PLEASE LOGIN TO KANNADANET.COM FOR REGULAR NEWS-UPDATES

 ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶದಲ್ಲಿ ಯಶಸ್ಸು ಸಾಧಿಸಲು ಮಾನಸಿಕ ಸದೃಢತೆ ಹೊಂದುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ ಬಬಲಾದಿ ಅವರು ಹೇಳಿದರು.

  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ಯ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿಶೇಷ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮಾನಸಿಕ ಒತ್ತಡ ಅನುಭವಿಸುವುದು ಸಹಜ.  ಆದರೆ ಅದನ್ನೇ ಆತ್ಮ ವಿಶ್ವಾಸದಿಂದ ಎದುರಿಸಿದಲ್ಲಿ, ಗೆಲುವು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಒತ್ತಡ ರಹಿತವಾಗಿ ಎದುರಿಸಲು ಸಜ್ಜಾಗಬೇಕು.  ಇದಕ್ಕೆ ಮಾನಸಿಕವಾಗಿ ಅವರು ಸದೃಢರಾಗುವುದು ಅತ್ಯಂತ ಅಗತ್ಯವಾಗಿದೆ.  ಪರೀಕ್ಷಾ ಭಯವನ್ನು ಹೋಗಲಾಡಿಸಲು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆತ್ಯವಿಶ್ವಾಸ ತುಂಬುವ ಕೆಲಸ ನಿರಂತರವಾಗಿ ನಡೆಯಬೇಕು.  ಮಹಾಭಾರತದಲ್ಲಿ ತಮ್ಮವರೊಂದಿಗೇ ಯುದ್ಧ ಮಾಡಬೇಕಾದ ಅನಿವಾರ್ಯತೆ ಎದುರಾಗಿ, ಅರ್ಜುನ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ.  ಅಲ್ಲದೆ ರಣರಂಗದಿಂದ ಹಿಂದಿರುಗುವ ನಿರ್ಧಾರ ಕೈಗೊಂಡಾಗ, ಆತನ ಆತನಿಗೆ ಶ್ರೀ ಕೃಷ್ಣ ಮಾನಸಿಕ ಸ್ಥೈರ್ಯ ತುಂಬಿ, ಯುದ್ಧ ಮುಂದುವರೆದು, ಧರ್ಮದ ಸ್ಥಾಪನೆಗೆ ಕಾರಣನಾಗುತ್ತಾನೆ.  ಅಂದರೆ ಮಾನಸಿಕ ಸ್ಥೈರ್ಯಕ್ಕೆ ಹೆಚ್ಚಿನ ಮಹತ್ವ ಇದೆ ಎಂಬುದನ್ನು ಇದರಿಂದ ನಾವು ಅರಿಯಬಹುದಾಗಿದೆ.  ಬೆಂಗಳೂರು ನಗರದಲ್ಲಿ ಆತ್ಮಹತ್ಯೆಯ ಪ್ರಕರಣಗಳು, ಕೌಟುಂಬಿಕ ಕಲಹಗಳು, ಗಂಡ-ಹೆಂಡಿರ ಜಗಳದ ಪ್ರಕರಣಗಳು ರಾಜ್ಯದ ಇತರೆಡೆಗಿಂತ ಹೆಚ್ಚಾಗಿದೆ.  ಇದಕ್ಕೆ ಆ ಪರಿಸರದಲ್ಲಿನ ಮಾನಸಿಕ ಒತ್ತಡ ಹಾಗೂ ವಿಭಜಿತ ಕುಟುಂಬ ವ್ಯವಸ್ಥೆ ಕಾರಣವಾಗಿದೆ.  ಅವಿಭಜಿತ ಕುಟುಂಬಗಳಲ್ಲಿ, ಮಾನಸಿಕ ಒತ್ತಡಕ್ಕೆ ಒಳಗಾದವರನ್ನು ಕುಟುಂಬದ ಇತರೆ ಸದಸ್ಯರು ಸಂತೈಸಿ ಆತ್ಮ ವಿಶ್ವಾಸ ಹೆಚ್ಚಿಸಲು ಅವಕಾಶ ಇರುತ್ತದೆ.  ಆದರೆ ಸಣ್ಣ ಸಣ್ಣ ಕುಟುಂಬಗಳಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲವಾದ್ದರಿಂದ, ಕಲಹ ಪ್ರಕರಣಗಳು ಹೆಚ್ಚಿ, ವಿಕೋಪಕ್ಕೆ ತಿರುಗಲು ಕಾರಣವಾಗುತ್ತದೆ ಎಂದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ ಬಬಲಾದಿ ಅವರು ಅಭಿಪ್ರಾಯಪಟ್ಟರು.
