ಬಳ್ಳಾರಿ, ಸೆ. ೧೨: ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲು ಪೋಷಕರ ಪ್ರೋತ್ಸಾಹ ಅತ್ಯಗತ್ಯ ಎಂದು ಪಶು ತಜ್ಞ ವೈದ್ಯ ಮಂಗಳೂರಿನ ಡಾ. ಮನೋಹರ ಉಪಾಧ್ಯ ಅವರು ತಿಳಿಸಿದರು.
ಅವರು ಇಲ್ಲಿನ ಸಂಸ್ಕೃತಿ ಪ್ರಕಾಶನ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ ಮತ್ತು ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ಸಹಯೋದಲ್ಲಿ ಗುರುವಾರ ನಗರದ ಮರ್ಚೇಡ್ ರೆಸಿಡೆನ್ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತಿ ಡಾ. ಅಶ್ವತ್ಥ ಕುಮಾರ್ ಅವರ 'ಭಾವನಾತ್ಮಕ ಬದುಕು' ಕೃತಿ ಕುರಿತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆ, ಉತ್ತಮ ಹವ್ಯಾಸಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ಸಮಾಜ ಹೆಮ್ಮೆಪಡುವಂತೆ ಸಾಧಕರಾಗಿ ರೂಪಗೊಳ್ಳುತ್ತಾರೆ ಎಂದು ಹೇಳಿದರು.
ಸಾಕು ಪ್ರಾಣಿಗಳ ಜತೆಗಿನ ಒಡನಾಟದಿಂದ ಖಿನ್ನತೆ ದೂರವಾಗುತ್ತದೆ. ಪ್ರಾಣಿಗಳೊಂದಿಗೆ ಒಡನಾಟವನ್ನಿಟ್ಟುಕೊಂಡು ಪ್ರೀತಿಸಿದರೆ ಅದರಿಂದ ಸಿಗುವ ಅನುಭವವೇ ಬೇರೆ ಎಂದು ತಿಳಿಸಿದರು.
ಭಾವನಾತ್ಮಕ ಬದುಕು ಕೃತಿ ವಿದ್ಯಾರ್ಥಿ ಸಮುದಾಯ ಸೇರಿದಂತೆ ಎಲ್ಲರಿಗೂ ಉಪಯುಕ್ತ ಕೃತಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸಿರುಗುಪ್ಪದ ಶಸ್ತ್ರ ಚಿಕಿತ್ಸಕ ಡಾ. ಮಧುಸೂಧನ ಕಾರಿಗನೂರು ಅವರು ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದು ವಿಷಾಧನೀಯ ಸಂಗತಿ. ನಿಸ್ವಾರ್ಥ ಸಮಾಜ ಸೇವೆಯ ಅಗತ್ಯವಿದೆ. ಸರಕಾರ, ಸಂಘ ಸಂಸ್ಥೆಗಳ ಸಹಕಾರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಜಾಗೃತಿ ಆಂದೋಲನಗಳನ್ನು ಹಮ್ಮಿಕೊಳ್ಳಬೇಕು. ಮುಂಜಾಗ್ರತಾ ಕ್ರಮಗಳ ಮೂಲಕ ರೋಗ ಬರದಂತೆ ತಡೆಯುವುದು ಉತ್ತಮ ಕಾರ್ಯ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನ ಮತ್ತು ಪಶು ವೈದ್ಯಸೇವಾ ಇಲಾಖೆಯ ಬಳ್ಳಾರಿ ಜಿಲ್ಲಾ ಉಪ ನಿರ್ದೇಶಕ ಡಾ. ಜೆ ಎಸ್ ಪಂಪಾಪತಿ ಅವರು ಮಾತನಾಡಿ ಪಶುವೈದ್ಯರಿಗೆ ಪ್ರಾಣಿ ಸಂಕುಲ ಕಲ್ಯಾಣದ ಜತೆ ಮಾನವ ಕಲ್ಯಾಣದ ಜವಾಬ್ದಾರಿಯೂ ಇರುತ್ತದೆ. ಆದ್ದರಿಂದ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಕಾಶಕ ಸಿ ಮಂಜುನಾಥ್, ಸಂಸ್ಕೃತಿ ಪ್ರಕಾಶನ 'ಸಂಸ್ಕೃತಿ ಸಂವಾದ'ದ ಮೂಲಕ ಪ್ರತಿ ತಿಂಗಳು ನಿರಂತರವಾಗಿ ಸಾಹಿತ್ಯ, ಕಲೆ, ಇತಿಹಾಸ, ಪರಂಪರೆ, ಸಂಸ್ಕೃತಿ, ಕ್ರೀಡೆ ಮತ್ತಿತರ ವಿಷಯಗಳ ಕುರಿತು ಸಾಂಸ್ಕೃತಿಕ ಲೋಕದ ಗಣ್ಯರಿಂದ ಚಿಂತನ ಮಂಥನ, ಪುಸ್ತಕ ವಿಮರ್ಶೆ, ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ತಿಳಿಸಿದರು.
ಪಶು ವೈದ್ಯ ಡಾ. ಟಿ ಶಶಿಧರ, ಲೇಖಕ ಡಾ. ಅಶ್ವತ್ಥ ಕುಮಾರ್ ಜೆ ಎಸ್ ಅವರು ಮಾತನಾಡಿದರು. ಪಶುಪಾಲನ ಮತ್ತು ಪಶು ವೈದ್ಯಸೇವಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಟಿ. ಮರಿ ಬಸವನಗೌಡ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ನಾಗರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯ ಪಶು ವೈದ್ಯರು, ಪಶುವೈದ್ಯಕೀಯ ಸಹಾಯಕರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಸನ್ಮಾನ: ಪುಸ್ತಕ ಸಂಸ್ಕೃತಿ ಬೆಳೆಯಲು ಸದ್ದಿಲ್ಲದೆ ಶ್ರಮಿಸುತ್ತಿರುವ ಡಾ. ಮನೋಹರ ಉಪಾಧ್ಯ ಅವರನ್ನು ಸಂಸ್ಕೃತಿ ಪ್ರಕಾಶನದ ಪರವಾಗಿ ಸತ್ಕರಿಸಿ ಗೌರವಿಸಲಾಯಿತು.
ಕನ್ನಡ ಪರ ಹೋರಾಟಗಾರ ಬಿ. ಚಂದ್ರಶೇಖರ ಆಚಾರ ಸ್ವಾಗತಿಸಿದರು. ಪಶು ವೈದ್ಯಕೀಯ ಸಹಾಯಕಿ ಬಾಗಲಕೋಟೆಯ ಸುವರ್ಣ ಸೊನ್ನದ್ ಪ್ರಾರ್ಥಿಸಿದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಹಂದ್ಯಾಳ್ ವಂದಿಸಿದರು.
0 comments:
Post a Comment