೆ.
ಹೈದರಾಬಾದ್ ಕರ್ನಾಟಕ ಭಾಗದವರಿಗೆ ಶೈಕ್ಷಣಿಕ ಹಾಗೂ ವೃತ್ತಿಪರ ತರಬೇತಿ ಸಂಸ್ಥೆಗಳಲ್ಲಿ ಮಂಡಳಿಯು ಮೀಸಲಾತಿಯನ್ನು ಕಲ್ಪಿಸಲಿದೆ. ರಾಜ್ಯದ ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ 371ಜೆ ತಿದ್ದುಪಡಿಯನ್ನು ಸಂವಿಧಾನದಲ್ಲಿ ಅಳವಡಿಸುವ ಮಸೂದೆಗೆ ಕಳೆದ ಡಿಸೆಂಬರ್‌ನಲ್ಲಿ ಸಂಸತ್ತು ಅನುಮೋದನೆ ನೀಡಿತ್ತು.
ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ನಡೆದ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಅಭಿವೃದ್ದಿ ಮಂಡಳಿ ರಚನೆಯಾಗಲಿದೆ. ಇದಕ್ಕೆ ಅಗತ್ಯವಿರುವ ನಿಯಮಗಳನ್ನು ರೂಪಿಸಲು ರಾಜ್ಯ ಸರಕಾರಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದು, ಕೇಂದ್ರ ಸಂಪುಟದ ನಿರ್ಧಾರವನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಹೈದರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳ ಜನರು ಇಂದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದೆ. ದಶಕಗಳ ಹೋರಾಟದ ಫಲವಾಗಿ ಇಂದು ಯುಪಿಎ ಸರಕಾರ ಆ ಭಾಗದ ಜನರಿಗೆ ಭಾರೀ ಕೊಡುಗೆಯನ್ನು ನೀಡಿದೆ ಎಂದರು.
ಬಳ್ಳಾರಿ,ಕೊಪ್ಪಳ,ರಾಯಚೂರು,ಯಾದಗಿರಿ,ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿರುವ ಈ ಅಭಿವೃದ್ಧಿ ಮಂಡಳಿಯ ರಚನೆ ಕುರಿತು ನೀತಿ-ನಿಯಮಗಳನ್ನು ಕೂಡಲೇ ಅಳವಡಿಸಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹೈದರಾಬಾದ್-ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಅಭಿವೃದ್ದಿ ಮಂಡಳಿ ರಚನೆಗೆ ಒಪ್ಪಿಗೆ ದೊರೆತಿರುವುದರಿಂದ ಈ ಭಾಗದ ಆರು ಜಿಲ್ಲೆಗಳ ಸಮಗ್ರ ಅಭಿವೃದ್ಧಿಯಾಗುವ ಜತೆಗೆ ಮೂಲಸೌಕರ್ಯಗಳನ್ನು ಒದಗಿಸಲು ಆರ್ಥಿಕ ನೆರವು ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿದೆ ಎಂದು ವಿವರಿಸಿದರು.
ಈ ಭಾಗದ ಆರೂ ಜಿಲ್ಲೆಗಳ ಅಭಿವೃದ್ಧಿಗೆ ಬಿಡುಗಡೆ ಮಾಡುವ ಹಣವನ್ನು ಖರ್ಚು ಮಾಡುವ ಜವಾಬ್ದಾರಿ ಹಾಗೂ ಅದರ ಸಮರ್ಪಕ ನಿರ್ವಹಣೆಯ ಹೊಣೆಯನ್ನು  ರಾಜ್ಯಪಾಲರಿಗೆ ನೀಡಲಾಗಿದೆ. ಇದರಿಂದ ಅನಗತ್ಯ ವೆಚ್ಚಗಳಿಗೆ ಕಡಿವಾಣ ಬೀಳುವ ವಿಶ್ವಾಸ ನಮಗಿದೆ ಎಂದು ಹೇಳಿದರು.
ಹಿಂದುಳಿದ ಜಿಲ್ಲೆಗಳ ಹಣೆಪಟ್ಟಿ ಹೊಂದಿದ್ದ ಈ ಭಾಗದ ಜಿಲ್ಲೆಗಳ ಚಿತ್ರಣ ಮುಂದಿನ ದಿನಗಳಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದ್ದು ಬೇರೆ ನಗರಗಳಿಗೆ ಈ ಜಿಲ್ಲೆಗಳಿಂದ ತೆರಳುತ್ತಿದ್ದ ವಲಸಿಗರ ಸಂಖ್ಯೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಂಜುಂಡಪ್ಪ ವರದಿ ಸೇರಿದಂತೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯಲು ಈ ಮಂಡಳಿಯಿಂದ ಅನುಕೂಲವಾಗಲಿದೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆ ಭಾಗದ ಸಮಗ್ರ ಚಿತ್ರಣ ಬದಲಾವಣೆ ಮಾಡಲು ಅವಕಾಶ ದೊರೆಯಲಿದೆ ಎಂದು ಖರ್ಗೆ ಹೇಳಿದರು. 