  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಮಾತನಾಡಿ, ಮಾನಸಿಕ ಸದೃಢತೆ ಇದ್ದಲ್ಲಿ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ.  ದೇಶದಲ್ಲಿ ಸುಮಾರು ೧೪ ಕೋಟಿ ಜನ ಮಾನಸಿಕ ಅಸ್ವಸ್ಥ್ಯತೆ ಎದುರಿಸುತ್ತಿದ್ದು, ಇದರಿಂದಾಗಿಯೇ ಅತ್ಯಾಚಾರ, ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ.  ದೇಶದಲ್ಲಿ ಮಾನಸಿಕ ವೈದ್ಯರ ಕೊರತೆ ಹೆಚ್ಚಾಗಿದ್ದು, ಸಮಾಜದಲ್ಲಿ ಮನೆ ಮಾಡಿರುವ ಮೌಢ್ಯತೆ, ಅಂಧಾನುಕರಣೆ, ಮೂಢನಂಬಿಕೆಗಳನ್ನು ಬೇರು ಸಮೇತ ನಿರ್ಮೂಲನೆ ಮಾಡದ ಹೊರತು, ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗದು.  ಮಾನಸಿಕ ಅಸ್ವಸ್ಥ್ಯರಿಗೆ ಸಕಾಲದಲ್ಲಿ ಉತ್ತಮ ಚಿಕಿತ್ಸೆ ದೊರಕಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವಂತಹ ಕಾರ್ಯ ಆಗಬೇಕಿದೆ ಎಂದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಮಾತನಾಡಿ, ಸಮಾಜದಲ್ಲಿನ ಮೌಢ್ಯತೆ, ಮೂಢ ನಂಬಿಕೆಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ದೃಶ್ಯ ಮಾಧ್ಯಮಗಳು, ಅವುಗಳನ್ನೇ ಜನರ ಮನದಲ್ಲಿ ಬಿತ್ತುತ್ತಿರುವುದು ದುರಾದೃಷ್ಟವಾಗಿದೆ.  ಇದನ್ನು ತಡೆಗಟ್ಟಲು ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳು ಇನ್ನಾದರೂ, ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂದರು.
  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ, ಜಿಲ್ಲಾ ಸರ್ಕಾರಿ ವಕೀಲರಾದ ವಿ.ಎಂ. ಭೂಸನೂರಮಠ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ ಚೇಗರಡ್ಡಿ, ಕಿರಿಯ ವ್ಯವಹಾರ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕಾವೇರಿ, ಲಾ ಅಕಾಡೆಮಿ ಅಧ್ಯಕ್ಷೆ ಸಂಧ್ಯಾ ಬಿ. ಮಾದಿನೂರ, ರೋಟರಿ ಕ್ಲಬ್ ಅಧ್ಯಕ್ಷೆ ಇಂದಿರಾ ಬಾವಿಕಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ. ಕೃಷ್ಣ ವಿ ಓಂಕಾರ್ ಅವರು ತೀವ್ರತರವಾದ ಮಾನಸಿಕ ಕಾಯಿಲೆ ಬಗ್ಗೆ ಹಾಗೂ ಮಾನಸಿಕ ಆರೋಗ್ಯ ಅಧಿಕಾರಿ ಡಾ. ಎಂ.ಎಂ. ಕಟ್ಟಿಮನಿ ಅವರು ಮಾನಸಿಕ ರೋಗದ ಮುಂಜಾಗ್ರತೆ ಕ್ರಮದ ಬಗ್ಗೆ ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.

Advertisement

0 comments:

Post a Comment

 
Top