ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಸಣ್ಣ ಮತ್ತು ಮಧ್ಯಮ ರೈತರಿಂದ ಗರಿಷ್ಠ ೨೫ ಕ್ವಿಂಟಾಲ್ ಖರೀದಿಸಲು ಸರ್ಕಾರ ಮಿತಿಯನ್ನು ನಿಗದಿಪಡಿಸಿದ್ದು, ಈ ಗರಿಷ್ಠ ಮಿತಿಯನ್ನು ಸಡಿಲಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಬೆಂಬಲ ಬೆಲೆ ಯೋಜನೆಯಡಿ ಕೊಪ್ಪಳದ ಎಪಿಎಂಸಿ ಆವರಣದಲ್ಲಿ ಬುಧವಾರ ಮೆಕ್ಕೆಜೋಳ ಖರೀದಿ ಕೇಂದ್ರದ ಉದ್ಘಾಟನೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೆಕ್ಕೆಜೋಳ ದರ ಕುಸಿತದ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆಯಾಗದಂತೆ, ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಲು ಆದೇಶ ಹೊರಡಿಸಿದೆ. ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ರೂ. ೧೩೧೦ ರಂತೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದ್ದು, ಅದರಂತೆ ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೊಪ್ಪಳ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳವನ್ನು ಖರೀದಿ ಏಜೆನ್ಸಿಯಾಗಿ ನೇಮಿಸಿದೆ. ಬೆಂಬಲ ಬೆಲೆಯಲ್ಲಿ ಪ್ರತಿ ಸಣ್ಣ ಮತ್ತು ಮಧ್ಯಮ ರೈತರಿಂದ ಗರಿಷ್ಠ ೨೫ ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳವನ್ನು ಖರೀದಿಸಲು ಮಿತಿ ನಿಗದಿಪಡಿಸಲಾಗಿದ್ದು, ಅಗತ್ಯ ಬಿದ್ದಲ್ಲಿ, ಈ ಮಿತಿಯನ್ನು ಸಡಿಲಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರೊಂದಿಗೆ ಚರ್ಚಿಸಿ, ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಬೆಂಬಲ ಬೆಲೆಯಲ್ಲಿ ಖರೀದಿಸಿದ ಮೆಕ್ಕೆಜೋಳದ ಮೊತ್ತವನ್ನು ಶೀಘ್ರ ರೈತರಿಗೆ ವಿತರಣೆಯಾಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ರೈತರು ಮಧ್ಯವರ್ತಿಗಳ ಹಾವಳಿಗೆ ಒಳಗಾಗದೆ, ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮನವಿ ಮಾಡಿದರು.
ಸಹಾಯಕ ಆಯುಕ್ತ ಮಂಜುನಾಥ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸರ್ಕಾರದ ಆದೇಶದಂತೆ ಜಿಲ್ಲೆಯ ಕೊಪ್ಪಳ, ಕುಷ್ಟಗಿ ಮತ್ತು ಕುಕನೂರಿನಲ್ಲಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಗುಣಮಟ್ಟ ಪರಿಶೀಲನೆಗೆ ಗ್ರೇಡರ್‌ಗಳನ್ನು ನೇಮಿಸಲಾಗಿದ್ದು, ರೈತರು ಎಫ್.ಎ.ಕ್ಯು ಗುಣಮಟ್ಟದ ಅಂದರೆ ಮೆಕ್ಕೆಜೋಳವನ್ನು ಉತ್ತಮವಾಗಿ ಒಣಗಿಸಿ, ೫೦ ಕೆ.ಜಿ. ತೂಕದ ಚೀಲಗಳಲ್ಲಿ ಖರೀದಿ ಕೇಂದ್ರಕ್ಕೆ ತರಬೇಕು. ಈ ಯೋಜನೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರೀಕರಣಗೊಳ್ಳುವವರೆಗೆ ಅಥವಾ ೨೦೧೪ ರ ಮಾರ್ಚ್ ೩೧ ರವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ ಎಂದರು.
ಕೊಪ್ಪಳ ಎಪಿಎಂಸಿ ಅಧ್ಯಕ್ಷ ಡಿ. ಮಲ್ಲಣ್ಣ, ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment