ಕೊಪ್ಪಳ ಜಿಲ್ಲೆಯಲ್ಲಿ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತಿರುವ ಬಹುಗ್ರಾಮಗಳ ಎಲ್ಲ ಕುಡಿಯುವ ನೀರು ಕಾಮಗಾರಿಗಳ ಸ್ಥಿತಿ-ಗತಿಗಳ ಬಗ್ಗೆ ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮಗಳ ಕುಡಿಯುವ ನೀರು ಸರಬರಾಜು ಯೋಜನೆಯ ಪ್ರಗತಿ ಪರಿಶೀಲನೆ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ, ಆನೆಗೊಂದಿ, ಶ್ರೀರಾಮನಗರ, ಕನಕಗಿರಿ, ಬನ್ನಿಕೊಪ್ಪ ಸೇರಿದಂತೆ ವಿವಿಧ ಯೋಜನೆಗಳಡಿ ನಿಗದಿಯಂತೆ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಸಮರ್ಪಕವಾಗಿ ಯೋಜನೆಯ ಕಾಮಗಾರಿಗಳು ನಡೆಯದೇ ಇರುವುದರಿಂದ ಇಡೀ ಯೋಜನೆಗಳು ವಿಫಲವಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗಾಗಿ ಕೋಟಿ ಗಟ್ಟಲೆ ಹಣ ಖರ್ಚಾಗುತ್ತಿದ್ದರೂ, ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಜಿ.ಪಂ. ಸದಸ್ಯರುಗಳಾದ ವಿಜಯಲಕ್ಷ್ಮಿ ರಾಮಕೃಷ್ಣ, ಈರಪ್ಪ ಕುಡಗುಂಟಿ, ಅಶೋಕ್ ತೋಟದ ಮುಂತಾದ ಸದಸ್ಯರು ಆಕ್ಷೇಪಿಸಿದರು. ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ ಅವರು, ಆನೆಗೊಂದಿ, ಶ್ರೀರಾಮನಗರ ಸಬ್‌ಮಿಷನ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಎಲ್ಲ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಎಲ್ಲ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದರು. ಜಿ.ಪಂ. ಸದಸ್ಯ ಅಶೋಕ್ ತೋಟದ ಅವರು ಮಾತನಾಡಿ, ಮಂಗಳೂರು ಸಬ್‌ಮಿಷನ್ ಯೋಜನೆಯಲ್ಲಿ ೨. ೯೦ ಕೋಟಿ ರೂ. ಅನುದಾನಕ್ಕೆ ಕಾಮಗಾರಿಯನ್ನು ನೀಡಲಾಗಿತ್ತು. ಇದೀಗ ಅದು ೩. ೯೫ ಕೋಟಿ ರೂ. ಅಂದಾಜು ಮಾಡಲಾಗಿದೆ. ನಿಗದಿಗಿಂತ ೦೧ ಕೋಟಿ ರೂ. ಹೆಚ್ಚುವರಿಯಾಗಿ ಅನುದಾನ ನೀಡಲಾಗಿದ್ದರೂ, ಇದುವರೆಗೂ ಗುತ್ತೂರು, ವಣಗೇರಿ ಮುಂತಾದ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತಿಲ್ಲ ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಅವರು, ರಾಜ್ಯದಲ್ಲಿ ಜಾರಿಗೊಳಿಸಿರುವ ಒಟ್ಟು ೪೮ ಸಬ್‌ಮಿಷನ್ ಯೋಜನೆಗಳ ಪೈಕಿ ಕೊಪ್ಪಳ ಜಿಲ್ಲೆಯೊಂದರಲ್ಲೇ ಒಟ್ಟು ೧೪ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಅಧಿಕಾರಿಗಳ ಅಸಮರ್ಪಕ ಯೋಜನೆಯ ತಯಾರಿಕೆಯಿಂದಾಗಿ, ಯೋಜನೆಗಳು ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಸಬ್‌ಮಿಷನ್ ಬಹುಗ್ರಾಮಗಳ ಕುಡಿಯುವ ನೀರು ಯೋಜನೆಗಳ ಸದ್ಯದ ಸ್ಥಿತಿ-ಗತಿಗಳ ಬಗ್ಗೆ ಪರಿಶೀಲನೆ ನಡೆಸಲು ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಆಯಾ ಕ್ಷೇತ್ರದ ಜಿ.ಪಂ. ಸದಸ್ಯರು, ಪಂ.ರಾ.ಇಂ. ವಿಭಾಗದ ಅಧಿಕಾರಿಗಳನ್ನು ಒಳಗೊಂಡಂತೆ ನ. ೦೫ ರಿಂದ ಎಲ್ಲ ಯೋಜನೆಗಳ ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಲಾಗುವುದು. ಬನ್ನಿಕೊಪ್ಪ ಹಾಗೂ ೩೮ ಗ್ರಾಮಗಳ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ನವೆಂಬರ್ ಅಂತ್ಯದ ವೇಳೆಗೆ ನಿಗದಿಯಂತೆ ಎಲ್ಲ ಗ್ರಾಮಗಳಿಗೆ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ ಮುಂದಿನ ೦೬ ತಿಂಗಳುಗಳ ಕಾಲ ಯೋಜನೆಯ ಸಂಪೂರ್ಣ ನಿರ್ವಹಣೆಯನ್ನು ಕೈಗೊಳ್ಳುವಂತೆ ಭೂಸೇನಾ ನಿಗಮದ ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಸೂಚನೆ ನೀಡಿದರು.
