ಸಕಾಲದಲ್ಲಿ ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗದ ಗ್ರಾಮೀಣ ಜನರು ದೂರವಾಣಿ ಮುಖಾಂತರ ತಜ್ಞ ವೈದ್ಯರ ಸಲಹೆ ಪಡೆಯಲು ನೆರವಾಗುವ ೧೦೪ ಆರೋಗ್ಯವಾಣಿ ಯೋಜನೆಯನ್ನು ಜಾರಿಗೆ ತರಲಾಗಿದೆ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯಬೇಕೆಂಬುದು ಸರ್ಕಾರದ ಆಶಯ. ಅದರಲ್ಲೂ ಆರೋಗ್ಯ ಸೇವೆಯಂತಹ ಅತ್ಯವಶ್ಯ ಸೌಲಭ್ಯಗಳು ಸುಲಭವಾಗಿ ಎಲ್ಲರಿಗೂ ದೊರೆಯಬೇಕೆಂಬ ಸದುದ್ದೇಶದಲ್ಲಿ ಸರ್ಕಾರ ಸಾರ್ವಜನಿಕರಿಗೆ ಆರೋಗ್ಯ ಸೇವಾ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ೧೦೪ ಆರೋಗ್ಯ ವಾಣಿ ಯೋಜನೆಯನ್ನು ಜಾರಿಗೆ ತಂದಿದೆ. ಆರೋಗ್ಯ ಚಿಕಿತ್ಸೆಗಾಗಿ ಸಕಾಲದಲ್ಲಿ ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗದ ಗ್ರಾಮೀಣ ಜನರು ದೂರವಾಣಿ ಮುಖಾಂತರ ತಜ್ಞ ವೈದ್ಯರ ಸಲಹೆ ಪಡೆಯಲು ೧೦೪- ಆರೋಗ್ಯವಾಣಿ ಯೋಜನೆ ನೆರವಾಗುತ್ತಿದೆ. ಆರೋಗ್ಯ ಸಲಹೆ, ಆಪ್ತ ಸಮಾಲೋಚನೆ, ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ, ಆರೋಗ್ಯ ಸಂಸ್ಥೆ ಅಥವಾ ಸಿಬ್ಬಂದಿಯ ವಿರುದ್ಧ ದೂರು ದಾಖಲು ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಸಾಮಾನ್ಯ ಖಾಯಿಲೆಗಳಾದ ಕೆಮ್ಮು, ಶೀತ, ಜ್ವರ, ಭೇದಿ, ಹೊಟ್ಟೆ ನೋವು, ಸಕ್ಕರೆ ಕಾಯಿಲೆ, ಮೊಡವೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಔಷಧಿಯ ಶಿಫಾರಸ್ಸು ಹಾಗೂ ಅವುಗಳ ಸೇವನೆಯ ಬಗ್ಗೆ ದೂರವಾಣಿ ಮೂಲಕವೇ ಸಲಹೆಗಳನ್ನು ಪಡೆಯಲು ಈ ಯೋಜನೆ ನೆರವಾಗಲಿದೆ.
ಸಾರ್ವಜನಿಕರು ರಾಜ್ಯದ ಯಾವುದೇ ಭಾಗದಿಂದ ಯಾವುದೇ ಶುಲ್ಕವಿಲ್ಲದೇ ತಮ್ಮ ದೂರವಾಣಿಯಿಂದ ೧೦೪ ಕ್ಕೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಸೇವೆಯು ದಿನದ ೨೪ ಗಂಟೆ ಹಾಗೂ ವರ್ಷದ ೩೬೫ ದಿನಗಳೂ ಲಭ್ಯವಿರುತ್ತದೆ. ಈ ಆರೋಗ್ಯ ವಾಣಿ ಆರಂಭವಾದಾಗಿನಿಂದ ಸರಾಸರಿ ದಿನಕ್ಕೆ ೨೨೬೮ ಕರೆಗಳನ್ನು ಸ್ವೀಕರಿಸಲಾಗುತ್ತಿದ್ದು, ಇದುವರೆಗೆ ೮೦,೦೦೦/- ಕ್ಕೂ ಹೆಚ್ಚು ಕರೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಸೂಕ್ತ ಸಲಹೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ಸುಧಾರಣೆ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದಿರುವ ೧೦೪ ರ ಆರೋಗ್ಯ ವಾಣಿ ಸೇವೆಯನ್ನು ಸಾರ್ವಜನಿಕರು ಬಳಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ವಿ.ಬಿ.ಪಾಟೀಲ್ ಕೋರಿದ್ದಾರೆ.
0 comments:
Post a Comment