ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗಾಗಿ ಕೊಪ್ಪಳದಲ್ಲಿ ಶೀಘ್ರದಲ್ಲೇ ಖರೀದಿ ಕೇಂದ್ರ ಪ್ರಾರಂಭಿಸಲು. ಅಲ್ಲದೆ ಖರೀದಿಗೆ ಏಜೆನ್ಸಿಯನ್ನು ನಿಗದಿಪಡಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದಾಗಿ ತಿಳಿದುಬಂದಿದ್ದು, ಕೂಡಲೆ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಕೊಪ್ಪಳದಲ್ಲಿ ಪ್ರಾರಂಭಿಸಲಾಗುವುದು. ಮೆಕ್ಕೆಜೋಳದ ಆವಕ ಪ್ರಮಾಣ ನೋಡಿಕೊಂಡು, ಕುಷ್ಟಗಿ ಮತ್ತು ಕುಕನೂರು ಮಾರುಕಟ್ಟೆಗಳಲ್ಲಿಯೂ ಖರೀದಿ ಕೇಂದ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಸರ್ಕಾರವೇ ಏಜೆನ್ಸಿಯನ್ನು ನಿಗದಿಪಡಿಸಬೇಕಾಗಿರುವುದರಿಂದ, ಕೂಡಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಮೆಕ್ಕೆಜೋಳವನ್ನು ದಾಸ್ತಾನು ಮಾಡಲು ಗೋದಾಮುಗಳನ್ನು ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಪ್ರತಿ ಖರೀದಿ ಕೇಂದ್ರದಲ್ಲಿ ಇಬ್ಬರು ಗ್ರೇಡರ್‌ಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ಮಾತನಾಡಿ, ಕೇಂದ್ರ ಸರ್ಕಾರ ಎಫ್.ಎ.ಕ್ಯೂ. ಗುಣಮಟ್ಟದ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ ರೂ. ೧೩೧೦ ರಂತೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ೫೯೨೮೮ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಬಿತ್ತನೆಯಾಗಿದೆ. ಈ ಬಾರಿ ಜಿಲ್ಲೆಯಲ್ಲಿ ೨೦೭೦೫೩ ಮೆಟ್ರಿಕ್ ಟನ್ ನಷ್ಟು ಮೆಕ್ಕೆಜೋಳ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ ವಾರದಲ್ಲಿ ಕೊಪ್ಪಳ ಮಾರುಕಟ್ಟೆಯಲ್ಲಿ ೧೦೧೩೧ ಕ್ವಿಂಟಾಲ್ ಮೆಕ್ಕೆಜೋಳ ಆವಕವಾಗಿದ್ದು, ಉತ್ತಮ ಗುಣಮಟ್ಟದ ಮೆಕ್ಕೆಜೋಳಕ್ಕೆ ರೂ. ೧೩೬೩ ರೂ. ಗರಿಷ್ಠ ಧಾರಣೆಯಾದರೆ, ಉಳಿದಂತೆ ಬಹುತೇಕವಾಗಿ ೧೨೫೦ ರೂ. ಧಾರಣೆಯಾಗಿದೆ. ಸದ್ಯ ಕೊಪ್ಪಳ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಆವಕವಾಗುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿದಿರುವುದರಿಂದ, ಕೊಪ್ಪಳ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಪ್ರಾರಂಭಿಸುವುದು ಅಗತ್ಯವಾಗಿದೆ. ರೈತರು ತರುವಂತಹ ಮೆಕ್ಕೆಜೋಳ ಎಫ್.ಎ.ಕ್ಯೂ ಗುಣಮಟ್ಟದ್ದಾಗಿರಬೇಕು. ಅಂದರೆ ಚೆನ್ನಾಗಿ ಒಣಗಿರಬೇಕು, ಗಾತ್ರ, ಬಣ್ಣ ಹಾಗೂ ಆಕಾರ ಹೊಂದಿದ್ದು, ಗಟ್ಟಿ ಮತ್ತು ಸ್ವಚ್ಛವಾಗಿರಬೇಕು. ಇತರೆ ಕಲ್ಮಶಗಳಿಂದ ಮುಕ್ತವಾಗಿರಬೇಕು. ಇಂತಹ ಬೆಳೆಗೆ ಮಾತ್ರ ನಿಗದಿತ ಬೆಲೆ ದೊರೆಯುತ್ತದೆ. ರೈತರು ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದ ಬಗ್ಗೆ ಆಯಾ ಕಂದಾಯ ಅಧಿಕಾರಿಗಳಿಂದ ಪಹಣೆಯನ್ನು ಕಡ್ಡಾಯವಾಗಿ ಪಡೆದು, ಹಾಜರುಪಡಿಸಬೇಕಾಗುತ್ತದೆ ಎಂಬುದಾಗಿ ಸಭೆಗೆ ವಿವರಿಸಿದರು.
ಸಭೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಸಹಕಾರ ಸಂಘಗಳ ಉಪನಿಬಂಧಕರು, ಕೃಷಿ ಮಾರಾಟ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಉಪಸ್ಥಿತರಿದ್ದರು.
0 comments:
Post a Comment