ಅಂಗನವಾಡಿ ನೇಮಕಾತಿ : ಅಂಗನವಾಡಿ ಸಹಾಯಕಿಯರ ನೇಮಕಾತಿಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೋಂಪುರ ಗ್ರಾಮದಲ್ಲಿ ೦೩ ವಾರ್ಡ್‌ಗಳಿದ್ದರೂ, ೪ನೇ ವಾರ್ಡನ್ನು ಸೃಷ್ಠಿಸಿದ್ದಾರೆ. ಇದರಿಂದಾಗಿ ನೇಮಕಾತಿಯಲ್ಲಿ ಗೊಂದಲ ಉಂಟಾಗಿದ್ದು, ವಾರ್ಡ್ ವಾರು ವ್ಯಾಪ್ತಿಯನ್ನು ನಿಗದಿಗೊಳಿಸಿ, ಆ ವಾರ್ಡ್‌ಗೆ ಸಂಬಂಧಪಟ್ಟವರು ಅರ್ಜಿ ಸಲ್ಲಿಸಿದವರನ್ನು ನೇಮಕಾತಿಗೆ ಪರಿಗಣಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಯಲಬುರ್ಗಾ ಕ್ರೀಡಾಂಗಣ : ಯಲಬುರ್ಗಾ ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾವಲುಗಾರರು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ, ಅಲ್ಲಿನ ಅನೇಕ ಸಾಮಗ್ರಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಕ್ರೀಡಾಂಗಣವು ಅಕ್ರಮ ಚಟುವಟಿಕೆಯ ತಾಣವಾಗಿದ್ದು, ಕೂಡಲೆ ಸರಿಯಾಗಿ ಕಾರ್ಯ ನಿರ್ವಹಿಸುವ ಕಾವಲುಗಾರರನ್ನು ನೇಮಿಸಬೇಕು ಎಂದು ಜಿ.ಪಂ. ಸದಸ್ಯ ಈರಪ್ಪ ಕುಡಗುಂಟಿ ಅವರು ಆಗ್ರಹಿಸಿದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನರಾವ್ ಇದಕ್ಕೆ ಪ್ರತಿಕ್ರಿಯಿಸಿ, ಈಗಾಗಲೆ ಕಾವಲುಗಾರರು, ಕಂಪ್ಯೂಟರ್ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಸೂಕ್ತ ಕಾವಲುಗಾರರನ್ನು ನೇಮಿಸಿ, ಅಕ್ರಮ ಚಟುವಟಿಕೆಯನ್ನು ತಡೆಗಟ್ಟಲಾಗುವುದು ಎಂದರು.
ಪಂಪ್‌ಸೆಟ್‌ಗಳ ವಿದ್ಯುದೀಕರಣ : ಜಿಲ್ಲೆಯಲ್ಲಿ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳ ಮೂಲಕ ಫಲಾನುಭವಿಗಳಿಗಾಗಿ ಕೊರೆಯಿಸಲಾಗಿರುವ ಕೊಳವೆ ಬಾವಿಗಳ ಪೈಕಿ ಇನ್ನೂ ೮೪೨ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿ ಇದೆ. ಇದರಲ್ಲಿ ೩೭ ಕುಡಿಯುವ ನೀರು ಸರಬರಾಜು ಕೊಳವೆಬಾವಿಗಳೂ ಇವೆ. ಈಗಾಗಲೆ ಸಂಬಂಧಪಟ್ಟ ನಿಗಮಗಳು ಜೆಸ್ಕಾಂಗೆ ಅಗತ್ಯ ಶುಲ್ಕವನ್ನು ಪಾವತಿಸಿದ್ದರೂ, ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವುದರಿಂದ ಯೋಜನೆಗಳ ಉದ್ದೇಶ ಈಡೇರಿಲ್ಲ ಎಂದು ಜಿ.ಪಂ. ಸದಸ್ಯ ವೀರೇಶ್ ಸಾಲೋಣಿ ಅವರು ಹೇಳಿದರು. ಇದಕ್ಕೆ ಉತ್ತರಿಸಿದ ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ವೀರಣ್ಣ ಪತ್ತಾರ್ ಅವರು, ಜೆಸ್ಕಾಂ ವಿಭಾಗೀಯ ಕಚೇರಿಗೆ ಸಾಮಗ್ರಿಗಳ ಪೂರೈಕೆಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ಸಾಮಗ್ರಿಗಳು ಬಂದ ಕೂಡಲೆ ಎಲ್ಲ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು. ಜನವರಿ ಅಂತ್ಯದೊಳಗಾಗಿ ಕಳೆದ ವರ್ಷದ ಅಂದರೆ ಒಟ್ಟು ೨೯೯ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಜೆಸ್ಕಾಂ ಅಭಿಯಂತರರಿಗೆ ಸೂಚನೆ ನೀಡಿದರು.
ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯಕುಮಾರ್ ಮೇಲಿನಮನಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ ವೇದಿಕೆ ಮೇಲಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲು ತೀರ್ಮಾನ ಕೈಗೊಳ್ಳಲಾಯಿತು.
0 comments:
Post a Comment