೩೭೧ಕಲಂಗೆ ಕೇಂದ್ರ ಸಚಿವ ಸಂಪುಟ ಅಸ್ತು ಸಂಭ್ರಮಾಚರಣೆ

ಕೊಪ್ಪಳ: ಹೈದ್ರಾಬಾದ ಕರ್ನಾಟಕ ಪ್ರದೇಶದ ಸರ್ವಾಂಗಿಣ ಅಭಿವೃದ್ದಿಗಾಗಿ ೩೭೧ನೇ ಕಲಂ ಜಾರಿ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕೆ ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘ ಮತ್ತು ಸರ್ಕಾರಿ ಅಂಗವಿಕಲ ನೌಕರರ ಸಂಘದ ಪದಾಧಿಕಾರಿಗಳು ನಗರದ ಅಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.
 ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ ಮಾತನಾಡಿ,ಹೈದ್ರಾಬಾದ ಕರ್ನಾಟಕ ಪ್ರದೇಶದ ಜನತೆಯ ಬಹುದಿನಗಳ ಕನಸನ್ನು ನನ್ನಸಾಗಿಸಲು ಕೇಂದ್ರ ಸಚಿವ ಸಂಪುಟ ೩೭೧ವಿಧಿಯನ್ನು ಜಾರಿಗೆ ಮಾಡಲು ಅನುಮೋದನೆಯನ್ನು ನೀಡಿರುವುದರಿಂದ ಈ ಪ್ರದೇಶದ ಜನರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು.
      ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಡಾ.ಬಿ.ಕೆ.ಸಾಲಿ,ರಾಜ್ಯ ಪರಿಷತ್ ಸದಸ್ಯರಾದ ದನಂಜಯ್ಯಾ ಮಾಲಗಿತ್ತಿ,ಖಂಜಾಜಿ ಸುಶೀಲೇಂದ್ರರಾವ ದೇಶಪಾಂಡೆ, ಉಪಾಧ್ಯಕ್ಷರಾದ ಪಿ.ಎಸ್.ಅಮರದೀಪ,ಮುಸ್ತಾಪ್,ದುರ್ಗಾಪ್ರಸಾದ,ಪ್ರಾಧಾನ ಕಾರ್ಯದರ್ಶಿ ಶಿವಪ್ಪ ಜೋಗಿ,ಸಹ ಕಾರ್ಯದರ್ಶಿ ಸುಧೀರ ಅವರಾಧಿ, ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಜಿಲ್ಲಾ ಸಂಚಾಲಕರಾದ ಮಂಜುನಾಥ ಬುಲ್‌ಟಿ,ಶಿಕ್ಷಕರಾದ ರಾಮಣ್ಣ ಕಳ್ಳಿಮನಿ,ಸಂಜೀವ ಕುಮಾರ,ಶರಣಪ್ಪ ದೇವರಮನಿ,ಯಶವಂತ ಮೇತ್ರಿ,ಮುಂತಾದವರು ಹಾಜರಿದ್ದರು.



Advertisement

0 comments:

Post a Comment

 
Top