ಕೊಪ್ಪಳ,ಅ.೧೨: ಯಾವುದೇ ಕ್ಷೇತ್ರ ಸರ್ವಾಂಗೀಣ ಅಭಿವೃದ್ದಿ ಹೊಂದಬೇಕಾದರೆ ಅದಕ್ಕೆ ಪೂರಕವಾಗಿ ಶಿಕ್ಷಣ ಕ್ಷೇತ್ರ ಮೊದಲು ಅಭಿವೃದ್ದಿ ಹೊಂದಬೇಕು ಅಂದಾಗ ಮಾತ್ರ ಸರ್ವಾಂಗೀಣ ಅಭಿವೃದ್ದಿಯಾಗಲು ಸಾದ್ಯವಾಗಿದ್ದು ಎಲ್ಲಾ ಕ್ಷೇತ್ರದ ಅಭಿವೃದ್ದಿ ಶಿಕ್ಷಣ ರಂಗದಲ್ಲಿ ಅಡಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಏರ್ಪಡಿಸಿದ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಸನ್ಮಾನಗೊಂಡ ಬಳಿಕ ಏರ್ಪಡಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ, ಮಿಲ್ಲತ್ ಶಾಲೆ ಕಳೆದ ೧೨-೧೩ ವರ್ಷಗಳಿಂದ ಕೊಪ್ಪಳ ನಗರದ ಬಡ ಪ್ರದೇಶದಲ್ಲಿ ಶೈಕ್ಷಣಿಕ ಅಭಿವೃದ್ದಿಗಾಗಿ ಶ್ರಮಿಸುತ್ತಾ ಬಂದಿದೆ. ಇಂದಿನ ಸಂದರ್ಭದಲ್ಲಿ ಶಿಕ್ಷಣ ವ್ಯಾಪಾರೀಕರಣವಾಗದೇ ಅದು ಸೇವೆಯಾಗಬೇಕು. ಅದೇ ನಿಟ್ಟಿನಲ್ಲಿ ಮಿಲ್ಲತ್ ಶಿಕ್ಷಣ ಸಂಸ್ಥೆ ಸೇವಾ ಮನೋಭಾವನೆಯಿಂದ ಶಾಲೆ ಆರಂಭಿಸಿ ಶೈಕ್ಷಣಿಕ ಬೆಳವಣಿಗೆಗಾಗಿ ಶ್ರಮಿಸುತ್ತಾ ಸಾಗಿದ್ದಾರೆ ಎಂದರು.
ಮುಂದುವರೆದು ಮಾತನಾಡಿದ ಅವರು, ಈ ಶಾಲೆಯ ಕಂಪೌಂಡ್ ನಿರ್ಮಾಣ ಸೇರಿದಂತೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕಾಗಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಸಿಗಬಹುದಾದ ಸಹಾಯ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರವರು ಸಹ ಸಮಾರಂಭದಲ್ಲಿ ಸನ್ಮಾನಿತರಾಗಿ ಪಾಲ್ಗೊಂಡು ಮಾತನಾಡುತ್ತ ಮಿಲ್ಲತ್ ಶಿಕ್ಷಣ ಸಂಸ್ಥೆ ನನಗೆ ಉತ್ತಮ ಮಾರ್ಗದರ್ಶನ ನೀಡಿ ನನ್ನ ಸಾಮಾಜಿಕ ಬೆಳವಣಿಗೆಗೆ ಅತ್ಯಂತ ಸಹಕಾರಿಯಾಗಿದೆ. ಇಂದು ನಾನು ನಗರಸಭೆಗೆ ೩ನೇ ಬಾರಿಗೆ ಪುನರಾಯ್ಕೆಯಾಗಲು ಮತ್ತು ಕೈಲಾದಷ್ಟು ಜನಸೇವೆ ಮಾಡಲು ಈ ಸಂಸ್ಥೆ ನನಗೆ ಪ್ರೇರಣೆಯಾಗಿದೆ ಎಂದ ಅವರು ಇಂದು ನನಗೆ ಮಾಡಿರುವ ಸನ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚಿಸಿದೆ ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಜನಸೇವೆ ಮಾಡಲು ಇದೊಂದು ಪ್ರೋತ್ಸಾಹದಾಯಕವೆಂದು ಭಾವಿಸುತ್ತೇನೆ ಎಂದು ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಎಂ.ಪಾಷಾ ಕಾಟನ್ ಅವರು ಮಾತನಾಡಿ, ಶಾಲೆ ಮತ್ತು ಸಂಸ್ಥೆ ನಡೆದು ಬಂದ ದಾರಿ ಬಗ್ಗೆ ವಿವರಿಸಿದ ಅವರು, ಈ ಸಂಸ್ಥೆಯ ಬೆಳವಣಿಗೆಗೆ ಹಿಂದಿನ ಶಾಸಕರು, ಸಂಸದರು ಸಹ ಸಹಕಾರ ನೀಡಿದ್ದಾರೆ. ಈಗಿನ ಶಾಸಕರು ಒಬ್ಬ ಯುವ ಉತ್ಸಾಹಿ ನಾಯಕರಾಗಿದ್ದು ಅವರು ಕೂಡ ನಮ್ಮ ಶಾಲೆ ಮತ್ತು ಸಂಸ್ಥೆಯ ಅಭಿವೃದ್ದಿಗಾಗಿ ಪ್ರೋತ್ಸಾಹ ನೀಡಬೇಕೆಂದು ಎಂ.ಪಾಷಾ ಕಾಟನ್ ಮನವಿ ಮಾಡಿಕೊಂಡರು.
ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು ಹಾಗೂ ಕೊಪ್ಪಳ ಐಸಿರಿ ಪ್ರಶಸ್ತಿ ಪುರಸ್ಕೃತ ನಗರದ ಹಿರಿಯ ಸಮಾಜ ಸೇವಕ ವಿರುಪಾಕ್ಷಯ್ಯ ಗದಗ (ಗದುಗಿನ ಮಠ) ರವರಿಗೆ ಇದೇ ಸಂದರ್ಭದಲ್ಲಿ ಶಾಲೆ ಮತ್ತು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಸಯ್ಯದ್ ಗೌಸ್ ಪಾಷಾ ಖಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಮುಖ್ಯ ಸಲಹೆಗಾರ ಎಂ.ಸಾದಿಕ್ ಅಲಿ ಸ್ವಾಗತಿಸಿದರು. ಮುಖ್ಯ ಸಲಹೆಗಾರ ಸಯ್ಯದ್ ನಜೀರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರೆ, ಆಡಳಿತಾಧಿಕಾರಿ ಸಯ್ಯದ್ ಯಜದಾನಿ ಪಾಷಾ ಖಾದ್ರಿ ಕೊನೆಯಲ್ಲಿ ವಂದಿಸಿದರು.
0 comments:
Post a Comment